ಜೇಟ್ಲಿ ಜೊತೆಗೆ ಹಣಕಾಸು, ತನಿಖಾ ಸಂಸ್ಥೆಗಳನ್ನೂ ಸಂಕಷ್ಟಕ್ಕೆ ದೂಡಿದ ಮಲ್ಯ

ವಿಜಯ್ ಮಲ್ಯ ಪರಾರಿ ಪ್ರಕರಣ ರಾಜಕಾರಣದಲ್ಲಿ ಮತ್ತೆ ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ. ಜೊತೆಗೆ, ತನಿಖಾ ಮತ್ತು ಹಣಕಾಸು ಸಂಸ್ಥೆಗಳ ಬಗ್ಗೆಯೂ ಹಲವು ಸಂಶಯ ಹುಟ್ಟುಹಾಕಿದೆ. 2019ರ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಿರುವ ಬಿಜೆಪಿಗಂತೂ ಮಲ್ಯ ಪ್ರಕರಣ ತಲೆನೋವಾಗಿ ಪರಿಣಮಿಸಲಿದೆ

ಬಹುಕೋಟಿ ಹಣ ವಂಚನೆಯ ಆರೋಪಿ ವಿಜಯ್ ಮಲ್ಯ ವಿಚಾರವೀಗ ಕೇಂದ್ರ ಹಣಕಾಸು ಸಚಿವರಲ್ಲದೆ, ಸಿಬಿಐ ಮತ್ತು ಎಸ್‌ಬಿಐ ಅಧಿಕಾರಿಗಳನ್ನೂ ಸಂಕಷ್ಟಕ್ಕೆ ಸಿಲುಕಿಸಿದೆ. “ಭಾರತ ತೊರೆಯುವುದಕ್ಕೂ ಮುನ್ನ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರನ್ನು ಭೇಟಿಯಾಗಿದ್ದೆ,” ಎಂಬ ವಿಜಯ್‌ ಮಲ್ಯ ಹೇಳಿಕೆ ರಾಷ್ಟ್ರ ರಾಜಕಾರಣದಲ್ಲಿ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿತ್ತು. ಮಲ್ಯ-ಜೇಟ್ಲಿ ಭೇಟಿಯ ಬಗೆಗಿನ ಚರ್ಚೆಗಳು ವಿಭಿನ್ನ ರೂಪ ಪಡೆದುಕೊಳ್ಳುತ್ತಿದ್ದು, ಹಲವು ವಿವಾದಗಳನ್ನೂ ಹುಟ್ಟುಹಾಕಿದೆ.

2015ರಲ್ಲಿ ಹೊರಡಿಸಿದ್ದ ಲುಕ್‌ಔಟ್‌ ಸರ್ಕ್ಯುಲರ್‌ನಲ್ಲಿ (ತನಿಖೆ ಎದುರಿಸುತ್ತಿರುವ ವ್ಯಕ್ತಿಯ ಚಟುವಟಿಗಳ ಮೇಲೆ ನಿಗಾ ವಹಿಸುವ ಆದೇಶ) ಆದ ಬದಲಾವಣೆಯಿಂದ ಮಲ್ಯ ಅವರು ದೇಶ ತೊರೆಯಲು ಸಾಧ್ಯವಾಯಿತು ಎಂದು ಸಿಬಿಐ ಹೇಳಿಕೆ ನೀಡಿದೆ. ಲುಕ್‌ಔಟ್‌ ಸರ್ಕ್ಯುಲರ್‌ನಲ್ಲಿ ಮಲ್ಯ ಅವರ ಚಲನವಲನಗಳ ಮೇಲೆ ಕಣ್ಣಿಡುವ ಬಗ್ಗೆ ಸೂಚಿಸಲಾಗಿತ್ತೇ ಹೊರತು ಬಂಧಿಸುವ ಬಗ್ಗೆ ಯಾವುದೇ ಆದೇಶವಿರಲಿಲ್ಲ. ಕಾರಣ, ಮಲ್ಯ ಅವರು ಕರ್ನಾಟಕ ಹೈಕೋರ್ಟ್‌ ವಿಚಾರಣೆ ಸೇರಿದಂತೆ ಸಿಬಿಐ ತನಿಖೆಗೆ ಸಹಕರಿಸುತ್ತಿದ್ದರು. ಮೇಲಾಗಿ, ರಾಜ್ಯಸಭಾ ಸದಸ್ಯರಾಗಿದ್ದ ಕಾರಣ ಅವರ ಮೇಲೆ ವಿದೇಶಕ್ಕೆ ತೆರಳದಂತೆ ಯಾವುದೇ ವಾರಂಟ್‌ ಜಾರಿಗೊಳಿಸಿರಲಿಲ್ಲ ಎಂದೂ ಸಿಬಿಐ ತಿಳಿಸಿದೆ.

ಸಿಬಿಐ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಪ್ರಧಾನಿ ಮೋದಿ ಗಮನಕ್ಕೆ ತರದೆ ಸಿಬಿಐ ಮಲ್ಯ ಮೇಲಿನ ಲುಕ್‌ಔಟ್‌ ಸರ್ಕ್ಯುಲರ್‌ ಅನ್ನು ಸಡಿಲಗೊಳಿಸಿರಲಾರದು ಎಂದು ಟೀಕಿಸಿದ್ದಾರೆ. “ಪ್ರಧಾನಿ ಮೋದಿ ಅವರ ಒಪ್ಪಿಗೆ ಇಲ್ಲದೆ ಉದ್ಯಮಿ ವಿಜಯ್‌ ಮಲ್ಯ ಅವರ ಲುಕ್‌ಔಟ್‌ ಸರ್ಕ್ಯುಲರ್‌ ಅನ್ನು ಬದಲಿಸಲು ಸಾಧ್ಯವಿಲ್ಲ. ವಿಜಯ್‌ ಮಲ್ಯ ವಿರುದ್ಧ ‘ಬಂಧನ’ದ ಸರ್ಕ್ಯುಲರ್ ಜಾರಿ ಮಾಡುವ ಬದಲು ‘ಮಾಹಿತಿ’ ನೀಡುವ ನೋಟಿಸ್‌ ಅನ್ನು ಸಿಬಿಐ ಹೊರಡಿಸಿತ್ತು. ಸಿಬಿಐ ಸಂಸ್ಥೆಯು ಪ್ರಧಾನಿ ಅವರಿಗೆ ನೇರವಾಗಿ ವರದಿ ಸಲ್ಲಿಸುತ್ತದೆ. ಮಲ್ಯ ಪ್ರಕರಣವು ಪ್ರತಿಷ್ಠಿತ ಮತ್ತು ವಿವಾದಾತ್ಮಕವಾಗಿದ್ದು, ಪ್ರಧಾನಿಯವರ ಒಪ್ಪಿಗೆ ಇಲ್ಲದೆ ಲುಕ್ಔಟ್‌ ನೋಟಿಸ್‌ನಲ್ಲಿ ಪರಿವರ್ತನೆ ಮಾಡಲು ಸಾಧ್ಯವೇ ಇಲ್ಲ,” ಎಂದು ಟ್ವೀಟ್‌ ಮೂಲಕ ರಾಹುಲ್‌ ಹರಿಹಾಯ್ದಿದ್ದಾರೆ.

ಇದೇ ವೇಳೆ, ಕಾಂಗ್ರೆಸ್‌ ಹಿರಿಯ ಸಂಸದ ಪಿ ಎಲ್‌ ಪೂನಿಯಾ, ವಿಜಯ್‌ ಮಲ್ಯ ದೇಶ ತೊರೆಯುವುದಕ್ಕೂ ಮುನ್ನ ಜೇಟ್ಲಿ ಭೇಟಿ ಮಾಡಿ 15-20 ನಿಮಿಷಗಳ ಕಾಲ ಚರ್ಚೆ ನಡೆಸಿದ್ದನ್ನು ಗಮನಿಸಿದ್ದಾಗಿ ತಿಳಿಸಿದ್ದಾರೆ. “2016ರ ಮಾ.2ರಂದು ಮಲ್ಯ ಅವರು ದೇಶ ತೊರೆದ ಬಗೆಗಿನ ವರದಿಗಳು ಮಾ.3ರಂದು ಮಾಧ್ಯಮಗಳಲ್ಲಿ ಪ್ರಸಾರವಾಗತೊಡಗಿದವು. ವಿಜಯ್‌ ಮಲ್ಯ ದೇಶದಿಂದ ಪರಾರಿ ಆಗುವುದಕ್ಕೂ ಎರಡು ದಿನಗಳ ಮುಂಚೆ ಸಂಸತ್‌ ಭವನದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರನ್ನು ಭೇಟಿ ಮಾಡಿದ ವಿಚಾರವನ್ನು ಈ ಹಿಂದೆಯೇ ಮಾಧ್ಯಮಗಳಿಗೆ ತಿಳಿಸಿದ್ದೆ. ಇದಕ್ಕೆ ಸಿಸಿ ಟಿವಿ ಕ್ಯಾಮರಾಗಳು ಸಾಕ್ಷಿಯಾಗಿವೆ. ಒಂದು ವೇಳೆ ನಾನು ಹೇಳಿದ್ದು ಸುಳ್ಳಾದರೆ ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ,” ಎಂದಿದ್ದಾರೆ.

ಪೂನಿಯಾ ಹೇಳಿಕೆಯನ್ನು ಉಲ್ಲೇಖಿಸಿರುವ ರಾಹುಲ್‌ ಗಾಂಧಿ, “ಪ್ರಧಾನಿ ಮೋದಿ ಮತ್ತು ಅರುಣ್‌ ಜೇಟ್ಲಿ ಅವರ ಸಹಕಾರವಿಲ್ಲದೆ ಮಲ್ಯ ದೇಶದಿಂದ ಪರಾರಿಯಾಗಲು ಸಾಧ್ಯವಾಗುತ್ತಿರಲಿಲ್ಲ. ಇದು ಪೂರ್ವನಿಯೋಜಿತ ಘಟನೆಯಾಗಿದ್ದು, ಜೇಟ್ಲಿ-ಮಲ್ಯ ನಡುವೆ ಕೆಲ ಒಪ್ಪಂದಗಳಾಗಿವೆ. ಜೇಟ್ಲಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು,” ಎಂದು ಒತ್ತಾಯಿಸಿದ್ದಾರೆ.

ಈ ಎಲ್ಲ ಬೆಳವಣಿಗಳ ನಡುವೆ, ಸುಪ್ರೀಂ ಕೋರ್ಟ್‌ ನ್ಯಾಯವಾದಿ ದುಷ್ಯಂತ್‌ ದವೆ ಅವರು, ಮಲ್ಯ ಪರಾರಿಯಾಗುವುದಕ್ಕೂ 72 ಗಂಟೆಗಳ ಮುನ್ನ ಎಸ್‌ಬಿಐ (ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ) ಪ್ರಮುಖ ಅಧಿಕಾರಿಗಳು ತಮ್ಮನ್ನು ಭೇಟಿಯಾದ ಸಂದರ್ಭವನ್ನು ‘ಇಂಡಿಯಾ ಟುಡೇ’ಗೆ ವಿವರಿಸಿದ್ದಾರೆ. ತಮ್ಮ ಬ್ಯಾಂಕಿನಿಂದ ಸಾವಿರಾರು ಕೋಟಿ ರು. ಸಾಲ ತೆಗೆದುಕೊಂಡಿರುವ ಉದ್ಯಮಿ ವಿಜಯ್‌ ಮಲ್ಯ ದೇಶದಿಂದ ಪರಾರಿಯಾಗುವ ಆತಂಕವನ್ನು ಎಸ್‌ಬಿಐ ಅಧಿಕಾರಿಗಳು ತಮ್ಮ ಮುಂದೆ ವ್ಯಕ್ತಪಡಿಸಿದ್ದರು ಎಂದಿದ್ದಾರೆ. “ಎಸ್‌ಬಿಐ ಅಧಿಕಾರಿಗಳ ಆಂತಕದ ಹಿನ್ನೆಲೆಯಲ್ಲಿ, ಮಲ್ಯ ದೇಶದಿಂದ ಹೊರಹೋಗದಂತೆ ಆದೇಶ ಹೊರಡಿಸಲು ತುರ್ತಾಗಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿಕೊಳ್ಳುವಂತೆ ಎಸ್‌ಬಿಐ ಅಧಿಕಾರಿಗಳಿಗೆ ಸೂಚಿಸಿದೆ. ನನ್ನ ಸೂಚನೆಯನ್ನು ಒಪ್ಪಿಕೊಂಡಿದ್ದ ಅಧಿಕಾರಿಗಳು ಮಾರನೇ ದಿನ ಸುಪ್ರೀಂ ಕೋರ್ಟ್‌ನಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಅಧಿಕಾರಿಗಳ ನಡುವೆ ಏನೋ ನಡೆದಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ,” ಎಂದು ದುಷ್ಯಂತ್‌ ದವೆ ವಿವರಿಸಿದ್ದಾರೆ.

ಇದನ್ನೂ ಓದಿ : ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ ಜೇಟ್ಲಿ, ಮಲ್ಯ ಭೇಟಿ ವಿಚಾರ

ಈ ವಿಚಾರವಾಗಿ ‘ಇಂಡಿಯಾ ಟುಡೇ’ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ಅಂದಿನ ಎಸ್‌ಬಿಐ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಅವರು, “ಮಲ್ಯ ಪ್ರಕರಣದಲ್ಲಿ ಎಸ್‌ಬಿಐ ಅಧಿಕಾರಿಗಳು ಅಜಾಗರೂಕವಾಗಿ ವರ್ತಿಸಿಲ್ಲವೆಂದು ಮಾತ್ರ ನಾನು ಹೇಳಬಲ್ಲೆ. ಹೆಚ್ಚಿನ ಮಾಹಿತಿಗಾಗಿ ಎಸ್‌ಬಿಐ ವಕ್ತಾರರನ್ನು ಸಂಪರ್ಕಿಸಿ, ಪ್ರಸ್ತುತ ಬ್ಯಾಂಕ್‌ ಆಡಳಿತದಿಂದ ಹೇಳಿಕೆ ಪಡೆಯಬಹುದು,” ಎಂದು ತಿಳಿಸಿದ್ದಾರೆ.

ಮಲ್ಯ ಪ್ರಕರಣ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದಲ್ಲದೆ, ತನಿಖಾ ಸಂಸ್ಥೆ ಮತ್ತು ಹಣಕಾಸು ಸಂಸ್ಥೆಗಳ ಕಾರ್ಯವೈಖರಿಯ ಬಗ್ಗೆಯೂ ಹಲವು ಸಂಶಯ ಹುಟ್ಟುಹಾಕಿದೆ. 2019ರ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಿರುವ ಮೋದಿ ನೇತೃತ್ವದ ಬಿಜೆಪಿಗೆ ಮಲ್ಯ ಪ್ರಕರಣ ಹೊಸ ತಲೆನೋವಾಗಿ ಪರಿಣಮಿಸಲಿದೆ. ಇದಷ್ಟೇ ಅಲ್ಲದೆ, ಮೋದಿ ಆಡಳಿತದಲ್ಲಿ ಬಹುಕೋಟಿ ರುಪಾಯಿ ವಂಚಿಸಿ ವಿದೇಶಗಳಿಗೆ ಪರಾರಿಯಾದ ಉದ್ಯಮಿಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ವಿವಾದಗಳನ್ನು ಹುಟ್ಟುಹಾಕಲಿದ್ದಾರೆ ಎಂಬ ಚರ್ಚೆಗಳೂ ಮುನ್ನೆಲೆಗೆ ಬಂದಿವೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More