ವಿಶ್ವ ಹಿಂದೂ ಸಮಾವೇಶದಿಂದ ದೂರ ಸರಿದ ಹಿಂದೂ ರಾಜಕಾರಣಿಗಳು!

ಶಿಕಾಗೋದಲ್ಲಿ ಸಂಘಪರಿವಾರ ಆಯೋಜಿಸಿದ್ದ ಸಮಾವೇಶದಲ್ಲಿ ಅಮೆರಿಕದ ಭಾರತೀಯ ಮೂಲದ ನಾಯಕರು ಭಾಗವಹಿಸಲಿಲ್ಲ. ಅಲ್ಲದೆ, ದ್ವೇಷ ತೊರೆದು ಅಸಲಿ ಹಿಂದೂ ಧರ್ಮ ಪಾಲಿಸುವಂತೆ ಆಯೋಜಕರಿಗೆ ಕಿವಿಮಾತು ಹೇಳಿದರು! ಈ ಕುರಿತ ‘ನ್ಯೂಸ್‌ ಕ್ಲಿಕ್’ ವರದಿಯ ಆಯ್ಧಭಾಗ ಇಲ್ಲಿದೆ

ಹಿಂದುತ್ವದ ರಾಜಕಾರಣ ಮತ್ತು ದ್ವೇಷದ ನೆಲೆಯ ಮೇಲೆ ಅದು ನಿಂತಿದೆ ಎಂಬುದನ್ನು ಅರಿತ ಮೇಲೆ ಅಮೆರಿಕದ ಹಲವು ರಾಜಕಾರಣಿಗಳು ಶಿಕಾಗೋದಲ್ಲಿ ಸೆ.೭ರಿಂದ ೯ರವರೆಗೆ ನಡೆದ ವರ್ಲ್ಡ್ ಹಿಂದೂ ಕಾಂಗ್ರೆಸ್‌ನಿಂದ (ವಿಶ್ವ ಹಿಂದೂ ಸಮಾವೇಶ) ಹಿಂದೆ ಸರಿದರು. ಸ್ವಾರಸ್ಯವೆಂದರೆ, ತಾವು ಮೂರು ದಿನಗಳ ಈ ಸಮಾವೇಶದಲ್ಲಿ ಭಾಗವಹಿಸುತ್ತಿಲ್ಲ ಎಂದು ಅದರಿಂದ ಹಿಂಜರಿದ ಪ್ರಮುಖರು ಪದೇಪದೇ ಸ್ಪಷ್ಟನೆ ನೀಡುತ್ತಿದ್ದರೂ, ಆಯೋಜಕರು ಅವರ ಚಿತ್ರ ಮತ್ತು ಹೆಸರುಗಳನ್ನು ತಮ್ಮ ಪ್ರಚಾರ ವೀಡಿಯೋಗಳಲ್ಲಿ ಬಳಸುವುದನ್ನು ಮಾತ್ರ ಕೈಬಿಡಲಿಲ್ಲ!

ಅಮೆರಿಕ ಸಂಸತ್ತಿನ ಕೆಳಮನೆಯ ಸಂಸದೆ ತುಳಸಿ ಗಬಾರ್ಡ್ ಅವರು ಸೆ.೪ರಂದು ಸಮಾವೇಶದಲ್ಲಿ ತಾವು ಭಾಗವಹಿಸದೆ ಇರಲು ನಿರ್ಧರಿಸಿರುವುದಾಗಿ ಹೇಳಿದ್ದರು. “ಭಾರತದ ಪ್ರತ್ಯೇಕತಾ ರಾಜಕಾರಣದ ಭಾಗವಾಗಿ ಅಮೆರಿಕದಲ್ಲಿ ನಡೆಯುತ್ತಿರುವ ಈ ಸಮಾವೇಶದಲ್ಲಿ ನೈತಿಕ ನಿಲುವಿನ ಕಾರಣದಿಂದಾಗಿ ಭಾಗವಹಿಸುತ್ತಿಲ್ಲ,” ಎಂದು ಸ್ಪಷ್ಟವಾಗಿ ಹೇಳಿದ್ದರು.

“ಸಮಾಜವನ್ನು ಒಡೆಯುವ ರಾಜಕೀಯ ಅಜೆಂಡಾ ಹೊಂದಿರುವ ಅಮೆರಿಕದಲ್ಲಿನ ಯಾವುದೇ ಬಗೆಯ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಉದ್ಭವವಾಗುವ ನೈತಿಕ ಪ್ರಶ್ನೆಗಳು ಮತ್ತು ಸಮಸ್ಯೆಗಳ ಹಿನ್ನೆಲೆಯಲ್ಲಿ ನಾನು ವರ್ಲ್ಡ್ ಹಿಂದೂ ಕಾಂಗ್ರೆಸ್‌ನ ಗೌರವಾಧ್ಯಕ್ಷ ಸ್ಥಾನ ಸೇರಿದಂತೆ ಇಡೀ ಕಾರ್ಯಕ್ರಮದಿಂದ ಗೌರವಯುತವಾಗಿ ದೂರ ಉಳಿಯುತ್ತಿದ್ದೇನೆ,” ಎಂದು ಗಬಾರ್ಡ್ ಪತ್ರಿಕೋಗೋಷ್ಠಿಯಲ್ಲಿ ಹೇಳಿದ್ದರು.

ಸಂಘಟಕರು ಹೇಳಿಕೊಂಡಂತೆ, ಈ ಜಾಗತಿಕ ಸಮಾವೇಶವು, “ಹಿಂದೂಗಳು ಪರಸ್ಪರ ಸೇರಿ, ಆಲೋಚನೆಗಳನ್ನು ಹಂಚಿಕೊಂಡು, ಪ್ರೇರಿತರಾಗಿ ಪರಸ್ಪರರ ಮೂಲಕ ಒಳ್ಳೆಯದನ್ನು ಬೆಳೆಸುವ ಜಾಗತಿಕ ವೇದಿಕೆ.” ಸಂಘಪರಿವಾರದ ಸಾಗರೋತ್ತರ ಸಹಸಂಸ್ಥೆಗಳಾದ ವಿಶ್ವ ಹಿಂದೂ ಪರಿಷತ್ ಆಫ್ ಅಮೆರಿಕ (ವಿಎಚ್‌ಪಿಎ), ವರ್ಲ್ಡ್ ಹಿಂದೂ ಕೌನ್ಸಿಲ್ ಆಫ್ ಅಮೆರಿಕ, ಹಿಂದೂ ಸ್ವಯಂಸೇವಕ್ ಸಂಘ (ಎಚ್‌ಎಸ್‌ಎಸ್), ಹಿಂದೂ ವಾಲೆಂಟೀರ್ ಕಾರ್ಪ್ಸ್ ಮತ್ತಿತರ ಸಂಘಟನೆಗಳು ಈ ಸಮಾವೇಶವನ್ನು ಆಯೋಜಿಸಿದ್ದವು. ಸ್ವಾಮಿ ವಿವೇಕಾನಂದರು ಶಿಕಾಗೋದ ಜಾಗತಿಕ ಧಾರ್ಮಿಕ ಮಹಾಸಮ್ಮೇಳನದಲ್ಲಿ ಭಾಷಣ ಮಾಡಿದ ೧೨೫ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿಯೂ ಈ ಸಮಾವೇಶ ನಡೆಸಲಾಗುತ್ತಿದೆ ಎಂದೂ ಹೇಳಲಾಗಿತ್ತು.

ಆದರೆ, ಶಿಕಾಗೋ ಸಿಟಿ ಕೌನ್ಸಿಲ್ ಸದಸ್ಯ ಅಮೆಯಾ ಪವಾರ್, “ನಾನು ಹೆಮ್ಮೆಯ ಹಿಂದೂ ಮತ್ತು ಶಿಕಾಗೋ ಸಿಟಿ ಕೌನ್ಸಿಲ್‌ಗೆ ಆಯ್ಕೆಯಾಗಿರುವ ಮೊದಲ ಇಂಡಿಯನ್ ಅಮೆರಿಕನ್. ಆದರೆ, ಮತೀಯವಾದ, ತಾರತಮ್ಯ, ಇಸ್ಲಮಾಫೋಬಿಯಾ (ಮುಸ್ಲಿಮರ ಭೀತಿ) ಮತ್ತು ಹಿಂದೂ ರಾಷ್ಟ್ರೀಯವಾದವನ್ನು ಬೆಂಬಲಿಸುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಹಿಂದೂ ಸಮಾವೇಶಕ್ಕೆ ಆಹ್ವಾನಿಸಿದ್ದಾರೆ ಎಂಬುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇದು ನಾವಲ್ಲ (ಹಿಂದೂಗಳು). ಇದರಿಂದ ನನಗಂತೂ ತೀರಾ ಬೇಸರವಾಗಿದೆ,” ಎಂದು ಟ್ವೀಟ್ ಮಾಡಿದ್ದಾರೆ.

ಸಮಾವೇಶದಿಂದ ದೂರ ಉಳಿಯುವಂತೆ ಸಮಾವೇಶ ವಿರೋಧಿ ಹೋರಾಟಗಾರರು ಒತ್ತಾಯಿಸಿದರೂ, ಅದರಲ್ಲಿ ಪಾಲ್ಗೊಂಡ ಜನಪ್ರತಿನಿಧಿ ಅಮೆಯಾ, ಸಮಾವೇಶದಲ್ಲಿ ಭಾಗಿಯಾದವರು ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ಹಿಂದೂ ಧರ್ಮಕ್ಕೆ, ಅವರು ಹೇಳಿದ ತತ್ವಕ್ಕೆ ಬದ್ಧರಾಗಿರಬೇಕು ಮತ್ತು ಉಳಿದ ಎಲ್ಲ ಬಗೆಯ ದ್ವೇಷಪೂರಿತ ಹಿಂದುತ್ವದ ವಿಧಗಳನ್ನು ತಿರಸ್ಕರಿಸಬೇಕು ಎಂದು ಕರೆ ನೀಡಿದರು.

“ನಾನು ಈ ಸಮಾವೇಶದಲ್ಲಿ ಭಾಗವಹಿಸಲು ನಿರ್ಧರಿಸಿದ್ದೇ, ನನಗೆ ಗೊತ್ತಿರುವ ಮತ್ತು ಅತ್ಯುನ್ನತವಾದ ಹಿಂದೂ ಧರ್ಮದ ಬಗ್ಗೆ ಮತ್ತೊಮ್ಮೆ ಖಚಿತಪಡಿಸುವ ಕಾರಣಕ್ಕಾಗಿ. ನಾನು ಪ್ರತಿನಿಧಿಸುವ ಜನಗಳನ್ನೂ ಸೇರಿ, ಎಲ್ಲ ಧರ್ಮ, ನಂಬಿಕೆಗಳನ್ನು ಮೀರಿ ಎಲ್ಲರನ್ನೂ ಒಪ್ಪಿಕೊಳ್ಳುವ ಮತ್ತು ಅಪ್ಪಿಕೊಳ್ಳುವ ಮೇರು ಧರ್ಮ ಹಿಂದೂ ಧರ್ಮ ಎಂಬುದನ್ನು ಹೇಳುವ ಸಲುವಾಗಿ ನಾನಿಲ್ಲಿ ಬಂದಿರುವೆ. ಅಂತಹ ಉದಾತ್ತ ಮೌಲ್ಯ ಹೊರತುಪಡಿಸಿದ ಧರ್ಮದ ಉಳಿದೆಲ್ಲ ವಿಧಗಳನ್ನು ತಿರಸ್ಕರಿಸಬೇಕಿದೆ. ಒಟ್ಟಾರೆ ಹೇಳಬೇಕೆಂದರೆ, ಸ್ವಾಮಿ ವಿವೇಕಾನಂದರ ಬೋಧನೆಯನ್ನು ಮತ್ತೊಮ್ಮೆ ಸರಿಯಾಗಿ ಮನನ ಮಾಡಿಕೊಳ್ಳೋಣ,” ಎಂದು ಶಿಕಾಗೋ ಸಂಸದ ರಾಜಾ ಕೃಷ್ಣಮೂರ್ತಿ ಹೇಳಿರುವುದಾಗಿ ‘ದಿ ಹಿಂದೂ’ ವರದಿ ಹೇಳಿದೆ.

ಹಿಂದೂ ಫ್ಯಾಸಿಸಂ ನಿಲ್ಲಲಿ

ಮೂರು ದಿನಗಳ ಈ ಹಿಂದೂ ಸಮಾವೇಶಕ್ಕೆ ಭಾರಿ ಪ್ರತಿರೋಧ ಮತ್ತು ಟೀಕೆಗಳು ವ್ಯಕ್ತವಾದವು. 'ಆರ್‌ಎಸ್‌ಎಸ್ ವಾಪಸ್ ಹೋಗು', 'ನಮ್ಮ ನಗರಕ್ಕೆ ನಿನಗೆ ಸ್ವಾಗತವಿಲ್ಲ' ಎಂಬ ಪ್ಲೆಕಾರ್ಡ್ ಹಿಡಿದು ಘೋಷಣೆ ಕೂಗಿ ಪ್ರತಿಭಟನಾಕಾರರು ವಿರೋಧ ವ್ಯಕ್ತಪಡಿಸಿದರು. ವಿಪರ್ಯಾಸ ಎಂದರೆ, 'ಹಿಂದೂ ಪುನರುತ್ಥಾನಕ್ಕೆ ಸಾಮುದಾಯಿಕ ಪ್ರಯತ್ನ' ಎಂಬ ವಿಷಯದ ಕುರಿತು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಸಂವಾದ ನಡೆಸಿಕೊಡುವ ಕೆಲವೇ ನಿಮಿಷಗಳ ಮುನ್ನ ಈ ಘೋಷಣೆಗಳು ಜೋರಾಗಿ ಮೊಳಗಿದವು.

ಸಮಾವೇಶದ ವಿರುದ್ದ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಸಮಾವೇಶದಲ್ಲಿ ಭಾಗಿಯಾದ ಕೆಲವರು ದೈಹಿಕ ಹಲ್ಲೆ ನಡೆಸಲು ಪ್ರಯತ್ನಿಸಿದರು. ಆದರೆ, ಇತರ ಕೆಲವರು ಅವರನ್ನು ತಡೆದು ಪರಿಸ್ಥಿತಿ ತಿಳಿಗೊಳಿಸಿದರು.

ಇದನ್ನೂ ಓದಿ : ವಿಶ್ವ ಹಿಂದೂ ಪರಿಷತ್‌ ಮೇಲೆ ₹1,400 ಕೋಟಿ ದೇಣಿಗೆ ನುಂಗಿದ ಆರೋಪ

ಈ ಸಮಾವೇಶದ ವಿರುದ್ಧ ಆಂದೋಲನ ರೂಪಿಸಿದ್ದ ‘ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಒಕ್ಕೂಟ (ಸಿಡಿಸಿಡಿ)‘ ಎಂಬ ನಾಗರಿಕ ಹಕ್ಕು ಸಂಘಟನೆ, “ಅಲ್ಪಸಂಖ್ಯಾತರು, ವಿಚಾರವಾದಿಗಳು, ಮಾನವ ಹಕ್ಕು ಹೋರಾಟಗಾರರು ಮತ್ತು ನಾಗರಿಕ ಸ್ವಾತಂತ್ರ್ಯ ಪರ ಇರುವ ಕಾರ್ಯಕರ್ತರ ವಿರುದ್ಧ ಜನಾಂಗೀಯ ಹತ್ಯೆಯ, ಸಾಮೂಹಿಕ ನಾಶದಂತಹ ತೀವ್ರ ಹಿಂಸೆಗೆ ಕುಮ್ಮಕ್ಕು ನೀಡುತ್ತಿರುವ, ದ್ವೇಷ ಹಬ್ಬಿಸುತ್ತಿರುವ ಸಂಘಟನೆಗಳು ಮತ್ತು ವ್ಯಕ್ತಿಗಳಿಗೆ ಅಮೆರಿಕದಲ್ಲಿ ಸಾರ್ವಜನಿಕ ವೇದಿಕೆ ಕಲ್ಪಿಸಿಕೊಡುವ ಹಿಂದುತ್ವ ಗುಂಪುಗಳ ಯತ್ನ ಅಪಾಯಕಾರಿ ಪ್ರವೃತ್ತಿ,” ಎಂದು ಖಂಡಿಸಿದೆ.

“ಫ್ಯಾಸಿಸ್ಟ್‌ವಾದಿ, ಮಹಿಳಾ ವಿರೋಧಿ, ಇಸ್ಲಾಂ ವಿರೋಧಿ, ದಲಿತ ವಿರೋಧಿ, ಜಾತಿವಾದಿ ಮತ್ತು ಸಲಿಂಗರತಿ ವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಮತ್ತು ಅಂತಹ ಚಟುವಟಿಕೆಗಳನ್ನು ಸಮರ್ಥಿಸುವ ನಿಲುವುಗಳನ್ನು ಹೊಂದಿರುವ ವ್ಯಕ್ತಿಗಳನ್ನು ಸಮಾವೇಶದಲ್ಲಿ ಮಾತನಾಡಲು ಆಹ್ವಾನಿಸಲಾಗಿದೆ,” ಎಂದು ಸಿಡಿಸಿಡಿ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

“ಹಿಂದೂ ಪುನರುತ್ಥಾನದ ಹೆಸರಿನಲ್ಲಿ ಹಿಂದೂ ಸಂಸ್ಕೃತಿಯ ಆಚರಣೆಯ ಬಹುಸಂಸ್ಕೃತಿಯ ಮುಖವಾಡ ಹೊತ್ತು, ಆರ್‌ಎಸ್‌ಎಸ್ ಮತ್ತು ಅದರ ಇತರ ಅಂಗಸಂಸ್ಥೆಗಳ ಹಿಂಸಾ ರಾಜಕಾರಣವನ್ನು ಮರೆಮಾಚುವ ಯತ್ನ ಮಾಡಲಾಗುತ್ತಿದೆ,” ಎಂದೂ ಸಂಸ್ಥೆ ಆರೋಪಿಸಿದೆ. “ಆರ್‌ಎಸ್‌ಎಸ್‌ನ ಫ್ಯಾಸಿಸ್ಟ್‌ವಾದಿ ಹಾಗೂ ಸ್ವಪ್ರತಿಷ್ಠೆಯ ದೃಷ್ಟಿಕೋನದ ಮೇಲೆ ಈ ಜಾಗತಿಕ ಹಿಂದೂ ಸಮಾವೇಶವನ್ನು ರೂಪಿಸಲಾಗಿದೆ. ಆರ್‌ಎಸ್‌ಎಸ್‌ ಎಂಬುದು ಬಲಿಲ್ಲಾ ಮತ್ತು ಅವಾನ್‌ಗಾರ್ಡಿಸ್ಟ್ ರೀತಿಯ ಇಟಲಿಯ ಫ್ಯಾಸಿಸ್ಟ್ ಸಂಘಟನೆಗಳ ಮಾದರಿಯಲ್ಲಿ ಹುಟ್ಟಿಕೊಂಡ ಒಂದು ಸಂಘಟನೆಯಾಗಿದ್ದು, ಅದಕ್ಕೆ ಯಾವುದೇ ರೀತಿಯ ಪ್ರಜಾಸತ್ತಾತ್ಮಕ ವ್ಯವಸ್ಥೆ, ನಾಗರಿಕ ಹಕ್ಕು ಮತ್ತು ಆಡಳಿತ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ,” ಎಂದೂ ಸಂಘಟನೆ ಹೇಳಿದೆ.

“ಹಿಂದುತ್ವವಾದಿ ನರೇಂದ್ರ ಮೋದಿ ಸರ್ಕಾರದ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ, ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರ ಮುಗಿಲು ಮುಟ್ಟಿವೆ. ಆಡಳಿತಾರೂಢ ಬಿಜೆಪಿ ಪಕ್ಷ ಸೇರಿದಂತೆ ಆರ್‌ಎಸ್‌ಎಸ್‌ ಮತ್ತು ಅದರ ಅಂಗಸಂಸ್ಥೆಗಳಿಗೆ ಸೇರಿದವರೇ ನೇರವಾಗಿ ಇಂತಹ ಹಿಂಸಾಕೃತ್ಯಗಳಲ್ಲಿ ಭಾಗಿಯಾದ ಮತ್ತು ಆ ಬಳಿಕ ಸರ್ಕಾರದ ಅಭಯಕ್ಕೆ ಪಾತ್ರರಾದ ಉದಾಹರಣೆಗಳೂ ಸಾಕಷ್ಟಿವೆ,” ಎಂದೂ ಸಂಘಟನೆಯು ಆರೋಪಿಸಿದೆ.

“ಹಿಂದೂ ಪುನರುತ್ಥಾನ ಎಂದು ಇಲ್ಲಿ ಹೇಳಲಾಗುತ್ತಿರುವ ಮತ್ತು ಭಾರತ ಮತ್ತು ಇತರೆಡೆ ಜನಪ್ರಿಯವಾಗಿರುವ ‘ಹಿಂದುತ್ವ’ದ ಹಿಂಸೆಗೆ ಬಲಿಯಾದವರು ಮುಖ್ಯವಾಗಿ ಮುಸ್ಲಿಮರು, ದಲಿತರು, ಶೋಷಿತ ಹಿಂದೂ ಸಮುದಾಯಗಳು, ಕ್ರೈಸ್ತರು, ಜಾತ್ಯತೀತವಾದಿಗಳು, ವಿಚಾರವಾದಿಗಳು, ಮಾನವ ಹಕ್ಕು ಹೋರಾಟಗಾರರು, ನಾಗರಿಕ ಹಕ್ಕು ಕಾರ್ಯಕರ್ತರು ಮತ್ತು ಭಾರತದ ಸದ್ಯದ ಆಡಳಿತ ಪಕ್ಷ ಮತ್ತು ಸರ್ಕಾರದ ವಿರುದ್ಧದ ಟೀಕಾಕಾರರು ಎಂಬುದು ಗಮನಾರ್ಹ,” ಎಂದೂ ಆ ಸಂಘಟನೆ ಹೇಳಿದೆ.

ಹಿಂದುತ್ವ ಮತ್ತು ಜಾಗತಿಕ ಹಿಂದೂ ಸಮಾವೇಶಕ್ಕೆ ಪ್ರೇರಣೆಯಾಗಿದ್ದ ಮತ್ತೊಬ್ಬ ವ್ಯಕ್ತಿ ಅಜಯ್‌ ಸಿಂಗ್ ಬಿಶ್ತ್ ಅಲಿಯಾಸ್ ಉತ್ತರ ಪ್ರದೇಶದ ಈಗಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೂ ಆರಂಭದಲ್ಲಿ ಸಮಾವೇಶದಲ್ಲಿ ಮಾತನಾಡಲು ಆಹ್ವಾನ ನೀಡಲಾಗಿತ್ತು. ಆದರೆ, ಬಳಿಕ ಅವರ ಹೆಸರನ್ನು ದಿಢೀರ್ ಕೈಬಿಡಲಾಯಿತು. ಆಯೋಜಕರ ಆ ನಿರ್ಧಾರಕ್ಕೆ ಕಾರಣವೇನು ಎಂಬುದು ಮಾತ್ರ ನಿಗೂಢವಾಗಿಯೇ ಉಳಿಯಿತು!

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More