ಪೊಲೀಸರು ಮನೆ ಬಾಗಿಲು ಬಡಿದಾಗಲೇ ಕ್ರಯೋಜೆನಿಕ್ ಕುರಿತ ನನ್ನ ಕನಸು ಮುರುಟಿತ್ತು!

1994ರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಪರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ನಾರಾಯಣನ್ ವಿರುದ್ಧ ಆರೋಪ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದು, ಅವರಿಗೆ 50 ಲಕ್ಷ ರು. ನಷ್ಟ ಪರಿಹಾರ ನೀಡುವಂತೆಯೂ ಸೂಚಿಸಿದೆ

ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ತಂತ್ರಜ್ಞಾನ ಸಿದ್ಧಪಡಿಸಿ, ಶತ್ರುರಾಷ್ಟ್ರಗಳಿಗೆ ಅದರ ತಯಾರಿಕೆಯ ಮಾಹಿತಿಯನ್ನು ರಹಸ್ಯವಾಗಿ ಹಂಚುತ್ತಿದ್ದಾರೆ ಎಂದು ಬೇಹುಗಾರಿಕೆ ಆರೋಪದಲ್ಲಿ ಬಂಧನಕ್ಕೊಳಪಟ್ಟಿದ್ದ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಪರವಾಗಿ ಸುಪ್ರೀಂ ಶುಕ್ರವಾರ ತೀರ್ಪು ನೀಡಿದೆ. ನಾರಾಯಣನ್ ವಿರುದ್ಧದ ವೃಥಾ ಆರೋಪ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಗೊಳ್ಳುವಂತೆ ಸುಪ್ರೀಂ ಕೋರ್ಟ್‍ಗೆ ನಂಬಿ ನಾರಾಯಣನ್ ಸಲ್ಲಿಸಿದ್ದ ಅರ್ಜಿ ಪರಿಗಣಿಸಿ, ಅವರಿಗೆ 50 ಲಕ್ಷ ರುಪಾಯಿ ನಷ್ಟ ಪರಿಹಾರ ನೀಡುವಂತೆಯೂ ಹೇಳಿದೆ.

ಪ್ರಕರಣ ಏನು?

ಕ್ರಯೋಜೆನಿಕ್ ಮಾದರಿಯ ರಾಕೆಟ್‍ಗೆ ಸಂಬಂಧಿಸಿದ ತಂತ್ರಜ್ಞಾನದ ಮಾಹಿತಿಯನ್ನು ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ನೀಡುವ ಸಲುವಾಗಿ ಬೇಹುಗಾರಿಕೆ ನಡೆಸುತ್ತಿದ್ದರು ಎಂದು ಆರೋಪಿಸಿ ಕೇರಳದ ಪೊಲೀಸರು 1994ರಲ್ಲಿ ಇಸ್ರೋ ಸಂಸ್ಥೆಯ ವಿಜ್ಞಾನಿಗಳಾದ ನಂಬಿ ನಾರಾಯಣನ್, ಶಶಿ ಕುಮಾರ್, ಬೆಂಗಳೂರು ಮೂಲದ ಉದ್ಯಮಿಗಳಾದ ಎಸ್ ಕೆ ಶರ್ಮಾ ಮತ್ತು ರಷ್ಯಾ ಬ್ಯಾಹಾಕಾಶ ಸಂಸ್ಥೆಯ ಭಾರತದ ಪ್ರತಿನಿಧಿ ಚಂದ್ರಶೇಖರ್, ಮಾಲ್ಡೀವ್ಸ್‌ನ ಮರಿಯಂ ರಶೀದಾ ಹಾಗೂ ಫೌಜಿಯಾ ಹಸನ್ ಸೇರಿದಂತೆ ಒಟ್ಟು ಆರು ಜನರನ್ನು ಬಂಧಿಸಿದ್ದರು. ಮಾಲ್ಡೀವ್ಸ್‌ನ ಮರಿಯಂ ಹಾಗೂ ಹಸನ್, ಕ್ರಯೋಜೆನಿಕ್ ತಂತ್ರಜ್ಞಾನ ಕುರಿತ ರೇಖಾಚಿತ್ರಗಳನ್ನು.( ಬ್ಲೂಪ್ರಿಂಟ್) ಹೊಂದಿದ್ದರು ಎಂದು ಆರೋಪಿಸಲಾಗಿತ್ತು.

೧೯೯೪ರ ನವೆಂಬರ್ ತಿಂಗಳಲ್ಲಿ ನಂಬಿ ಅವರನ್ನು ೫೦ ದಿನಗಳ ಕಾಲ ಬಂಧಿಸಿ ಜೈಲಿನಲ್ಲಿ ವಿಪರೀತ ಹಿಂಸೆ ನೀಡಲಾಗಿತ್ತು. ನಂಬಿ ಅವರ ಸ್ನೇಹಿತರಾದ ಮಾಲ್ಡೀವ್ಸ್ ಮೂಲದ ಮರಿಯಂ ರಶೀದಾ ಹಾಗೂ ಫೌಜಿಯಾ ಅವರ ಬಳಿ ನಂಬಿ ಅವರ ದೂರವಾಣಿ ಸಂಖ್ಯೆ ಇದ್ದಿದ್ದು ಕೇರಳದ ಪೊಲೀಸರ ನಂಬಿಕೆಗೆ ಪುಷ್ಟಿ ನೀಡುವಂತೆ ಮಾಡಿತ್ತು.

ಬಂಧಿತರಾಗಿದ್ದ ಮಾಲ್ಡೀವ್ಸ್‌ನ ಮರಿಯಂ ರಶೀದಾ ಹಾಗೂ ಫೌಜಿಯಾ ಹಸನ್
ಬೆಂಗಳೂರು ಮೂಲದ ಉದ್ಯಮಿ ಸುಧೀರ್ ಕುಮಾರ್ ಶರ್ಮಾ (ಎಡ) ಹಾಗೂ ವಿಜ್ಞಾನಿ ನಂಬಿ ನಾರಾಯಣನ್ (ಬಲ)

ಪ್ರಕರಣ ನಡೆದುಬಂದ ಹಾದಿ

  • ೧೯೯೪ ಡಿಸೆಂಬರ್‌ ತಿಂಗಳಲ್ಲಿ ಸಿಬಿಐಗೆ ಪ್ರಕರಣ ಹಸ್ತಾಂತರ
  • ೧೯೯೫ರಲ್ಲಿ ಉದ್ಯಮಿಗಳನ್ನು ಹಾಗೂ ಇಸ್ರೋ ವಿಜ್ಞಾನಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ ಕೇರಳ ಹೈಕೋರ್ಟ್
  • ೧೯೯೬ರ ಏಪ್ರಿಲ್‌ನಲ್ಲಿ, "ಕೇರಳ ಪೊಲೀಸರು ಆಪಾದಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ, ಬೇಹುಗಾರಿಕೆ ಆರೋಪ ಸುಳ್ಳು,” ಎಂಬ ವಿಚಾರಣಾ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಸಿಬಿಐ ಅಧಿಕಾರಿಗಳು
  • ಸಿಬಿಐ ವರದಿಯನ್ನು ಗಣನೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್‌ನಿಂದ ಮೇ ತಿಂಗಳಲ್ಲಿ ಎಲ್ಲ ಆರೋಪಿಗಳ ಬಿಡುಗಡೆ
  • ೧೯೯೮ರ ಮಾರ್ಚ್‌ನಲ್ಲಿ, ನಂಬಿ ನಾರಾಯಣನ್ ಅವರಿಗೆ ೧೦ ಲಕ್ಷ ಪರಿಹಾರ ಕೊಡುವಂತೆ ಕೇರಳ ಸರ್ಕಾರಕ್ಕೆ ಆದೇಶಿಸಿದ ರಾ‍ಷ್ಟ್ರೀಯ ಮಾನವ ಹಕ್ಕುಗಳ ಆಯೋಗ
  • ೧೯೯೮ರಲ್ಲಿ ಮಾಜಿ ಡಿಜಿಪಿ ಸಿಬಿ ಮ್ಯಾಥ್ಯೂಸ್, ಪೊಲೀಸ್ ಅಧಿಕಾರಿಗಳಾಗಿದ್ದ ಕೆ ಕೆ ಜೋಷ್ವಾ, ಎಸ್ ವಿಜಯನ್ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸುಪ್ರೀಂ ಕೋರ್ಟಿಗೆ ನಂಬಿ ಅರ್ಜಿ
  • ಎಪ್ರಿಲ್‌ನಲ್ಲಿ, ನಂಬಿ ಅವರಿಗೆ ಒಂದು ಲಕ್ಷ ನಷ್ಟ ಪರಿಹಾರ ನೀಡುವಂತೆ ಕೇರಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ
  • ೨೦೧೨ರ ಸೆಪ್ಟೆಂಬರ್‌ನಲ್ಲಿ ೧೦ ಲಕ್ಷ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದ ಕೇರಳ ಹೈಕೋರ್ಟ್

ಕ್ರಯೋಜೆನಿಕ್ ತಂತ್ರಜ್ಞಾನದ ಹಿನ್ನೆಲೆ

ಭಾರತ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಜಗತ್ತಿನಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಕನಸು ಕಂಡು ೮೦ರ ದಶಕದಲ್ಲೇ ವಿದೇಶಿಗರು ಕಂಡುಕೊಂಡಿದ್ದ ಕ್ರಯೋಜೆನಿಕ್ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಭಾರತದಲ್ಲೇ ನಿರ್ಮಿಸಬೇಕು ಎಂದು ಹೊರಟವರು ನಂಬಿ ನಾರಾಯಣನ್. ಯು ಆರ್ ರಾವ್ ಇಸ್ರೋ ಅಧ್ಯಕ್ಷರಾಗಿದ್ದಾಗ ದೇಶಿಯ ಕ್ರಯೋಜೆನಿಕ್ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಅಂದಿನ ಸೋವಿಯತ್ ಒಕ್ಕೂಟದ ಜೊತೆ ಭಾರತ ಒಪ್ಪಂದ ಮಾಡಿಕೊಂಡಿತ್ತು. 1991ರಲ್ಲಿ ಸೋವಿಯತ್ ಒಕ್ಕೂಟ ಇಲ್ಲವಾದಾಗ ಭಾರತಕ್ಕೆ ಈ ತಂತ್ರಜ್ಞಾನ ನೀಡದಂತೆ ರಷ್ಯಾ ಮೇಲೆ ಅಮೆರಿಕ ಒತ್ತಡ ಹಾಕಿತು.

ಮಾಹಿತಿ ಸಂವಹನ, ಶೈಕ್ಷಣಿಕ, ವೈದ್ಯಕೀಯ ಇತ್ಯಾದಿ ಕಾರಣಗಳಿಗೆ ಬಳಕೆಯಾಗುವ ಉಪಗ್ರಹಗಳನ್ನು ಉಡಾಯಿಸಲು ಕ್ರಯೋಜೆನಿಕ್ ತಂತ್ರಜ್ಞಾನ ಮಾದರಿಯಲ್ಲಿ ರಾಕೆಟ್‍ಗಳನ್ನು ಸಿದ್ಧಪಡಿಸಲಾಗುತ್ತದೆ. ಈ ತಂತ್ರಜ್ಞಾನದಲ್ಲಿ ಅತಿ ಶೀತಲ ದ್ರವ ಇಂಧನವನ್ನು ಬಳಸಿ ಅತಿ ಎತ್ತರದ ಭೂಸ್ಥಿರ ಕಕ್ಷೆಗೆ ಉಪಗ್ರಹಗಳನ್ನು ಕಳಿಸಲಾಗುತ್ತದೆ. ಅಂದರೆ, ಮೈನಸ್ ೧೮೩ ಡಿಗ್ರಿ ಸೆಲ್ಷಿಯಸ್‌ನಷ್ಟು ತಂಪಾಗಿಸಿದ ಆಮ್ಲಜನಕ ಮತ್ತು ಮೈನಸ್ ೨೫೩ ಡಿಗ್ರಿ ಸೆಲ್ಷಿಯಸ್‌ನಷ್ಟು ತಂಪಾಗಿಸಿದ ಜಲಜನಕದಿಂದ ಅದು ಕೂಡಿರುತ್ತದೆ. ಭಾರಿ ತೂಕದ ಉಪಕರಣಗಳನ್ನು ಬಾಹ್ಯಾಕಾಶಕ್ಕೆ ಸಾಗಿಸಲು ಅಗತ್ಯವಾದ ಅಪಾರ ಪ್ರಮಾಣದ ಶಕ್ತಿ ಈ ತಂತ್ರಜ್ಞಾನ ಬಳಕೆಯಿಂದ ಉತ್ಪಾದನೆಯಾಗುತ್ತದೆ. ಘನ ಇಂಧನ ಬಳಸಿ ಉಡಾಯಿಸುವ ತಂತ್ರಜ್ಞಾನಕ್ಕಿಂತ ಇದು ಸಂಕೀರ್ಣ ಹಾಗೂ ಸೂಕ್ಷ್ಮ ತಂತ್ರಜ್ಞಾನ ಎಂಬುದು ವಿಜ್ಞಾನಿಗಳ ಅಭಿಪ್ರಾಯ.

ರಾಕೆಟ್‌ಗಳಲ್ಲಿ ಘನ, ದ್ರವ, ಘನ-ದ್ರವದ ಮಿಶ್ರಣ ಮತ್ತು ಪರಮಾಣು ಇಂಧನ ಹೊಂದಿರುವ ವಿವಿಧ ಎಂಜಿನ್‌ಗಳಿವೆ. ಘನ ಇಂಧನದ ರಾಕೆಟ್ ಕಡಿಮೆ ವೆಚ್ಚ ಹಾಗೂ ಹೆಚ್ಚು ಉತ್ಕರ್ಷಕಾರಿ. ಘನ ಎಂಜಿನ್‌ಗಳಿಗೆ ಅಲ್ಯೂಮಿನಿಯಂ ಪುಡಿಯನ್ನು ಇಂಧನವಾಗಿ, ಅಲ್ಯೂಮಿನಿಯಂ ಪಕ್ಲೋರೇಟ್‌ನ್ನು ಉತ್ಕರ್ಷಣಕಾರಿಯಾಗಿ ಬಳಸಲಾಗುತ್ತದೆ. ಆರಂಭದ ದಿನಗಳಲ್ಲಿ ಘನ ಇಂಧನವನ್ನೇ ಬಳಸಲಾಗುತ್ತಿತ್ತು. ಅತ್ಯಾಧುನಿಕ ರಾಕೆಟ್‌ಗಳಲ್ಲಿ ಘನಮಿಶ್ರಿತ ದ್ರವ ಇಂಧನವನ್ನು ಬಳಸಲಾಗುತ್ತಿದೆ. ಪಿಎಸ್‌ಎಲ್‌ವಿ ಉಪಗ್ರಹ ಉಡಾವಣೆಗಳು ಘನ ಇಂಧನದಿಂದ ಕೂಡಿದ್ದು, ಹೆಚ್ಚು ಭಾರ ಹೊರುವ ಸಾಮರ್ಥ್ಯ ಇರಲಿಲ್ಲ. ಹಾಗಾಗಿ, ಜಿಎಸ್‌ಎಲ್‌ವಿ ವ್ಯವಸ್ಥೆ ಬಳಸಲಾಯಿತು. ಇದರಲ್ಲಿ ಕ್ರಯೋಜೆನಿಕ್ ತಂತ್ರಜ್ಞಾನದ ಅಳವಡಿಕೆ ಇದೆ.

1975ರಲ್ಲಿ ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ಏರೋಸ್ಪೇಸ್ ವಸ್ತುಪ್ರದರ್ಶನ ಏರ್ಪಡಿಸಿದ್ದಾಗ, ನಂಬಿ ನಾರಾಯಣನ್ ಹಾಗೂ ಅವರ ಸಹೋದ್ಯೋಗಿ ಪಿ ಮೋಹನ್ ಪ್ರಸಾದ್ ಅದನ್ನು ನೋಡಲು ಹೋದ ಸಂದರ್ಭವನ್ನು ತಮ್ಮ ‘ರೆಡಿ ಟು ಫೈರ್’ ಪುಸ್ತಕದಲ್ಲಿ ಬರೆದುಕೊಂಡಿದ್ದು, ಕ್ರಯೋಜೆನಿಕ್ ತಂತ್ರಜ್ಞಾನವನ್ನು ತಮ್ಮದಾಗಿಸಿಕೊಳ್ಳಲು ಅದು ನೀಡಿದ ಪ್ರೇರಣೆ, ಕುತೂಹಲವನ್ನು ಹುಟ್ಟಿಸಿದ ಬಗೆ ಹಾಗೂ ಭಾರತವನ್ನು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸೂಪರ್‌ ಪವರ್‌ ಆಗಿ ಮಾಡುವ ಕನಸನ್ನು ಬಿತ್ತಿದ ಕುರಿತು ಹಂಚಿಕೊಂಡಿದ್ದಾರೆ. ಅವರೇ ಹೇಳುವಂತೆ, “ಭಾರತ ಹಾಗೂ ರಷ್ಯಾ ದೇಶಗಳ ಸ್ನೇಹ ಸಂಬಂಧದ ಆರಂಭ ಭಾರತದ ಕ್ರಯೋಜೆನಿಕ್ ಕನಸು ಹೊರಹೊಮ್ಮಲು ಕಾರಣವಾಯಿತು. ಅದಾದ ೧೮ ವರ್ಷಗಳ ಬಳಿಕ ಕೇರಳ ಪೊಲೀಸರು ತಿರುವನಂತಪುರಂನಲ್ಲಿರುವ ನನ್ನ ಮನೆಯ ಬಾಗಿಲು ಬಡಿದಾಗ ನಾನು ಕಂಡಿದ್ದ ಕನಸು ಮುರುಟಿತು. ಮಾಲ್ಡೀವ್ಸ್ ಮಹಿಳಾ ಗೂಢಾಚಾರರಿಂದ ಪಾಕಿಸ್ತಾನಕ್ಕೆ ಕ್ರಯೋಜೆನಿಕ್ ತಂತ್ರಜ್ಞಾನದ ರಹಸ್ಯಗಳನ್ನು ಸೋರಿಕೆ ಮಾಡಿದ್ದೇನೆ ಎಂಬ ಆರೋಪವನ್ನು ನನ್ನ ವಿರುದ್ಧ ಮಾಡಲಾಯಿತು. ಆದರೆ, ಷಡ್ಯಂತ್ರಕ್ಕೆ ಸೋಲಾಯಿತು. ಭಾರತ ಬಾಹ್ಯಾಕಾಶದ ಕನಸನ್ನು ಕುಗ್ಗಿಸುವುದಕ್ಕಿಂತ ಹೆಚ್ಚಾಗಿ ನನ್ನ ಜೀವನವನ್ನು ಈ ಪ್ರಕರಣ ಹಾಳುಗೆಡವಿತು,” ಎಂದು ವಿಷಾದದಿಂದ ಬರೆದುಕೊಂಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More