ವಿಡಿಯೋ | ಯುವತಿಗೆ ಹಿಂಸೆ, ಪೊಲೀಸ್ ಪುತ್ರನ ವಿರುದ್ಧ ಕ್ರಮಕ್ಕೆ ಗೃಹ ಸಚಿವರ ಸೂಚನೆ

ಯುವತಿ ಮೇಲೆ ಯುವಕನೊಬ್ಬ ಅಮಾನವೀಯವಾಗಿ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಗಮನಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಆರೋಪಿ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ

ದೆಹಲಿಯಲ್ಲಿ ಯುವತಿಯೊಬ್ಬಳ ಮೇಲೆ ಯುವಕನೊಬ್ಬ ಅಮಾನವೀಯವಾಗಿ ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿತ್ತು. ವಿಡಿಯೋದಲ್ಲಿ ತೋರಿಸಿರುವಂತೆ, ರೊಚ್ಚಿಗೆದ್ದಿದ್ದ ಯುವಕ, ಯುವತಿಯ ತಲೆಗೂದಲನ್ನು ಎಳೆದಾಡಿ, ಮೊಣಕೈಯಿಂದ ಆಕೆಯ ಬೆನ್ನಿಗೆ ಹೊಡೆಯುತ್ತಿದ್ದ, ಆಕೆ ಎದ್ದೇಳಲು ಯತ್ನಿಸುತ್ತಿದ್ದಂತೆ ಆಕೆಯನ್ನು ಕಾಲಿನಿಂದ ಒದ್ದು, ಕೆಳಗೆ ಬೀಳಿಸಿ ಹಿಂಸಿಸುತ್ತಿದ್ದ. ಈ ಇಡೀ ಪ್ರಕರಣವನ್ನು ಹಲ್ಲೆ ಮಾಡುತ್ತಿದ್ದ ಯುವಕನ ಮಿತ್ರ ಚಿತ್ರೀಕರಿಸುತ್ತಿದ್ದ. ಚಿತ್ರೀಕರಣದ ನಡುವೆ ಆತ 'ಬಿಡು ಆಕೆಯನ್ನು ಬಿಡು' ಎಂದು ಎಷ್ಟೇ ಹೇಳಿದರೂ, ಹಲ್ಲೆ ನಡೆಸುತ್ತಿದ್ದ ಯುವಕನ ಕೋಪ ಶಮನವಾಗಿರಲಿಲ್ಲ.

ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾದ ಈ ವಿಡಿಯೋವನ್ನು ಗಮನಿಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಇದೀಗ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥನ ವಿರುದ್ಧ ಕ್ರಮಕ್ಕೆ ಆದೇಶ ನೀಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಕುರಿತಂತೆ ಟ್ವೀಟ್ ಮಾಡಿರುವ ರಾಜನಾಥ್ ಸಿಂಗ್, ಯುವಕನೊಬ್ಬ ಯುವತಿಯನ್ನು ಕ್ರೂರವಾಗಿ ಹಿಂಸಿಸುತ್ತಿರುವ ವಿಡಿಯೋ ನನ್ನ ಗಮನಕ್ಕೆ ಬಂತು. ಹೀಗಾಗಿ ಕೂಡಲೇ ನಾನು ದೆಹಲಿ ಪೊಲೀಸ್ ಕಮೀಷನರ್ ಅವರನ್ನು ಫೋನ್ ಮೂಲಕ ಸಂಪರ್ಕಿಸಿ, ಯುವಕನ ಮೇಲೆ ಕ್ರಮಕ್ಕೆ ಆದೇಶಿಸಿದ್ದಾಗಿ ತಿಳಿಸಿದ್ದಾರೆ.

ಅಂದಹಾಗೆ, ಈ ಘಟನೆ ಸೆ.2ರಂದು. ದೆಹಲಿಯ ಕಾಲ್‌ಸೆಂಟರ್ವೊಂದರಲ್ಲಿ ನಡೆದಿದೆ ಎನ್ನಲಾಗಿದೆ. ವಿಪರ್ಯಾಸ ಎಂದರೆ, ಯುವತಿ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸುತ್ತಿರುವ ಯುವಕನನ್ನು, ದೆಹಲಿಯ ನಾರ್ಕೋಟಿಕ್ಸ್ (ಮಾದಕದ್ರವ್ಯ) ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಯ ಮಗ ರೋಹಿತ್ ಸಿಂಗ್ ತೋಮರ್ ಎಂದು ಗುರುತಿಸಲಾಗಿದೆ.

ಸೆ.2ರಂದು ಈ ಘಟನೆ ನಡೆದಿದ್ದರೂ, ಪೊಲೀಸರಿಗೆ ಈ ಬಗ್ಗೆ ಯಾರೊಬ್ಬರೂ ದೂರು ನೀಡಿರಲಿಲ್ಲ. ಅದರೆ, ನಿನ್ನೆ (ಸೆ.13) ರೋಹಿತ್ ಮದುವೆಯಾಗಬೇಕಿದ್ದ ಯುವತಿ, ಆತನ ಮೇಲೆ ದೂರು ದಾಖಲಿಸಿ ಕ್ರಮಕ್ಕೆ ಆಗ್ರಹಿಸಿದ್ದರು. ರೋಹಿತ್ ಕ್ರೌರ್ಯವನ್ನು ವಿಡಿಯೋದಲ್ಲಿ ನೋಡಿ ದೂರು ನೀಡುತ್ತಿರುವುದಾಗಿ ಹೇಳಿರುವ ಆಕೆ, ತಾನು ಆತನೊಂದಿಗಿನ ವಿವಾಹ ನಿಶ್ಚಿತಾರ್ಥವನ್ನೂ ಮುರಿದುಕೊಂಡಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ರೋಹಿತ್ ಈ ಹಿಂದೆ ತನ್ನ ಕಚೇರಿಯಲ್ಲಿರುವ ಸಹೋದ್ಯೋಗಿಗಳ ಮೇಲೂ ಹಲ್ಲೆ ನಡೆಸಿದ್ದಾನೆ ಎಂದೂ ಆಕೆ ದೂರಿನಲ್ಲಿ ತಿಳಿಸಿದ್ದಾರೆ.

ಇದೀಗ ಸಂತ್ರಸ್ತ ಯುವತಿ ಪೊಲೀಸರಿಗೆ ದೂರು ನೀಡಿದ್ದು, “ರೋಹಿತ್ ನನ್ನನ್ನು ಆತನ ಗೆಳೆಯನ ಕಚೇರಿಗೆ ಬರಲು ಹೇಳಿ, ಅತ್ಯಾಚಾರ ಮಾಡಿದ್ದಾನೆ. ನಾನು ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ,” ಎಂದು ತಿಳಿಸಿದ್ದಾರೆ. ಈ ಎಲ್ಲ ಬೆಳವಣಿಗೆಯ ಬಳಿಕ ಇದೀಗ ಪೊಲೀಸರು ರೋಹಿತ್‌ನನ್ನು ಬಂಧಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More