ಖಾಸಗಿ ಆಸ್ಪತ್ರೆಗಳ ಲಾಭಕೋರತನದಿಂದ ಜನರನ್ನು ಪಾರು ಮಾಡುವುದು ನಿಜಕ್ಕೂ ಯಾರ ಕೆಲಸ?

ಪ್ರಸವ, ಪ್ರಸವ ನಂತರದ ಸಮಯದಲ್ಲಿ ಐಎಎಸ್ ಅಧಿಕಾರಿ ಅನುಭವಿಸಿದ ಯಾತನೆ ದೊಡ್ಡ ಸುದ್ದಿಯಾಗಿದೆ. ಖಾಸಗಿ ಆಸ್ಪತ್ರೆಗಳ ಲಾಭಕೋರತನದಿಂದ ಯಾರೂ ಸುರಕ್ಷಿತರಲ್ಲ, ಯಾರೂ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಈ ಪ್ರಕರಣದಿಂದ ಮತ್ತಷ್ಟು ಸ್ಪಷ್ಟವಾಗುತ್ತಿದೆ

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಐಎಎಸ್ ಅಧಿಕಾರಿಯೊಬ್ಬರು ಪ್ರಸವ ಮತ್ತು ಪ್ರಸವ ನಂತರದ ಸಮಯದಲ್ಲಿ ತಾವು ಮತ್ತು ತಮ್ಮ ನವಜಾತ ಶಿಶು ಅನುಭವಿಸಿದ ಯಾತನೆ ಬಗ್ಗೆ ದೂರು ನೀಡಿದ್ದು ಈಗ ದೊಡ್ಡ ಸುದ್ದಿಯಾಗಿದೆ. ಖಾಸಗಿ ಆಸ್ಪತ್ರೆಗಳ ಲಾಭಕೋರತನದಿಂದ ಯಾರೂ ಸುರಕ್ಷಿತರಲ್ಲ, ಅದರಿಂದ ಯಾರೂ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಈ ಪ್ರಕರಣದಿಂದ ಮತ್ತಷ್ಟು ಸ್ಪಷ್ಟವಾಗುತ್ತಿದೆ.

ಬಡ ಮಹಿಳೆಯರು ಖಾಸಗಿ ಆಸ್ಪತ್ರೆಗೆ ಹೋಗಿ ಯಾವುದೇ ಬಿಕ್ಕಟ್ಟಿಗೆ ಒಳಗಾದಾಗ, “ಸರ್ಕಾರಿ ಆಸ್ಪತ್ರೆಗೆ ಯಾಕೆ ಹೋಗಲಿಲ್ಲ?” ಎಂಬುದು ಮೊಟ್ಟಮೊದಲ ಪ್ರಶ್ನೆ. ಆದರೆ, ಇದೇ ಪ್ರಶ್ನೆಯನ್ನು ಶ್ರೀಮಂತರನ್ನು ಯಾಕೆ ಕೇಳುವುದಿಲ್ಲ? ಬಹುಶಃ ಉಳ್ಳವರಿಗೆ ಒಂದು ವ್ಯವಸ್ಥೆ, ಇಲ್ಲದವರಿಗೆ ಮತ್ತೊಂದು ವ್ಯವಸ್ಥೆ ಎಂಬ ಅಸಮಾನತೆಯ ದ್ವಂದ್ವ ನೀತಿಯನ್ನು ನಾವು ಸಹಜೀಕರಣ ಮಾಡಿದ್ದೇವೆ ಎನಿಸುತ್ತದೆ.

ಅಷ್ಟಕ್ಕೂ, ಈ ಪ್ರಶ್ನೆಯನ್ನು ಸರ್ಕಾರಿ ಅಧಿಕಾರಿಗಳಿಗೆ, ರಾಜಕೀಯ ವರ್ಗಕ್ಕೆ ಕಡ್ಡಾಯವಾಗಿ ಕೇಳಲೇಬೇಕಿದೆ. ರಾಜಕಾರಣಿಗಳು ಖಾಸಗಿ ಆಸ್ಪತ್ರೆಗಳಿಗೆ ದಾಖಲು ಆಗುವುದು ಸರ್ವೇಸಾಮಾನ್ಯ ವಿಷಯ. ಅಷ್ಟು ಮಾತ್ರವಲ್ಲದೆ, ಉನ್ನತ ಮಟ್ಟದ ಚಿಕಿತ್ಸೆಗೆ ಸಿಂಗಾಪುರಕ್ಕೆ ಅಥವಾ ಇನ್ನಿತರ ದೇಶಗಳಿಗೆ ಹೋಗುವುದು ಮತ್ತು ಕೆಲ ಪ್ರಕರಣಗಳಲ್ಲಿ ಕೋಟ್ಯಂತರ ತೆರಿಗೆ ಹಣವನ್ನು ಸರ್ಕಾರ ಖರ್ಚು ಮಾಡಿರುವುದನ್ನು ಕಂಡಿದ್ದೇವೆ. ಇವೆಲ್ಲವೂ, ಖಾಸಗಿ ಆಸ್ಪತ್ರೆಗಳಲ್ಲಿನ ಸೇವೆಗಳು 'ಶ್ರೇಷ್ಠ’ವಾದವು ‘ಉತ್ತಮ ಗುಣಮಟ್ಟ’ದ್ದು ಎಂಬ ಭ್ರಮೆಗಳನ್ನು ಬಲಪಡಿಸಿವೆ. ಖಾಸಗಿ ಆಸ್ಪತ್ರೆಗಳ ‘ಫೈವ್ ಸ್ಟಾರ್ ಕಲ್ಚರ್’ ಅನ್ನು ಪ್ರಚಾರ ಮಾಡುವಲ್ಲಿ ನಮ್ಮ ರಾಜ್ಯದ ಆಳುವ ಸರ್ಕಾರಗಳ ಐತಿಹಾಸಿಕ ಪಾತ್ರವಿದೆ. ಕಳೆದ 15 ವರ್ಷಗಳಿಂದಲೂ ಆರೋಗ್ಯ ವಿಮಾ ಯೋಜನೆಗಳ ಮೂಲಕ ನಾಗರಿಕರು ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟೇ ದುಬಾರಿಯಾದರೂ ‘ಉತ್ತಮ’ ಚಿಕಿತ್ಸೆಯನ್ನು ಪಡೆಯಬಹುದೆಂದು ಖಾಸಗಿ ಅಸ್ಪತ್ರೆಗಳಿಗೆ ಉಚಿತ ಜಾಹಿರಾತು ಮಾಡುತ್ತ, ಸರ್ಕಾರಿ ಆಸ್ಪತ್ರೆಗಳಿಗೆ ಸಲ್ಲಬೇಕಾದ ಸಂಪನ್ಮೂಲಗಳನ್ನು ಖಾಸಗಿ ಆಸ್ಪತ್ರೆಗಳಿಗೆ ವರ್ಗಾಯಿಸುತ್ತ, ಸರ್ಕಾರಿ ವ್ಯವಸ್ಥೆಯನ್ನು ಪರೋಕ್ಷವಾಗಿ ಮತ್ತು ನೇರವಾಗಿ ಧ್ವಂಸ ಮಾಡಿ, ಇಂದು ಬಡವರು ಕೂಡ ಸರ್ಕಾರಿ ಆಸ್ಪತ್ರೆಗಳಿಗೆ ಹೋಗದೆ ಖಾಸಗಿ ಆಸ್ಪತ್ರೆಗಳ ಮೊರೆಹೋಗುವ ಪರಿಸ್ಥಿತಿ ಸೃಷ್ಟಿ ಮಾಡಿವೆ.

ಖಾಸಗಿ ಆರೋಗ್ಯ ವಲಯಕ್ಕೆ ನಿಯಂತ್ರಣವೇ ಇಲ್ಲದ್ದರಿಂದ ಆರೋಗ್ಯ ಸೇವಾ ವಲಯ ಇಂದು ಕರಾಳ ರೀತಿಯಲ್ಲಿ ವ್ಯಾಪಾರೀಕರಣಗೊಂಡಿದೆ. ವೈದ್ಯಕೀಯ ವಿಜ್ಞಾನದ ಪ್ರಗತಿಯೂ ಬಹುರಾಷ್ಟ್ರೀಯ ಔಷಧಿ ಕಂಪನಿಗಳ ಮತ್ತು ವೈದ್ಯಕೀಯ ಸಾಧನ ಉದ್ಯಮಿಗಳ ಲಾಭಕ್ಕೆ ತಕ್ಕಂತೆ ಮುಂದುವರದಿದೆಯೇ ಹೊರತು ಜನರ ಆರೋಗ್ಯ ಅಗತ್ಯಗಳನ್ನು ಆಧರಿಸಿ ಅಲ್ಲ ಎಂಬುದು ಗಮನಾರ್ಹ ಸಂಗತಿ. ಅತಿ ನೂತನ ತಂತ್ರಜ್ಞಾನ ಬಳಸಿದರೆ ಮಾತ್ರ ಉತ್ತಮ ಗುಣಮಟ್ಟ ಎಂಬ ಭ್ರಮೆ ಬಿತ್ತಲಾಗಿದೆ. ಆರೋಗ್ಯ ವಲಯದ ಮಾರುಕಟ್ಟೆಯ ತೀವ್ರ ಪೈಪೋಟಿಯಲ್ಲಿ ಮುಂದುವರಿಯಲು ಖಾಸಗಿ ಆಸ್ಪತ್ರೆಗಳು ಕೋಟ್ಯಂತರ ಹಣ ಹೂಡುತ್ತಿವೆ. ಈ ಬಂಡವಾಳದ ಮರುಗಳಿಕೆಯ ಹೊರೆಯನ್ನು ಅಸಮಂಜಸ ಆರೈಕೆ, ಅನಗತ್ಯ ಪರೀಕ್ಷೆ, ಅನವಶ್ಯ ಶಸ್ತ್ರಚಿಕಿತ್ಸೆಗಳ ಮೂಲಕ ರೋಗಿಗಳ ಮೇಲೆ ಹೊರಿಸುತ್ತಿವೆ. ಹಾಗಾಗಿ, ಐಎಎಸ್ ಅಧಿಕಾರಿಗೆ ಭೀತಿ ಹುಟ್ಟಿಸಿ ಸಿಜೇರಿಯನ್ ಶಸ್ತ್ರಚಿಕಿತ್ಸೆ ಮಾಡಿ, ಅವರ ಕಂದಮ್ಮನಿಗೆ ಅನಗತ್ಯವಾಗಿ ಫೋಟೋಥೆರಪಿ ಮಾಡಲೇಬೇಕಾಯಿತು. ಅದೇ ರೀತಿ ಕ್ಯಾನ್ಸರ್‌ನ ಅಂಜಿಕೆ ಬಿತ್ತಿ ರಾಜ್ಯಾದ್ಯಂತ ಸಾವಿರಾರು ಬಡ, ಶೋಷಿತ ಸಮುದಾಯಗಳ ಮಹಿಳೆಯರ ಗರ್ಭಕೋಶ ಕಿತ್ತುಹಾಕಲಾಯಿತು. ನವಜಾತ ಶಿಶುಗಳನ್ನು ಅನವಶ್ಯವಾಗಿ ಐಸಿಯುನಲ್ಲಿಟ್ಟು ಹಣ ಕಿತ್ತುಕೊಳ್ಳಲಾಗುತ್ತಿದೆ. ರೋಗಿ ಸತ್ತ ಮೇಲೆ ಶವವನ್ನು ಇಟ್ಟುಕೊಂಡು ಹಣ ಗಳಿಸಲಾಗುತ್ತಿದೆ. ಇದು ಮಾರುಕಟ್ಟೆಯ ತರ್ಕ. ಈ ತರ್ಕಕ್ಕೆ ಹೊಂದಿಕೊಂಡು ತಮ್ಮ ಅನೈತಿಕ ದುಷ್ಟ ಕೃತ್ಯಗಳನ್ನು ಸಮರ್ಥಿಸಿಕೊಳ್ಳುವ ಬಲಾಢ್ಯ ವೈದ್ಯ ವೃತ್ತಿ ತನ್ನ ಅಸ್ತಿತ್ವದ ಮೂಲ ಕಾರಣವನ್ನೇ ಮರೆತಿದೆ.

ಅಷ್ಟು ಮಾತ್ರವಲ್ಲದೆ, ಖಾಸಗಿ ಆಸ್ಪತ್ರೆಗಳ ಲಾಬಿಯನ್ನು ನಿಯಂತ್ರಿಸುವಲ್ಲಿ, ಅವುಗಳ ಪ್ರಜಾಪ್ರಭುತ್ವ ಉತ್ತರದಾಯತ್ವವನ್ನು ಹೆಚ್ಚಿಸುವಲ್ಲಿ ರಾಜಕೀಯ ಇಚ್ಛಾಶಕ್ತಿ, ನಿಷ್ಠೆ ಮತ್ತು ಬದ್ಧತೆಯ ತೀವ್ರ ಕೊರತೆಯನ್ನೂ ಕಾಣುತ್ತಿದ್ದೇವೆ. ಇದನ್ನು ನಾವು ನಮ್ಮ ರಾಜ್ಯದಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯ ತಿದ್ದುಪಡಿ ಪ್ರಕ್ರಿಯೆಯಲ್ಲೂ ಕಂಡೆವು.

ಈ ಕಾಯ್ದೆಯ ತಿದ್ದುಪಡಿಯ ಪ್ರಕ್ರಿಯೆಯು ಒಂದು ರೀತಿಯಲ್ಲಿ ಐತಿಹಾಸಿಕವಾದದು. ನಾಗರಿಕರು, ಜನಪರ ಸಂಘಟನೆಗಳು ಜಂಟಿ ಸದನ ಸಮಿತಿಯನ್ನು ಒಳಗೊಂಡಂತೆ ವಿವಿಧ ಸಮಿತಿಗಳಲ್ಲಿ ಖಾಸಗಿ ವೈದ್ಯಕೀಯ ಲಾಬಿಗಳ ವಿರುದ್ದ ಅವಿರತವಾಗಿ ಹೋರಾಟ ಮಾಡಿದ ಕಾರಣ ರೋಗಿಗಳ ಪರವಾದ ಕೆಲ ಅಂಶಗಳು ಕಾಯ್ದೆಯಲ್ಲಿ ಸೇರ್ಪಡೆ ಆದವು. ರೋಗಿ ಹಕ್ಕುಗಳ ಸನ್ನದು ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಗಳ ಜವಾಬ್ದಾರಿಗಳನ್ನು ಸ್ಪಷ್ಟವಾಗಿ ಪಟ್ಟಿ ಮಾಡುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ಸನ್ನದು ಮೊಟ್ಟಮೊದಲ ಬಾರಿಗೆ ಕಾಯ್ದೆಯಲ್ಲಿ ಸೇರ್ಪಡೆಯಾಯಿತು. ಹಕ್ಕುಗಳ ಉಲ್ಲಂಘನೆಗಳ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ಸಿವಿಲ್ ನ್ಯಾಯಾಲಯದ ಅಧಿಕಾರ ಹೊಂದಿರುವ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ನೋಂದಣಿ ಹಾಗೂ ದೂರು ನಿವಾರಣಾ ಪ್ರಾಧಿಕಾರವನ್ನು ಕೂಡ ಕಾಯ್ದೆಯಲ್ಲಿ ಸೇರ್ಪಡೆ ಮಾಡಲಾಯಿತು.

ಆದರೆ, ಖಾಸಗಿ ಆಸ್ಪತ್ರೆಗಳ ಲಾಬಿಗೆ ಮಣಿದ ಸರ್ಕಾರ ಕಾಯ್ದೆಯಲ್ಲಿ ಹಲವಾರು ಜನವಿರೋಧಿ ಅಂಶಗಳನ್ನು ತಂದು ಮತ್ತು ಕೆಲ ಪ್ರಮುಖ ಅಂಶಗಳನ್ನು ಕೈಬಿಟ್ಟು ಕಾಯ್ದೆಯನ್ನು ದುರ್ಬಲಗೊಳಿಸಿತು. ಉದಾಹರಣೆಗೆ, ‘ಜುಜುಬಿ’, ‘ನಿಷ್ಪ್ರಯೋಜಕ’ ‘ಸುಳ್ಳು’ ದೂರಿಗೆ 10,000 ರು. ದಂಡ ವಿಧಿಸಲಾಗುವುದೆಂಬ ಅಂಶವನ್ನೂ ಸೇರ್ಪಡೆ ಮಾಡಿ ರೋಗಿ ದೂರನ್ನು ನೀಡದಂತೆ ಧೈರ್ಯಗುಂದಿಸುವಂತಾಗಿದ್ದು, ಶಕ್ತಿಕೇಂದ್ರಗಳ ಜೊತೆ ಉತ್ತಮ ಸಂಬಂಧಗಳನ್ನು ಹೊಂದಿದ ಖಾಸಗಿ ಲಾಬಿಯು ಇದನ್ನು ದುರ್ಬಳಕೆ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಹಾಗೆಯೇ, ಖಾಸಗಿ ಆಸ್ಪತ್ರೆಗಳಲ್ಲಿನ ಸ್ವೇಚ್ಛಾಚಾರವಾಗಿ ವಿಧಿಸುತ್ತಿರುವ ದುಬಾರಿ ಚಿಕಿತ್ಸೆ ದರಗಳನ್ನು ನಿಯಂತ್ರಿಸಬೇಕೆಂಬುದು ನಮ್ಮ ಮುಖ್ಯ ಹಕ್ಕೊತ್ತಾಯವಾಗಿತ್ತು. ಆದರೆ, ಖಾಸಗಿ ಆಸ್ಪತ್ರೆಗಳ ಲಾಬಿಗೆ ಮಣಿದ ಸರ್ಕಾರ ಬೆಲೆ ನಿಯಂತ್ರಣದ ಅಂಶವನ್ನು ಸೇರ್ಪಡೆ ಮಾಡಲಿಲ್ಲ. ಕಾಯ್ದೆಯ ಉತ್ತಮ ದಕ್ಷ ಅನುಷ್ಠಾನ ಹಾಗೂ ಮೇಲ್ವಿಚಾರಣೆಗಾಗಿ ರಾಜ್ಯ ಮಟ್ಟದಲ್ಲಿ ಒಂದು ಪ್ರತ್ಯೇಕ ಪ್ರಾಧಿಕಾರದ ರಚನೆಗಾಗಿ ಜನಪರ ಸಂಘಟನೆಗಳು ಒತ್ತಾಯಿಸಿದ್ದವು. ಆದರೇ ಆ ಅಂಶವನ್ನೂ ಸೇರ್ಪಡೆ ಮಾಡಲಿಲ್ಲ.

ಹೀಗೆ ಲೋಪದೋಷಗಳಿಂದ ಕೂಡಿದ ಕೆಪಿಎಂಇ ಕಾಯ್ದೆ 2017 ಜಾರಿಗೆ ಬಂದು 10 ತಿಂಗಳು ಕಳೆದಿವೆ. ಆದರೂ ಈವರೆಗೂ ಕಾಯ್ದೆ ಅನುಷ್ಠಾನ ಆಗಿಲ್ಲ. ಜಿಲ್ಲಾ ಮಟ್ಟದ ದೂರು ನಿವಾರಣಾ ಪ್ರಾಧಿಕಾರಗಳು ಎಲ್ಲಿಯೂ ರಚನೆಯಾಗಿಲ್ಲ. ಈ ಸಮಿತಿಗಳಲ್ಲಿ ನಾಗರಿಕರ ಪರವಾದ ಒಬ್ಬ ಮಹಿಳಾ ಸದಸ್ಯೆ ಇರಬೇಕೆಂದು ನಿಯಮವಿದೆ. ಆದರೆ, ನಾಗರಿಕ ಪರ ಸದಸ್ಯರ ಗೈರುಹಾಜರಿಯಲ್ಲಿಯೇ ಹಳೇ ಪದ್ಧತಿಯಲ್ಲಿ ಸಮಿತಿಗಳು ಮುಂದುವರಿದಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಉಲ್ಲಂಘನೆಗಳಿಗೆ ಗುರಿಯಾದರೆ ಎಲ್ಲಿ ದೂರು ಸಲ್ಲಿಸಬೇಕು, ಯಾರನ್ನು ಸಂಪರ್ಕಿಸಬೇಕು ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಯಾವುದೇ ಮಾಹಿತಿ ಇಲ್ಲ. ಅದರಂತೆಯೇ, ರೋಗಿ ಹಕ್ಕುಗಳ ಸನ್ನದು, ಖಾಸಗಿ ವೈದ್ಯಕೀಯ ಸಂಸ್ಥೆಗಳ ಸನ್ನದು, ಆಂತರಿಕ ದೂರು ನಿವಾರಣಾ ವ್ಯವಸ್ಥೆ ಮತ್ತು ಆಸ್ಪತ್ರೆಯಲ್ಲಿನ ದರ ಪಟ್ಟಿಯನ್ನು ಬಹಿರಂಗವಾಗಿ ಪ್ರದರ್ಶಿಸಬೇಕೆಂದು ಕಾಯ್ದೆಯಲ್ಲಿದೆ. ಆದರೆ, ಎಷ್ಟು ಖಾಸಗಿ ಆಸ್ಪತ್ರೆಗಳು ಈ ನಿಯಮಗಳನ್ನು ಪಾಲಿಸುತ್ತಿವೆ ಎಂಬುದರ ಬಗ್ಗೆ ಇಲಾಖೆಗೂ ಮಾಹಿತಿ ಇಲ್ಲ.

ಬಹುಮುಖ್ಯವಾಗಿ, ರೋಗಿಗಳ ದೂರುಗಳ ಬಗ್ಗೆ ನಡೆಸಬೇಕಾದ ತನಿಖೆಗಳಿಗೆ ಯಾವುದೇ ನಿಯಮಾವಳಿಗಳಿಲ್ಲ. ದೂರು ನಿವಾರಣಾ ಪ್ರಾಧಿಕಾರಗಳು ವಿಚಾರಣೆಗಳನ್ನು ನಡೆಸುತ್ತಿಲ್ಲ. ತನಿಖಾ ತಂಡಗಳು ತನಿಖೆಗಳನ್ನು ಮನಸೋ ಇಚ್ಛೆ ನಡೆಸುತ್ತಿದ್ದು, ದೂರುದಾರರ ಹೇಳಿಕೆಯನ್ನೇ ಪಡೆಯದೆ ಏಕಪಕ್ಷೀಯ ತನಿಖೆಗಳನ್ನು ನಡೆಸುತ್ತಿವೆ. ಇವೆಲ್ಲವೂ ನ್ಯಾಯ ಪ್ರಕ್ರಿಯೆಯ ಮೂಲ ಸ್ಥಂಭವಾಗಿರುವ ಸಹಜ ನ್ಯಾಯದ ತತ್ವವನ್ನೇ ಉಲ್ಲಂಘಿಸುತ್ತಿವೆ. ತನಿಖಾ ವರದಿಗಳನ್ನು ಗಮನಿಸಿದಾಗ, ಅವುಗಳಲ್ಲಿ ಕೇವಲ ಆಸ್ಪತ್ರೆಯ ಆಡಳಿತ ತಮ್ಮ ಕೃತ್ಯವನ್ನು ಮರೆಮಾಚಲು ಮತ್ತು ಸಮರ್ಥಿಸಿಕೊಳ್ಳಲು ನೀಡಿದ ವರದಿಗಳನ್ನು ಯಾವುದೇ ವಿಶ್ಲೇಷಣೆಗೆ ಒಳಪಡಿಸುತ್ತಿಲ್ಲ; ಬದಲಿಗೆ, ಆಸ್ಪತ್ರೆಗಳು ನೀಡಿದ ವರದಿಯನ್ನು ಯಥಾವತ್ತು ಒಪ್ಪಿಕೊಂಡು ಒಂದು ಪಕ್ಷಪಾತಿ ವರದಿಗೆ 'ತನಿಖಾ ವರದಿ’ಯ ಮುದ್ರೆಯನ್ನು ಹಾಕುತ್ತಿವೆ. ರೋಗಿಗಳ ಹಿತಾಸಕ್ತಿ ಕಾಪಾಡುವ ಬದಲು ಬಲಾಢ್ಯ ಖಾಸಗಿ ಆಸ್ಪತ್ರೆಗಳ ಪರವಾದ ಪಕ್ಷಪಾತಿ ವರದಿಗಳನ್ನು ಸಲ್ಲಿಸುತ್ತಿವೆ ಎಂಬುದು ಗಮನಕ್ಕೆ ಬರುತ್ತದೆ. ಇವೆಲ್ಲವೂ ರೋಗಿಗಳ ಮತ್ತು ನಾಗರಿಕರ ಸಾವು-ಜೀವನದ ಪ್ರಶ್ನೆಗಳನ್ನು, ಉಲ್ಲಂಘನೆಗಳಿಗೆ ಗುರಿಯಾದವರ ನ್ಯಾಯದ ಪ್ರಕ್ರಿಯೆಯನ್ನು ಅಪಹಾಸ್ಯ ಮಾಡುವಂತಾಗಿದೆ. ರೋಗಿ-ಪರವಾದ ವರದಿಗಳನ್ನು ಆಧರಿಸಿ ಕಾಯ್ದೆಯಡಿ ಶಿಸ್ತು ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಮುಂದಾಗುತ್ತಿಲ್ಲ. ಬದಲಿಗೆ, ಅಧಿಕಾರಿಗಳು ಕುಂಟು ನೆಪಗಳನೊಡ್ಡಿ ಫೈಲ್‍ಗಳನ್ನು ಒಬ್ಬರಿಂದ ಒಬ್ಬರಿಗೆ ಸಾಗಿಸುತ್ತಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಉಲ್ಲಂಘನೆಗಳಿಗೆ ಗುರಿಯಾದವರು ಒಂದು ಕಚೇರಿಯಿಂದ ಮತ್ತೊಂದು ಕಚೇರಿ, ಒಂದು ಟೇಬಲ್‌ನಿಂದ ಮತ್ತೊಂದು ಟೇಬಲ್‍ಗೆ ಪರದಾಡುತ್ತಿದ್ದು, ಅವರ ಚಪ್ಪಲಿಗಳು ಸವದಿವೆಯೇ ಹೊರತು ನ್ಯಾಯದೆಡೆಗೆ ಅವರ ಪಯಣ ಸಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ, ಐಎಎಸ್ ಅಧಿಕಾರಿಯ ದೂರನ್ನು ನೀಡಿರುವುದು ಬಹುಮುಖ್ಯವಾದುದು. ಈ ಪ್ರಕರಣವನ್ನು ಇಲಾಖೆ ಹೇಗೆ ನಿಭಾಯಿಸುತ್ತದೆ, ಯಾವ ಗತಿಯಲ್ಲಿ ಎಂತಹ ಕ್ರಮ ಕೈಗೊಳ್ಳುತ್ತದೆ ಎಂಬುದು ಒಂದು ನಿದರ್ಶನವಾಗಲಿದೆ.

ಇದನ್ನೂ ಓದಿ : ಇಲಾಜು | ವೈಜ್ಞಾನಿಕ ಮಾರ್ಗದ ಬದಲು ಅನ್ಯಾಯದ ಹಾದಿ ಹಿಡಿದ ವೈದ್ಯಕೀಯ ಸಂಸ್ಥೆಗಳು

ಈವರೆಗೆ ಎಲ್ಲ ಹೊರಾಟಗಳ ಹೊರೆಯನ್ನೂ ಕೇವಲ ಬಡವರ್ಗದ ನಾಗರಿಕರು ಹೊರುತ್ತಿದ್ದರು. ಈಗ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದವರಿಗೂ ಫೈವ್ ಸ್ಟಾರ್ ಆಸ್ಪತ್ರೆಗಳ ಬಿಸಿ ಮುಟ್ಟುತ್ತಿರುವ ಕಾರಣ ಅವರೂ ಅನಿವಾರ್ಯವಾಗಿ ಹೋರಾಟಕ್ಕೆ ಇಳಿಯುತ್ತಿದ್ದಾರೆ. ಬಲಾಢ್ಯ ಖಾಸಗಿ ಆಸ್ಪತ್ರೆಗಳನ್ನು ಎದುರಿಸುವ ಹೋರಾಟ ಸಮವಲ್ಲದವರ ನಡುವಿನ ಹೋರಾಟವಾಗಿದೆ. ಈ ಹೋರಾಟದಲ್ಲಿ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗ ತನ್ನ ಅಧಿಕಾರ, ಪ್ರಭಾವ ಮತ್ತು ಸವಲತ್ತನ್ನು ನಾಡಿನ ಕಟ್ಟಕಡೇ ವ್ಯಕ್ತಿಯ ಜೊತೆ ನಿಂತು ಸಂವಿಧಾನಬದ್ದ ಮೌಲ್ಯವಾದ ಭ್ರಾತೃತ್ವವನ್ನು ಪ್ರದರ್ಶಿಸಬೇಕಿದೆ. ಆರೋಗ್ಯ ಮತ್ತು ಆರೋಗ್ಯ ಸೇವೆಗಳನ್ನು ವೈದ್ಯರ, ತಜ್ಞರ, ಸಂಶೋಧಕರ, ನೀತಿನಿರೂಪಕರ ಕಪಿಮುಷ್ಟಿಯಿಂದ ಬಿಡಿಸಿ ಸಂವಿಧಾನದ ಸಮಾನ ನಾಗರಿಕತ್ವದ ಚೌಕಟ್ಟಿಗೆ ತರಬೇಕಿದೆ. ಹೆಚ್ಚುತ್ತಿರುವ ಮತಾಂಧತೆ, ಕಾರ್ಪೋರೆಟ್ ಲಾಭಕೋರತನ, ಮಹಿಳೆಯರು, ದಲಿತರು, ಧಾರ್ಮಿಕ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಹಿಂಸೆ, ಹಲ್ಲೆಗಳು ಮತ್ತು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಗೇ ಅಪಾಯ ಉಂಟಾಗಿರುವ ಸಂದರ್ಭದಲ್ಲಿ ಆರೋಗ್ಯದ ಬಿಕಟ್ಟು, ಆರೋಗ್ಯ ಹಕ್ಕಿನ ಹೋರಾಟ ಮತ್ತು ಅದರ ಸುತ್ತಿನ ಸವಾಲುಗಳು ಮತ್ತಷ್ಟು ತೀವ್ರಗೊಳ್ಳಲಿವೆ. ಆ ಸಂದರ್ಭಕ್ಕೆ ನಾವು ತಯಾರಾಗಬೇಕಿದೆ.

ಲೇಖಕರು, ಕರ್ನಾಟಕ ಜನಾರೋಗ್ಯ ಚಳವಳಿ ಸಂಘಟನೆಯ ಸಂಚಾಲಕಿ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More