ಇಂದಿನ ಡೈಜೆಸ್ಟ್ | ನೀವು ಗಮನಿಸಲೇಬೇಕಾದ ಇತರ 7 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ರೈತರ ಸಾಲ ಮನ್ನಾ: 1495 ಕೋಟಿ ರು. ಬಿಡುಗಡೆ ಘೋಷಣೆ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾಗೆ ಸಂಬಂಧಿಸಿದಂತೆ ರೈತರು ಸಹಕಾರ ಸಂಘ ಹಾಗೂ ಬ್ಯಾಂಕುಗಳಲ್ಲಿ ಮಾಡಿದ ಬೆಳೆ ಸಾಲದಲ್ಲಿ 4 ಸಾವಿರ ಕೋಟಿ ರು.ಗಳ ಪೈಕಿ ಎರಡನೇ ಕಂತಿನಲ್ಲಿ 1495.65 ಕೋಟಿ ಬಿಡುಗಡೆಗೆ ಶುಕ್ರವಾರ ಆದೇಶ ಹೊರಡಿಸಿದೆ. ಅಪೆಕ್ಸ್ ಬ್ಯಾಂಕಿಗೆ ಸಹಾಯಧನ ಒದಗಿಸುತ್ತಿರುವ ಸಾಲದ ಮೇಲೆ ವಿಧಿಸಬಹುದಾದ ಷರತ್ತು ಮತ್ತು ನಿಬಂಧನೆಗಳನ್ನು ಬಾಕಿ ಇರಿಸಿ ರಾಜ್ಯ ಸರಕಾರ ಬಿಡುಗಡೆ ಮಾಡಿದೆ.

ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ಆರೋಪಿಯನ್ನು ಕೂಡಲೇ ಬಂಧಿಸಲು ಸುಪ್ರೀಂ ಸಮ್ಮತಿ

ಭಾರತೀಯ ದಂಡಸಂಹಿತೆಯ ಸೆಕ್ಷನ್ 498 ಎ ಅಡಿಯಲ್ಲಿ ದಾಖಲಾಗುವ ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ತಕ್ಷಣ ಬಂಧಿಸುವ ಕ್ರಮಕ್ಕೆ ಶುಕ್ರವಾರ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಈ ಮೂಲಕ, 2017ರಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ಸಂತ್ರಸ್ತ ಮಹಿಳೆಯ ಪತಿ ಇಲ್ಲವೇ ಆತನ ಸಂಬಂಧಿಕರ ವಿರುದ್ಧ ಸೂಕ್ತ ಪುರಾವೆಗಳು ಇಲ್ಲದೆ ಏಕಾಏಕಿ ಬಂಧಿಸುವಂತಿಲ್ಲ ಎಂಬ ತೀರ್ಪನ್ನು ಮಾರ್ಪಾಡು ಮಾಡಿದೆ. ಇದೇ ವೇಳೆ, ಮಹಿಳೆ ದಾಖಲಿಸುವ ವರದಕ್ಷಿಣೆ ಕಿರುಕುಳ ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಲು ಸ್ಥಳೀಯವಾಗಿ ಕುಟುಂಬ ಕಲ್ಯಾಣ ಸಮಿತಿ ರಚಿಸುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಮೈತ್ರಿ ಸರ್ಕಾರದ ಪತನಕ್ಕಾಗಿಯೇ ಮಾಧ್ಯಮಗಳು ಕಾಯ್ದು ಕುಳಿತಿವೆ: ದೇವೇಗೌಡ

ನೂರು ದಿನಗಳನ್ನು ಪೂರೈಸಿರುವ ಸಮ್ಮಿಶ್ರ ಸರ್ಕಾರದ ಉತ್ತಮ ಕಾರ್ಯಗಳನ್ನು ಗಮನಿಸದ ಮಾಧ್ಯಮಗಳು ಸರ್ಕಾರದ ಪತನಕ್ಕಾಗಿಯೇ ಕಾಯ್ದು ಕುಳಿತಂತಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಮಾಧ್ಯಮಗಳ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಮಲೆನಾಡು ಕ್ರೆಡಿಟ್ ಕೋಆಪರೆಟಿವ್ ಸೊಸೈಟಿಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿರುವ ಅವರು,
“ಮಾಧ್ಯಮಗಳ ಮೇಲೆ ನನಗೆ ಗೌರವವಿದೆಯಾದರೂ, ಮಾಧ್ಯಮಗಳು ಸಿಎಂ ಕುಮಾರಸ್ವಾಮಿಯವರ ಸರ್ಕಾರದ ಸಾಧನೆಗಳಿಗಿಂತ ಸರ್ಕಾರ ಉರುಳುವ ಕುರಿತಾದ ಚರ್ಚೆಗೆ ಹೆಚ್ಚು ಒತ್ತು ನೀಡುತ್ತಿವೆ, ಇದು ಅನವಶ್ಯ,” ಎಂದು ಹೇಳಿದ್ದಾರೆ.

ರುಪಾಯಿ ಕುಸಿತದ ಪರಿಣಾಮ ವಿದೇಶಿ ವಿನಿಮಯ ಮೀಸಲು ಇಳಿಕೆ

ರುಪಾಯಿ ಕುಸಿತದ ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಡಾಲರ್ ಗಳನ್ನು ಮಾರಾಟ ಮಾಡಿದ ಪರಿಣಾಮ ವಿದೇಶಿ ವಿನಿಮಯ ಮೀಸಲು 400 ಬಿಲಿಯನ್ ಡಾಲರ್ ಮಟ್ಟದಿಂದ ಕೆಳಕ್ಕೆ ಇಳಿದಿದೆ. ಸೆಪ್ಟಂಬರ್ 7 ರಂದು ಇದ್ದಂತೆ 399.28 ಬಿಲಿಯನ್ ಡಾಲರ್‌ಗೆ ಕುಸಿದಿತ್ತು. ಏಪ್ರಿಲ್ ತಿಂಗಳಲ್ಲಿ ವಿದೇಶಿ ವಿನಿಮಯ ಮೀಸಲು 426 ಬಿಲಿಯನ್ ಡಾಲರ್‌ಗಳಷ್ಟಿತ್ತು. ರುಪಾಯಿ ಸತತ ಕುಸಿತ ಆರಂಭವಾದಾಗ ಮಧ್ಯಪ್ರವೇಶಿಸಿದ ಆರ್ಬಿಐ 26 ಬಿಲಿಯನ್ ಡಾಲರ್‌ಗಳನ್ನು ಮಾರಾಟ ಮಾಡಿದೆ. ರುಪಾಯಿ ಸದ್ಯಕ್ಕೆ 72ರ ಗಡಿ ದಾಟಿದ್ದರೂ ಶುಕ್ರವಾರದ ವಹಿವಾಟಿನಲ್ಲಿ ಕೊಂಚ ಚೇತರಿಸಿಕೊಂಡಿದೆ.

ಎನ್‌ಟಿಆರ್‌ ಬಯೋಪಿಕ್ ನೂತನ ಪೋಸ್ಟರ್‌ ಬಿಡುಗಡೆ

ಕ್ರಿಷ್ ನಿರ್ದೇಶನದ ‘ಎನ್‌ಟಿಆರ್‌’ ಬಯೋಪಿಕ್‌ನ ನೂತನ ಪೋಸ್ಟರ್ ಬಿಡುಗಡೆಯಾಗಿದೆ. ಚಂದ್ರಬಾಬು ನಾಯ್ಡು ಪಾತ್ರದಲ್ಲಿ ರಾಣಾ ದಗ್ಗುಬಾಟಿ ನಟಿಸುತ್ತಿದ್ದು, ಅವರ ಲುಕ್ ರಿವೀಲ್ ಆಗಿದೆ. 1984ರ ಕಾಲಘಟ್ಟದ ಎನ್‌ಟಿಆರ್‌ ಮತ್ತು ಚಂದ್ರಬಾಬು ನಾಯ್ಡು ಸಂಭಾಷಣೆ ನಡೆಸುತ್ತಿರುವ ದೃಶ್ಯದ ಪೋಸ್ಟರ್ ಇದು. ಶೀರ್ಷಿಕೆ ಪಾತ್ರದಲ್ಲಿ ನಟಿಸುತ್ತಿರುವ ಬಾಲಕೃಷ್ಣ ಪೋಸ್ಟರ್‌ನಲ್ಲಿ ತಂದೆಯನ್ನೇ ಹೋಲುತ್ತಿದ್ದಾರೆ ಎನ್ನುವ ಮೆಚ್ಚುಗೆಯೂ ವ್ಯಕ್ತವಾಗಿದೆ. ಚಿತ್ರದಲ್ಲಿ ಬಾಲಿವುಡ್‌ ನಟಿ ವಿದ್ಯಾ ಬಾಲನ್‌ ಅವರು ಎನ್‌ಟಿಆರ್‌ ಮೊದಲ ಪತ್ನಿಯಾಗಿ ನಟಿಸುತ್ತಿದ್ದಾರೆ. ಪ್ರಕಾಶ್ ರೈ, ಕೀರ್ತಿ ಸುರೇಶ್‌, ರವಿ ಕಿಶನ್‌ ಇತರೆ ಪ್ರಮುಖ ಪಾತ್ರಧಾರಿಗಳು. ಎಂ ಎಂ ಕೀರವಾಣಿ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

ಎರಡು ವರ್ಷಗಳ ಬಳಿಕ ಏಕದಿನ ತಂಡಕ್ಕೆ ಮರಳಿದ ಡೇಲ್‌ ಸ್ಟೇನ್

ವಿಶ್ವದ ಮಾಜಿ ನಂ.೧ ವೇಗದ ಬೌಲರ್ ಡೇಲ್ ಸ್ಟೇನ್ ಎರಡು ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾ ಏಕದಿನ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಇದೇ ತಿಂಗಳು ೩೦ರಿಂದ ತವರಿನಲ್ಲಿ ನಡೆಯಲಿರುವ ಜಿಂಬಾಬ್ವೆ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಡೇಲ್ ಸ್ಟೇನ್ ವಾಪಸಾಗಿದ್ದಾರೆ. ಭುಜ ಹಾಗೂ ಕಣಕಾಲಿನ ನೋವಿನಿಂದ ತತ್ತರಿಸಿ ಹಲವಾರು ಸರಣಿಗಳಿಂದ ವಂಚಿತವಾದ ಸ್ಟೇನ್, ಟೆಸ್ಟ್ ಕ್ರಿಕೆಟ್ ಆಡಿಯೇ ವರ್ಷವಾಗಿದೆ. ಆದಾಗ್ಯೂ ಈ ಜುಲೈನಲ್ಲಿ ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್ ಸರಣಿಯಲ್ಲಿ ಸ್ಟೇನ್ ಆಡಿದ್ದರೂ, ಅಷ್ಟೇನೂ ಸದ್ದು ಮಾಡಿರಲಿಲ್ಲ. ಇನ್ನು, ಅವರು ಏಕದಿನ ಪಂದ್ಯವನ್ನಾಡಿದ್ದು ಇದೇ ಅಕ್ಟೋಬರ್‌ಗೆ ಭರ್ತಿ ಎರಡು ವರ್ಷಗಳಾಗಲಿವೆ. ೨೦೧೬ರ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸ್ಟೇನ್ ಕೊನೇ ಏಕದಿನ ಪಂದ್ಯವನ್ನಾಡಿದ್ದರು.

ಧೋನಿ ಕೈಕುಲುಕಿದ ಶೋಯೆಬ್ ಮಲಿಕ್

ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಕ್ಷಣಗಣನೆ ಶುರುವಾಗಿದೆ. ಈ ಟೂರ್ನಿಯ ಬಹುದೊಡ್ಡ ಪಂದ್ಯವೆಂದೇ ಬಿಂಬಿಸಲಾಗಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳು ಇದೇ ತಿಂಗಳು ೧೯ರಂದು ಪರಸ್ಪರ ಸೆಣಸಲಿವೆ. ದ್ವಿಪಕ್ಷೀಯ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಇಂಡೋ-ಪಾಕ್ ಸರಣಿ ನಡೆದು ವರ್ಷಗಳೇ ಉರುಳಿವೆ. ಐಸಿಸಿ ಮತ್ತು ಏಷ್ಯಾ ಕ್ರಿಕೆಟ್ ಸಮಿತಿ ಆಯೋಜಿಸುವ ಪಂದ್ಯಾವಳಿಗಳಲ್ಲಷ್ಟೇ ಭಾರತ ಮತ್ತು ಪಾಕ್ ತಂಡಗಳು ಮುಖಾಮುಖಿಯಾಗುತ್ತಿವೆ. ಪ್ರತಿಷ್ಠಿತ ಟೂರ್ನಿಗಾಗಿ ಈಗಾಗಲೇ ಏಷ್ಯಾದ ಆರು ತಂಡಗಳು ದುಬೈನಲ್ಲಿ ಬೀಡುಬಿಟ್ಟಿದ್ದು, ಶುಕ್ರವಾರ (ಸೆ ೧೪) ಟೀಂ ಇಂಡಿಯಾ ಅಭ್ಯಾಸ ನಡೆಸುತ್ತಿದ್ದ ವೇಳೆ ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಶೋಯೆಬ್ ಮಲಿಕ್, ಮಾಜಿ ನಾಯಕ ಎಂ ಎಸ್ ಧೋನಿಯ ಕೈಕುಲುಕಿದ ಸಂದರ್ಭ ಚೇತೋಹಾರಿಯಾಗಿತ್ತು. ಪ್ರತಿಯಾಗಿ ಧೋನಿ ಕೂಡ ಸ್ನೇಹದ ನಗೆಚೆಲ್ಲಿದ್ದು, ವಿಶ್ವ ಕ್ರಿಕೆಟ್ ಈ ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳ ಕಾದಾಟವನ್ನೇ ಎದುರುನೋಡುವಂತಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More