ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಹೋರಾಡುತ್ತಿರುವವರನ್ನು ವಿರುದ್ಧ ಸರ್ಕಾರವೇ ದಾಳಿ ನಡೆಸುವ ಪ್ರಕರಣಗಳು ವಿಶ್ವಾದ್ಯಂತ ಹೆಚ್ಚುತ್ತಿವೆ. ಅವುಗಳಲ್ಲಿ ಭಾರತವೂ ಒಂದು ಎನ್ನುವುದು ತಲೆತಗ್ಗಿಸುವಂಥ ವಿಚಾರ. ಈ ಕುರಿತ ವಿಶ್ವಸಂಸ್ಥೆ ವರದಿ ಆಧರಿಸಿ ‘ವೈರ್’ ಪ್ರಕಟಿಸಿದ ಸುದ್ದಿಯ ಭಾವಾನುವಾದ ಇದು

ಮಾನವ ಹಕ್ಕುಗಳಿಗಾಗಿ ಹೋರಾಡುವವರನ್ನು ಹತ್ಯೆ ಮಾಡುವ, ಕಿರುಕುಳ ನೀಡುವ ಅಥವಾ ಮನಸೋಇಚ್ಛೆ ಬಂಧಿಸುವ ಮೂಲಕ ಬೆದರಿಕೆ ಒಡ್ಡುವ ದೇಶಗಳ ಪಟ್ಟಿಯೊಂದನ್ನು ವಿಶ್ವಸಂಸ್ಥೆ ಬುಧವಾರ ಬಿಡುಗಡೆ ಮಾಡಿದೆ. ಭಾರತ, ಚೀನಾ, ರಷ್ಯಾ ಸೇರಿದಂತೆ 38 ರಾಷ್ಟ್ರಗಳು ವಿಶ್ವಸಂಸ್ಥೆಯ ಈ ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿವೆ.

ಮಾನವ ಹಕ್ಕುಗಳ ಕಾರ್ಯಕರ್ತರನ್ನು ದುರ್ಬಳಕೆ ಮಾಡಿಕೊಳ್ಳುವುದು, ಅವರ ಮೇಲೆ ಕಣ್ಣಿಡುವುದು, ಅಪರಾಧಿಗಳನ್ನಾಗಿ ಮಾಡುವುದು ಸೇರಿದಂತೆ ಇತರ ಕುಕೃತ್ಯಗಳಲ್ಲಿ ತೊಡಗಿದ ದೇಶಗಳೂ ಪಟ್ಟಿಯಲ್ಲಿವೆ ಎಂದು ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ತಮ್ಮ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

“ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿರುವವರು, ಮಾಹಿತಿ ಹಕ್ಕು ಕಾರ್ಯಕರ್ತರು ಹಾಗೂ ವಿಶ್ವಸಂಸ್ಥೆಯೊಂದಿಗೆ ಗುರುತಿಸಿಕೊಂಡವರನ್ನು ಗೌರವಿಸಬೇಕು ಎಂದು ಜಗತ್ತು ಬಯಸುತ್ತದೆ. ವಿಶ್ವಸಂಸ್ಥೆಯೊಂದಿಗೆ ಸಹಕರಿಸುತ್ತಿರುವ ರಾಷ್ಟ್ರಗಳು ವ್ಯಕ್ತಿಗಳನ್ನು ಶಿಕ್ಷಿಸುವುದು ಅಪಮಾನಕರ ಎಂದು ಭಾವಿಸಿ ಅದನ್ನು ತಡೆಯಲು ಎಲ್ಲರೂ ಪ್ರಯತ್ನಿಸಬೇಕು,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

38 ಅಪಮಾನಕರ ರಾಷ್ಟ್ರಗಳಲ್ಲಿ 29 ಹೊಸದಾಗಿ ಸೇರ್ಪಡೆಯಾದ ದೇಶಗಳಾಗಿದ್ದು, ಅವುಗಳಲ್ಲಿ 19 ದೇಶಗಳಲ್ಲಿ ನಿರಂತರವಾಗಿ ಹಲ್ಲೆ, ದಾಳಿಗಳು ನಡೆಯುತ್ತಿವೆ. ಬಹರೇನ್, ಕೆಮರೂನ್, ಚೀನಾ, ಕೊಲಂಬಿಯಾ, ಕ್ಯೂಬಾ, ಕಾಂಗೋ ಗಣರಾಜ್ಯ, ಜಿಬೌಟಿ, ಈಜಿಪ್ಟ್, ಗ್ವಾಟೆಮಾಲಾ, ಗಯಾನಾ, ಹಾಂಡುರಾಸ್, ಹಂಗೇರಿ, ಭಾರತ, ಇಸ್ರೇಲ್, ಕಿರ್ಗಿಸ್ತಾನ್, ಮಾಲ್ಡೀವ್ಸ್, ಮಾಲಿ, ಮೊರಾಕೊ, ಮ್ಯಾನ್ಮಾರ್, ಫಿಲಿಪ್ಪೀನ್ಸ್, ರಷ್ಯಾ, ರುವಾಂಡಾ, ಸೌದಿ ಅರೇಬಿಯಾ, ದಕ್ಷಿಣ ಸುಡಾನ್, ಥಾಯ್ಲೆಂಡ್, ಟ್ರಿನಿಡಾಡ್ ಮತ್ತು ಟೊಬ್ಯಾಗೊ, ಟರ್ಕಿ, ತುರ್ಕಮೆನಿಸ್ತಾನ್ ಹಾಗೂ ವೆನಿಜುವೆಲಾ ಹೊಸದಾಗಿ ಸೇರ್ಪಡೆಗೊಂಡ ದೇಶಗಳು.

ಹೋರಾಟಗಾರರನ್ನು ಆಗಿಂದಾಗ್ಗೆ ಭಯೋತ್ಪಾದನೆಯೊಂದಿಗೆ ತಳಕು ಹಾಕುವ, ವಿದೇಶಿ ಸಂಸ್ಥೆಗಳಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸುವ, ದೇಶದ ಖ್ಯಾತಿ ಅಥವಾ ಭದ್ರತೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸುವ ಸರ್ಕಾರಗಳನ್ನು ಈ ಪಟ್ಟಿ ಗುರಿಯಾಗಿರಿಸಿಕೊಂಡಿದೆ.

ಇದನ್ನೂ ಓದಿ : ಹರ್ಯಾಣ ಸರ್ಕಾರಕ್ಕೆ ಮಾನವ ಹಕ್ಕು ರಕ್ಷಣೆಗಿಂತ ಗೋರಕ್ಷಣೆಯೇ ಮುಖ್ಯವಾಯಿತೇ?

ವಿಶ್ವಸಂಸ್ಥೆಯೊಂದಿಗೆ ನಂಟು ಹೊಂದಿರುವ ಸಮುದಾಯಗಳು ಮತ್ತು ನಾಗರಿಕ ಸಮಾಜದ ಸಂಘಟನೆಗಳನ್ನು ನಿರ್ಬಂಧಿಸಿ ರಾಷ್ಟ್ರೀಯ ಭದ್ರತೆ ಮತ್ತು ಭಯೋತ್ಪಾದನೆ ವಿರೋಧಿ ಹೆಸರಿನಲ್ಲಿ ಸರ್ಕಾರಗಳು ನೀಡುತ್ತಿರುವ ಸಮರ್ಥನೆ ಕಳವಳಕಾರಿಯಾಗಿದೆ ಎಂದು ವರದಿ ಆತಂಕ ವ್ಯಕ್ತಪಡಿಸಿದೆ.

ವಿಶ್ವಸಂಸ್ಥೆಯೊಂದಿಗೆ ನಂಟು ಹೊಂದಿರುವ ಮಹಿಳೆಯರು ಅತ್ಯಾಚಾರ, ಆನ್‌ಲೈನ್ ದ್ವೇಷ ಪ್ರಚಾರಕ್ಕೆ ತುತ್ತಾಗುತ್ತಿದ್ದಾರೆ. ಅಲ್ಲದೆ, ಅನೇಕರು ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಜಿನೀವಾದಲ್ಲಿ ಕೂಡ ವಿಶ್ವಸಂಸ್ಥೆಯ ಪ್ರತಿನಿಧಿಗಳೊಂದಿಗೆ ಮಾತನಾಡಲು ಹೆದರುತ್ತಿದ್ದಾರೆ ಎಂದು ವರದಿ ಹೇಳಿದೆ.

ವಿಶ್ವಸಂಸ್ಥೆಯ ಸಹಾಯಕ ಮಹಾ ಕಾರ್ಯದರ್ಶಿ ಆಂಡ್ರ್ಯೂ ಗಿಲ್ಮರ್ ಅವರು ವರದಿಯನ್ನು ಮುಂದಿನ ವಾರ ಮಾನವ ಹಕ್ಕುಗಳ ಮಂಡಳಿಗೆ ಸಲ್ಲಿಸಲಿದ್ದು, “ಈಗ ವರದಿಯಾಗಿರುವ ಪ್ರಕರಣಗಳಿಗಿಂತಲೂ ಹೆಚ್ಚು ಘಟನೆಗಳು ವಾಸ್ತವದಲ್ಲಿ ನಡೆದಿವೆ,” ಎಂದು ಉಲ್ಲೇಖಿಸಿದ್ದಾರೆ. “ಕಾನೂನು, ರಾಜಕೀಯ ಹಾಗೂ ಆಡಳಿತಾತ್ಮಕ ಅಡೆತಡೆಗಳ ಮೂಲಕ ತ್ವರಿತವಾಗಿ ನಾಗರಿಕ ಸಮಾಜವನ್ನು ಸುಮ್ಮನಾಗಿಸುವ ಕೆಲಸಗಳು ಹೆಚ್ಚುತ್ತಿವೆ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪಟ್ಟಿಯಲ್ಲಿರುವ ಕೆಲವು ರಾಷ್ಟ್ರಗಳು ಮಾನವ ಹಕ್ಕು ಮಂಡಳಿಯ ಸದಸ್ಯತ್ವ ಹೊಂದಿದ್ದು, ಕಳೆದ ವರ್ಷ, “ಪ್ರತಿಯೊಬ್ಬರೂ ವೈಯಕ್ತಿಕವಾಗಿ ಅಥವಾ ಪರಸ್ಪರ ಒಗ್ಗಟ್ಟಾಗಿ ವಿಶ್ವಸಂಸ್ಥೆಯೊಂದಿಗೆ ಯಾವುದೇ ಅಡ್ಡಿ ಆತಂಕವಿಲ್ಲದೆ ಸಂವಹನ ನಡೆಸಲು ಅನುಕೂಲಕರ ವಾತಾವರಣ ಕಲ್ಪಿಸಲಾಗುವುದು,” ಎಂದು ನಿರ್ಣಯ ಅಂಗೀಕರಿಸಿದ್ದವು.

ಚಿತ್ರ: ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More