ಭೀಮ್ ಆರ್ಮಿ ಮುಖಂಡ ಆಜಾದ್ ‘ರಾವಣ’ನಾಗಲು ಬಯಸಿದ್ದೇಕೆ ಗೊತ್ತೇ?

ರಾಮಾಯಣದಲ್ಲಿ ಉಲ್ಲೇಖಿತ ಅಯೋಧ್ಯೆ ಪಟ್ಟಣವಿರುವ ಉ.ಪ್ರದೇಶದಲ್ಲಿ ಸ್ವಾತಂತ್ರ್ಯ ಸೇನಾನಿ ಚಂದ್ರಶೇಖರ ಆಜಾದ್ ಅವರ ಹೆಸರನ್ನು ಹೊತ್ತ ಭೀಮ್ ಆರ್ಮಿ ಮುಖಂಡ ಇದೀಗ ತಮ್ಮ ಹೆಸರಿನೊಂದಿಗೆ ‘ರಾವಣ’ ಎಂದು ಸೇರಿಸಿಕೊಂಡಿರುವುದು ಒಂದು ರೂಪಕವೂ ಹೌದು. ಇದರ ಹಿನ್ನೆಲೆ ಇಲ್ಲಿದೆ

ಜಾತಿ ಸಂಘರ್ಷವೊಂದರಲ್ಲಿ ಆರೋಪಿಯಾಗಿ 15 ತಿಂಗಳ ಕಾಲ ಬಂಧನದಲ್ಲಿದ್ದ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಶುಕ್ರವಾರ ನಸುಕಿನಲ್ಲಿ ಉತ್ತರ ಪ್ರದೇಶದ ಸಹರಾನ್ಪುರ ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆ ಅವರ ಬೆಂಬಲಿಗರು ಹರ್ಷೋದ್ಘಾರದೊಂದಿಗೆ ಅವರನ್ನು ಬರಮಾಡಿಕೊಂಡಿದ್ದಾರೆ. ಆಜಾದ್ ಬಿಡುಗಡೆ ಬೆನ್ನಲ್ಲೇ ಅನೇಕ ಬೆಳವಣಿಗೆಗಳು ನಡೆಯುತ್ತಿವೆ. ಸುಪ್ರೀಂ ಕೋರ್ಟ್ ಕೆಂಗಣ್ಣಿಗೆ ಗುರಿಯಾಗಬಹುದು ಎಂಬ ಕಾರಣಕ್ಕೆ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿರುವ ವಿಚಾರ. ಅದನ್ನು ಸ್ವತಃ ಆಜಾದ್ ಹೇಳಿದ್ದಾರೆ. ಅಲ್ಲದೆ, “ಯಾವುದೇ ಕ್ಷಣದಲ್ಲಿ ಮತ್ತಾವುದೋ ಪ್ರಕರಣದಲ್ಲಿ ನನ್ನನ್ನು ಬಂಧಿಸುವ ಸಾಧ್ಯತೆ ಇದೆ,” ಎಂಬ ಆತಂಕವನ್ನೂ ತೋಡಿಕೊಂಡಿದ್ದಾರೆ.

ಇದೇ ವೇಳೆ, “ಮಾಯಾವತಿ ಅವರ ವಿರುದ್ಧ ದಲಿತ ನಾಯಕನೊಬ್ಬನನ್ನು ಮುಂಚೂಣಿಗೆ ತರುವ ಉದ್ದೇಶದಿಂದ ಬಿಜೆಪಿ ಆಜಾದ್ ಅವರ ಬಿಡುಗಡೆಗೆ ಮುಂದಾಗಿದೆ; ದಲಿತ ಸಂಘಟನೆಗಳಲ್ಲಿ ಇರುವ ಭಿನ್ನಾಭಿಪ್ರಾಯಗಳನ್ನು ಬಿಜೆಪಿ ಚುನಾವಣಾ ಲಾಭಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದೆ,” ಎಂಬ ಮಾತುಗಳು ಕೇಳಿಬರುತ್ತಿವೆ. ಕಾನ್ಷಿರಾಂ ನಾಯಕತ್ವವನ್ನು ನಂಬಿ ಭೀಮ್ ಆರ್ಮಿಯನ್ನು ಕಟ್ಟಿದವರು ಆಜಾದ್. ಮಾಯಾವತಿ ವಿರುದ್ಧ ಆಗಾಗ ಗುಡುಗಿದವರು. ಬಿಜೆಪಿ ಇಬ್ಬರ ಸಮಾನ ಶತ್ರು. ಈಗ ಆಜಾದ್ ಬಿಜೆಪಿಯನ್ನು ಎಷ್ಟೇ ಟೀಕಿಸಿದರೂ ಮಾಯಾವತಿ ವಿಚಾರ ಬಂದಾಗ ಅವರು ಹೇಗೆ ವರ್ತಿಸುತ್ತಾರೆ ಎಂಬ ಪ್ರಶ್ನೆ ಇದೆ. ಹಾಗಾಗಿಯೇ, ಈ ಬಿಡುಗಡೆಯಿಂದ ಬಿಜೆಪಿಗೆ ಲಾಭವಾಗುವುದೇ ಹೆಚ್ಚು ಎನ್ನಲಾಗುತ್ತಿದೆ. ಸಹರಾನ್ಪುರ ಘಟನೆಯ ವೇಳೆ ಆಜಾದ್ ಅವರನ್ನು ಬಂಧಿಸಿದ ಉದ್ದೇಶವೇ ಅವರಿಗೆ ಜನಪ್ರಿಯತೆ ತಂದುಕೊಡುವುದಾಗಿತ್ತು ಎಂಬುದು ಬಿಎಸ್ಪಿ ವಲಯದಲ್ಲಿ ಆಗಾಗ ಕೇಳಿಬರುವ ಮಾತು.

ಪಶ್ಚಿಮ ಉತ್ತರ ಪ್ರದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ದಲಿತ ಮತದಾರರನ್ನು ಲೋಕಸಭೆ ಚುನಾವಣೆ ವೇಳೆಗೆ ತನ್ನತ್ತ ಸೆಳೆಯುವ ಉದ್ದೇಶವೂ ಬಿಜೆಪಿಗೆ ಇದೆ ಎನ್ನಲಾಗುತ್ತಿದೆ. ಹಾಗಾಗಿಯೇ, ಬಂಧನದ ಅವಧಿಗೂ ಮುನ್ನವೇ ಆಜಾದ್ ಅವರನ್ನು ಬಿಡುಗಡೆ ಮಾಡಲಾಗಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಸಂಖ್ಯೆಯಲ್ಲಿ ಗೆಲ್ಲಬೇಕಾದರೆ ಉತ್ತರ ಪ್ರದೇಶದ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸಾಕಷ್ಟು ಸ್ಥಾನಗಳನ್ನು ಪಡೆಯುವುದು ಮುಖ್ಯ. ಅಲ್ಲದೆ, ಎಸ್ಪಿ ಮತ್ತು ಬಿಎಸ್ಪಿ ಒಂದಾದರೆ ಬಿಜೆಪಿ ಭಾರಿ ತೊಂದರೆ ಅನುಭವಿಸಬೇಕಾಗುತ್ತದೆ. ಅದನ್ನೆಲ್ಲ ತಡೆಯುವ ಸಲುವಾಗಿ ಪ್ರತಿತಂತ್ರಗಳನ್ನು ಹೆಣೆಯುವಲ್ಲಿ ಅದು ಮಗ್ನವಾಗಿರುವಂತೆ ತೋರುತ್ತಿದೆ.

ಸೆರೆಮನೆಯಿಂದ ಹೊರಬರುತ್ತಿದ್ದಂತೆ ‘ಚಲಚಿತ್ರ ಅಭಿಯಾನ್’ ಜಾಲತಾಣಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಆಜಾದ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. “ಬಹಳ ಬಳಲಿದ್ದೇನೆ,” ಎನ್ನುತ್ತಲೇ ಮಾತು ಆರಂಭಿಸಿದ ಅವರು, ನಿಗದಿತ ಅವಧಿಗಿಂತ ಮೊದಲೇ ಬಿಡುಗಡೆಯಾದ ಬಗ್ಗೆ ಪ್ರತಿಕ್ರಿಯಿಸಿದ್ದು ಹೀಗೆ: “ಚುನಾವಣೆಯಲ್ಲಿ ಈ ವ್ಯಕ್ತಿಯಿಂದ ನಷ್ಟವಾಗುತ್ತದೆ ಎಂದು ಭಾವಿಸಿದ ಕೆಲವರು ನನ್ನನ್ನು ಬಂಧಿಸಿದರು. ಈಗ ಸುಪ್ರೀಂ ಕೋರ್ಟ್ ಪ್ರಶ್ನಿಸಬಹುದು ಎಂಬ ಹಿನ್ನೆಲೆಯಲ್ಲಿ ನನ್ನನ್ನು ಬಿಡುಗಡೆಗೊಳಿಸಲಾಗಿದೆ.”

“ಬಂಧನ, ಮೊಕದ್ದಮೆ, ಮರಣದಂಡನೆ ಏನೇ ಬರಲಿ, ಧೈರ್ಯದಿಂದ ಎದುರಿಸುತ್ತೇವೆ. ನಮ್ಮದು ಶಿಕ್ಷಿತ ದಲಿತ ಯುವಕರ ಪಡೆ. ನಾವು ಹೋರಾಟಕ್ಕೆ ಬದ್ಧ. ದಲಿತರಿಗೆ ಭೂಮಿ, ಅಧಿಕಾರ ದೊರಕಿಸಿಕೊಡುವ ನಿಟ್ಟಿನಲ್ಲಿ ನಾವು ತಯಾರಿ ನಡೆಸುತ್ತಿದ್ದೇವೆ. ದಲಿತ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರಿಗೆ ಕೋಚಿಂಗ್ ಸೆಂಟರ್‌ಗಳನ್ನು ತೆರೆಯಲಾಗುವುದು. ಭೀಮ್ ಆರ್ಮಿಯಲ್ಲಿ ಹೆಣ್ಣುಮಕ್ಕಳ ನಾಯಕತ್ವಕ್ಕೆ ಶ್ರಮಿಸಲಾಗುವುದು,” ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, “ಉತ್ತರ ಪ್ರದೇಶದಲ್ಲಿ ನನ್ನಂತೆ ಸುಮಾರು 200 ಮಂದಿಯನ್ನು ಬಂಧಿಸಲಾಗಿದೆ. ಇದು ಜನರಲ್ಲಿ ಭಯವನ್ನು ಬಿತ್ತುವುದರ ಸಂಕೇತ. ನೀವು ಸರಿ ಇದ್ದರೂ ಸರ್ಕಾರ ನಿಮ್ಮನ್ನು ಜೈಲಿಗೆ ತಳ್ಳುತ್ತದೆ, ಹೊಡೆಯುತ್ತದೆ. ಆದರೆ, ಆಜಾದ್ ಸತ್ತರೆ ಏನೂ ಆಗುವುದಿಲ್ಲ. ಹಾಗೆಂದೇ, ಭೀಮ್ ಆರ್ಮಿಯನ್ನು ಕಟ್ಟಲಾಗಿದೆ. ನಾನು ಸತ್ತರೆ ಮತ್ತೊಬ್ಬ ನಾಯಕ ಹುಟ್ಟಿಕೊಳ್ಳುತ್ತಾನೆ,” ಎಂದರು.

“ಚುನಾವಣಾ ರಾಜಕಾರಣದಲ್ಲಿ ತಮ್ಮ ಸಂಘಟನೆಯ ಹಸ್ತಕ್ಷೇಪ ಹೇಗಿರಲಿದೆ?” ಎಂಬ ಪ್ರಶ್ನೆಗೆ, “ನಾನು ಬಿಜೆಪಿಯನ್ನು ತಡೆಯಲು ಯತ್ನಿಸುವೆ,” ಎಂದಿದ್ದಾರೆ. “ಮೋದಿಜೀ, ಯೋಗೀಜಿ ಅವರಿಗೆ ಏನಾದರೂ ಸಂದೇಶ ನೀಡಬಯಸುವಿರೇ?” ಎಂದು ಕೇಳಿದಾಗ, “ಅವರು ಈಗಾಗಲೇ ಸಾಕಷ್ಟು ಕೆಲಸ ಮಾಡಿದ್ದಾರೆ. ಇನ್ನು ಮಾಡುವುದು ಬೇಡ. ಅವರು ಆರಾಮಾಗಿ ಇರಲಿ,” ಎಂದು ಪ್ರತಿಕ್ರಿಯಿಸಿದ್ದಾರೆ. “ಯುವಕರು ಶಿಕ್ಷಣದ ಮುಖಾಂತರ ಹೋರಾಟಕ್ಕೆ ಇಳಿಯಬೇಕು. ಒಳ್ಳೆಯ ಶಿಕ್ಷಣ ಪಡೆಯಬೇಕು,” ಎಂದು ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ : ಭೀಮ್ ಆರ್ಮಿ ಮುಖ್ಯಸ್ಥ ಆಜಾದ್, ಯೋಗಿ ಸರ್ಕಾರದ ಕೆಂಗಣ್ಣಿಗೆ ಸಿಲುಕಿರುವುದೇಕೆ?

ಚಂದ್ರಶೇಖರ್ ಆಜಾದ್ ಅವರು ‘ರಾವಣ’ ಎಂದೂ ಜನಪ್ರಿಯರು. ಆಜಾದ್ ತಮ್ಮನ್ನು ತಾವೇ ರಾವಣ ಎಂದು ಕರೆದುಕೊಂಡರು ಎನ್ನುತ್ತವೆ ಕೆಲ ಮೂಲಗಳು. ರಾಮಾಯಣದ ಅಯೋಧ್ಯೆ ಇರುವ ಉತ್ತರ ಪ್ರದೇಶದಲ್ಲಿ, ಸ್ವಾತಂತ್ರ್ಯ ಸೇನಾನಿ ಚಂದ್ರಶೇಖರ ಆಜಾದ್ ಅವರ ಹೆಸರನ್ನು ಹೊತ್ತ ಭೀಮ್ ಆರ್ಮಿಯ ಮುಖಂಡ ತಮ್ಮನ್ನು ತಾವು ರಾವಣ ಎಂದು ಕರೆದುಕೊಂಡಿರುವುದು ಒಂದು ರೂಪಕವೂ ಹೌದು. ಅವರನ್ನು ರಾವಣನನ್ನಾಗಿ ಒಪ್ಪಿಕೊಂಡವರ ಪ್ರಕಾರ, ರಾಮಾಯಣದ ಪ್ರತಿನಾಯಕ ರಾವಣ ದೇಶದ ನೆಲಮೂಲ ಸಂಸ್ಕೃತಿಯ ಪ್ರತಿನಿಧಿ. ದಲಿತರು ಕೂಡ ದೇಶದ ಮೂಲಸಂಸ್ಕೃತಿಯ ಪ್ರತಿನಿಧಿಗಳು. ಆಜಾದ್ ಅವರ ಅಂಕಿತನಾಮ ಕೂಡ ಈ ಎರಡನ್ನೂ ಬೆಸೆಯುವ ಯತ್ನದಂತಿದೆ ಎನ್ನುತ್ತಾರೆ.

ಆದರೆ, ಇದನ್ನು ವಿರೋಧಿಸುವವರು ಮತ್ತೊಂದು ವಾದವನ್ನು ತೇಲಿಬಿಡುತ್ತಾರೆ: ರಾಮನ ವಿರುದ್ಧ ರಾವಣನನ್ನು ವೈಭವೀಕರಿಸುವುದಕ್ಕಾಗಿ ಇಂತಹ ಹೆಸರುಗಳನ್ನು ಇಟ್ಟುಕೊಳ್ಳಲಾಗುತ್ತಿದೆ. ರಾಮಾಯಣದ ರಾವಣ ಮೂಲತಃ ಬ್ರಾಹ್ಮಣ. ಆಜಾದ್ ದಲಿತ ಸಮುದಾಯಕ್ಕೆ ಸೇರಿದವರು. ಇದು ಎತ್ತಣಿಂದೆತ್ತ ಸಂಬಂಧ ಎಂಬ ಪ್ರಶ್ನೆ ಎತ್ತುತ್ತಾರೆ. ಇದೇ ವೇಳೆ, ‘ನಗರ ನಕ್ಸಲ್’ ಎಂಬ ಹಣೆಪಟ್ಟಿಯನ್ನೂ ಆಜಾದ್ ಅವರಿಗೆ ಕಟ್ಟುವ ಯತ್ನಗಳು ನಡೆದಿವೆ. ‘ರಾವಣ’ ಎಂಬ ಅವರ ಹೆಸರನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುವ ತಂತ್ರವೂ ಅವರ ವಿರೋಧಿ ಗುಂಪಿಗೆ ಇದೆ ಎಂಬ ಮಾತುಗಳಿವೆ. ‘ರಾವಣ’ ಎನ್ನುವ ಹೆಸರಿನ ಮೂಲಕ ‘ರಾಮ’ನ ಹೆಸರಿನಲ್ಲಿ ಹಿಂದುತ್ವದ ರಾಜಕಾರಣ ನಡೆಸಿರುವವರಿಗೆ ನೇರ ವಿರೋಧಿಯಾಗಿ, ಸಾಂಸ್ಕೃತಿಕ ಅಸ್ಮಿತೆಯ ರಾಜಕಾರಣವನ್ನು ಮಾಡಲು ಆಜಾದ್ ಮುಂದಾಗಿದ್ದಾರೆ. ಅದರ ಹೆಜ್ಜೆಯಾಗಿ ತಮ್ಮ ಹೆಸರಿನಲ್ಲೂ ಬದಲಾವಣೆ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳಿವೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More