ಇಂದಿನ ಡೈಜೆಸ್ಟ್ | ನೀವು ಗಮನಿಸಲೇಬೇಕಾದ ಇತರ ಪ್ರಮುಖ ಸುದ್ದಿಗಳು  

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಮಾನವ ಹಕ್ಕುಗಳ ಕಾರ್ಯಕರ್ತರ ಬಿಡುಗಡೆ ಕುರಿತ ಅರ್ಜಿ ವಿಚಾರಣೆಯನ್ನು ಮುಂದೂಡಿದ ಸುಪ್ರೀಂ

ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆಂಬ ಆರೋಪದ ಮೇಲೆ ಗೃಹಬಂಧನದಲ್ಲಿರುವ ಮಾನವ ಹಕ್ಕುಗಳ ಕಾರ್ಯಕರ್ತರ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆ. ೨೭ ಕ್ಕೆ ಮುಂದೂಡಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಡಿ ವೈ ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠವು ಮಹಾರಾಷ್ಟ್ರ ಪೊಲೀಸರು ಐವರು ಕಾರ್ಯಕರ್ತರನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟಗಾರರನ್ನು ಬಿಡುಗಡೆಗೊಳಿಸುವಂತೆ ಪ್ರಮುಖರಾದ ಇತಿಹಾಸಕಾರರಾದ ರೊಮಿಲಾ ಥಾಪರ್, ಅರ್ಥಶಾಸ್ತ್ರಜ್ಞೆ ದೇವಕಿ ಜೈನ್, ಅರ್ಥಶಾಸ್ತ್ರಜ್ಞ ಪ್ರಭಾತ್ ಪಟ್ನಾಯಕ್, ಬರಹಗಾರರಾದ ಸತೀಶ್ ದೇಶಪಾಂಡೆ ಹಾಗೂ ಮಾಜಾ ಧರುವಲಾ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

73ರ ಸಮೀಪಕ್ಕೆ ಬಂದ ರುಪಾಯಿ ಕೊಂಚ ಚೇತರಿಕೆ

ಅಮೆರಿಕ ಡಾಲರ್ ವಿರುದ್ಧ ಸತತ ಕುಸಿಯುತ್ತಿರುವ ರುಪಾಯಿ ಬುಧವಾರದ ವಹಿವಾಟಿನಲ್ಲಿ 72.91ಕ್ಕೆ ಕುಸಿದು ಮತ್ತೊಂದು ಸಾರ್ವಕಾಲಿಕ ಕನಿಷ್ಠ ಮಟ್ಟದ ದಾಖಲೆ ಮಾಡಿತು. ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯಪ್ರವೇಶದಿಂದಾಗಿ ರುಪಾಯಿ 73ರ ಗಡಿದಾಟುವುದು ತಪ್ಪಿತು. ನಂತರ ಚೇತರಿಸಿಕೊಂಡು ದಿನದ ವಹಿವಾಟು ಅಂತ್ಯಗೊಂಡಾಗ 72.18ಕ್ಕೆಸ್ಥಿರಗೊಂಡಿತು. ಕಳೆದ ಹತ್ತು ದಿನಗಳ ವಹಿವಾಟಿನಲ್ಲಿ ಕುಸಿತದ ನಂತರ ಗರಿಷ್ಠ ಚೇತರಿಕೆಯನ್ನು ದಾಖಲಿಸಿದೆ. ಆದರೆ, ಬಹುತೇಕ ಮಾರುಕಟ್ಟೆ ತಜ್ಞರು ರುಪಾಯಿ ಈ ತಿಂಗಳಲ್ಲಿ 73ರ ಗಡಿದಾಟಲಿದೆ, ವರ್ಷಾಂತ್ಯಕ್ಕೆ 75ರ ಗಡಿ ದಾಟಲಿದೆ ಎಂದು ಅಂದಾಜಿಸಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಶೇ.3.69ಕ್ಕೆ ತಗ್ಗಿದ ಚಿಲ್ಲರೆ ದರ ಹಣದುಬ್ಬರ

ಸತತ ಏರುಹಾದಿಯಲ್ಲಿದ್ದ ಚಿಲ್ಲರೆ ದರ ಹಣದುಬ್ಬರ ಆಗಸ್ಟ್ ತಿಂಗಳಲ್ಲಿ ಶೇ.3.69ಕ್ಕೆ ಕುಸಿದಿದೆ. ಇದು ಕಳೆದ ಹತ್ತು ತಿಂಗಳಲ್ಲೇ ಕನಿಷ್ಠ ಮಟ್ಟದ ಹಣದುಬ್ಬರವಾಗಿದೆ. ಅಲ್ಲದೇ ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿ ಮಾಡಿಕೊಂಡಿರುವ ಶೇ.4ರ ಮಿತಿಯೊಳಗೆ ಇದೆ. ಕಳೆದ ತಿಂಗಳು ಶೇ.4.7ರಷ್ಟಿತ್ತು. ಆಹಾರ ಧಾನ್ಯಗಳ ಬೆಲೆ ಇಳಿಕೆಯಿಂದಾಗಿ ಹಣದುಬ್ಬರ ತಗ್ಗಿದೆ. ಇದರಿಂದ ಅಕ್ಟೋಬರ್ ತಿಂಗಳ ಹಣಕಾಸು ನೀತಿ ಪರಾಮರ್ಶೆ ವೇಳೆ ಆರ್‌ಬಿಐ ಬಡ್ಡಿದರ ಏರಿಕೆ ಮಾಡುವ ಸಾಧ್ಯತೆ ತಗ್ಗಿದೆ. ರುಪಾಯಿ ಮೌಲ್ಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಬಡ್ಡಿದರ ಏರಿಸುವ ಸಾಧ್ಯತೆ ಇದೆ ಎಂಬ ಅಂದಾಜು ಮಾರುಕಟ್ಟೆ ತಜ್ಞರಲ್ಲಿತ್ತು. ಈ ನಡುವೆ ಕೈಗಾರಿಕ ಉತ್ಪನ್ನ ಸೂಚ್ಯಂಕ ಜುಲೈ ತಿಂಗಳಲ್ಲಿ ಶೇ.6.8ಕ್ಕೆ ತಗ್ಗಿದೆ.

ಸಾಮಾಜಿಕ ಜಾಲತಾಣಗಳಿಗೆ ಯುರೋಪಿಯನ್ ಒಕ್ಕೂಟ ತಾಕೀತು

ವಿಚಿತ್ರಕಾರಿ ಅಥವಾ ಭಯೋತ್ಪಾದನೆಗೆ ಪ್ರಚೋದನೆ ನೀಡುವ ವಿಷಯಗಳನ್ನು ಇಂಟರ್‌ನೆಟ್ ಕಂಪನಿಗಳು ಒಂದು ಗಂಟೆಯ ಒಳಗಾಗಿ ತೆಗೆದು ಹಾಕುವಂತೆ ಯುರೋಪಿಯನ್ ಒಕ್ಕೂಟ ಬುಧವಾರ ತಾಕೀತು ಮಾಡಿದೆ. ಗೂಗಲ್, ಫೇಸ್‌ಬುಕ್ ಹಾಗೂ ಟ್ವಿಟ್ಟರ್ ಸೇರಿದಂತೆ ಇತರೆ ಇಂಟರ್‌ನೆಟ್ ಕಂಪನಿಗಳಿಗೆ ಮಾನವನ ಮೇಲ್ವಿಚಾರಣೆಯನ್ನು ತಡೆಗಟ್ಟಲು ತಂತ್ರಜ್ಞಾನ ಅಭಿವೃದ್ಧಿಪಡಿಸುವಂತೆ ಕೂಡ ಹೇಳಿದೆ. ಈ ಹಿಂದೆ ಒಕ್ಕೂಟ ಪ್ರಚೋದನಕಾರಿ ವಿಷಯಗಳನ್ನು ತೆಗೆದುಹಾಕುವಂತೆ ಕಂಪನಿಗಳಿಗೆ ಮೂರು ತಿಂಗಳ ಕಾಲಾವಕಾಶ ನೀಡಿತ್ತು.

ಮಗನೊಂದಿಗೆ ‘ಡಕ್‌ಟೇಲ್ಸ್‌’ ಟೈಟಲ್ ಟ್ರ್ಯಾಕ್‌ ಹಾಡಲಿದ್ದಾರೆ ಶಾನ್‌

ಡಿಸ್ನೀ ಚಾನಲ್ ಇಂಡಿಯಾ ಅಕ್ಟೋಬರ್‌ 1ರಂದು ಜನಪ್ರಿಯ ‘ಡಕ್‌ಟೇಲ್ಸ್‌’ ಸರಣಿಯ ಹಿಂದಿ ಅವತರಣಿಕೆ ಬಿಡುಗಡೆಗೊಳಿಸಲಿದೆ. ಗಾಯಕ, ಸಂಗೀತ ಸಂಯೋಜಕ ಶಾನ್‌ ತಮ್ಮ ಪುತ್ರ ಶುಭ್ ಜೊತೆ ಶೀರ್ಷಿಕೆ ಗೀತೆ ಹಾಡಲಿದ್ದಾರೆ. ಡೊನಾಲ್ಡ್‌ ಡಕ್‌, ಸ್ಕ್ರ್ಯೂಜ್‌ ಮ್ಯಾಕ್‌ಡಕ್‌ ಮತ್ತು ಈ ಜೋಡಿಯ ಮೂರು ಪುಟಾಣಿ ಬಾತುಕೋಳಿಗಳ ಕತೆಗಳ ಸರಣಿ ‘ಡಕ್‌ಟೇಲ್ಸ್‌’. ಕಾಮಿಡಿ, ಸೋಜಿಗ, ಸಾಹಸಗಳೊಂದಿಗೆ ಈ ಬಾತುಕೋಳಿಗಳು ಕುಟುಂಬ ಮತ್ತು ಸ್ನೇಹದ ಪ್ರಾಮುಖ್ಯತೆಯನ್ನು ತಿಳಿಸುತ್ತವೆ.

‘ಸ್ಪಚ್ಛತಾ ಹೈ ಸೇವಾ’ ಅಭಿಯಾನಕ್ಕೆ ಕೈ ಜೋಡಿಸಿದ ನಟ ಅಕ್ಷಯ್ ಕುಮಾರ್

ಬಾಲಿವುಡ್ ನಟ ಅಕ್ಷಯ್ ಕುಮಾರ್ ಇತ್ತೀಚೆಗೆ ಸಾಮಾಜಿಕ ಕಳಕಳಿ ಚಿತ್ರಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದು, ಈ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಯತ್ನಿಸುತ್ತಿದ್ದಾರೆ. ಇದೀಗ ನಟ, ಸ್ಪಚ್ಛತೆಯ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಪ್ರಧಾನಿ ನರೇಂದ್ರಮೋದಿಯವರ ಮಹತ್ವಕಾಂಕ್ಷೆಯ 'ಸ್ಪಚ್ಛತಾ ಹೈ ಸೇವಾ' ಅಭಿಯಾನಕ್ಕೆ ತಾವು ಕೈಜೋಡಿಸಿರುವುದಾಗಿ ಟ್ವಿಟ್ಟರ್ ನಲ್ಲಿ ತಿಳಿಸಿರುವ ಅಕ್ಷಯ್ ಕುಮಾರ್, ತಮ್ಮ ಅಭಿಮಾನಿಗಳು ಇದರಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ಸೆಪ್ಟೆಂಬರ್ 15ರಂದು ಎಲ್ಲರೂ ಮನೆಯಿಂದ ಹೊರಬಂದು ಮನೆಯ ಸುತ್ತಮುತ್ತ ಸ್ಪಚ್ಛಗೊಳಿಸಬೇಕು ಎಂದು ಅಕ್ಷಯ್ ಕುಮಾರ್ ಮನವಿ ಮಾಡಿದ್ದಾರೆ.

ಒಲಿಂಪಿಕ್ಸ್ ರನ್ನರ್‌ಅಪ್ ಜೋಡಿಗೆ ಆಘಾತ ನೀಡಿದ ಮನು-ಸುಮೀತ್

ಭಾರತದ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಜೋಡಿ ಮನು ಅತ್ರಿ ಮತ್ತು ಬಿ ಸುಮೀತ್ ರೆಡ್ಡಿ ಜೋಡಿ ಜಪಾನ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಅಚ್ಚರಿಯ ಫಲಿತಾಂಶ ನೀಡಿದೆ. ಇಂದು ನಡೆದ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಮಲೇಷ್ಯಾದ ಗೊಹ್ ವಿ ಶೆಮ್ ಮತ್ತು ತಾನ್ ವೀ ಕಿಂಗ್ ವಿರುದ್ಧದ ರೋಚಕ ಕಾದಾಟದಲ್ಲಿ ೧೫-೨೧, ೨೩-೨೧, ೨೧-೧೯ರಿಂದ ಗೆಲುವು ಸಾಧಿಸಿದ ಮನು ಮತ್ತು ಸುಮೀತ್ ಎಂಟರ ಘಟ್ಟಕ್ಕೆ ಅರ್ಹತೆ ಪಡೆದರು. ಎರಡನೇ ಗೇಮ್‌ನಲ್ಲಿ ಮ್ಯಾಚ್ ಪಾಯಿಂಟ್ಸ್ ಗಳಿಸಿ ೧೭-೧೯ರ ಹಿನ್ನಡೆಯನ್ನು ಮೆಟ್ಟಿನಿಂತರಲ್ಲದೆ, ೫೪ ನಿಮಿಷಗಳ ಸೆಣಸಾಟದಲ್ಲಿ ಮನು ಜೋಡಿ ಮೋಹಕ ಆಟವಾಡಿತು. ಮುಂದಿನ ಸುತ್ತಿನಲ್ಲಿ ಚೀನಾದ ಹೀ ಜಿಟಿಂಗ್ ಮತ್ತು ತಾನ್ ಕಿಯಾಂಗ್ ವಿರುದ್ಧ ಸೆಣಸಲಿದ್ದಾರೆ.

ಐಸಿಸಿ ಟೆಸ್ಟ್ ಶ್ರೇಯಾಂಕ: ಭಾರತದ ಅಗ್ರಸ್ಥಾನ ಭದ್ರ

ದಿನದ ಹಿಂದಷ್ಟೇ ಮುಕ್ತಾಯ ಕಂಡ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯ ಸರಣಿಯಲ್ಲಿ ೧-೪ರಿಂದ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಸೋಲನುಭವಿಸಿದರೂ, ಐಸಿಸಿ ಟೀಂ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಕೆನ್ನಿಂಗ್ಟನ್ ಓವಲ್‌ನಲ್ಲಿ ಮುಗಿದ ಕೊನೆಯ ಪಂದ್ಯದಲ್ಲಿ ೧೧೮ ರನ್‌ಗಳಿಂದ ಸೋತ ಭಾರತ, ೧೨೫ ಪಾಯಿಂಟ್ಸ್‌ಗಳಿಂದ ೧೧೫ ಪಾಯಿಂಟ್ಸ್‌ಗೆ ಕುಸಿದಿದೆ. ಇಷ್ಟಿದ್ದರೂ, ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾಗಿಂತ ೯ ಪಾಯಿಂಟ್ಸ್‌ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಭಾರತ ತಂಡ ಯಶಸ್ವಿಯಾಗಿದೆ. ಈ ಮಧ್ಯೆ, ಭಾರತ ವಿರುದ್ಧ ಸರಣಿ ಜಯಿಸಿದ ಜೋ ರೂಟ್ ಸಾರಥ್ಯದ ಇಂಗ್ಲೆಂಡ್ ತಂಡ, ೯೭ ಪಾಯಿಂಟ್ಸ್‌ಗಳೊಂದಿಗೆ ೫ನೇ ಸ್ಥಾನದಲ್ಲಿದೆ. ಇನ್ನು, ಹರಿಣಗಳಂತೆ ೧೦೬ ಪಾಯಿಂಟ್ಸ್ ಗಳಿಸಿರುವ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ಏತನ್ಮಧ್ಯೆ, ವಿರಾಟ್ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More