ಇನ್ಫೋಸಿಸ್‌ ಕೊಡಲಿರುವ ಪರ್ಯಾಯ ಜಮೀನುಗಳು ವ್ಯಾಜ್ಯದಿಂದ ಮುಕ್ತವಾಗಿಲ್ಲ!

ಇನ್ಫೋಸಿಸ್ ಸಂಸ್ಥೆಗೆ ಗೋಮಾಳ ಮತ್ತಿತರ ಜಮೀನುಗಳನ್ನು ಮಂಜೂರು ಮಾಡುವ ಕಸರತ್ತಿಗೆ ಮತ್ತಷ್ಟು ಬಿರುಸಿನ ವೇಗ ದೊರೆತಿದೆ. ಈ ಬೆಳವಣಿಗೆ ನಡುವೆಯೇ ಸರ್ಕಾರಕ್ಕೆ ಪರ್ಯಾಯವಾಗಿ ಬಿಟ್ಟುಕೊಡಲು ಉದ್ದೇಶಿಸಿರುವ ಜಮೀನುಗಳು ವಿವಾದಗಳಿಂದ ಕೂಡಿದೆ ಎಂಬ ಅಂಶ ಹೊರಬಿದ್ದಿದೆ

ಪ್ರತಿಷ್ಠಿತ ಇನ್ಫೋಸಿಸ್‌ ಸಂಸ್ಥೆಗೆ ಗೋಮಾಳ ಸೇರಿದಂತೆ ಇನ್ನಿತರ ಸ್ವರೂಪದ ಜಮೀನು ಮಂಜೂರು ವಿಚಾರ ಮತ್ತಷ್ಟು ಜಟಿಲವಾಗುತ್ತಿದೆ. ಸರ್ಕಾರಕ್ಕೆ ಪರ್ಯಾಯವಾಗಿ ಬಿಟ್ಟುಕೊಡಲಿರುವ ಜಮೀನುಗಳ ಪೈಕಿ ಕೆಲ ಜಮೀನು ವಿವಾದಗಳಿಂದ ಮುಕ್ತವಾಗಿಲ್ಲ ಎಂಬ ಹೊಸ ಅಂಶ ಇದೀಗ ಬೆಳಕಿಗೆ ಬಂದಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯಶಂಕರ್ ಅವರು ಇನ್ಫೋಸಿಸ್ ಸಂಸ್ಥೆಯು ಪರ್ಯಾಯವಾಗಿ ಬಿಟ್ಟುಕೊಡಲಿರುವ ಜಮೀನುಗಳನ್ನು ಸೆ.೧೧ರಂದು ಸ್ಥಳ ಪರಿಶೀಲನೆ ನಡೆಸಿದ್ದರು. ಮರುದಿನವೇ ಆನೇಕಲ್ ತಹಶೀಲ್ದಾರ್‌ ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ೨೦೧೮ರ ಸೆ.೧೨ರಂದು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ. ಈ ವರದಿಯ ಪ್ರತಿ ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ. ಸರ್ಕಾರಕ್ಕೆ ನೀಡಲಿರುವ ಪರ್ಯಾಯ ಜಮೀನುಗಳ ಸ್ವರೂಪದ ಕುರಿತು ವರದಿಯಲ್ಲಿ ವಿವರಿಸಲಾಗಿದೆ. ಆದರೆ, ಈ ವರದಿಯಲ್ಲಿ ಪೂರ್ಣ ವಿವರಗಳು ಇಲ್ಲದಿರುವುದು ಕಂಡುಬಂದಿದೆ.

ಆನೇಕಲ್ ತಹಶೀಲ್ದಾರ್‌ ಸಲ್ಲಿಸಿರುವ ವರದಿ ಪ್ರತಿ

ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿ, ಸರ್ಜಾಪುರ, ಬಿಲ್ಲಾಪುರ, ಬೂರಗುಂಟೆ ಮತ್ತು ತಿಂಡ್ಲು ಗ್ರಾಮಗಳಲ್ಲಿ ಇನ್ಫೋಸಿಸ್‌ ಸಂಸ್ಥೆ ಖರೀದಿಸಿರುವ ಜಮೀನುಗಳ ಪೈಕಿ ಓಣಿ, ಕಾಲುದಾರಿ, ಹಳ್ಳ, ಪಿಳ್ಳಗಾಲುವೆ, ಸರ್ಕಾರಿ ಓಣಿ, ಸರ್ಕಾರಿ ಗೋಮಾಳ ಜಮೀನುಗಳಿವೆ. ಇದರ ಒಟ್ಟು ವಿಸ್ತೀರ್ಣ ೧೧ ಎಕರೆ ೦೪ ಗುಂಟೆ ಇದೆ. ಇದಕ್ಕೆ ಪರ್ಯಾಯವಾಗಿ ಸಂಸ್ಥೆ ಸರ್ಜಾಪುರದ ೫ ಸರ್ವೆ ನಂಬರ್‌ಗಳಲ್ಲಿನ ನೀಡಲಿರುವ ಜಮೀನುಗಳ ವಿಸ್ತೀರ್ಣ ೯ ಎಕರೆ ೮ ಗುಂಟೆ ಇದೆ. ಅಲ್ಲದೆ, ಈ ಪೈಕಿ ೭ ಎಕರೆ ೪೬ ಗುಂಟೆ ಭೂಪರಿವರ್ತನೆಯಾಗಿದೆ. ಉಳಿದ ೨ ಎಕರೆ ೩೪ ಗುಂಟೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಆರ್‌ಟಿಸಿ ಕಾಲಂ ೧೧ರಲ್ಲಿ ತಡೆಯಾಜ್ಞೆ (ಆರ್‌ಪಿ/೧೨೩/೧೨-೧೩) ನಮೂದಾಗಿದೆಯಲ್ಲದೆ, ಈ ಜಮೀನು ಸಂಸ್ಥೆಯ ಹೆಸರಿಗೆ ಖಾತೆ ಆಗಿದೆ ಎಂಬ ಅಂಶ ಆನೇಕಲ್ ತಹಶೀಲ್ದಾರ್‌ ಸಲ್ಲಿಸಿರುವ ವರದಿಯಿಂದ ತಿಳಿದುಬಂದಿದೆ.

ಆನೇಕಲ್ ತಹಶೀಲ್ದಾರ್ ಸಲ್ಲಿಸಿರುವ ವರದಿ ಪ್ರತಿ
ಇದನ್ನೂ ಓದಿ : ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು

“ಈ ಜಮೀನುಗಳು ಸಮತಟ್ಟಾಗಿದ್ದು, ಯಾವುದೇ ಕಟ್ಟಡ ಇರುವುದಿಲ್ಲ ಮತ್ತು ರಸ್ತೆ ಸಂಪರ್ಕ ಇರುತ್ತದೆ. ನಿಯಮಾನುಸಾರ ಇನ್ಫೋಸಿಸ್‌ ಸಂಸ್ಥೆಯಿಂದ ಪರ್ಯಾಯವಾಗಿ ಪಡೆಯುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕು,” ಎಂಬ ಅಭಿಪ್ರಾಯವನ್ನು ಆನೇಕಲ್ ತಹಶೀಲ್ದಾರ್‌ ವರದಿಯಲ್ಲಿ ನೀಡಿದ್ದಾರೆ.

ಖಾಸಗಿ ಸಂಸ್ಥೆ, ಕಂಪನಿಯು ಸರ್ಕಾರಕ್ಕೆ ಪರ್ಯಾಯವಾಗಿ ಬಿಟ್ಟುಕೊಡುವ ಜಮೀನುಗಳು ಯಾವುದೇ ವಿವಾದ, ವ್ಯಾಜ್ಯಗಳಿಂದ ಕೂಡಿರಬಾರದು. ಅಲ್ಲದೆ, ಆ ಜಮೀನಿನ ಮೇಲೆ ಖಾಸಗಿ ವ್ಯಕ್ತಿ ಯಾವುದೇ ಹಕ್ಕು ಹೊಂದಿರಬಾರದು. ಇದನ್ನು ಕಂದಾಯ ಇಲಾಖೆ ನಿರ್ಧರಿಸಬೇಕು. ಆದರೆ, ಈ ಕುರಿತು ಯಾವುದೇ ನಿರ್ಧಾರ ಹೊರಬಿದ್ದಿಲ್ಲ. ಇನ್ಫೋಸಿಸ್‌ ಸಂಸ್ಥೆ ಬಿಟ್ಟುಕೊಡಲು ಉದ್ದೇಶಿಸಿರುವ ಜಮೀನಿಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಇರುವ ತಡೆಯಾಜ್ಞೆಗೆ ಕಾರಣಗಳೇನು ಎಂಬ ಮಾಹಿತಿ ತಹಶೀಲ್ದಾರ್‌ ಸಲ್ಲಿಸಿರುವ ವರದಿಯಲ್ಲಿ ಕಂಡುಬರುವುದಿಲ್ಲ ಅಥವಾ ಈ ಜಮೀನಿನ ಮೇಲೆ ಸಂಸ್ಥೆ ಏನಾದರೂ ಸಾಲ ಪಡೆದಿದೆಯೇ, ಪಡೆದಿದ್ದರೆ ಎಷ್ಟು ಸಾಲ ಪಡೆದಿದೆ, ಬಾಕಿ ಉಳಿಸಿಕೊಂಡಿರುವ ಸಾಲದ ಮೊತ್ತವೇನು ಮುಂತಾದವುಗಳ ಕುರಿತ ಯಾವುದೇ ವಿವರಗಳೂ ವರದಿಯಲ್ಲಿ ಇಲ್ಲ.

“ಈ ಸಂಸ್ಥೆಯು ಬಿಟ್ಟುಕೊಡಲು ಒಪ್ಪಿರುವ ೧೧ ಎಕರೆ ೦೪ ಗುಂಟೆ ಜಮೀನು ಮುಂಬರುವ ದಿನಗಳಲ್ಲಿ ಸರ್ಕಾರಿ ಅಥವಾ ಅರೆ ಸರ್ಕಾರಿ ಸಂಸ್ಥೆಗಳು ಕೈಗೊಳ್ಳಬಹುದಾದ ಯಾವುದೇ ಸಾರ್ವಜನಿಕ ಯೋಜನೆಗಾಗಿ ಉಪಯೋಗಿಸಿಕೊಳ್ಳಬಹುದಾಗಿರುತ್ತದೆ. ಅಲ್ಲದೆ, ಜಮೀನು ಇನ್ಫೋಸಿಸ್‌ ಸಂಸ್ಥೆಯ ಆವರಣಕ್ಕೆ ಹೊಂದಿಕೊಂಡಂತೆ ಇದ್ದು, ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುವುದರಿಂದ ಈ ಜಮೀನುಗಳು ಮುಂಬರುವ ದಿನಗಳಲ್ಲಿ ಉಪಯುಕ್ತವಾಗಿರುತ್ತದೆ,” ಎಂಬ ಅಂಶಗಳನ್ನೊಳಗೊಂಡ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳು ಸಲ್ಲಿಸಿದ್ದರು. ಆದರೆ, ಈ ಪ್ರಸ್ತಾವನೆಯಲ್ಲಿ ಯಾವುದೇ ಸಮರ್ಥನೀಯ ಅಂಶಗಳಿಲ್ಲ ಎಂಬ ಆಕ್ಷೇಪಗಳು ಕೇಳಿಬಂದಿದ್ದವು.

ಸರ್ಜಾಪುರ ಗ್ರಾಮದ ಸರ್ವೆ ನಂಬರ್‌ ೩೭೩ ಮತು ಬಿಲ್ಲಾಪುರ ಗ್ರಾಮದ ಸರ್ವೆ ನಂಬರ್‌ ೨೬ರಲ್ಲಿ ಒಟ್ಟು ೮ ಎಕರೆ ೩೩ ಗುಂಟೆ ವಿಸ್ತೀರ್ಣದ ಸರ್ಕಾರಿ ಗೋಮಾಳ ಜಮೀನುಗಳನ್ನು ಕರ್ನಾಟಕ ಭೂಕಂದಾಯ ನಿಯಮಗಳು ೧೯೬೬ರ ನಿಯಮ ೯೭(೪)ರ ಅಡಿಯಲ್ಲಿ ಗೋಮಾಳ ಶೀರ್ಷಿಕೆಯಿಂದ ತೆಗೆಸುವ ಸಂಬಂಧದ ಕಡತಕ್ಕೂ ಚಾಲನೆ ದೊರೆತಿದೆ. ಸರ್ಜಾಪುರ ಗ್ರಾಮ ಸರ್ವೆ ನಂಬರ್‌ ೨೬ರ ಸರ್ಕಾರಿ ಗೋಮಾಳ ಜಮೀನಿನಲ್ಲಿ ಈ ಹಿಂದೆ ೦-೩೦ ಗುಂಟೆ ಸಾರ್ವಜನಿಕ ಉದ್ದೇಶದ ರಸ್ತೆಗಾಗಿ ಕಾಯ್ದಿರಿಸಿರುವ ೨೦೦೯-೧೦ರ ಆದೇಶವನ್ನು ಹಿಂಪಡೆದು ಭೂ ಮಂಜೂರಾತಿ ನಿಯಮಗಳನ್ವಯ ಪೂರ್ಣ ಮಾರುಕಟ್ಟೆ ವಿಧಿಸಿ ಇನ್ಫೋಸಿಸ್‌ ಸಂಸ್ಥೆಗೆ ಮಂಜೂರು ಮಾಡುವ ವಿಶಿಷ್ಟ ಕಡತ ಸರ್ಕಾರದ ಮುಂದಿದೆ.

ಸರ್ಜಾಪುರ ಗ್ರಾಮದ ಸರ್ವೆ ನಂಬರ್‌ ೩೭೩ ಮತ್ತು ಬಿಲ್ಲಾಪುರ ಗ್ರಾಮದ ಸರ್ವೆ ನಂಬರ್‌ ೨೬ರಲ್ಲಿರುವ ೮ ಎಕರೆ ೩೩ ಗುಂಟೆ ಸೇರಿದಂತೆ ಒಟ್ಟು ೧೧ ಎಕರೆ ೦೪ ಗುಂಟೆ ಜಮೀನನ್ನು ಅದಲು ಬದಲು ಮಾಡುವ ಸಂಬಂಧ ಕರ್ನಾಟಕ ಭೂ ಮಂಜೂರಾತಿ ನಿಯಮಗಳು ೧೯೬೯ರ ನಿಯಮ ೨೮(ಎ)(೨)-(೫)ರ ಅಡಿ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ವರದಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More