ತೇಲ್ತುಂಬೆ ಮಾತು | ನೊಂದ ಜನರ ಪರ ಮಾತನಾಡುವುದು ದೇಶದ್ರೋಹ ಹೇಗಾದೀತು?

ಮಾವೋವಾದಿಗಳ ಬಗ್ಗೆ ಸಹಾನುಭೂತಿ ಹೊಂದಿದ ಮಾತ್ರಕ್ಕೆ ದೇಶದ್ರೋಹದ ಹಣೆಪಟ್ಟಿ ಕಟ್ಟುವುದು ಸರಿಯಲ್ಲ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಆನಂದ್ ತೆಲ್ತುಂಬೆ. ಮುಂಬೈ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ವಿಚಾರಗಳನ್ನು ‘ಸ್ಕ್ರಾಲ್’ ವರದಿ ಮಾಡಿದ್ದು, ಅದರ ಭಾವಾನುವಾದ ಇಲ್ಲಿದೆ

ಮಾವೋವಾದಿಗಳ ಕುರಿತು ಸಹಾನುಭೂತಿ ಹೊಂದಿದ್ದಾರೆ ಎಂಬ ಕಾರಣಕ್ಕೆ ಬಂಧನಕ್ಕೊಳಗಾಗಿದ್ದ ಐವರು ಸಾಮಾಜಿಕ ಕಾರ್ಯಕರ್ತರ ಪೈಕಿ ರೋನಾ ಜೇಕಬ್‌ ವಿಲ್ಸನ್‌ ಕೂಡ ಒಬ್ಬರು. ಜೂನ್ 6ರಂದು ಜೇಕಬ್ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದರು. ಈ ಸಂದರ್ಭ, "ಎಂ-4 ರೈಫ‌ಲ್‌ ಮತ್ತು ನಾಲ್ಕು ಲಕ್ಷ ಸುತ್ತು ಮದ್ದುಗುಂಡು ಖರೀದಿಗೆ 8 ಕೋಟಿ ರು.ಗಳ ಅಗತ್ಯವಿದೆ,” ಎಂಬ ಪತ್ರವೊಂದು ಕಂಪ್ಯೂಟರ್‌ನ ಹಾರ್ಡ್ ಡಿಸ್ಕ್‌ನಲ್ಲಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದರು. ಇದೇ ಪತ್ರವನ್ನು ಮುಂದಿಟ್ಟುಕೊಂಡಿರುವ ಪೊಲೀಸರು, ಇದೀಗ ಜೇಕಬ್ ವಿಲ್ಸನ್ ನಕ್ಸಲರೊಂದಿಗೆ ನಂಟು ಹೊಂದಿರುವ ಖಚಿತ ಅಂತಿಮ ತೀರ್ಮಾನಕ್ಕೆ ಬಂದಿದ್ದಾರೆ. ವಿಪರ್ಯಾಸ ಎಂದರೆ, ಈ ಕಂಪ್ಯೂಟರ್ ಕಂಡುಹಿಡಿದ ಅವಿಷ್ಕಾರಕರಿಗೂ ತಮ್ಮ ಈ ತಂತ್ರಜ್ಞಾನದ ಅನ್ವೇಷಣೆಯಿಂದ ಪೊಲೀಸರು ಅಮಾಯಕರಿಗೆ ಅಪರಾಧಿಗಳ ಪಟ್ಟ ಕಟ್ಟುತ್ತಾರೆ ಎಂಬ ಕಲ್ಪನೆಯೂ ಇದ್ದಿರಲಿಕ್ಕಿಲ್ಲ. ಸದ್ಯಕ್ಕೆ ದೇಶಾದ್ಯಂತ ಚರ್ಚೆಯಾಗುತ್ತಿರುವ 'ಅರ್ಬನ್ ನಕ್ಸಲ್' ಕೂಡ ಇದೇ ರೀತಿಯಾಗಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಆನಂದ್ ತೆಲ್ತುಂಬೆ. ಮುಂಬೈನಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿರುವ ಅವರು, ಪೊಲೀಸರ ಅತಿರೇಕದ ವರ್ತನೆ, ಅಧಿಕಾರ ದುರುಪಯೋಗದ ಕುರಿತು ಮಾತನಾಡಿದ್ದಾರೆ.

“2007ರಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತ ಅರಣ್ ಫೆರೇರಾ ಅವರನ್ನು, ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಪ್ರಚಾರ ರಾಯಭಾರಿ ಹಾಗೂ ಮುಖ್ಯಸ್ಥ ಎಂಬ ಹಣೆಪಟ್ಟಿ ಕಟ್ಟಿ ಬಂಧಿಸಿದ್ದರು. ಐದು ವರ್ಷಗಳ ನಿರಂತರ ಕಾನೂನು ಹೋರಾಟದ ಬಳಿಕ ಅವರು ಎಲ್ಲ ಪ್ರಕರಣಗಳಿಂದ ದೋಷಮುಕ್ತಗೊಂಡರು. ಇದರ ಮುಂದುವರಿದ ಭಾಗವಾಗಿ ನಾವು ಇದೀಗ ‘ಅರ್ಬನ್ ನಕ್ಸಲ್’ ಅನ್ನು ನೋಡಬಹುದಾಗಿದೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಆನಂದ್.

ಮಾನವ ಹಕ್ಕುಗಳ ಕಾರ್ಯಕರ್ತ ಅರಣ್ ಫೆರೇರಾ

“ಅರುಣ್ ಅವರನ್ನು ಬಂಧಿಸುವ ಸಂದರ್ಭದಲ್ಲಿ ಪೊಲೀಸರು, ಆತನ ಬಳಿಯಿದ್ದ ಪೆನ್ ಡ್ರೈವ್‌ವೊಂದನ್ನು ವಶಕ್ಕೆ ಪಡೆದಿರುವುದಾಗಿ ನೀಡಿದ ಹೇಳಿಕೆಯನ್ನು, ಭಿನ್ನ-ವಿಭಿನ್ನವಾಗಿ ಬಿತ್ತರಿಸಿದ ಮಾಧ್ಯಮಗಳು, ಪೆನ್ ಡ್ರೈವ್ ಎಂದರೆ ಅಪಾಯಕಾರಿ ಶಸ್ತ್ರಾಸ್ತ್ರ ಇರಬೇಕು ಎಂದು ಜನಸಾಮಾನ್ಯರ ಮನದಲ್ಲಿ ಮೂಡುವಂತೆ ಮಾಡಿದ್ದರು. ಇದರ ಜೊತೆಗೆ ಪೊಲೀಸರು ಕೂಡ ಅರುಣ್ ಸುತ್ತ ಕತೆಯೊಂದನ್ನು ಹೆಣೆದು, ಅರುಣ್ ಹಾಗೂ ಆತನ ಸಹಚರ ನಾಗ್ಪುರದ ದೀಕ್ಷಾ ಭೂಮಿಯಲ್ಲಿರುವ ಸ್ತೂಪ ಸ್ಟೋಟಿಸಲು ಯತ್ನಿಸುತ್ತಿದ್ದಾರೆ ಎಂಬ ಕಪೋಲಕಲ್ಪಿತ ಸುದ್ದಿ ಹರಿಬಿಟ್ಟರು. ಜೈಲಿನಲ್ಲಿದ್ದಷ್ಟೂ ದಿನ ಅರುಣ್ ಫೆರೇರಾ ಅವರಿಗೆ ವಿಚಾರಣೆ ನೆಪದಲ್ಲಿ ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆ,” ಎಂದು ಪತ್ರಿಕಾಗೋಷ್ಟಿಯಲ್ಲಿ ಹಳೆಯ ಘಟನೆಗಳನ್ನು ನೆನಪಿಸಿದರು ಆನಂದ್ ತೆಲ್ತುಂಬೆ.

ಪ್ರತಿಭಾನ್ವಿತ ಬರಹಗಾರ ಮತ್ತು ವ್ಯಂಗ್ಯಚಿತ್ರಕಾರ ಫೆರೇರಾ ಅವರು 2011ರಲ್ಲಿ ಜೈಲಿನಿಂದ ಹೊರಬಂದರೂ ಆವರನ್ನು ಬೆಂಬಿಡದ ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿದ್ದರು. ಐದು ವರ್ಷಗಳ ಕಾಲ ಜೈಲಿನಲ್ಲಿ ಅನುಭವಿಸಿದ ನೋವು, ಪೊಲೀಸರ ದುರ್ವರ್ತನೆಯ ಕುರಿತಂತೆ ಫೆರೇರಾ ತಮ್ಮ 'ಕಲ್ಲರ್ಸ್ ಆಫ್ ದಿ ಕೇಜ್' ಪುಸ್ತಕದಲ್ಲಿ ಬಣ್ಣಿಸಿದ್ದು, ಕಾನೂನುರಹಿತ ಭಾರತೀಯ ಪೊಲೀಸ್ ವ್ಯವಸ್ಥೆಯ ಮುಖವಾಡ ವಿವರಿಸಿದ್ದರು.

ಅರುಣ್ ಫೆರೇರಾ ಬಂಧನವಾಗುತ್ತಿದ್ದಂತೆ ಪೊಲೀಸರು ಸುದ್ದಿಗೋಷ್ಠಿ ನಡೆಸಿ, “ನಕ್ಸಲರೊಂದಿಗೆ ನಂಟು ಹೊಂದಿದ್ದಾರೆ ಎಂಬುದಕ್ಕೆ ನಮ್ಮಲ್ಲಿ ಬಲವಾದ ಸಾಕ್ಷ್ಯಾಧಾರಗಳಿವೆ,” ಎಂದಿದ್ದರೂ, ನ್ಯಾಯಾಲಯದಲ್ಲಿ ಅದನ್ನು ಸಾಬೀತುಪಡಿಸುವಲ್ಲಿ ವಿಫಲವಾದರು. ಇಷ್ಟಾದರೂ ಯಾರೊಬ್ಬರೂ, ಫೆರೇರಾ ಅವರನ್ನು ಯಾಕೆ ಬಂಧಿಸಲಾಯಿತು? ಧೀಕ್ಷಾಭೂಮಿ ಸ್ಪೋಟಿಸಲು ಸಂಚು ರೂಪಿಸಿದ್ದಾರೆ ಎಂಬ ಗಂಭೀರ ಆರೋಪವನ್ನು ಪೊಲೀಸರು ಯಾವ ಆಧಾರದ ಮೇಲೆ ಮಾಡಿದ್ದಾರೆ ? ಫೆರೇರಾ ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದಕ್ಕೆ ಬಲವಾದ ಸಾಕ್ಷ್ಯಾಧಾರಗಳಿಲ್ಲದೆ ಇದ್ದರೂ, ಗಾಳಿ-ಬೆಳಕಿಲ್ಲದ ಜೈಲಿನಲ್ಲಿಟ್ಟು ಯಾಕೆ ಚಿತ್ರಹಿಂಸೆ ನೀಡಲಾಯಿತು? ನಾರ್ಕೋ ಅನಾಲಿಸಿಸ್ ಪರೀಕ್ಷೆ ವೇಳೆ, “ಮಹಾರಾಷ್ಟ್ರದಲ್ಲಿ ಮಾವೋವಾದಿ ಚಟುವಟಿಕೆಗಳಿಗೆ ಶಿವಸೇನೆಯ ನಾಯಕ ಬಾಳ ಠಾಕ್ರೆ ಬಂಡವಾಳ ಹೂಡುತ್ತಿದ್ದಾರೆ,” ಎಂದು ಫೆರೇರಾ ಹೇಳಿದ್ದರೂ, ಯಾಕೆ ಬಾಳ ಠಾಕ್ರೆಯನ್ನು ವಿಚಾರಣೆಗೆ ಗುರಿಪಡಿಸಿಲ್ಲ? ಪೊಲೀಸರ ಕ್ರಮದಿಂದಾಗಿ ಅಪಖ್ಯಾತಿಗೊಳಗಾದ ಫೆರಾರಿ ಖ್ಯಾತಿಯನ್ನು ಯಾರು ತಂದುಕೊಡುತ್ತಾರೆ? ಯಾವುದೇ ತಪ್ಪು ಮಾಡದಿದ್ದರೂ ಜೈಲಿನಲ್ಲಿ ಕಳೆದ ಜೀವನದ ಅಮೂಲ್ಯ ಗಳಿಗೆ ಕಳೆದುಹೋಗಿದ್ದಕ್ಕೆ ಯಾರು ಹೊಣೆ? ಪೋಷಕರು, ಪತ್ನಿ ಅಥವಾ ಅಪ್ಪನ ಪ್ರೀತಿಯನ್ನು ಅಷ್ಟು ವರ್ಷಗಳ ಕಾಲ ಮಗು ಕಳೆದುಕೊಂಡಿದ್ದು ಇದಕ್ಕೆಲ್ಲ ಯಾರು ಜವಾಬ್ದಾರರು? ಎಂಬಿತ್ಯಾದಿ ಪ್ರಶ್ನೆಗಳು ಎದ್ದವು. ವಿಪರ್ಯಾಸ ಎಂದರೆ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾನ್ಯ ನಾಗರೀಕನೂ ಕೇಳುವ ಈ ಪ್ರಶ್ನೆಗಳಿಗೆ ಉತ್ತರ ಸಿಗುವುದು ಸಾಧ್ಯವೇ ಇಲ್ಲ,” ಎನ್ನುತ್ತಾರೆ ತೆಲ್ತುಂಬೆ.

“ರಾಜಕೀಯ ಪ್ರೇರಿತರಾಗಿ ವೃತ್ತಿಧರ್ಮ ಮರೆತ ಪೊಲೀಸರು ಕೆಲಸದಲ್ಲಿ ಬಡ್ತಿ ಅಥವಾ ಬಹುಮಾನ ಪಡೆದಿರಬಹುದು. ಆದರೆ, ಅಧಿಕಾರ ದುರ್ಬಳಕೆ ಮಾಡಿಕೊಂಡು ನಿರಪರಾಧಿಗಳನ್ನು ಹಿಂಸಿಸುವುದು ಎಷ್ಟರಮಟ್ಟಿಗೆ ಸರಿ?” ಎಂದು ಪ್ರಶ್ನಿಸಿರುವ ಆನಂದ್, “ಪೊಲೀಸರು ಟಾರ್ಗೆಟ್ ಮಾಡಿಕೊಂಡು ಮನೆ ಮೇಲೆ ದಾಳಿ ನಡೆಸುವಾಗ ಅವರ ಮೊದಲ ಅಸ್ತ್ರವೇ ಕಂಪ್ಯೂಟರ್. ಒಂದು ಚಿಕ್ಕ ಮಗುವಿಗೂ ಕಂಪ್ಯೂಟರ್‌ನಲ್ಲಿ ನಮಗೆ ಬೇಕಾದ ಡಾಕ್ಯುಮೆಂಟ್ ಅನ್ನು ಹೇಗೆ ಹಾರ್ಡ್ ಡಿಸ್ಕ್‌ಗೆ ಹಾಕುವುದು ಎಂಬುದು ತಿಳಿದಿದೆ. ಪೊಲೀಸರು ನಿರಪರಾಧಿಯನ್ನು ಅಪರಾಧಿಯನ್ನಾಗಿಸಲು ಇಂತಹ ಕೃತ್ಯಗಳನ್ನು ಎಸಗುತ್ತಿರುವುದು ವಿಪರ್ಯಾಸ,” ಎನ್ನುತ್ತಾರೆ.

ರಾಜಕೀಯ ಅಥವಾ ಇನ್ನಿತರ ಒತ್ತಡಕ್ಕೆ ಮಣಿದು ಪೊಲೀಸರು ಅಮಾಯಕರನ್ನು ಕಾನೂನುಬಾಹಿರ ಚಟುವಟಿಕೆ ಕಾಯಿದೆಯಡಿ ಬಂಧಿಸುವುದು ಮುಂದುವರಿದಿದೆ ಎನ್ನುವ ಆನಂದ್, ಚತ್ತೀಸ್‌ಗಢದ ಆದಿವಾಸಿ ಪ್ರದೇಶಗಳಲ್ಲಿ ಯಾವುದೇ ಕನಿಷ್ಠ ಸೌಕರ್ಯವಿಲ್ಲದ ಜನರಿಗೆ ಉಚಿತ ಆರೋಗ್ಯ ಸೇವೆ ನೀಡಲು ತನ್ನ ಬದುಕನ್ನು ಮುಡಿಪಾಗಿಟ್ಟ ಬಿನಾಯಕ್ ಸೇನ್ ಅವರ ಪ್ರಕರಣವನ್ನು ಉದಾಹರಿಸುತ್ತಾರೆ. ಬಿನಾಯಕ್ ಅವರನ್ನು ನಕ್ಸಲೀಯ ಬೆಂಬಲಿಗನೆಂದು ಆರೋಪಿಸಿ ಜೈಲಿಗಟ್ಟಿದ್ದು ಮಾತ್ರವಲ್ಲ; ಮಾವೋವಾದಿ ನಾರಾಯಣ ಸನ್ಯಾಲ್ ಜೊತೆಗಿನ ಸಂಬಂಧ ಮತ್ತು ರಾಜ್ಯದ್ರೋಹಕ್ಕಾಗಿ ಸೇನ್ ಅವರಿಗೆ ವಿಚಾರಣಾ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿತ್ತು.

ಇದನ್ನೂ ಓದಿ : ಸಾಮಾಜಿಕ ಕಾರ್ಯಕರ್ತರ ಬಂಧನ: ರೋಮಿಲಾ ಥಾಪರ್ ಮತ್ತಿತರರು ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲೇನಿದೆ?

ಭೀಮಾ ಕೋರೆಗಾಂವ್ ಪ್ರಕರಣ

“ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಸಾಮಾಜಿಕ ಕಾರ್ಯಕರ್ತರ ಮನೆ ಮೇಲೆ ದಾಳಿ ಮಾಡಿ ಅವರ ಕಂಪ್ಯೂಟರ್ ವಶಕ್ಕೆ ಪಡೆದರು. ಕಂಪ್ಯೂಟರ್‌ನಲ್ಲಿ ನಕ್ಸಲರೊಂದಿಗೆ ನಂಟು ಹೊಂದಿರುವುದಕ್ಕೆ ಬಲವಾದ ಸಾಕ್ಷ್ಯ ದೊರೆತಿದೆ ಎಂದು ನಂತರ ಬಿಂಬಿಸುತ್ತಿದ್ದಾರೆ. ವಿಪರ್ಯಾಸ ಎಂದರೆ, ಒಂದು ಕಾಗದದ ಹಾಳೆ ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ಪರಿಗಣಿತವಾಗುವುದಿಲ್ಲ ಎಂಬುದು ಪೊಲೀಸರಿಗೆ ತಿಳಿದಿದ್ದರೂ, ವ್ಯಕ್ತಿಯ ಕುರಿತಂತೆ ಅಪಖ್ಯಾತಿ ಪಡಿಸಲು ಇಂತಹ ಪ್ರಯತ್ನಗಳು ಸಾಗುತ್ತಲೇ ಇದೆ,” ಎನ್ನುತ್ತಾರೆ ಆನಂದ್.

“ಮಹಾರಾಷ್ಟ್ರದ ಕೊರೆಗಾಂವ್‍ನ ದಲಿತ ಯೋಧರು ಅಸ್ಪೃಶ್ಯತೆ ವಿರೋಧಿ ಹೋರಾಟದಲ್ಲಿ ಪೇಶ್ವೆಗಳ ವಿರುದ್ಧ ಗೆಲುವು ಸಾಧಿಸಿ, 2018ರ ಜ.1ಕ್ಕೆ 200 ವರ್ಷ ಸಂದಿದೆ. ಇದರ ಸ್ಮರಣಾರ್ಥ ವಿವಿಧ ಸಂಘಟನೆಗಳು ಡಿ.31ರಂದು ಪುಣೆಯ ಶನಿವಾರ್ ವಾಡಾದಲ್ಲಿ ಬೃಹತ್ ಸಮಾವೇಶ ನಡೆಸಿದ್ದವು. ಕಾರ್ಯಕ್ರಮ ಆಯೋಜಿಸಿರುವ ಸಂಘಟಕರಾದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ ಬಿ ಸಾವಂತ್ ಮತ್ತು ಬಾಂಬೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ ಜಿ ಕೋಲ್ಸೆ ಪಾಟೀಲ್ ಅವರೇ ಸ್ವತಃ ಸ್ಪಷ್ಟನೆ ನೀಡಿ, ಸಭೆಯಲ್ಲಿ ಅಂತಹ ಯಾವುದೇ ವಿಚಾರ ನಡೆದಿಲ್ಲ ಎಂದಿದ್ದರು. ಇವರ ಮಾತನ್ನು ಕಿವಿಗೆ ಹಾಕಿಕೊಳ್ಳದ ಪೊಲೀಸರು, ಕೆಲವೊಂದು ಫಟ್ಟಭದ್ರ ಹಿತಾಸಕ್ತಿಯಿಂದ, ರಾಜಕೀಯ ದುರುದ್ದೇಶದಿಂದ, ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂಬುದು ಅವರ ಕಾರ್ಯವೈಖರಿಯಿಂದಲೇ ಸ್ಪಷ್ಪವಾಗುತ್ತದೆ,” ಎನ್ನುವುದು ಆನಂದ್ ಆರೋಪ.

“ಅನ್ಯಾಯಕ್ಕೊಳಗಾದ ನೊಂದ ಜನತೆಯ ಪರವಾಗಿ ಮಾತನಾಡುವುದು, ಜನತೆಯ ಪರ ಧ್ವನಿ ಎತ್ತುವುದೇ ಅಪರಾಧ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂವಿಧಾನಾತ್ಮಕ ಹಕ್ಕುಗಳನ್ನು ನಿರಾಕರಿಸುತ್ತಿರುವ ಈ ವ್ಯವಸ್ಥೆಯನ್ನು ಬದಲಾಯಿಸುವ ಸಲುವಾಗಿ ರಾಜಕಾರಣಿಗಳು, ಸಂಪುಟ ಕಾರ್ಯದರ್ಶಿಗಳು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು, ಸಚಿವರು, ಪೊಲೀಸರು, ಅಧಿಕಾರಿಗಳು, ಕೈಗಾರಿಕೋದ್ಯಮಿಗಳು ಎಚ್ಚರಗೊಳ್ಳುವರೇ?” ಎಂದವರು ಪ್ರಶ್ನಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More