ಭಾರತದ ಜಾತಿ ಸಂಘರ್ಷಕ್ಕೆ ಮತ್ತೆ ಸಾಕ್ಷಿ ಹೇಳಿದ ತೆಲಂಗಾಣ ಮರ್ಯಾದೆಗೇಡು ಹತ್ಯೆ

ಪೋಷಕರ ವಿರೋಧದ ನಡುವೆಯೇ ವಿವಾಹವಾದ ಪ್ರಣಯ್‌-ಅಮೃತಾ ದಂಪತಿ ಕೆಲವೇ ತಿಂಗಳಲ್ಲಿ ಮಗುವಿನ ಆಗಮನದ ಸಂಭ್ರಮದಲ್ಲಿದ್ದರು. ಆದರೆ, ಮುದ್ದು ಮಗುವಿನ ಕನಸು ಕಾಣುತ್ತಿದ್ದ ಯುವಕ ಮರ್ಯಾದೆಗೇಡು ಹತ್ಯೆಗೆ ಬಲಿಯಾಗಿರುವುದು ಆಳವಾಗಿ ಬೇರೂರಿರುವ ಜಾತಿ ವ್ಯವಸ್ಥೆಗೆ ಹಿಡಿದ ಕನ್ನಡಿ

ಆ ದಂಪತಿಯ ಮೊಗದಲ್ಲಿ ಪೋಷಕರಾಗುವ ಸಂಭ್ರಮ ಮನೆಮಾಡಿತ್ತು. ಪ್ರೀತಿಯ ಮಡದಿಗೆ 5 ತಿಂಗಳು ತುಂಬಿದ್ದರಿಂದ ಆಸ್ಪತ್ರೆಯಲ್ಲಿ ಚೆಕ್ ಅಪ್ ಮಾಡಿಸಿ ವಾಪಸಾಗುತ್ತಿದ್ದರು. ಅಪ್ಪನಾಗುವ ಖುಷಿಯಲ್ಲಿ ಯುವಕನಿದ್ದರೆ, ಅಮ್ಮನಾಗುವ ಕನಸಿನೊಂದಿಗೆ ಆಕೆ ಪತಿಯೊಂದಿಗೆ ಅದೇನೋ ಚರ್ಚಿಸುತ್ತ ರಸ್ತೆಯಲ್ಲಿ ನಡೆಯುತ್ತಿದ್ದಳು. ಅಷ್ಟರಲ್ಲೇ ಕೈಯಲ್ಲಿ ಮಾರಕಾಸ್ತ್ರ ಹಿಡಿದು ಬಂದ ವ್ಯಕ್ತಿ, ಹಿಂದುಮುಂದು ಯೋಚಿಸದೆ ಯುವಕನಿಗೆ ಹಿಂದಿನಿಂದ ತಲೆಗೆ ಹೊಡೆಯುತ್ತಾನೆ. ಯುವತಿಗೆ ಅಲ್ಲೇನು ನಡೆಯುತ್ತಿದೆ ಎಂದು ತಿಳಿಯುವಷ್ಟರಲ್ಲಿ ಪತಿ ರಕ್ತದ ಮಡುವಿನಲ್ಲಿ ಬಿದ್ದು ಓದ್ದಾಡುತ್ತಿದ್ದ.

ತೆಲಂಗಾಣದ ನಲೆಗೊಂಡ ಜಿಲ್ಲೆಯಲ್ಲಿ ನಡೆದ ಈ ಮರ್ಯಾದೆಗೇಡು ಹತ್ಯೆಯ ಸಂಪೂರ್ಣ ದೃಶ್ಯ ಅಲ್ಲೇ ಪಕ್ಕದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಆ ದೃಶ್ಯಗಳು ವೈರಲ್ ಆಗಿವೆ. ಕೊಲೆಯಾದ ಯುವಕ 23 ವರ್ಷದ ಪ್ರಣಯ್ ಕುಮಾರ್. ಭಾರತದಲ್ಲಿ ಆಳವಾಗಿ ಬೇರೂರಿರುವ ಜಾತಿ ಸಂಘರ್ಷಕ್ಕೆ ಇತ್ತೀಚೆಗೆ ಬಲಿಯಾದ ಮತ್ತೊಂದು ಜೀವ ಈ ಪ್ರಣಯ್‌ ಕುಮಾರ್‌. ಉನ್ನತ ಜಾತಿಯ ಯುವತಿಯನ್ನು ಪ್ರೀತಿಸಿದ್ದೇ ಪ್ರಣಯ್ ಕೊಲೆಗೆ ಕಾರಣ.

ಪ್ರಣಯ್ ಕುಮಾರ್ ಹಾಗೂ ಅಮೃತವರ್ಷಿಣಿ ಶಾಲಾ ದಿನಗಳಲ್ಲೇ ಪರಸ್ಪರ ಪ್ರೀತಿಸುತ್ತಿದ್ದರು. ಕಾಲೇಜಿಗೆ ಸೇರಿದ ಬಳಿಕ ಇವರ ನಡುವಿನ ಆತ್ಮೀಯತೆ ಹೆಚ್ಚಾಗಿ ಪರಸ್ಪರ ಬಿಟ್ಟಿರಲಾರದ ಹಂತ ತಲುಪಿತ್ತು. ಹೀಗಾಗಿ, ಮದುವೆಯಾಗಲು ನಿರ್ಧರಿಸಿದ ಈ ಜೋಡಿಯ ಪ್ರೇಮವನ್ನು ಮನೆಯವರು ಒಪ್ಪಲಿಲ್ಲ. ಇವರ ಪ್ರೇಮಕ್ಕೆ ಜಾತಿ ಅಡ್ಡವಾಗಿತ್ತು. “ಅಮೃತಳಾನ್ನು ಬಿಟ್ಟು ನಾನು ಬದುಕುವುದಿಲ್ಲ,” ಎಂದು ಪ್ರಣಯ್ ಹೇಳಿದ್ದರಿಂದ ಆತನ ಪೋಷಕರು ಮದುವೆಗೆ ಒಪ್ಪಿಕೊಂಡರು. ಹೀಗಾಗಿ, ಅಮೃತಾ ತನ್ನ ಮನೆಯವರ ವಿರೋಧದ ನಡುವೆಯೇ ಪ್ರಣಯ್‌ರನ್ನು ಮದುವೆಯಾಗಲು ನಿರ್ಧರಿಸಿದಳು. 8 ತಿಂಗಳ ಹಿಂದೆ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಸುಖ ದಾಂಪತ್ಯಕ್ಕೆ ಸಾಕ್ಷಿಯಾಗಿ ಇದೀಗ ಅಮೃತ 5 ತಿಂಗಳ ಗರ್ಭಿಣಿ. ಇಷ್ಟಾದರೂ ಪರಜಾತಿಯ ಯುವಕನನ್ನು ಮದುವೆಯಾದ ಮಗಳ ಬಗ್ಗೆ ಹೆತ್ತವರಿಗೆ ಕೋಪ ಕಡಿಮೆ ಆಗಿರಲಿಲ್ಲ. ಗರ್ಭವತಿಯಾದ ಬಳಿಕವೂ ಪತಿಯನ್ನು ಬಿಟ್ಟು ಬರುವಂತೆ ಒತ್ತಡ ಹೇರುತ್ತಿದ್ದ ಪೋಷಕರು, ಗರ್ಭಪಾತ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದನ್ನು ಅಮೃತಾ ಈಗ ಪೊಲೀಸರಿಗೆ ತಿಳಿಸಿದ್ದಾಳೆ.

ತಾನು ಅತಿಯಾಗಿ ಪ್ರೀತಿಸುತ್ತಿದ್ದ ಪತಿ ಕಣ್ಣೆದುರೇ ಹತ್ಯೆಯಾಗಿದ್ದನ್ನು ನೋಡಿರುವ ಅಮೃತಾ ಅಘಾತಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆ ಬೆಡ್‌ನಲ್ಲಿ ಬಿಕ್ಕಿಬಿಕ್ಕಿ ಅಳುತ್ತಿರುವ ಆಕೆ, “ಪ್ರಣಯ್ ಬೇರೆ ಜಾತಿಯವರಾಗಿದ್ದರಿಂದ ನನ್ನ ತಂದೆ ಮತ್ತು ಅಂಕಲ್ ಈ ಮದುವೆಯನ್ನು ವಿರೋಧಿಸಿದ್ದರು. ಮದುವೆಯ ಬಳಿಕ ನಾನು ಗರ್ಭವತಿಯಾಗಿರುವುದು ತಿಳಿದರೂ, ಗರ್ಭಪಾತ ಮಾಡಿಸಿಕೊಳ್ಳುವಂತೆ ಸೂಚಿಸಿದ್ದರು. ಹಾಗಾಗಿ ಅವರಿಬ್ಬರೇ ಕೊಲೆ ಸಂಚು ಮಾಡಿದ್ದಾರೆ,” ಎಂದು ಪೊಲೀಸರಿಗೆ ತಿಳಿಸಿದ್ದಾಳೆ.

“ಗರ್ಭಪಾತ ಮಾಡಿಸುವ ಉದ್ದೇಶ ನನಗಿಲ್ಲ. ನನ್ನ ಪತಿ ಪ್ರಣಯ್ ಮಗು ನನ್ನ ಭವಿಷ್ಯ. ನನ್ನನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಪತಿ, ನಾನು ಗರ್ಭಿಣಿಯಾದಾಗಿನಿಂದ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಹಾಗಿದ್ದರೂ ಜಾತಿಗೆ ಪ್ರಾಮುಖ್ಯತೆ ನೀಡಿದ ಪೋಷಕರು ನನ್ನ ಪತಿಯನ್ನು ಕೊಲೆ ಮಾಡಿದ್ದಾರೆ,” ಎಂದು ಗದ್ಗತಿತರಾಗುತ್ತಾರೆ ಅಮೃತ.

ಇದನ್ನೂ ಓದಿ : ಮೈಸೂರಿನಲ್ಲಿ ಮತ್ತೊಂದು ಮರ್ಯಾದೆಗೇಡು ಹತ್ಯೆ; ಅರಿವು ಮೂಡೋದು ಯಾವಾಗ?

ಪ್ರಣಯ್ ಪರಿಶಿಷ್ಟ ಜಾತಿಗೆ ಸೇರಿದವರಾದರೆ, ಅಮೃತಾ ವೈಶ್ಯ ಜಾತಿಯವರು. ಇದೇ ಅವರ ಪ್ರೇಮಕ್ಕೆ ಸಮಸ್ಯೆ ಒಡ್ಡಿತ್ತು. ಅಮೃತಾಳ ಮನೆಯವರು ಪ್ರಣಯ್ ಕೆಳಜಾತಿಯವರು ಎಂದು ಮದುವೆಯನ್ನು ವಿರೋಧಿಸಿದ್ದರು. ಮರ್ಯಾದೆಗೇಡು ಹತ್ಯೆಯ ಹಿನ್ನೆಲೆಯಲ್ಲಿ ತೆಲಂಗಾಣದ ನಲಗೊಂಡದಲ್ಲಿ ಜನರು ಪ್ರತಿಭಟನೆ ನಡೆಸಿ, ಸಂತ್ರಸ್ತೆಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಗಳೆನ್ನಲಾದ ಅಮೃತಾಳ ತಂದೆ ಉದ್ಯಮಿ ಮಾರುತಿ ರಾವ್ ಮತ್ತು ಅಂಕಲ್ ಶ್ರವಣರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. 2016ರಲ್ಲಿ ತಮಿಳುನಾಡಿನಲ್ಲಿ ಇಂತಹದೇ ಒಂದು ಘಟನೆ ನಡೆದಿತ್ತು. 22ರ ಹರೆಯದ ಶಂಕರ್ ಎಂಬಾತನನ್ನು ಪತ್ನಿಯ ಎದುರೇ ಭರ್ಬರವಾಗಿ ಹತ್ಯೆಗೈಯಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಯುವತಿಯ ತಂದೆ ಸೇರಿದಂತೆ ಎಂಟು ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಪು ನೀಡಿದ್ದ ನ್ಯಾಯಾಲಯ, ಆರು ಮಂದಿಗೆ ಗಲ್ಲುಶಿಕ್ಷೆ ವಿಧಿಸಿತ್ತು. ಐವರು ಅಪರಾಧಿಗಳ ಪೈಕಿ ಒಬ್ಬನಿಗೆ ಜೀವಾವಧಿ, ಮತ್ತೊಬ್ಬನಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More