ಪ್ರಶ್ನಿಸುವುದನ್ನು ಅತಿ ಹೆಚ್ಚು ಪ್ರೀತಿಸುವ ರಂಜನ್ ಗೊಗೊಯ್ ಈಗ ಸಿಜೆಐ

ಅಸ್ಸಾಂನ ದಿಬ್ರೂಗಢದ ರಂಜನ್ ಗೊಗೊಯ್, ಭಿನ್ನವಾಗಿ ಚಿಂತಿಸಬಲ್ಲ ನ್ಯಾಯಮೂರ್ತಿ ಎಂದೇ ಗುರುತಿಸಲ್ಪಡುವವರು. ವಿವಿಧ ಪ್ರಕರಣಗಳನ್ನು ಒಗ್ಗೂಡಿಸಿ, ಅವುಗಳನ್ನು ಒಟ್ಟಿಗೇ ಆಲಿಸಿ, ಒಂದೇ ಬಾರಿಗೆ ತೀರ್ಪು ನೀಡಬಲ್ಲರು ಎಂಬ ನ್ಯಾಯಾಂಗ ವಲಯದ ಮಾತು ಅವರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ

“ಪ್ರಜಾಪ್ರಭುತ್ವವನ್ನು ರಕ್ಷಿಸಲು ಕೇವಲ ಸ್ವತಂತ್ರ ನ್ಯಾಯಾಧೀಶರು ಹಾಗೂ ಗದ್ದಲ ಮಾಡುವ ಪತ್ರಕರ್ತರಿದ್ದರೆ ಸಾಲದು, ಸ್ವತಂತ್ರ ಪತ್ರಕರ್ತರು ಹಾಗೂ ಕೆಲವೊಮ್ಮೆ ಗದ್ದಲ ಮಾಡುವ ನ್ಯಾಯಾಧೀಶರೂ ಇರಬೇಕು...” -ರಾಮನಾಥ್ ಗೋಯೆಂಕಾ ಸ್ಮೃತಿ ವಾರ್ಷಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದ್ದ ಮಾತಿದು.

ಸುಪ್ರೀಂ ಕೋರ್ಟ್ ಇತಿಹಾಸದಲ್ಲಿ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಅತಿ ಹಿರಿಯ ನ್ಯಾಯಮೂರ್ತಿಗಳನ್ನು ಕಡೆಗಣಿಸಿದ ಉದಾಹರಣೆಗಳು ಇವೆ. ಭಿನ್ನಾಭಿಪ್ರಾಯಕ್ಕೆ ಕಾರಣವಾಗುವ ಇಂತಹ ನಿರ್ಧಾರಗಳಿಗೆ ಕಾರಣ ಬಹುತೇಕ ರಾಜಕೀಯವಾಗಿದ್ದು, ನ್ಯಾ,ಎಚ್ ಎಲ್ ಖನ್ನಾ ಮತ್ತಿತರರಿಂದ ಇದು ಮೊದಲುಗೊಂಡಿತು. ನ್ಯಾಯಮೂರ್ತಿಗಳಾದ ಚೆಲಮೇಶ್ವರ್, ಮದನ್ ಲೋಕೂರ್, ಜೋಸೆಫ್ ಕುರಿಯನ್ ಅವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಗೊಗೊಯ್ ಕೂಡ ಭಾಗವಹಿಸಿದ್ದು, ಅವರಿಗೆ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಪದೋನ್ನತಿ ನೀಡಬೇಕೇ ಎಂಬುದರ ಸುತ್ತಲಿನ ಚರ್ಚೆಗೆ ನಾಂದಿ ಹಾಡಿತು. ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಅವರೆಲ್ಲ ಬಹಿರಂಗವಾಗಿ ಆತಂಕ ವ್ಯಕ್ತಪಡಿಸಿದ್ದರು. ಸುಪ್ರೀಂ ಕೋರ್ಟ್ ಕಾರ್ಯವೈಖರಿ ಮತ್ತು ಅನಿಯಂತ್ರಿತ ನ್ಯಾಯಾಂಗ ಪ್ರಕ್ರಿಯೆಯ ಕುರಿತಾಗಿ ಅವರು ಪ್ರಶ್ನಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿನ ಅವರ ಹೇಳಿಕೆಗಳು, ದೇಶದ ನ್ಯಾಯಾಂಗ ವ್ಯವಸ್ಥೆಯನ್ನಷ್ಟೇ ಬೆಚ್ಚಿಬೀಳಿಸಲಿಲ್ಲ; ಬದಲಿಗೆ, ಸಾರ್ವಜನಿಕ ವಲಯದಲ್ಲಿ, ಮಾಧ್ಯಮಗಳಲ್ಲಿ, ಅಧಿಕಾರ ಮತ್ತು ಕಾನೂನಿನ ಮೊಗಸಾಲೆಗಳಲ್ಲಿ ನಿರಂತರ ಚರ್ಚೆಯೊಂದಕ್ಕೆ ಕಾರಣವಾಯಿತು.

ಹಿರಿಯ ನ್ಯಾಯಮೂರ್ತಿಗಳು ವ್ಯಕ್ತಪಡಿಸಿದ್ದ ಈ ಭಿನ್ನಾಭಿಪ್ರಾಯ ಗೊಗೊಯ್ ಅವರನ್ನು ದೇಶದ ಮುಖ್ಯ ನ್ಯಾಯಮೂರ್ತಿಯನ್ನಾಗಿ ಪದೋನ್ನತಿಗೇರಿಸುವ ಪ್ರಕ್ರಿಯೆ ಸುಲಭ ಆಗಿರುವುದಿಲ್ಲ ಎಂಬ ಭಾವನೆಯನ್ನು ಹುಟ್ಟುಹಾಕಿತು. ನ್ಯಾಯಾಂಗದ ನಿಯಮಗಳ ಪ್ರಕಾರ, ಹಾಲಿ ಮುಖ್ಯ ನ್ಯಾಯಮೂರ್ತಿಯವರೇ ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಬೇಕಿರುವುದರಿಂದ ದೀಪಕ್ ಮಿಶ್ರಾ ಅವರು ಗೊಗೊಯ್ ಅವರ ಹೆಸರನ್ನು ಪರಿಗಣಿಸುವುದು ಅನುಮಾನ ಎಂಬ ಮಾತುಗಳು ಕೇಳಿಬಂದವು. ಅಮಿತ್ ಶಾ ಅವರು ಆರೋಪ ಮುಕ್ತರಾಗಿರುವ ಜಸ್ಟೀಸ್ ಲೋಯಾ ಅಸಹಜ ಸಾವಿನ ಪ್ರಕರಣದ ಪರವಾಗಿ ಧ್ವನಿ ಎತ್ತಿದ್ದ ನಾಲ್ವರು ನ್ಯಾಯಮೂರ್ತಿಗಳಲ್ಲಿ ಒಬ್ಬರಾದ ಗೊಗೊಯ್ ನೇಮಕವಾಗದಿದ್ದರೆ ಕೇಂದ್ರ ಸರ್ಕಾರಕ್ಕೆ ಕೂಡ ಖುಷಿಯಾಗಲಿದೆ ಎಂದು ಭಾವಿಸಲಾಗಿತ್ತು.

ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ನಿಯಮಗಳಂತೆ ಗೊಗೊಯ್ ಅವರ ಹೆಸರನ್ನು ಪರಿಗಣಿಸುವುದರ ಮೂಲಕ ಈ ವಾದಗಳೆಲ್ಲವೂ ಹಿಂದೆ ಸರಿದಿವೆ. ಬರುವ ಅಕ್ಟೋಬರ್‌ನಲ್ಲಿ ಗೊಗೊಯ್ ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ. ಆದರೆ, ಕೇಂದ್ರ ಸರ್ಕಾರ ತೊಡರುಗಾಲು ಹಾಕದೆ ಇರುತ್ತದೆಯೇ? ಈ ಪ್ರಶ್ನೆ ಈಗಲೂ ಕೆಲ ವಲಯಗಳಲ್ಲಿ ಚರ್ಚೆಯಾಗುತ್ತಿದೆ. ಕಾರಣ, ಎನ್‌ಡಿಎ ಪಾಲಿಗೆ ಇದು ಚುನಾವಣಾ ವರ್ಷ. ಪ್ರಶ್ನೆ ಎತ್ತಿದವರನ್ನು ಮಾತ್ರ ಬೆಂಬಲಿಸುವ ಕಡೆಗೆ ನಾವು ಸಾಗಿದ್ದೇವೆಯೇ ಎಂಬುದರ ಬಗ್ಗೆಯೂ ಇದು ಚರ್ಚೆಯನ್ನು ಹುಟ್ಟುಹಾಕಿದೆ. ಅಲ್ಲದೆ, ನಮಗೆ ಬಾಗುವವರನ್ನು ಮಾತ್ರವೇ ಬೆಂಬಲಿಸುವೆಡೆಗೆ ನಾವು ಸಾಗುತ್ತಿದ್ದೇವೆಯೇ ಎನ್ನುವ ವಿಚಾರವನ್ನು ಇದು ಎತ್ತುತ್ತದೆ.

“ಪ್ರಜಾಪ್ರಭುತ್ವವನ್ನು ಸಮರ್ಥಿಸಿಕೊಳ್ಳಲು ಕೇವಲ ಸ್ವತಂತ್ರ ನ್ಯಾಯಾಧೀಶರು ಹಾಗೂ ಗದ್ದಲ ಮಾಡುವ ಪತ್ರಕರ್ತರಿದ್ದರೆ ಸಾಲದು, ಸ್ವತಂತ್ರ ಪತ್ರಕರ್ತರೂ, ಗದ್ದಲ ಮಾಡುವ ನ್ಯಾಯಾಧೀಶರೂ ಇರಬೇಕು,” ಎಂಬಂತಹ ನಿರ್ಭಿಡೆಯ ಹೇಳಿಕೆಗಳನ್ನು ನೀಡಬಲ್ಲ ಜಸ್ಟೀಸ್ ಗೊಗೋಯ್ ಅವರು ಹುಟ್ಟಿದ್ದು ರಾಜಕೀಯವಾಗಿ ಪ್ರಬಲವಾಗಿದ್ದ ಕುಟುಂಬವೊಂದರಲ್ಲಿ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಅವರು ಇರಿಸಿದ ಪ್ರಮುಖ ಹೆಜ್ಜೆಗಳು ಹೀಗಿವೆ:

ಲಾಭದಾಯಕ ಹುದ್ದೆ ಮತ್ತು ಪ್ರಣಬ್ ರಾಷ್ಟ್ರಪತಿ ಸ್ಥಾನ

ಲಾಭದಾಯಕ ಹುದ್ದೆ ಹೊಂದಿದ್ದರೂ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು ಎಂಬ ಕಾರಣಕ್ಕೆ ಪ್ರಣಬ್‌ ಮುಖರ್ಜಿ ಅವರ ಆಯ್ಕೆಯನ್ನು ರದ್ದುಗೊಳಿಸಬೇಕು ಎಂದು ಸಂಗ್ಮಾ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಅರ್ಹವಲ್ಲ ಎಂದು ಪಂಚಸದಸ್ಯ ಪೀಠದ ನೇತೃತ್ವ ವಹಿಸಿದ್ದ ಆಗಿನ ಮುಖ್ಯ ನ್ಯಾಯಮೂರ್ತಿ ಆಲ್ತಮಸ್‌ ಕಬೀರ್‌ ತೀರ್ಪು ಪ್ರಕಟಿಸಿದ್ದರು. ಆದರೆ, ಅರ್ಜಿ ವಿಚಾರಣೆಗೆ ನ್ಯಾಯಮೂರ್ತಿಗಳಾದ ಜೆ ಚೆಲಮೇಶ್ವರ್‌ ಹಾಗೂ ರಂಜನ್‌ ಗೊಗೊಯ್‌ ಒಲವು ತೋರಿದ್ದರು. “ಮುಖರ್ಜಿ ಅವರು ಭಾರತೀಯ ಸಾಂಖ್ಯಿಕ ಸಂಸ್ಥೆ (ಐಎಸ್ಐ) ಅಧ್ಯಕ್ಷರಾಗುವ ಮೂಲಕ ಲಾಭದಾಯಕ ಹುದ್ದೆ ಹೊಂದಿದ್ದರು ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ, ಅರ್ಜಿಯ ಸಂಪೂರ್ಣ ವಿಚಾರಣೆ ನಡೆಯುವುದು ಅಗತ್ಯ,” ಎಂದು ಗೊಗೊಯ್‌ ಅಭಿಪ್ರಾಯಪಟ್ಟಿದ್ದರು.

ಲೋಕಪಾಲ್ ಕಾಯ್ದೆ

ಲೋಕಪಾಲ್ ಕಾಯ್ದೆ ಜಾರಿ ಸಂಬಂಧ ಕೇಂದ್ರ ಸರ್ಕಾರ ಹಲವು ಪ್ರಶ್ನೆಗಳನ್ನು ಎತ್ತಿತು. ತಾಂತ್ರಿಕ ಕಾರಣಗಳಿಂದಾಗಿ ಕಾಯ್ದೆಯಡಿ ಅಧಿಕಾರಿಗಳನ್ನು ನೇಮಿಸಲು ಸಾಧ್ಯವಾಗುವುದಿಲ್ಲ ಎಂದಿತು. ವಿಪಕ್ಷದ ನಾಯಕರನ್ನು ಆಯ್ಕೆ ಸಮಿತಿ ಅಧ್ಯಕ್ಷರನ್ನಾಗಿ ಮಾಡುವುದಕ್ಕೂ ತೊಂದರೆಗಳಿವೆ ಎಂದಿತು. ಆದರೆ, ಮಾರ್ಚ್ 2017ರಲ್ಲಿ ತೀರ್ಪು ಪ್ರಕಟಿಸಿದ ಗೊಗೋಯ್ ಅವರು, “ಕಾಯ್ದೆಯ 4ನೇ ವಿಧಿಯ ಪ್ರಕಾರ ಕೇಂದ್ರ ಸಲ್ಲಿಸಿದ ಆಕ್ಷೇಪಣೆ ಮನ್ನಣೆಗೆ ಅರ್ಹವಲ್ಲ,” ಎಂದರು. ಆಯ್ಕೆ ಸಮಿತಿಯಲ್ಲಿ ಹುದ್ದೆ ಖಾಲಿ ಇದೆ ಎಂಬ ಕಾರಣಕ್ಕೆ ಲೋಕಪಾಲ್ ಅಥವಾ ಇತರ ಅಧಿಕಾರಿಗಳನ್ನು ನೇಮಿಸದೆ ಇರುವಂತಿಲ್ಲ ಎಂದು ಎಚ್ಚರಿಕೆ ನೀಡಿದರು. ಅಷ್ಟೇ ಅಲ್ಲದೆ, ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಹಿಂಜರಿಯುತ್ತಿರುವುದರ ಬಗ್ಗೆಯೂ ಪೀಠ ಗಮನ ಸೆಳೆಯಿತು. “ಕೇಂದ್ರ ಸರ್ಕಾರ ಲೋಕಪಾಲ್ ನೇಮಕ ಸಂಬಂಧ ಸತತವಾಗಿ ವಿಫಲವಾಗಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ,” ಎಂದು 2018ರ ಜುಲೈನಲ್ಲಿ ಎಚ್ಚರಿಸಿದ ಗೊಗೊಯ್, ಈ ಕುರಿತು ಕೇಂದ್ರ ಸಲ್ಲಿಸಿರುವ ಅಫಿಡವಿಟ್ ಬಗ್ಗೆಯೂ ಅತೃಪ್ತಿ ವ್ಯಕ್ತಪಡಿಸಿದ್ದರು.

ಕಾಟ್ಜು ಮತ್ತು ನಾಟಕೀಯ ಬೆಳವಣಿಗೆ

ಭಾರಿ ಸಂಚಲನಕ್ಕೆ ಕಾರಣವಾಗಿದ್ದ ಕೇರಳದ ನರ್ಸ್ ಸೌಮ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿ ಗೋವಿಂದಚಾಮಿಯ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿದ್ದರ ಬಗ್ಗೆ ನಿವೃತ್ತ ನ್ಯಾ.ಮಾರ್ಕಂಡೇಯ ಕಾಟ್ಜು 2011ರಲ್ಲಿ ತಮ್ಮ ಬ್ಲಾಗ್ ನಲ್ಲಿ ಟೀಕಿಸಿದ್ದರು. ಈ ಸಂಬಂಧ, ‘ಕೇಳಿಕೆಯ ಸಾಕ್ಷ್ಯ’ದ ಮೇಲೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ಟೀಕಿಸಿದ್ದರ ಬಗ್ಗೆ ಸ್ವಯಂಪ್ರೇರಿತ ನೋಟಿಸ್ ಜಾರಿಗೊಳಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಗೊಗೊಯ್, “ಬ್ಲಾಗ್‌ನಲ್ಲಿರುವ ಅಂಶಗಳಿಂದಾಗಿ ತೀರ್ಪನ್ನು ಟೀಕಿಸುವ ಬದಲು ನ್ಯಾಯಮೂರ್ತಿಗಳ ಮೇಲೆ ದಾಳಿ ನಡೆಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಹೀಗಾಗಿ, ನ್ಯಾಯಾಂಗ ನಿಂದನೆ ನೋಟಿಸ್ ನೀಡಲಾಗುತ್ತಿದೆ. ನೀವೇನಾದರೂ ಹೇಳಲು ಬಯಸುವಿರಾ?” ಎಂದು ಕೇಳಿದರು. ಆಗ ಕಾಟ್ಜು ತಮ್ಮ ಪಟ್ಟು ಬಿಡದೆ, “ನಿಮ್ಮ ಕೋರಿಕೆ ಮೇರೆಗೆ ನಾನು ಕೋರ್ಟಿಗೆ ಬಂದೆ. ಈಗ ನನ್ನನ್ನೇ ಹೀಗೆ ನಡೆಸಿಕೊಳ್ಳುತ್ತಿದ್ದೀರಿ? ಏನು ಮಾಡಬೇಕು ಎಂಬುದು ನಿಮಗೆ ಬಿಟ್ಟದ್ದು,” ಎಂದು ಆರ್ಭಟಿಸಿದ್ದರು.
ಆಗ ಭದ್ರತಾ ಅಧಿಕಾರಿಗಳನ್ನು ಕರೆದ ಗೊಗೋಯ್, “ಇವರನ್ನು ಆಚೆಗೆ ಕರೆದೊಯ್ಯಲು ಸಾಧ್ಯವೇ ನೋಡಿ,” ಎಂದು ಆದೇಶಿಸಿದ್ದರು. ಇದು ಅಲ್ಲಿ ನೆರೆದಿದ್ದ ವಕೀಲರು, ಪತ್ರಕರ್ತರ ಸಮೂಹದಲ್ಲಿ ಅಚ್ಚರಿ ಮೂಡಿಸಿತ್ತು. ಕಾಟ್ಜು ಪರ ವಕಾಲತ್ತು ವಹಿಸಿದ್ದ ಮುಕುಲ್ ರೋಹಟಗಿ, “ಬ್ಲಾಗ್‌ನಲ್ಲಿರುವ ಸಾಲುಗಳನ್ನು ಸಹಿಸಲು ಸಾಧ್ಯವಿಲ್ಲವಾದರೂ ಅವು ನ್ಯಾಯಾಂಗ ನಿಂದನೆ ಮಾಡುತ್ತಿಲ್ಲ,” ಎಂದು ಮನವರಿಕೆ ಮಾಡಿಕೊಟ್ಟಿದ್ದರು. “ಸೌಮ್ಯ ಪ್ರಕರಣದ ಕುರಿತಾಗಿ ಬ್ಲಾಗ್‌ನಲ್ಲಿರುವ ಸಾಲುಗಳಿಂದ ತೀರ್ಪಿನ ಮೇಲಿನ ಹಲ್ಲೆಯಾಗಿದೆ. ನ್ಯಾಯಮೂರ್ತಿಗಳ ಮೇಲೂ ಹಲ್ಲೆಯಾಗಿರುವುದು ಮೇಲುನೋಟಕ್ಕೆ ಸಾಬೀತಾಗುತ್ತದೆ. ಈ ಸಂಬಂಧ ನಿಮ್ಮ ಪ್ರತಿಕ್ರಿಯೆ ಏನು?” ಎಂದು ನ್ಯಾ.ಗೊಗೋಯ್ ಕೇಳಿದ್ದರು.

ಎನ್‌ಆರ್‌ಸಿಯೊಂದಿಗೆ ನಂಟು

ಅಸ್ಸಾಂನಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಪೌರತ್ವ ನೋಂದಣಿ ( ಎನ್‌ಆರ್‌ಸಿ ) ಸಂಬಂಧದ ವಿಚಾರಣೆಯನ್ನು ಅಸ್ಸಾಂ ಮೂಲದ ಗೊಗೊಯ್ ನಡೆಸಬಾರದು ಎಂದು ಗುವಾಹಟಿಯ ಹಿರಿಯ ವಕೀಲರೊಬ್ಬರು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಅರ್ಜಿ ಸಲ್ಲಿಸಿದರು. ಗೊಗೊಯ್ ಮತ್ತು ಆರ್ ಎಫ್ ನಾರಿಮನ್ ಅವರಿದ್ದ ಪೀಠ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿತ್ತು. ಪತ್ರ ಬರೆದಿದ್ದ ವಕೀಲ ಪ್ರದೀಪ್ ದತ್ತ ಚೌಧರಿ, ಗೊಗೋಯ್ ಅವರು ಪ್ರಕರಣ ಆಲಿಸುತ್ತಿರುವುದರಿಂದ, “ತೀರ್ಪು ಹೊರಬಿದ್ದರೆ ಅದು ಉಳಿದ ಸಮುದಾಯಗಳಲ್ಲಿ ಸಂದೇಹಕ್ಕೆ ಕಾರಣವಾಗಬಹುದು. ಪೌರತ್ವ ನೋಂದಣಿ ಎಂಬುದು ಅಸ್ಸಾಂನಲ್ಲಿರುವ ಹಲವು ಸಮುದಾಯಗಳ ನಡುವೆ ಅಪನಂಬಿಕೆಗೆ ಕಾರಣವಾಗಿದೆ. ಅಸ್ಸಾಂ ಯಾವಾಗ ಬೇಕಾದರೂ ಸ್ಫೋಟಿಸುವ ಅಗ್ನಿಪರ್ವತ,” ಎಂದು ಅವರು ಪತ್ರದಲ್ಲಿ ಹೇಳಿದ್ದರು.

ಮಾಜಿ ಸಿಎಂಗಳಿಗೆ ಅಧಿಕೃತ ನಿವಾಸ ಒದಗಿಸುವ ವಿವಾದ

2016ರಲ್ಲಿ ಉತ್ತರ ಪ್ರದೇಶ ಸರ್ಕಾರವು ಮಾಜಿ ಮುಖ್ಯಮಂತ್ರಿಗಳಿಗೆ ಅಧಿಕೃತ ನಿವಾಸಗಳನ್ನು ಕಾಯಂ ಆಗಿ ಬಿಟ್ಟುಕೊಡುವ ಉದ್ದೇಶದಿಂದ ಕಾಯ್ದೆಯೊಂದಕ್ಕೆ ತಿದ್ದುಪಡಿ ತಂದಿತು. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಆಗ ಗೊಗೊಯ್, “ಇಂತಹ ಕಾಯ್ದೆಗಳು ಸಾರ್ವಜನಿಕ ಸೇವೆಯಲ್ಲಿ ಇರುವವರ ಹೊಸ ವರ್ಗವೊಂದನ್ನು ಸೃಷ್ಟಿಸುವ ಸಾಧ್ಯತೆ ಇದ್ದು, ಇದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ,” ಎಂದು ತೀರ್ಪು ನೀಡಿದ್ದರು.

ಕಾನೂನು ಸುಧಾರಣೆ

ವಕೀಲ ಸಮುದಾಯದ ಶ್ಲಾಘನೆಗೆ ಕಾರಣವಾದ ಎರಡು ತೀರ್ಪುಗಳನ್ನು ಗೊಗೊಯ್ ನೀಡಿದರು. 2017ರಲ್ಲಿ ಹಿರಿಯ ವಕೀಲರು ಎಂದು ಪರಿಗಣಿಸುವ ಪರೀಕ್ಷೆಯಲ್ಲಿ ವಸ್ತುನಿಷ್ಠ ಮಾದರಿ ಪ್ರಶ್ನೆಗಳನ್ನು ಕೇಳಬೇಕು ಎಂದು ಅವರು ನೀಡಿದ ತೀರ್ಪು ಈಗಲೂ ಮೆರಿಟ್ ಆಧಾರಿತ ಆಯ್ಕೆಗೆ ಒತ್ತು ನೀಡುವ ಪ್ರಕ್ರಿಯೆಗೆ ಮಹತ್ವ ನೀಡಿದೆ. ಅಲ್ಲದೆ ಅವರು, ಸುಪ್ರೀಂ ಕೋರ್ಟ್‌ನಲ್ಲಿ ಮಕ್ಕಳ ಪಾಲನಾ ಸೌಲಭ್ಯ ಇರಬೇಕು ಎಂದು ಮಹತ್ವದ ಆದೇಶ ಹೊರಡಿಸಿದ್ದರು.

ಆರುಷಿ ತಲ್ವಾರ್ ಹತ್ಯೆ ಪ್ರಕರಣ, ದಯಾನಿಧಿ ಮಾರನ್ ಮತ್ತು ಕಲಾನಿಧಿ ಮಾರನ್ ಕುರಿತ ಪ್ರಕರಣಗಳನ್ನು ಕೂಡ ಗೊಗೊಯ್ ನಿರ್ವಹಿಸಿದ್ದಾರೆ.

ರಂಜನ್ ಗೊಗೊಯ್ ಹಿನ್ನೆಲೆ

ಅಸ್ಸಾಂನ ದಿಬ್ರೂಗಢದಲ್ಲಿ ಸುಪ್ರಸಿದ್ಧ ಕುಟುಂಬವೊಂದರಲ್ಲಿ 1954ರ ನ.18ರಂದು ಜನಿಸಿದವರು ರಂಜನ್ ಗೊಗೋಯ್. ಅವರ ಸಹೋದರ ನಿವೃತ್ತ ಏರ್ ಮಾರ್ಷಲ್ ಅಂಜನ್ ಕುಮಾರ್ ಗೊಗೊಯ್. ತಂದೆ ಕೇಶವ ಚಂದ್ರ ಗೊಗೊಯ್, 1982ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದಿಂದ ಅಸ್ಸಾಂನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. 1978ರಲ್ಲಿ ತಂದೆಯಂತೆಯೇ ವಕೀಲಿ ವೃತ್ತಿ ಆರಂಭಿಸಿದ ರಂಜನ್, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗುವ ಮುನ್ನ ಪಂಜಾಬ್, ಹರ್ಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. 2012ರ ಏ.23ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದರು. ಬಾರ್ ಅಸೋಸಿಯೇಷನ್ ಅಧ್ಯಕ್ಷ ಅತುಲ್ ಚಂದ್ರ ಬುರಗೋಹಿಯಾ, “ಭಿನ್ನವಾಗಿ ಚಿಂತಿಸಬಲ್ಲ ನ್ಯಾಯಾಧೀಶರು ಅವರು,” ಎಂದಿದ್ದರು. “ಒಂದೇ ರೀತಿಯ ವಿವಿಧ ಪ್ರಕರಣಗಳನ್ನು ಒಗ್ಗೂಡಿಸಿ, ಅವುಗಳನ್ನು ಒಟ್ಟಿಗೇ ಆಲಿಸಿ, ಒಂದೇ ಬಾರಿಗೆ ತೀರ್ಪು ನೀಡುವ ಮೂಲಕ ಒಂದೇ ಬಾರಿಗೆ ಪ್ರಕರಣಗಳನ್ನು ಮುಕ್ತಾಯಗೊಳಿಸುವವರು ಗೊಗೋಯ್,” ಎಂಬ ಹೆಗ್ಗಳಿಕೆಯು ನ್ಯಾಯಾಂಗ ವಲಯದಲ್ಲಿ ಗೊಗೊಯ್ ಅವರ ಕುರಿತು ಇದೆ.

ಲೇಖಕರು, ಹಿರಿಯ ನ್ಯಾಯವಾದಿ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More