ಇಂದಿನ ಡೈಜೆಸ್ಟ್ | ನೀವು ಗಮನಿಸಬೇಕಾದ ಇತರ 8 ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ಪ್ರಮುಖ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳು

ಪ್ರಧಾನಿಯಿಂದ ‘ಸ್ವಚ್ಛತಾ ಹಿ ಸೇವಾ’ ಅಭಿಯಾನಕ್ಕೆ ಚಾಲನೆ

ಪ್ರಧಾನಿ ಮೋದಿ ಶನಿವಾರ ದೆಹಲಿಯಲ್ಲಿ ‘ಸ್ವಚ್ಛತಾ ಹಿ ಸೇವಾ’ ಅಭಿಯಾನಕ್ಕೆ ಕಸ ಗುಡಿಸುವ ಮೂಲಕ ಚಾಲನೆ ನೀಡಿದ್ದಾರೆ. ಈ ಸ್ವಚ್ಛತಾ ಅಭಿಯಾನವು ಅಕ್ಟೋಬರ್ 2ರ ಗಾಂಧಿ ಜಯಂತಿವರೆಗೂ ನಡೆಯಲಿದೆ. “ಮಹಾತ್ಮ ಗಾಂಧಿಜೀಯವರ ಸ್ವಚ್ಛ ಭಾರತ ಕನಸನ್ನು ನನಸು ಮಾಡಲು ದೇಶದ ಜನರು ತಮ್ಮನ್ನು ತಾವು ಸ್ವಚ್ಛತೆಗೆ ಸಮರ್ಪಿಸಿಕೊಳ್ಳಬೇಕು,” ಎಂದು ಪ್ರಧಾನಿ ಮೋದಿ ಅಭಿಯಾನಕ್ಕೆ ಚಾಲನೆ ನೀಡಿದರು. ಇದೇ ವೇಳೆ ನಟ ಅಮಿತಾಭ್ ಬಚ್ಚನ್, ಉದ್ಯಮಿ ರತನ್ ಟಾಟಾ ಮುಂತಾದವರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಸಿಬಿಐ ಅಧಿಕಾರಿ ವಿರುದ್ಧ ರಾಹುಲ್‌ ಗಂಭೀರ ಆರೋಪ

ಬಹುಕೋಟಿ ವಂಚನೆ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ ಮಲ್ಯ ಅವರಿಗೆ ದೇಶದಿಂದ ಪರಾರಿಯಾಗಲು ಸಹಾಯ ಮಾಡಿದ ಸಿಬಿಐ ಅಧಿಕಾರಿಯೊಬ್ಬರು ನೀರವ್‌ ಮೋದಿ, ಮೆಹುಲ್‌ ಚೋಸ್ಕಿ ಅವರಿಗೂ ಸಹಾಯ ಮಾಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. “ಸಿಬಿಐ ಸಂಸ್ಥೆಯಲ್ಲಿರುವ ಪ್ರಧಾನಿ ಮೋದಿ ಅವರಿಗೆ ನಿಕಟವಾಗಿರುವ ಅಧಿಕಾರಿಯೊಬ್ಬರು ವಿಜಯ್‌ ಮಲ್ಯ ಅವರ ಮೇಲೆ ಹೊರಡಿಸಲಾಗಿದ್ದ ಮೊದಲ ಲುಕ್‌ಔಟ್ ನೋಟಿಸ್‌ನಲ್ಲಿದ್ದ ನಿಯಮಗಳನ್ನು ಸಡಿಲಗೊಳಿಸಿ ವಂಚಕ ಉದ್ಯಮಿ ದೇಶದಿಂದ ಪರಾರಿಯಾಗಲು ಸಹಾಯ ಮಾಡಿದ್ದಾರೆ,” ಎಂದು ಗಂಭೀರ ಆರೋಪ ಮಾಡಿದ್ದಾರೆ.

ದೇಶದಲ್ಲಿದ್ದಾರೆ 21 ಲಕ್ಷಕ್ಕೂ ಹೆಚ್ಚು ಮಂದಿ ಎಚ್ಐವಿ ಪೀಡಿತರು

ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ 2017ರಲ್ಲಿ ನಡೆಸಿದ್ದ ಸಮೀಕ್ಷೆಯ ವರದಿ ಹೊರಬಂದಿದ್ದು, ದೇಶದಲ್ಲಿ ಒಟ್ಟು 21 ಲಕ್ಷಕ್ಕೂ ಹೆಚ್ಚು ಜನ ಎಚ್ಐವಿ ಪೀಡಿತರಿದ್ದಾರೆಂದು ಸಾಬೀತಾಗಿದೆ. ಮಹಾರಾಷ್ಟ್ರ ಒಂದರಲ್ಲೇ ಶೇ.15 ರಷ್ಟು ಜನ ಎಚ್ಐವಿಯಿಂದ ಬಳಲುತ್ತಿರುವುದು ಕಂಡುಬಂದಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ 87,000 ಜನರಿಗೆ ಹೆಚ್ಐವಿ ಸೊಂಕು ತಗುಲಿದೆ ಎನ್ನಲಾಗಿದ್ದು, ತೆಲಂಗಾಣದಲ್ಲಿ ಶೇ. 11 ರಷ್ಟು ಹೆಚ್ಐವಿ ಪೀಡಿತರಿದ್ದಾರೆ ಎಂದು ತಿಳಿದುಬಂದಿದೆ.

ಆಸ್ಕರ್‌ ಸ್ಪರ್ಧೆಯಲ್ಲಿ ‘ರೋಮಾ’

ವಿದೇಶಿ ಭಾಷಾ ಸಿನಿಮಾ ವಿಭಾಗದಲ್ಲಿ ಮೆಕ್ಸಿಕೋ ‘ರೋಮಾ’ ಚಿತ್ರವನ್ನು ಆಸ್ಕರ್‌ ಸ್ಪರ್ಧೆಗೆ ಆಯ್ಕೆ ಮಾಡಿದೆ. ಆಲ್ಫನ್ಸೋ ಕುವಾರಾನ್‌ ನಿರ್ದೇಶನದ ಸ್ಪಾನಿಷ್‌ ಭಾಷೆಯ ಚಿತ್ರವಿದು. ಈ ಕಪ್ಪು-ಬಿಳುಪು ಆಟೋಬಯೋಗ್ರಫಿಕಲ್ ಡ್ರಾಮಾ ಇತ್ತೀಚಿನ ವೆನಿಸ್ ಚಿತ್ರೋತ್ಸವದಲ್ಲಿ ಗೋಲ್ಡನ್‌ ಲಯನ್‌ ಗೌರವ ಪಡೆದಿತ್ತು. ಮನೆಗೆಲಸದಾಕೆಯ ದೃಷ್ಟಿಕೋನದಲ್ಲಿ ಮೆಕ್ಸಿಕೋದ ಸಾಮಾಜಿಕ, ಆರ್ಥಿಕ, ರಾಜಕೀಯ ವಿಷಯಗಳನ್ನು ಹೇಳುವ ಅಪರೂಪದ ಪ್ರಯೋಗವಿದು. ಡಿಸೆಂಬರ್‌ 14ರಂದು ನೆಟ್‌ಫ್ಲಿಕ್ಸ್‌ನಲ್ಲಿ ‘ರೋಮಾ’ ಸ್ಟ್ರೀಮ್‌ ಆಗಲಿದೆ.

ರಾಜೀವ್ ಹತ್ಯೆ ಪ್ರಕರಣ: ವರ್ಗಾವಣೆ ಕುರಿತ ಮಾಧ್ಯಮ ವರದಿ ತಳ್ಳಿಹಾಕಿದ ರಾಜ್ಯಪಾಲ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರ ಈ ಹಿಂದೆ ಸಲ್ಲಿಸಿರುವ ಶಿಫಾರಸನ್ನು ರಾಜ್ಯಪಾಲರು ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡಲಿದ್ದಾರೆ ಎಂಬ ಮಾಧ್ಯಮಗಳ ವರದಿಯನ್ನು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ತಳ್ಳಿಹಾಕಿದ್ದಾರೆ. 1991 ರಿಂದ ಜೈಲುಶಿಕ್ಷೆ ಅನುಭವಿಸುತ್ತಿರುವ ಏಳು ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಸೆಪ್ಟೆಂಬರ್ 9ರಂದು ತಮಿಳುನಾಡು ಸರ್ಕಾರ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿತ್ತು.

ಕಣಿವೆ ರಾಜ್ಯದಲ್ಲಿ ಗುಂಡಿನ ಚಕಮಕಿ; ಐವರು ಉಗ್ರರ ಹತ್ಯೆ

ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ, ಐವರು ಉಗ್ರರು ಮೃತಪಟ್ಟಿದ್ದಾರೆ. ಉಗ್ರರ ಇರುವಿಕೆ ಕುರಿತಂತೆ ಖಚಿತ ಮಾಹಿತಿ ಪಡೆದ ಸೇನಾ ಸಿಬ್ಬಂದಿ, ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಚೌಗಮ್ ನಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭ ನಡೆದ ಗುಂಡಿನ ಕಾಳಗದಲ್ಲಿ ಲಷ್ಕರ್ ಇ ತೊಯ್ಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳಿಗೆ ಸೇರಿದ ಐವರು ಉಗ್ರರು ಸಾವನಪ್ಪಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಉಗ್ರರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದ್ದು, ಕಾರ್ಯಾಚರಣೆಯನ್ನು ಅಂತ್ಯಗೊಳಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ನಿಷ್ಕ್ರಿಯ ಸಾಲ ಸಮಸ್ಯೆ ಬಹುತೇಕ ನಿವಾರಣೆಯಾಗಿದೆ: ಸಿ ಎಸ್ ಮಹಾಪಾತ್ರ

ಕೇಂದ್ರ ಸರ್ಕಾರವು ನಿಷ್ಕ್ರಿಯ ಸಾಲದ ಸಮಸ್ಯೆಯನ್ನು ಬಹುತೇಕ ನಿವಾರಣೆ ಮಾಡಿದೆ ಎಂದು ಆರ್ಥಿಕ ವ್ಯವಹಾರಗಳ ಹೆಚ್ಚುವರಿ ಕಾರ್ಯದರ್ಶಿ ಸಿ ಎಸ್ ಮಹಾಪಾತ್ರ ಹೇಳಿದ್ದಾರೆ. ಪಿಎಚ್‌ಡಿ ಚೆಂಬರ್ ಆಫ್ ಕಾಮರ್ಸ್ ಏರ್ಡಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ದಿವಾಳಿ ಸಂಹಿತೆಯನ್ನು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ (ಎನ್ಸಿಎಲ್ಟಿ) ಮೂಲಕ ಮತ್ತಷ್ಟು ಬಲಪಡಿಸುತ್ತೇವೆ ಎಂದಿದ್ದಾರೆ. ದೇಶದ ಆರ್ಥಿಕತೆ ಬೃಹತ್ತಾಗಿ ಬೆಳೆಯಲು ಸರಕು ಮಾರುಕಟ್ಟೆಯೂ ಬೆಳಯುವುದು ಅಗತ್ಯ. ಸರಕು ಮಾರುಕಟ್ಟೆ ಮತ್ತು ಬಂಡವಾಳ ಮಾರುಕಟ್ಟೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಅವರು ಭಾಗೀದಾರರಾಗುವಂತೆ ಮಾಡುವುದು ಅತ್ಯಗತ್ಯ ಎಂದೂ ಹೇಳಿದ್ದಾರೆ.

ಟಿವಿ, ರೆಫ್ರಿಜಿರೇಟರ್ ಬೆಲೆ ಮತ್ತಷ್ಟು ಏರುವುದಿಲ್ಲ; ಏಕೆ ಗೊತ್ತೇ?

ಅಮೆರಿಕ ಡಾಲರ್ ವಿರುದ್ಧ ರುಪಾಯಿ ತ್ವರಿತಗತಿಯಲ್ಲಿ ಕುಸಿದು 72ರ ಗಡಿದಾಟಿದ ಹಿನ್ನೆಲೆಯಲ್ಲಿ ಟಿವಿ, ರೆಫ್ರಿಜಿರೇಟರ್, ಮೈಕ್ರೊ ಓವೆನ್ ಮತ್ತಿತರ ಗೃಹೋಪಯೋಗಿ ವಸ್ತುಗಳ ದರ ಏರಿಕೆ ನಿರೀಕ್ಷಿಸಲಾಗಿದೆ. ಆದರೆ, ಈಗಾಗಲೇ ರುಪಾಯಿ ಕುಸಿತದ ಹಿನ್ನೆಲೆಯಲ್ಲಿ ಗೃಹೋಪಯೋಗಿ ವಸ್ತುಗಳ ದರವನ್ನು ಶೇ.5ರಷ್ಟು ಏರಿಕೆಯಾಗಿದೆ. ಈ ದರ ಏರಿಕೆಯಿಂದಾಗಿ ಈ ವಸ್ತುಗಳ ಬೇಡಿಕೆ ತಗ್ಗಿದೆ. ದೀಪಾವಳಿ ಹಬ್ಬದ ವೇಳೆ ಈ ಗೃಹೋಪಯೋಗಿ ವಸ್ತುಗಳಿಗೆ ಭಾರಿ ಬೇಡಿಕೆ ಇರುತ್ತದೆ. ಈ ಹಂತದಲ್ಲಿ ದರ ಏರಿಕೆ ಮಾಡಿದರೆ ಬೇಡಿಕೆ ಕುಗ್ಗಬಹುದೆಂದ ಆತಂಕ ಕಂಪನಿಗಳಿಗೆ ಇದೆ. ಹೀಗಾಗಿ ಕಂಪನಿಗಳು ಬೇಡಿಕೆ ಹೆಚ್ಚಿಸುವ ಸಲುವಾಗಿ ದರ ಏರಿಕೆ ಮಾಡದಿರಲು ನಿರ್ಧರಿಸಿವೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More