ತೂತುಕುಡಿ ಹೋರಾಟ ನಿಯಂತ್ರಿಸಲು ವಾಟ್ಸ್ಯಾಪ್‌ ಗ್ರೂಪ್‌ ಮೇಲೆ ಕಣ್ಣಿಟ್ಟ ಸರ್ಕಾರ

ಪ್ರಶ್ನಾವಳಿಯೊಂದರಲ್ಲಿ ಫೋನಿನ ಮಾಡೆಲ್, ಸಾಮಾಜಿಕ ಜಾಲತಾಣಗಳ ಬಗೆಗಿನ ನಿಪುಣತೆ, ವಾಟ್ಸಾಪ್ ಗುಂಪುಗಳಲ್ಲಿ ಸಕ್ರಿಯರಾಗಿದ್ದೇವೆಯೇ ಇಲ್ಲವೇ ಎಂಬ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಈ ಬಗ್ಗೆ ‘ಸ್ಕ್ರಾಲ್’ ಜಾಲತಾಣ ಪ್ರಕಟಿಸಿರುವ ವರದಿಯ ಭಾವಾನುವಾದ ಇಲ್ಲಿದೆ

ತೂತುಕುಡಿ ವಿಮಾನ ನಿಲ್ದಾಣದಲ್ಲಿ ಸೆ 3ರಂದು ಬಿಜೆಪಿ ವಿರುದ್ಧ ಘೋಷಣೆ ಕೂಗಿದ 28 ವರ್ಷದ ಸಂಶೋಧನಾ ವಿದ್ಯಾರ್ಥಿನಿ ಲೂಯಿಸ್ ಸೂಫಿಯಾ ಅವರನ್ನು ಬಂಧಿಸಿದಾಗ ಅದೊಂದು ಸಾಮಾನ್ಯ ಕಾನೂನು ಪ್ರಕ್ರಿಯೆ ಎಂದು ಬಹುತೇಕ ಭಾರತೀಯರಿಗೆ ಅನಿಸಿರಲಿಕ್ಕೂ ಸಾಕು. ಆದರೆ ತೂತುಕುಡಿಯ ಅನೇಕರಿಗೆ ಇದು ಹಾಗೆ ಕಾಣುತ್ತಿಲ್ಲ. ತಾಮ್ರ ಘಟಕ ವಿರುದ್ಧ ಮುಂದೆ ನಡೆಯಬಹುದಾದ ಪ್ರತಿಭಟನೆಯನ್ನು ಹತ್ತಿಕ್ಕುವ ಭಾಗವಾಗಿ ತಮಿಳುನಾಡು ಪೊಲೀಸರು ಈ ಹೊಸ ತಂತ್ರ ಗೋಚರಿಸುತ್ತಿದೆ.

ಆಗಸ್ಟ್ ನಿಂದ ಈವರೆಗೆ ಅಧಿಕಾರಿಗಳು, ವೇದಾಂತ ಸಮೂಹದ ಸ್ಟೆರ್ಲೈಟ್ ತಾಮ್ರ ತಯಾರಿಕಾ ಘಟಕ ಕುರಿತಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶ ಹರಡುತ್ತಿರುವ ಬಗ್ಗೆ ಪ್ರತಿದಿನ ಕನಿಷ್ಠ 10-15 ಮಂದಿಯನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಮೇ 22 ರಂದು ತೂತುಕುಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿ 13 ಮಂದಿ ಮೃತಪಟ್ಟಿದ್ದರು. ಅದಾದ ಬಳಿಕ ಕಾರ್ಖಾನೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರ ಆದೇಶಿಸಿತ್ತು. ತಾಮ್ರ ಘಟಕ ವಿಸ್ತರಿಸುವುದನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳು ಫೆಬ್ರುವರಿಯಲ್ಲಿ ಆರಂಭಿಸಿದ ಪ್ರತಿಭಟನೆ ಮೇ ತಿಂಗಳಿನಲ್ಲಿ ತಾರಕಕ್ಕೇರಿತ್ತು. ಆದರೆ ಸರ್ಕಾರದ ಆದೇಶದ ಹೊರತಾಗಿಯೂ ಕಾರ್ಖಾನೆ ಪುನರಾರಂಭಿಸಲು ವೇದಾಂತ ಯತ್ನಿಸುತ್ತಿದೆ ಎನ್ನಲಾಗಿತ್ತು.

ಇದು ಲೂಯಿಸ್ ಸೂಫಿಯಾ ಸೇರಿದಂತೆ ನಗರದ ಅನೇಕ ನಿವಾಸಿಗಳು ಹಾಗೂ ಅವರ ಬೆಂಬಲಿಗರು ಎಚ್ಚೆತ್ತುಕೊಳ್ಳುವಂತೆ ಮಾಡಿತ್ತು. ಸೂಫಿಯಾ ತಂದೆ ಹೇಳುವಂತೆ ಆಕೆ ಕಂಪೆನಿ ವಿರುದ್ಧ ಮಾಧ್ಯಮಗಳಿಗೆ ಬರೆಯುತ್ತಿದ್ದರು. ಇದಕ್ಕೆ ಭಾವನಾತ್ಮಕವಾಗಿ ಪೆಟ್ಟು ನೀಡಲು ಪೊಲೀಸರು ಯತ್ನಿಸಿದರು.

ಈಗ ಪೊಲೀಸರು ಭವಿಷ್ಯದಲ್ಲಿ ಉಂಟಾಗಬಹುದಾದ ಪ್ರತಿಭಟನೆಯನ್ನು ತಡೆಯುವ ಸಲುವಾಗಿ ಘಟಕದ ಬಗ್ಗೆ ಮಾಹಿತಿ ನೀಡುವ ವಾಟ್ಸ್ಯಾಪ್ ಗುಂಪುಗಳಿಂದ ಹೊರಬರುವಂತೆ ಸ್ಥಳೀಯರಿಗೆ ಸೂಚಿಸುತ್ತಿದ್ದಾರೆ ಎಂಬುದು ಕೆಲ ಸಾಮಾಜಿಕ ಕಾರ್ಯಕರ್ತರ ಆರೋಪ. ಆದರೆ ಸಂಭವಿಸಬಹುದಾದ ಹಿಂಸಾಚಾರ ತಡೆಯುವ ನಿಟ್ಟಿನಲ್ಲಿ ಪ್ರಚೋದನಕಾರಿ ಸಂದೇಶ ಹರಡುವವರನ್ನು ಪತ್ತೆ ಹಚ್ಚುವುದಕ್ಕಾಗಿ ಈ ಕ್ರಮಕೊಗೊಳ್ಳಲಾಗಿದೆ ಎಂಬುದು ಪೊಲೀಸರ ವಾದ.

“ಕನಿಷ್ಠ ಪಕ್ಷ 10ರಿಂದ 15 ಮಂದಿ ಸಂಶಯಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸುತ್ತಿದ್ದೇವೆ. ಮುಂಜಾಗ್ರತೆ ಕ್ರಮವಾಗಿ ಸಂದೇಶದ ಮೂಲ ಯಾವುದು ಎಂಬುದನ್ನು ಪತ್ತೆಹಚ್ಚುತ್ತಿದ್ದೇವೆ,” ಎನ್ನುತ್ತಾರೆ ತೂತುಕುಡಿ ಎಸ್ಪಿ ಮುರಳಿ ರಂಭಾ.

ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ 107ನೇ ವಿಧಿ ಅಡಿ ಸುಮಾರು 300 ಜನರಿಗೆ ಸಮನ್ಸ್ ನೀಡಲು ಉದ್ದೇಶಿಸಲಾಗಿತ್ತು. ಆದರೆ ಅದು ತಿರುಗುಬಾಣವಾಗಬಹುದು ಎಂಬ ಭೀತಿಯಿಂದ ನಿರ್ಧಾರ ವಾಪಸ್ ಪಡೆಯಲಾಯಿತು. ಈ ವಿಧಿ ಶಾಂತಿ ಸುವ್ಯವಸ್ಥೆಗೆ ಭಂಗ ತರುವವರನ್ನು ಒಂದು ವರ್ಷಗಳ ಕಾಲ ಬಂಧಿಸಲು ನ್ಯಾಯಾಧೀಶರಿಗೆ ನೇರ ಅಧಿಕಾರ ನೀಡುತ್ತದೆ.

ಈ ರೀತಿ ಸಮನ್ಸ್ ನೀಡುವುದು ಮತ್ತು ವಿಚಾರಣೆ ನಡೆಸುವುದು ಅಕ್ರಮ ಎಂಬುದು ಅನೇಕ ವಕೀಲರು ಮತ್ತು ಹೋರಾಟಗಾರರ ವಾದ. “ಜನರು ಗುಂಪುಗೂಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸದಂತೆ ಇದು ಬೆದರಿಕೆ ಒಡ್ಡುತ್ತದೆ,” ಎನ್ನುತ್ತಾರೆ ಪೀಪಲ್ಸ್ ವಾಚ್ ಸಂಘಟನೆಯಲ್ಲೂ ಸಕ್ರಿಯರಾಗಿರುವ ವಕೀಲ ಹೆನ್ರಿ ಥಿಫಾಗ್ನೆ.

ಮದ್ರಾಸ್ ಹೈಕೋರ್ಟ್ ಪ್ರತಿಭಟನೆ ಮತ್ತು ಪೊಲೀಸ್ ಗೋಲಿಬಾರ್ ಪ್ರಕರಣವನ್ನು ಸಿಬಿಐಗೆ ವಹಿಸಿದ ಬಳಿಕ ಆಗಸ್ಟ್ ನಿಂದ ಪೊಲೀಸರು ಈ ತಂತ್ರ ಅನುಸರಿಸುತ್ತಿದ್ದಾರೆ. ಆನಂತರ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ತಂಡ ಅನುಮಾನಾಸ್ಪದ ವ್ಯಕ್ತಿಗಳಿಗೆ ಕರೆ ಮಡಿ ದಕ್ಷಿಣ ಪೊಲೀಸ್ ಠಾಣೆಗೆ ಕರೆಸಿಕೊಂಡು ಪ್ರತಿದಿನ ವಿಚಾರಣೆ ನಡೆಸುತ್ತಿದೆ ಎಂದು ಪೊಲೀಸ್ ಮೂಲವೊಂದು ತಿಳಿಸಿದೆ.

ಸ್ಥಳೀಯ ನಿವಾಸಿಗಳು ಹೇಳುವ ಪ್ರಕಾರ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಮೊಬೈಲ್ ಫೋನ್ ಗಳನ್ನು ಪರಿಶೀಲಿಸುತ್ತಾರೆ. ಬಳಿಕ ಪ್ರಶ್ನಾವಳಿ ಇರುವ ಪತ್ರವೊಂದನ್ನು ನೀಡಿ ಅದನ್ನು ಭರ್ತಿ ಮಾಡುವಂತೆ ಹೇಳುತ್ತಾರೆ. ಅದರಲ್ಲಿ ಫೋನಿನ ಮಾಡೆಲ್, ಸಾಮಾಜಿಕ ಜಾಲತಾಣಗಳ ಬಗೆಗಿನ ನಿಪುಣತೆ, ವಾಟ್ಸಾಪ್ ಗುಂಪುಗಳಲ್ಲಿ ಸಕ್ರಿಯರಾಗಿದ್ದೇವೆಯೇ ಇಲ್ಲವೇ ಎಂಬ ಮಾಹಿತಿ ನೀಡಬೇಕಾಗುತ್ತದೆ.

ಜಾಲತಾಣಕ್ಕೆ ಈ ಬಗ್ಗೆ ಇನ್ನಷ್ಟು ವಿವರಗಳನ್ನು ನೀಡಿದ ಮಟ್ಟಕಡೈ ಪ್ರದೇಶದ ವ್ಯಾಪಾರಿಯೊಬ್ಬರು, “ಎರಡು ವಾರಗಳ ಹಿಂದೆ ಒಂದು ಮಧ್ಯಾಹ್ನ ನನಗೆ ಒಂದು ದೂರವಾಣಿ ಕರೆ ಬಂತು. ಅದೇ ದಿನ 5ಗಂಟೆ ಹೊತ್ತಿಗೆ ಪೊಲೀಸ್ ಠಾಣೆಗೆ ಬರುವಂತೆ ಸೂಚಿಸಲಾಯಿತು. ಫೋನ್ ಕೂಡ ತರುವಂತೆ ಹೇಳಲಾಗಿತ್ತು,” ಎನ್ನುತ್ತಾರೆ.

ಫೋನ್ ವಶಕ್ಕೆ ಪಡೆದ ಪೊಲೀಸರು ಅದರಲ್ಲಿ ವ್ಯಾಪಾರಿ ಹೊಂದಿದ್ದ ಟ್ವಿಟರ್, ಫೇಸ್ಬುಕ್ ಖಾತೆಗಳು, ಅಲ್ಲದೆ ಸಕ್ರಿಯವಾಗಿದ್ದ ವಾಟ್ಸಾಪ್ ಗುಂಪುಗಳನ್ನು ಪರಿಶೀಲಿಸಿದರು. “ಮೇ 22ರ ಸ್ಟೆರ್ಲೈಟ್ ಪ್ರತಿಭಟನೆಯ ಚಿತ್ರಹೊಂದಿದ್ದ ವಾಟ್ಸಾಪ್ ಗುಂಪೊಂದನ್ನು ಪರಿಶೀಲಿಸಿದ ಪೊಲೀಸರು ಆ ಗುಂಪಿನಿಂದ ಹೊರಬರುವಂತೆ ಸೂಚಿಸಿದರು. ಅಲ್ಲದೆ ಗುಂಪಿನ ಅಡ್ಮಿನ್ ಯಾರು, ಸದಸ್ಯರು ಯಾರು ಎಂಬುದನ್ನು ಗುರುತುಮಾಡಿಕೊಂಡರು,” ಎಂದು ಹೇಳುತ್ತಾರೆ.

“ಅಷ್ಟು ಹೊತ್ತಿಗೆ ಬೇರೆ ಬೇರೆ ಜನರನ್ನು ಕೂಡ ಪೊಲೀಸರು ಕರೆತಂದರು. ಪ್ಲಂಬರ್ ಗಳು, ಎಲೆಕ್ಟ್ರಿಷಿಯನ್ ಗಳು, ಛಾಯಾಗ್ರಾಹಕರು, ಬಂದರಿನಲ್ಲಿ ಕೆಲಸ ಮಾಡುತ್ತಿದ್ದ ಮೀನುಗಾರರು ಕೂಡ ಆ ಗುಂಪಿನಲ್ಲಿದ್ದರು. ನಂತರ ಪೊಲೀಸರು ನನಗೆ ತಾಮ್ರ ಘಟಕದ ವಿರುದ್ಧ ಯಾವುದೇ ಸಂದೇಶ ರವಾನಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡು ಎಂದು ಸೂಚಿಸಿದರು. ನಾನು ಯಾವುದೇ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿರಲಿಲ್ಲ. ಹೀಗಾಗಿ ಭಯಪಟ್ಟೆ. ನನ್ನ ಕುಟುಂಬ ನನ್ನನ್ನೇ ಆಧರಿಸಿತ್ತು. ಹಾಗಾಗಿ ಹೆಚ್ಚು ಯೋಚನೆ ಮಾಡದೆ ಗುಂಪಿನಿಂದ ಹೊರಬಂದೆ” ಎನ್ನುತ್ತಾರೆ ಅವರು. “ದಕ್ಷಿಣ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬಾರದ ಪ್ರದೇಶಗಳಲ್ಲಿ ವಾಸಿಸುವವರಿಗೆ ಸಹ ಲಿಖಿತ ಸಮನ್ಸ್ ಕಳುಹಿಸಲಾಗಿದೆ. ಅಂತಹ ದು ನೋಟಿಸ್ ಹೀಗಿದೆ: “ವಾಟ್ಸಾಪ್ ಸಂದೇಶಗಳನ್ನು ತನಿಖೆ ಮಾಡುವಾಗ, ನೀವು ಅಕ್ರಮ ವಿಷಯವನ್ನು ಹಂಚಿಕೊಂಡಿದ್ದೀರಿ ಮತ್ತು ಸ್ವೀಕರಿಸಿದ್ದೀರಿ ಎಂದು ತಿಳಿದುಬಂದಿದೆ. ಆದ್ದರಿಂದ, ನೀವು ತನಿಖೆಗಾಗಿ ಪೊಲೀಸ್ ಠಾಣೆಗೆ ಖುದ್ದಾಗಿ ಹಾಜರಾಗಬೇಕಾಗುತ್ತದೆ."

ತೂತುಕುಡಿ ಜಿಲ್ಲಾಧಿಕಾರಿ ಸಂದೀಪ್ ನಂದೂರಿ, “ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಂಕಿತರು ಯಾರು ಎಂಬುದನ್ನು ಹೇಳುವ ವೀಡಿಯೊ ಪುರಾವೆ ನಮ್ಮ ಬಳಿ ಇದೆ. ಅದನ್ನೇ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅನುಮತಿ ಪಡೆಯದೇ ಕೆಲವರು ಅಲ್ಲಿ ಗುಂಪುಗೂಡಿದ್ದರಿಂದ ಮತ್ತೊಂದು ಸನ್ನಿವೇಶ ಸೃಷ್ಟಿಯಾಯಿತು. ಮುಂಜಾಗ್ರತೆ ಕ್ರಮವಾಗಿ 107ನೇ ವಿಧಿಯಡಿ ಸಮನ್ಸ್ ನೀಡಲಾಗುತ್ತಿದೆ. ಯಾವುದೇ ನಿರ್ದಿಷ್ಟ ವಾಟ್ಸಾಪ್ ಗುಂಪಿನ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾನು ನಿರ್ದೇಶಿಸಿಲ್ಲ: ಎನ್ನುತ್ತಾರೆ.

ವಕೀಲ ಜಿ ಹರಿರಾಘವನ್ ಹೇಳುವ ಪ್ರಕಾರ “ಸರ್ಕಾರ ಪ್ರಕರಣದಲ್ಲಿ ಮೂಗುತೂರಿಸುತ್ತಿದೆ. ಜನರಿಗೆ ನೀಡಿರುವ ನೋಟಿಸ್ ಅಧಿಕೃತವಲ್ಲ. ಏಕೆಂದರೆ ಅವು ಅಧಿಕೃತ ಲೆಟರ್ ಹೆಡ್ ನಲ್ಲಿ ಬಂದಿಲ್ಲ. ಹಾಗೆ ಸಮನ್ಸ್ ನೀಡುವ ಯಾವುದೇ ವಿಧಿ ಕಾನೂನಿನಲ್ಲಿ ಇಲ್ಲ.”

ಇದನ್ನೂ ಓದಿ : ತೂತುಕುಡಿ ತಾಮ್ರ ಘಟಕ ಶಾಶ್ವತವಾಗಿ ಮುಚ್ಚಲು ತಮಿಳುನಾಡು ಸರ್ಕಾರ ಆದೇಶ

ಹೆನ್ರಿ ಥಿಫಾಗ್ನೆ ಅವರದು ಕೂಡ ಇದೇ ಅಭಿಪ್ರಾಯ. “ಅಪರಾಧ ದಂಡಸಂಹಿತೆಯಲ್ಲಾಗಲೀ, ತಮಿಳುನಾಡು ಪೊಲೀಸ್ ಆದೇಶದಲ್ಲಾಗಲೀ ವಾಟ್ಸಾಪ್ ಗುಂಪುಗಳನ್ನು ಪರಿಶೀಲಿಸುವ ಯಾವುದೇ ಕಾನೂನು ಇಲ್ಲ” ಎನ್ನುತ್ತಾರೆ ಅವರು.

ಮಾನವಹಕ್ಕುಗಳ ಹೋರಾಟಗಾರ ಎಂ ಎ ಬ್ರಿಟೋ, “ತೂತುಕುಡಿಯಲ್ಲಿ ಈಗ ನಡೆಯುತ್ತಿರುವುದು ನಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆ. ಇದು ಭಯದ ವಾತಾವರಣವನ್ನು ಸೃಷ್ಟಿಸುತ್ತಿದೆ. ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಅಂತರರಾಷ್ಟ್ರೀಯ ಒಪ್ಪಂದಗಳಿಗೆ ಸಹಿ ಹಾಕುತ್ತಿದೆ. ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯ ಎಲ್ಲಿದೆ?” ಎಂದು ಪ್ರಶ್ನಿಸುತ್ತಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More