ಚುನಾವಣೆ ವರ್ಷಕ್ಕೆ ರೈತರಿಗಾಗಿ ಸಿದ್ಧವಾಯ್ತು ಪ್ರಧಾನಮಂತ್ರಿ ‘ಆಶಾ ಯೋಜನೆ’

ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಕನಿಷ್ಠ ಬೆಂಬಲ ಬೆಲೆ ಯೋಜನೆಯನ್ನು ಚುನಾವಣೆಗೆ ಇನ್ನೊಂದು ವರ್ಷ ಇರುವಾಗ ಪ್ರಧಾನಿ ನರೇಂದ್ರ ಮೋದಿ ಜಾರಿ ಘೋಷಣೆ ಮಾಡಿದ್ದರು. ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ರೈತರಿಗಾಗಿ ‘ಪ್ರಧಾನ ಮಂತ್ರಿ ಆಶಾ’ ಯೋಜನೆ ಘೋಷಿಸಿ ‘ಮತಲಾಭ’ಕ್ಕೆ ಮುಂದಾಗಿದ್ದಾರೆ!

ಚುನಾವಣಾ ತಂತ್ರಗಾರಿಕೆಯಲ್ಲಿ ನಿಪುಣರೆನಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ 2019ನೇ ಸಾಲಿನ ಚುನಾವಣೆಗೆ ಈಗಲೇ ಸಿದ್ದತೆ ನಡೆಸಿದ್ದಾರೆ. ಮುಂದಿನ ಚುನಾವಣೆಯನ್ನು ಅವರು ರೈತರ ಅಭಿವೃದ್ಧಿ ಮುಂದಿಟ್ಟುಕೊಂಡು ‘ಮತಲಾಭ’ ಪಡೆಯಲು ಕಾರ್ಯತಂತ್ರ ರೂಪಿಸಿದ್ದಾರೆ. ಅದಕ್ಕಾಗಿ ‘ಪ್ರಧಾನ ಮಂತ್ರಿ ಆಶಾ ಯೋಜನೆ’ ಘೋಷಿಸಿದ್ದಾರೆ. ಈ ಯೋಜನೆ ಜಾರಿಗೆ ಬುಧವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಅಪನಗದೀಕರಣದಿಂದಾಗಿ ಹದಗೆಟ್ಟಿದ್ದ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಮುನ್ನವೇ ರುಪಾಯಿ ಕುಸಿತ, ರಫ್ತು ಕೊರತೆ, ಚಾಲ್ತಿ ಖಾತೆ ಮತ್ತು ವಿತ್ತೀಯ ಕೊರತೆಯಿಂದಾಗಿ ಆರ್ಥಿಕತೆ ಮತ್ತಷ್ಟು ಹದಗೆಟ್ಟಿರುವ ಹಿನ್ನೆಲೆಯಲ್ಲಿ, ದೇಶದ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಚುನಾವಣೆ ನಡೆಸಲಾಗದು ಎಂಬುದನ್ನು ಅರಿತಿರುವ ಪ್ರಧಾನಿ ಮೋದಿ ರೈತರ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದ್ದಾರೆ.

ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಕನಿಷ್ಠ ಬೆಂಬಲ ಬೆಲೆ ಯೋಜನೆಯನ್ನು ಜಾರಿ ಮಾಡುವುದಾಗಿ ಇತ್ತೀಚೆಗಷ್ಟೆ ಘೋಷಿಸಿದ್ದರು. ಈಗ ಮತ್ತೆ ರೈತರಿಗಾಗಿ ‘ಪ್ರಧಾನ ಮಂತ್ರಿ ಆಶಾ ಯೋಜನೆ’ ಘೋಷಿಸಿದ್ದಾರೆ. ಇದು ಕನಿಷ್ಠ ಬೆಂಬಲ ಬೆಲೆಗೆ ಪೂರಕವಾದ ಯೋಜನೆ. ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೇ ಇದ್ದಾಗ ಸರ್ಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಯನ್ನು ರೈತರಿಗೆ ಒದಗಿಸುವುದು ಪ್ರಧಾನಿ ಆಶಾ ಯೋಜನೆಯ ಉದ್ದೇಶ. ಈ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರಕ್ಕೆ 40,000 ಕೋಟಿ ರುಪಾಯಿ ಹೊರೆ ಬೀಳಲಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.

ಆದರೆ, ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಕುಸಿದಾಗ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕಾದ ಹೊಣೆ ರಾಜ್ಯ ಸರ್ಕಾರಗಳಿಗೆ ಸೇರಿದ್ದು. ರಾಜ್ಯ ಸರ್ಕಾರಗಳೇ ಈ ಮಾರುಕಟ್ಟೆ ಧಾರಣೆ ಮತ್ತು ಕನಿಷ್ಠ ಬೆಂಬಲ ಬೆಲೆಯ ನಡುವಿನ ಅಂತರವನ್ನು ಭರಿಸಬೇಕು. ಹೀಗಾಗಿ ಕೇಂದ್ರ ಸರ್ಕಾರ ಯೋಜನೆ ಘೋಷಿಸಿದ್ದರೂ ಅದರ ಹೊರೆ ರಾಜ್ಯಸರ್ಕಾರಗಳ ಮೇಲಾಗಲಿದೆ.

ನೂತನ ಯೋಜನೆಗೆ ಪ್ರಧಾನ ಮಂತ್ರಿ ಆಶಾ (ಅನ್ನದಾತ ಬೆಲೆ ಸಂರಕ್ಷಣ ಅಭಿಯಾನ) ಎಂದು ಆಕರ್ಷಕ ಹೆಸರನ್ನಿಡಲಾಗಿದೆ. ನೂತನ ಯೋಜನೆಯಡಿ ಧಾರಣೆ ಬೆಂಬಲ ಯೋಜನೆ (ಪಿಎಸ್ಎಸ್), ಧಾರಣೆ ಕೊರತೆ ಪಾವತಿ ಯೋಜನೆ (ಪಿಡಿಪಿಎಸ್) ಮತ್ತು ಖಾಸಗಿ ಸಂಗ್ರಹಣೆ ಮತ್ತು ದಾಸ್ತಾನು ಯೋಜನೆ (ಪಿಪಿಪಿಎಸ್)ಗಳನ್ನು ತರಲಾಗಿದೆ. ಇದಲ್ಲದೇ ಹಾಲಿ ಇರುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಭತ್ತ, ಗೋದಿ ಮತ್ತು ಪೌಷ್ಠಿಕ ಧಾನ್ಯಗಳ ಸಂಗ್ರಹಣೆ ಮತ್ತು ಜವಳಿ ಸಚಿವಾಲಯದಿಂದ ಹತ್ತಿ ಮತ್ತು ಸೆಣಬು ಸಂಗ್ರಹಣೆ ಮತ್ತು ಧಾರಣೆ ಕುಸಿದಾಗ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುವ ಯೋಜನೆ ಮುಂದುವರೆಯಲಿದೆ.

ಧಾರಣೆ ಬೆಂಬಲ ಯೋಜನೆಯಡಿ ಧಾನ್ಯ, ಎಣ್ಣೆ ಕಾಳು ಮತ್ತು ಕೊಬ್ಬರಿಯನ್ನು ರಾಜ್ಯ ಸರ್ಕಾರದ ನೆರವಿನೊಂದಿಗೆ ಕೇಂದ್ರ ಸರ್ಕಾರ ದಾಸ್ತಾನು ಮಾಡಲಿದೆ. ನಫೆಡ್ ಮತ್ತು ಭಾರತ ಆಹಾರ ನಿಗಮ (ಎಫ್ಸಿಐ) ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ದಾಸ್ತಾನು ಮಾಡಲಿದೆ.

ಧಾರಣೆ ಕೊರತೆ ಪಾವತಿ ಯೋಜನೆಯಡಿ ಅಧಿಸೂಚಿತ ಎಣ್ಣೆಕಾಳುಗಳನ್ನು ಖರೀದಿಸಲಾಗುತ್ತದೆ. ಮಾರುಕಟ್ಟೆ ಧಾರಣೆ ಮತ್ತು ಕನಿಷ್ಠ ಬೆಂಬಲ ಬೆಲೆ ನಡುವಿನ ವ್ಯತ್ಯಾಸವನ್ನು ನೊಂದಾಯಿತ ರೈತರಿಗೆ ನೇರ ಪಾವತಿ ಯೋಜನೆಯಡಿ ಅವರವರ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತದೆ. ಮಾರುಕಟ್ಟೆ ಮತ್ತು ಎಂಎಸ್ಪಿ ನಡುವಿನ ವ್ಯತ್ಯಾಸದ ಮೊತ್ತವನ್ನು ನೇರವಾಗಿ ರೈತರಿಗೆ ಪಾವತಿಸುವುದರಿಂದ ಇಲ್ಲಿ ದಾಸ್ತಾನು ಮಾಡುವ ಅಗತ್ಯವಿರುವಿದಿಲ್ಲ.

ಖಾಸಗಿಯವರು ಧಾನ್ಯಗಳ ದಾಸ್ತಾನು ಮಾಡುವ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಅದರ ಫಲಿತಾಂಶವನ್ನಾಧರಿಸಿ ಖಾಸಗಿಯವರು ದಾಸ್ತಾನು ಮಾಡುವ ಯೋಜನೆ ವಿಸ್ತರಿಸಲು ನಿರ್ಧರಿಸಲಾಗಿದೆ. ಆಯ್ದ ಜಿಲ್ಲೆಗಳು ಮತ್ತು ಎಪಿಎಂಸಿ ವ್ಯಾಪ್ತಿಯಲ್ಲಿ ಖಾಸಗಿಯವರು ಎಣ್ಣೆಕಾಳುಗಳನ್ನು ದಾಸ್ತಾನು ಮಾಡುವ ಪ್ರಾಯೋಗಿಕ ಯೋಜನೆಯನ್ನು ರಾಜ್ಯ ಸರ್ಕಾರಗಳು ಜಾರಿಗೆ ತರಬಹದು. ಆಯ್ದ ಜಿಲ್ಲೆ ಅಥವಾ ಎಪಿಎಂಸಿ ವ್ಯಾಪ್ತಿಯಲ್ಲಿ ಈಗ ಕನಿಷ್ಠ ಬೆಂಬಲ ಬೆಲೆ ಘೋಷಿಸಿರುವ ಒಂದು ಬೆಳೆ ಅಥವಾ ಅದಕ್ಕಿಂತ ಹೆಚ್ಚುಬೆಳೆಯನ್ನು ಸೇರಿಸಬಹುದಾಗಿದೆ.

ಆಯ್ದ ಖಾಸಗಿ ದಾಸ್ತಾನು ಏಜೆನ್ಸಿಯು ಅಧಿಸೂಚಿತ ಅವಧಿಯಲ್ಲಿ ಮಾರುಕಟ್ಟೆ ಬೆಲೆಯು ಕನಿಷ್ಠ ಬೆಂಬಲ ಬೆಲೆಗಿಂತ ಕೆಳಮಟ್ಟಕ್ಕೆ ಇಳಿದಾಗ ಕನಿಷ್ಠ ಬೆಂಬಲ ಬೆಲೆಯಲ್ಲಿ ದಾಸ್ತಾನು ಮಾಡಬೇಕು. ರಾಜ್ಯ ಸರ್ಕಾರ ಸೂಚಿಸಿದಾಗ ಮಾರುಕಟ್ಟೆ ಪ್ರವೇಶ ಮಾಡಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಿ ದಾಸ್ತಾನು ಮಾಡಬೇಕು. ಅದಕ್ಕಾಗಿ ಖಾಸಗಿಯವರಿಗೆ ಅಧಿಸೂಚಿತ ಬೆಳೆಗಳ ಘೋಷಿತ ಕನಿಷ್ಠ ಬೆಂಬಲ ಬೆಲೆಯ ಗರಿಷ್ಠ ಶೇ.15ರಷ್ಟನ್ನು ಸೇವಾ ಶುಲ್ಕವಾಗಿ ರಾಜ್ಯ ಸರ್ಕಾರಗಳು ನೀಡಬೇಕಾಗುತ್ತದೆ.

ಈ ಯೋಜನೆಗೆ ಹೆಚ್ಚುವರಿಯಾಗಿ 16,550 ಕೋಟಿ ರುಪಾಯಿ ಸರ್ಕಾರದ ಖಾತರಿ ನೀಡಲು ನಿರ್ಧರಿಸಿದ್ದು ಒಟ್ಟಾರೆ 45,550 ಕೋಟಿಗೆ ಏರಿದೆ. ಇದಲ್ಲದೇ ಬಜೆಟ್ ನಲ್ಲಿ ಧಾನ್ಯ ಸಂಗ್ರಹಣೆಗಾಗಿ ಮೀಸಲಿಡುತ್ತಿರುವ ಮೊತ್ತ ಹೆಚ್ಚಿಸಲಾಗಿದ್ದು, ಪಿಎಂ ಆಶಾ ಯೋಜನೆಗೆ 15053 ಕೋಟಿ ರುಪಾಯಿ ಮೀಸಲಿಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ : ಚುನಾವಣೆ ಮೇಲೆ ಮೋದಿ ಕಣ್ಣು; ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಗರಿಷ್ಠ ಏರಿಕೆ

ಚುನಾವಣಾ ಕಾರ್ಯತಂತ್ರವೇ? ಮೋದಿ ಸರ್ಕಾರ ಧಾನ್ಯ ದಾಸ್ತಾನು ಯೋಜನೆಯನ್ನು ಚುನಾವಣಾ ಕಾರ್ಯತಂತ್ರವಾಗಿ ಬಳಸುತ್ತಿದೆ. ಸಂಪುಟ ಸಭೆ ನಿರ್ಧಾರದ ನಂತರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಧಾನ್ಯ ದಾಸ್ತಾನು ಮಾಡಲು ಯುಪಿಎ ಸರ್ಕಾರ ಮಾಡಿದ ವೆಚ್ಚ ಮತ್ತು ಎನ್ಡಿಎ ಸರ್ಕಾರ ಮಾಡುತ್ತಿರುವ ವೆಚ್ಚದ ವಿವರವನ್ನು ನೀಡಲಾಗಿದೆ.

ಅದರ ಪ್ರಕಾರ, 2010-14ರ ನಡುವೆ ಮಾಡಿದ ಧಾನ್ಯ ಸಂಗ್ರಹಣೆ 3500 ಕೋಟಿ ರುಪಾಯಿ. 2014-18ನಡುವೆ ಧಾನ್ಯ ಸಂಗ್ರಹಣೆ 34,000 ಕೋಟಿ ರುಪಾಯಿ. 2010-14ರ ನಡುವೆ ಕೃಷಿ ಉತ್ಪನ್ನಗಳ ದಾಸ್ತಾನು ಮಾಡಿ ಸರ್ಕಾರ ಖಾತರಿ ನೀಡಿದ ಮೊತ್ತ 2500 ಕೋಟಿ ರುಪಾಯಿ ಮತ್ತು ಅದಕ್ಕಾದ ವೆಚ್ಚ 300 ಕೋಟಿ ರುಪಾಯಿ. 2014-18ರ ನಡುವೆಧಾನ್ಯ ಸಂಗ್ರಹಣೆ ಮಾಡಿ ಸರ್ಕಾರ ಖಾತರಿ ನೀಡಿದ ಮೊತ್ತವು 29,000 ಕೋಟಿ ಮತ್ತು ಅದಕ್ಕಾದ ವೆಚ್ಚವು 1,000 ಕೋಟಿ ರುಪಾಯಿ ಎಂದು ವಿವರಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More