ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ ಜೇಟ್ಲಿ, ಮಲ್ಯ ಭೇಟಿ ವಿಚಾರ

ದೇಶ ತೊರೆಯುದಕ್ಕೂ ಮುನ್ನ ಅರುಣ್‌ ಜೇಟ್ಲಿ ಅವರನ್ನು ಭೇಟಿ ಮಾಡಿ ತಮ್ಮ ಸಾಲದ ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡಿದ್ದೆ ಎಂದು ಹಣ ವಂಚನೆ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ ಮಲ್ಯ ತಿಳಿಸಿದ್ದಾರೆ. ಈ ವಿಚಾರವೀಗ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡದೊಂದು ವಿವಾದ ಸೃಷ್ಟಿಸಿದೆ

ದೇಶ ತೊರೆಯುವುದಕ್ಕೂ ಮುನ್ನ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರನ್ನು ಭೇಟಿಯಾಗಿ ತಮ್ಮ ಸಾಲದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಚರ್ಚಿಸಿದ್ದಾಗಿ ಬಹುಕೋಟಿ ವಂಚನೆ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ ಮಲ್ಯ ಕೇಳಿಕೊಂಡಿದ್ದಾಗಿ ತಿಳಿಸಿದ್ದಾರೆ. ಲಂಡನ್‌ ನ್ಯಾಯಾಲಯದ ಹೊರಗೆ ವರದಿಗಾರರೊಂದಿಗೆ ಈ ಸ್ಫೋಟಕ ಮಾಹಿತಿ ಹಂಚಿಕೊಂಡಿರುವ ಮಲ್ಯ ಅವರು ರಾಷ್ಟ್ರ ರಾಜಕಾರಣದಲ್ಲಿ ಹೊಸ ಅಲ್ಲೊಲ ಕಲ್ಲೋಲ ಸೃಷ್ಟಿಸಿದ್ದಾರೆ. ಇದಕ್ಕೆ ಶೀಘ್ರವಾಗಿ ಪ್ರತಿಕ್ರಿಯಿಸಿರುವ ಅರುಣ್‌ ಜೇಟ್ಲಿ ಅವರು ಮಲ್ಯ ಹೇಳಿಕೆ ಸುಳ್ಳುಗಳಿಂದ ಕೂಡಿದೆ ಎಂದಿದ್ದಾರೆ. ಮಲ್ಯ ಹೇಳಿಕೆ ಹಿನ್ನೆಲೆಯಲ್ಲಿ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಕೇಂದ್ರ ಸರ್ಕಾರವು ಭ್ರಷ್ಟ ಉದ್ಯಮಗಳ ರಕ್ಷಣೆಯಲ್ಲಿ ತೊಡಗಿದ್ದು, ಅವರು ದೇಶ ತೊರೆಯಲು ಸಹಾಯ ಮಾಡಿದೆ ಎಂದು ಹರಿಹಾಯ್ದಿದ್ದಾರೆ.

“ಜಿನೆವಾದಲ್ಲಿ ಪೂರ್ವನಿಗದಿತ ಭೇಟಿಯಿದ್ದ ಕಾರಣ ನಾನು ಭಾರತ ತೊರೆಯಬೇಕಾಯಿತು. ದೇಶ ತೊರೆಯುವುದಕ್ಕೂ ಮುನ್ನ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರನ್ನು ಭೇಟಿ ಮಾಡಿ ಬ್ಯಾಂಕುಗಳಲ್ಲಿ ತಾವು ಮಾಡಿದ್ದ ಸಾಲದ ಬಗ್ಗೆ ಪ್ರಸ್ತಾಪಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಸಂಬಂಧ ಚರ್ಚಿಸಿದ್ದೆ. ಇದು ಸತ್ಯದಿಂದ ಕೂಡಿದ ವಿಚಾರ,” ಎಂದು ವಿಜಯ ಮಲ್ಯ ತಿಳಿಸಿದ್ದಾರೆ.

ಇದೇ ವೇಳೆ, ತಮ್ಮನ್ನು ಇಂಗ್ಲೆಂಡ್‌ನಿಂದ ಹಸ್ತಾಂತರಿಸಲು ಸಿಬಿಐ ಮಾಡಿಕೊಂಡಿರುವ ಮನವಿಯನ್ನು ಪ್ರಶ್ನಿಸಿ, ಭಾರತದ ಜೈಲುಗಳು ಮನುಷ್ಯರ ವಾಸಕ್ಕೆ ಯೋಗ್ಯವಾಗಿಲ್ಲ ಎಂದು ಹೇಳಿದ್ದಾರೆ. ಹಣಕಾಸು ಸಚಿವರ ಭೇಟಿ ಸಂದರ್ಭದಲ್ಲಿ ನಡೆದ ಮಾತುಕತೆಗಳ ವಿವರ ನೀಡಲು ವಿಜಯ ಮಲ್ಯ ನಿರಾಕರಿಸಿದ್ದಾರೆ. ಈ ಹಿಂದೆ ಕರ್ನಾಟಕ ಹೈಕೋರ್ಟ್‌ ಎದುರು ‘ಸಮಗ್ರ ಪರಿಹಾರ’ದ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಆ ಮೂಲಕ ಬ್ಯಾಂಕುಗಳಿಗೆ ತಮ್ಮ ಸಾಲದ ಕನಿಷ್ಟ ಮೊತ್ತವನ್ನಾದರೂ ಸಂದಾಯ ಮಾಡಲು ಅವಕಾಶ ಕಲ್ಪಿಸಬೇಕೆಂದು ಕೇಳಿಕೊಂಡಿದ್ದಾಗಿ ತಿಳಿಸಿದ್ದಾರೆ.

ಮಲ್ಯ ಹೇಳಿಕೆಯ ಬಗ್ಗೆ ಪೇಸ್ಬುಕ್‌ ಪೋಸ್ಟ್‌ ಮೂಲಕ ಪ್ರತಿಕ್ರಿಯಿಸಿರುವ ಅರುಣ್‌ ಜೇಟ್ಲಿ ಅವರು, “2014 ರ ನಂತರ ವಿಜಯ ಮಲ್ಯ ಅವರ ಭೇಟಿಗೆ ಯಾವುದೇ ಅವಕಾಶ ನೀಡಿಲ್ಲ. ದೇಶ ತೊರೆಯುದಕ್ಕೂ ಮುನ್ನ ಅವರು ನನ್ನನ್ನು ಭೇಟಿಯಾಗಿದ್ದಾರೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ,” ಎಂದು ಹೇಳಿದ್ದಾರೆ. ಮುಂದುವರೆದ ಅವರು, “ಸಾಲ ತೀರಿಸುವಂತೆ ಮಲ್ಯ ಅವರಿಗೆ ನಾನು ಆಹ್ವಾನಿಸುತ್ತಿದ್ದೇನೆ,” ಎಂದು ತಿಳಿಸಿದ್ದಾರೆ.

ಮಲ್ಯ ಅವರ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ವಿವಿಧ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿವೆ. ಹಣಕಾಸು ಸಚಿವ ಅರುಣ್‌ ಜೇಟ್ಲಿಯವರನ್ನು ಮಲ್ಯ ಭೇಟಿ ಮಾಡಿದ ಸಂದರ್ಭದ ವಿವರಗಳನ್ನು ಸಾರ್ವಜನಿಕವಾಗಿ ನೀಡುವಂತೆ ಒತ್ತಾಯಿಸಿರುವ ಕಾಂಗ್ರೆಸ್‌, “ಮಲ್ಯ ಸೇರಿದಂತೆ ಕೆಲ ವಂಚಕ ಉದ್ಯಮಿಗಳು ದೇಶ ತೊರೆಯುವುದಕ್ಕೆ ಕೇಂದ್ರ ಸರ್ಕಾರ ಸಹಾಯ ಮಾಡಿದೆ. ವಿಜಯ ಮಲ್ಯ ದೇಶ ತೊರೆಯಲು ಅವಕಾಶ ನೀಡಿದ್ದರ ಬಗ್ಗೆ ಕೇಂದ್ರ ಸರ್ಕಾರ ವಿವರಿಸಲಿ,” ಎಂದು ಒತ್ತಾಯಿಸಿದೆ.

ಇದನ್ನೂ ಓದಿ : ಮಲ್ಯ, ರಾಫೇಲ್, ನ್ಯಾ.ಲೋಯಾ ಪ್ರಕರಣಗಳ ಬಗ್ಗೆ ಕೇಂದ್ರದ ಮೌನಕ್ಕೆ ಅರ್ಥವೇನು?

ಈ ಬಗ್ಗೆ ಟ್ವೀಟ್‌ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, “ಹಣಕಾಸು ಸಚಿವರು ಈಗ ಪ್ರತಿಕ್ರಿಯೆ ನೀಡಲೇಬೇಕು. ಈ ಬಗ್ಗೆ ಪ್ರಧಾನಿ ಅವರಿಗೆ ಮೊದಲೇ ತಿಳಿದಿತ್ತು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ,” ಎಂದು ಟೀಕಿಸಿದ್ದಾರೆ.

ಕಳೆದ ತಿಂಗಳು ಲಂಡನ್‌ ಪ್ರವಾಸದಲ್ಲಿ ವಿಜಯ ಮಲ್ಯ ಬಗ್ಗೆ ಪ್ರಸ್ತಾಪಿಸಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅವರು, “ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಲ್ಯರಂತಹ ಕೆಲ ವಂಚಕ ಉದ್ಯಮಿಗಳ ವಿಷಯದಲ್ಲಿ ಕಟುವಾಗಿ ನಡೆದುಕೊಂಡಿಲ್ಲ. ಭಾರತ ತೊರೆಯುವುದಕ್ಕೂ ಮುನ್ನ ವಿಜಯ ಮಲ್ಯ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿ ಮಾಡಿದ್ದಾರೆ. ಅದು ದಾಖಲೆಯಲ್ಲಿದೆ. ನಾನು ಅವರ ಹೆಸರನ್ನು ಹೇಳಲು ಇಚ್ಛಿಸುವುದಿಲ್ಲ,” ಎಂದು ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ವಿಜಯ್‌ ಮಲ್ಯ ಹೇಗೆ ಭಾರತ ತೊರೆಯಲು ಸಾಧ್ಯವಾಯಿತು ಎಂಬ ಪ್ರಶ್ನೆಯಂತು ಇಂದಿಗೂ ಎಲ್ಲರನ್ನೂ ಕಾಡುತ್ತಿದೆ. ಸಿಬಿಐ ಏನು ಮಾಡುತ್ತಿತ್ತು? ವಿಮಾನದ ಸಿಬ್ಬಂದಿ ಇವರನ್ನು ಹೇಗೆ ವಿಮಾನ ಹತ್ತಲು ಬಿಟ್ಟರು ಎಂಬ ಪ್ರಶ್ನೆಗಳು ಕೇಳಿ ಬರುತ್ತಲೇ ಇದೆ. ಈಗ ವಿಜಯ್‌ ಮಲ್ಯ-ಜೇಟ್ಲಿ ಭೇಟಿಯ ಸುದ್ದಿ ಹೊರಬಿದ್ದ ಮೇಲೆ ಮಲ್ಯ ದೇಶ ತೊರೆಯಲು ಸಾಧ್ಯವಾದದ್ದು ಹೇಗೆಂಬ ಪ್ರಶ್ನೆ ಮತ್ತೆ ಎದ್ದಿದೆ? ಜೊತೆಗೆ ಈ ಕುರಿತು ಜೂನ್‌ ೧೨ರಂದು ಸುಬ್ರಮಣಿಯನ್‌ ಸ್ವಾಮಿ ಮಾಡಿದ ಟ್ವೀಟ್‌ ಕೂಡ ವೈರಲ್‌ ಆಗಿದೆ.

ಈ ಟ್ವೀಟ್‌ನಲ್ಲಿ ಸ್ವಾಮಿ, " ಎಲ್ಲ ವಿಮಾನಗಳಿಗೆ ಮಲ್ಯರಿಗೆ ಸಂಬಂಧಿಸಿದಂತೆ ನೋಟಿಸ್‌ ಜಾರಿಯಾಗಿದ್ದ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಆಮೇಲೆ ಅವರು ದೆಹಲಿಗೆ ಬಂದರು ಮತ್ತು ಅಧಿಕಾರದಲ್ಲಿರುವ ಪ್ರಭಾವಿಯೊಬ್ಬರನ್ನು ಭೇಟಿ ಮಾಡಿದರು. ಅವರಿಂದಾಗಿ ನಿರ್ಬಂಧಿಸಬೇಕಿದ್ದ ನೊಟೀಸ್‌, ಅವರ ನಿರ್ಗಮನದ ವರದಿ ಮಾಡುವಂತೆ ಬದಲಾಯಿಸಲು ಸಾಕಾಯಿತು. ನೊಟೀಸ್‌ವನ್ನು ದುರ್ಬಲಗೊಳಿಸಿದ ಆ ವ್ಯಕ್ತಿ ಯಾರು?' ಎಂದು ಪ್ರಶ್ನೆ ಮಾಡಿದ್ದರು. ಈಗ ಬಹಳಷ್ಟು ರಾಜಕೀಯ ನಾಯಕರು ಈ ಟ್ವೀಟನ್ನು ರೀಟ್ವೀಟ್‌ ಮಾಡುತ್ತಿದ್ದಾರೆ ಕೂಡ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More