ಐಎಎಸ್‌ ಅಧಿಕಾರಿಯ ನವಜಾತ ಶಿಶುವಿನ ಜೀವಕ್ಕೆ ಅಪಾಯ ಆರೋಪ ಸಾಬೀತು?

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಹಿಳಾ ಐಎಎಸ್‌ ಅಧಿಕಾರಿಯೊಬ್ಬರು ಅನುಭವಿಸಿದ್ದ ಯಾತನೆ ಕುರಿತು ದೂರಿನ ವಿಚಾರಣೆ ಪೂರ್ಣಗೊಂಡಿದೆ. ವೈದ್ಯರು ಮತ್ತು ಸಿಬ್ಬಂದಿಯ ಅಸಡ್ಡೆ ಸೇರಿದಂತೆ ಹಲವು ಆಘಾತಕಾರಿ ಸಂಗತಿಗಳು ವಿಚಾರಣೆ ವರದಿಯಯಲ್ಲಿ ಬಹಿರಂಗಗೊಂಡಿವೆ! ಆ ಸಂಗತಿಗಳೇನು? ಇಲ್ಲಿವೆ ವಿವರ

ಖಾಸಗಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಐಎಎಸ್‌ ಮಹಿಳಾ ಅಧಿಕಾರಿ ಪಲ್ಲವಿ ಅಕುರಾತಿ ಅವರು ಜನ್ಮ ನೀಡಿದ್ದ ಹೆಣ್ಣು ಮಗುವಿನ ಜೀವಕ್ಕೆ ಅಪಾಯವಾಗುವ ಸಂಭವವಿತ್ತು ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ವೈದ್ಯರು ಮತ್ತು ಸಿಬ್ಬಂದಿಯ ಗಂಭೀರ ಲೋಪ ಕುರಿತು ಪಲ್ಲವಿ ಅಕುರಾತಿ ಅವರು ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಅಧಿಕಾರಿಗೆ ಸಲ್ಲಿಸಿದ್ದ ದೂರಿನ ವಿಚಾರಣೆ ವೇಳೆಯಲ್ಲಿ ಈ ಸಂಗತಿ ತಿಳಿದು ಬಂದಿದೆ ಎಂದು ಸಮಿತಿಯ ವಿಶ್ವಸನೀಯ ಮೂಲಗಳು ‘ದಿ ಸ್ಟೇಟ್‌’ಗೆ ತಿಳಿಸಿವೆ.

ದೂರಿನ ಕುರಿತಾದ ತಜ್ಞರ ತಂಡ ವಿಚಾರಣೆ ಈಗಾಗಲೇ ಪೂರ್ಣಗೊಳಿಸಿದೆ. ಇನ್ನೆರಡು ದಿನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಿಗೆ ವರದಿಯನ್ನು ಸಲ್ಲಿಸಲಿದೆ ಎಂದು ತಂಡದ ಮೂಲಗಳು ತಿಳಿಸಿವೆ.

ಫೋಟೋಥೆರಪಿ ಚಿಕಿತ್ಸೆಯ ಯಂತ್ರದಲ್ಲಿ ಮಗುವನ್ನು ಇರಿಸಿದಾಗ ಮಗುವಿನ ಅಂಗೈ ಮತ್ತು ಪಾದ ನೀಲಿ ಬಣ್ಣಕ್ಕೆ ತಿರುಗಿತ್ತು. ಆದರೆ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಇದನ್ನು ಗಮನಿಸಿರಲಿಲ್ಲ ಎಂದು ಖುದ್ದು ಪಲ್ಲವಿ ಅಕುರಾತಿ ಅವರು ವಿಚಾರಣೆ ಸಮಿತಿ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪಲ್ಲವಿ ಅವರ ಸಂಬಂಧಿಕರು ಯಂತ್ರದಲ್ಲಿದ್ದ ಮಗುವನ್ನು ಹೊರತೆಗೆದಿದ್ದರಲ್ಲದೆ ಮಗುವಿನ ದೇಹವನ್ನು ಬೆಚ್ಚಗಿರಿಸಿದ್ದರು ಎಂಬ ಅಂಶವೂ ತಿಳಿದು ಬಂದಿದೆ. ಹಾಗೆಯೇ ಆಸ್ಪತ್ರೆಯಲ್ಲಿದ್ದ ಫೋಟೋ ಥೆರಪಿ ಯಂತ್ರವೂ ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂಬ ಸಂಗತಿ ವಿಚಾರಣೆ ಸಮಿತಿ ಪರಿಶೀಲನೆ ವೇಳೆಯಲ್ಲಿ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಐಎಎಸ್‌ ಅಧಿಕಾರಿಯ ನವಜಾತ ಶಿಶುವಿಗೆ ಚಿತ್ರಹಿಂಸೆ; ಖಾಸಗಿ ನರ್ಸಿಂಗ್‌ ಹೋಂ ವಿರುದ್ಧ ದೂರು

ಬೆಂಗಳೂರು ಇಂದಿರಾನಗರದಲ್ಲಿರುವ ‘ಲೈಫ್ ಫ್ಲಸ್‌’ ಖಾಸಗಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಪಲ್ಲವಿ ಅಕುರಾತಿ ಅವರು ದೂರು ಸಲ್ಲಿಸಿದ್ದರು. ವೈದ್ಯರು ಮತ್ತು ನರ್ಸ್ ಸೇರಿದಂತೆ ಇತರೆ ಸಿಬ್ಬಂದಿಯ ಕರ್ತವ್ಯ ಲೋಪ , ಅವರ ಅನುಚಿತ ವರ್ತನೆಯಿಂದಾಗಿ ಆಸ್ಪತ್ರೆಯಲ್ಲಿ ಅನುಭವಿಸಿದ್ದ ಯಾತನೆ ಕುರಿತು ಈ ಮೈಲ್ ಮೂಲಕ ಸಲ್ಲಿಸಿದ್ದ ದೂರಿನಲ್ಲಿ ವಿವರಿಸಿದ್ದರು.

“ಐಎಎಸ್‌ ಅಧಿಕಾರಿಗೆ ಇಂತಹ ಅನುಭವ ಅಗಿದೆ ಎಂದರೆ ಅನಕ್ಷರಸ್ಥ ಮಂದಿಗೆ ಇಂತಹ ಆಸ್ಪತ್ರೆಗಳಲ್ಲಿ ಎಷ್ಟರಮಟ್ಟಿಗೆ ಚಿಕಿತ್ಸೆ ದೊರೆಯಲಿದೆ?, ಹೀಗಾಗಿ ಆಸ್ಪತ್ರೆ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು,” ಎಂದು ದೂರಿನಲ್ಲಿ ಹೇಳಿದ್ದರು.

ಮಕ್ಕಳ ವಿಭಾಗದ ತಜ್ಞ ವೈದ್ಯೆ ಡಾ ಅರುಲ್ ಸೆಲ್ವಿ ಅವರು ನವಜಾತ ಶಿಶುವಿನ ಮೇಲೆ ಫೋಟೋ ಥೆರಪಿ ಮಾಡಿಸಲು ಬಲವಂತಪಡಿಸಿದ್ದರು. ಬಿಲೀರುಬಿನ್ ಪ್ರಮಾಣ ಕಡಿಮೆಯಾಗಲಿದೆ ಎಂದು ತಪ್ಪು ತಿಳಿವಳಿಕೆ ನೀಡಿ ಪೋಷಕರಲ್ಲಿ ಭಯ ಹುಟ್ಟಿಸಿದ್ದರು. ಇದನ್ನಾಧರಿಸಿಯೇ ಫೋಟೋ ಥೆರಪಿ ಮಾಡಿದ್ದರು. ಇದಾದ ನಂತರವೂ ಮಗುವಿನ ಆರೈಕೆಯಲ್ಲಿಯೂ ಅಸಡ್ಡೆಯಿಂದ ನಡೆದುಕೊಂಡಿದ್ದರು ಎಂದು ದೂರಿನಲ್ಲಿ ಪಲ್ಲವಿ ಅಕುರಾತಿ ಅವರು ಆರೋಪಿಸಿದ್ದರು.

“ನವಜಾತ ಶಿಶುವಿಗೆ ಬಲವಂತವಾಗಿ ಫೋಟೋ ಥೆರಪಿ ಚಿಕಿತ್ಸೆ ಮಾಡಿಸುವುದಲ್ಲದೆ ಮಗುವಿನ ಬಟ್ಟೆಗಳನ್ನು ಹಲವು ಬಾರಿ ಬದಲಾಯಿಸುವ ಮೂಲಕ ದೊಡ್ಡ ಚಿತ್ರಹಿಂಸೆ ನೀಡುವುದರಿಂದ ಆಘಾತಕ್ಕೆ ಒಳಗಾಗಬೇಕಾಗುತ್ತದೆ. ಫೋಟೋ ಥೆರಪಿ ಚಿಕಿತ್ಸೆಗೆ ಪ್ರತಿ ದಿನಕ್ಕೆ ೩,೦೦೦ ರೂ.ಶುಲ್ಕದಂತೆ ಎರಡು ದಿನಗಳ ಕಾಲ ಚಿಕಿತ್ಸೆ ಪಡೆಯಬೇಕು ಎಂದು ಶಿಫಾರಸ್ಸು ಮಾಡುತ್ತಿದ್ದಾರೆ. ೬,೦೦೦ ರು.ಗಳಿಗಾಗಿ ನವಜಾತ ಶಿಶುಗಳು ಚಿತ್ರಹಿಂಸೆಗೆ ಒಳಗಾಗಬೇಕಾಗುತ್ತಿದೆ,” ಎಂದು ಪಲ್ಲವಿ ಅಕುರಾತಿ ಅವರು ದೂರಿನಲ್ಲಿ ವಿವರಿಸಿದ್ದರು.

ಲೈಫ್‌ ಫ್ಲಸ್‌ ಆಸ್ಪತ್ರೆಗೆ ದಾಖಲಾಗಿದ್ದ ಪಲ್ಲವಿ ಅಕುರಾತಿ ಅವರು ೨೦೧೮ ಜುಲೈ ೧೮ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಅದಕ್ಕೂ ಮುನ್ನ ಅಂದರೆ ೩೯ ವಾರ ೬ ದಿನಗಳ ಗರ್ಭಾವಸ್ಥೆಯಲ್ಲಿ ತಪಾಸಣೆ ನಡೆಸಿದ್ದ ಡಾ ಭಾರ್ಗವಿ ಅವರು ಮಗುವಿನ ತಲೆ ಇನ್ನೂ ಸೂಕ್ತವಾದ ಜಾಗದಲ್ಲಿ ಇಲ್ಲವೆಂದು ಹೇಳಿದರಲ್ಲದೆ, ಭ್ರೂಣದ ಹೃದಯದ ಬಡಿತ ಮೇಲ್ವಿಚಾರಣೆ ಪರೀಕ್ಷೆ ಕೂಡ ನಡೆಸಿದ್ದರು. ಈ ಆಧಾರದ ಮೇಲೆ ಭ್ರೂಣದ ಹೃದಯ ಬಡಿತವು ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ. ಅಲ್ಲದೆ, ಇದೇ ವೇಳೆಯಲ್ಲಿ ಪ್ರಸವ ವೇದನೆಯೂ ಆರಂಭಗೊಂಡಿರುತ್ತದೆ. ಈ ರೀತಿಯ ನೋವು ಅರಿವಿಗೆ ಬರುತ್ತಿಲ್ಲ ಎಂದು ಡಾ ಭಾರ್ಗವಿ ಅವರು ತಮಗೆ ತಿಳಿಸಿದ್ದರು ಎಂದು ಪಲ್ಲವಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

ಸಾಮಾನ್ಯ ಹೆರಿಗೆ ನಡೆಸುವುದು ಅಸಾಧ್ಯವೆಂದು ತಿಳಿಸಿದ್ದ ವೈದ್ಯರು, ಸಿಜೇರಿಯನ್ ಮಾಡುವುದೇ ಸುರಕ್ಷಿತವೆಂದು ಸೂಚಿಸಿದ್ದರು. “ವೈದ್ಯರ ಸಲಹೆ ಸೂಚನೆ ಮೇರೆಗೆ ಸಿಜೇರಿಯನ್ ಗೆ ಒಳಗಾಗಿದ್ದೆ. ಆದರೆ ಈ ಸಲಹೆ ನೀಡುವ ಮುನ್ನ ಆಸ್ಪತ್ರೆ ವೈದ್ಯರು ತಮ್ಮನ್ನು ಸ್ಕ್ಯಾನಿಂಗ್‌ ಗೆ ಮಾಡಲಿಲ್ಲವೇಕೆ?,” ಎಂದು ದೂರಿನಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದರು.

೨೦೦೯ನೇ ಬ್ಯಾಚ್ ನ ಪಲ್ಲವಿ ಅಕುರಾತಿ ಅವರು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ(ಡಿಪಿಎಆರ್) ಜಾಗೃತ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More