ಇಂದಿನ ಡೈಜೆಸ್ಟ್ | ನೀವು ಗಮನಿಸಬೇಕಾದ ಇತರ 7 ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ಪ್ರಮುಖ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳು

ಕಾಂಗ್ರೆಸ್ ಆಂತರಿಕ ಜಗಳಕ್ಕೂ , ಬಿಜೆಪಿಗೂ ಸಂಬಂಧವಿಲ್ಲ: ಬಿ ಎಸ್ ಯಡಿಯೂರಪ್ಪ

ಕಾಂಗ್ರೆಸ್ ಆಂತರಿಕ ಜಗಳಕ್ಕೂ, ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಸ್ಪಷ್ಪಪಡಿಸಿದ್ದಾರೆ. ಸಿದ್ದಗಂಗಾಮಠದಲ್ಲಿ ಶಿವಕುಮಾರ ಸ್ವಾಮೀಜಿಯವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜಾರಕಿಹೊಳಿ ಸಹೋದರರು ಬಿಜೆಪಿ ಸೇರುತ್ತಾರೆ ಎಂಬ ವಿಚಾರವನ್ನು ನಾನು ಎಲ್ಲಿಯೂ ಮಾತನಾಡಿಲ್ಲ,” ಎಂದರು. ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ರಾಜ್ಯದಲ್ಲಿ ಕುಮಾರಸ್ವಾಮಿಯವರದ್ದೇ ಸರ್ಕಾರವಿದೆ. ಹೀಗಾಗಿ ರಾಜ್ಯದಲ್ಲಿ ಇದೆ ಎನ್ನಲಾಗುತ್ತಿರುವ ಮೀಟರ್ ಬಡ್ಡಿ ದಂಧೆ, ರಿಯಲ್ ಎಸ್ಟೇಟ್ ಇದ್ದರೆ ಅದನ್ನು ಅವರೇ ನಿಲ್ಲಿಸಲಿ. ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ಮುಖ್ಯಮಂತ್ರಿಗಳು ನಿಲ್ಲಿಸಬೇಕಿದೆ,” ಎಂದು ಹೇಳಿದರು

ಜೆಎನ್‌ಯು ಚುನಾವಣೆ; ನಾಲ್ಕು ಸ್ಥಾನಗಳಲ್ಲಿ ಗೆದ್ದ ಎಡರಂಗ

ಜೆಎನ್‌ಯು ವಿದ್ಯಾರ್ಥಿ ಸಂಘದ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದ್ದು, 4 ಸ್ಥಾನಗಳಲ್ಲಿ ಎಡರಂಗ ಜಯಭೇರಿ ಬಾರಿಸಿದೆ. ಎನ್ ಸಾಯಿ ಬಾಲಾಜಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು, ಸಾರಿಕ ಚೌಧರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನು, ಪ್ರಧಾನ ಕಾರ್ಯಾದರ್ಶಿಯಾಗಿ ಅಜೀಜ್ ಅಹ್ಮದ್ ಆಯ್ಕೆಯಾಗಿದ್ದರೆ, ಅಮೃತಾ ಜಯದೀಪ್ ಜಂಟಿ ಕಾರ್ಯದರ್ಶಿಯಾಗಿದ್ದಾರೆ. ಜೆಎನ್‌ಯುಎಸ್‌ಯು ಚುನಾವಣೆಯ ಮತ ಎಣಿಕೆ ಕಾರ್ಯ ಶನಿವಾರ ಸಂಜೆಯಿಂದಲೇ ಪ್ರಾರಂಭವಾಗಿತ್ತಾದರೂ ಎಬಿವಿಪಿ ಮತಗಳ ಮರುಎಣಿಕೆಗೆ ಆಗ್ರಹಿಸಿದ್ದರಿಂದ 14 ಗಂಟೆಗಳ ವಿಳಂಬವಾಗಿದೆ. ವಿದ್ಯಾರ್ಥಿ ಸಂಘದ ವಿವಿಧ ಹುದ್ದೆಗಳಿಗೆ ಸೆ.14ರಂದು ನಡೆದ ಚುನಾವಣೆಯಲ್ಲಿ ಶೇ.67.8ರಷ್ಟು ಮತದಾನವಾಗಿತ್ತು

ಗಿರಿರಾಜ್ ಸಿಂಗ್ ಮತ್ತೆ ವಿವಾದಾತ್ಮಕ ಹೇಳಿಕೆ

ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಸಚಿವರು ಹೇಳುವಂತೆ 2047ರಲ್ಲಿ ಭಾರತ ಮತ್ತೊಮ್ಮೆ ಧಾರ್ಮಿಕ ಆಧಾರದ ಮೇಲೆ ಇಬ್ಭಾಗವಾಗಲಿದೆಯಂತೆ. ಜಮ್ಮು ಕಾಶ್ಮೀರದ ಸ್ಥಳೀಯ ನಿವಾಸಿಗಳಿಗೆ ವಿಶೇಷ ಸ್ಥಾನ ಮಾನ ನೀಡುವ ವಿಧಿ 35 ಎ ಬಗ್ಗೆ ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, 1947ರಲ್ಲಿ ಭಾರತ ಧಾರ್ಮಿಕ ಆಧಾರದ ಮೇಲೆ ಭಾರತ ವಿಭಜನೆಯಾಯಿತು. 72 ವರ್ಷಗಳಲ್ಲಿ ಭಾರತದ ಜನಸಂಖ್ಯೆ 135.7 ಕೋಟಿಗೆ ಏರಿಕೆಯಾಗಿದ್ದು, ಹೀಗಾಗಿ ಇಂತಹದ್ದೆ ಘಟನೆ 2047ರಲ್ಲಿ ನಡೆಯಲಿದೆ ಎಂದಿದ್ದಾರೆ.

ದೇವರ ಕೃಪೆ ಇದ್ದರೆ ಮುಖ್ಯಮಂತ್ರಿ ಆಗುವೆ: ಡಿ ಕೆ ಶಿವಕುಮಾರ್

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಡಿ ಕೆ ಶಿವಕುಮಾರ್, ದೇವರ ಕೃಪೆ ಇದ್ದರೆ ಖಂಡಿತ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದ್ದು, ಪರೋಕ್ಷವಾಗಿ ಮುಖ್ಯಮಂತ್ರಿಯಾಗುವ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. “ಈಗಿನ ನಮ್ಮ ಮೈತ್ರಿ ಸರ್ಕಾರದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ಅಪಘಾತಗಳಿಲ್ಲದೆ ನಮ್ಮ ಸರ್ಕಾರ ನಿಧಾನವಾಗಿ ಸುರಕ್ಷಿತವಾಗಿ ಸಾಗುತ್ತಿದೆ. ಆಪರೇಷನ್ ಕಮಲದ ಹೆಸರಿನಲ್ಲಿ ಬಿಜೆಪಿಗರು ನಮ್ಮ ಪಕ್ಷದ ಶಾಸಕರಾದ ಬಿ ಸಿ ಪಾಟೀಲ್, ರಹೀಮ್ ಖಾನ್ ಸೇರಿ ಹಲವರನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಿದ್ದಾರೆ,” ಎಂದು ಆರೋಪಿಸಿದ್ದಾರೆ.

ಮಿಥಾಲಿ ಜೀವಮಾನ ಶ್ರೇಷ್ಠ ಇನ್ನಿಂಗ್ಸ್ ವ್ಯರ್ಥ; ಭಾರತಕ್ಕೆ ಸೋಲು

ಭಾರತ ವನಿತಾ ತಂಡದ ನಾಯಕಿ ಮಿಥಾಲಿ ರಾಜ್ (೧೨೫) ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ದಾಖಲಿಸಿದ ಜೀವಮಾನ ಶ್ರೇಷ್ಠ ಶತಕದಾಟ ವ್ಯರ್ಥವಾಯಿತು. ಆತಿಥೇಯ ಶ್ರೀಲಂಕಾ ವನಿತಾ ತಂಡದ ಎದುರು ಇಂದು ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ವನಿತಾ ತಂಡ ೩ ವಿಕೆಟ್ ಸೋಲನುಭವಿಸಿತು. ಅಂದಹಾಗೆ, ಮೊದಲ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಭಾರತ ವನಿತಾ ತಂಡ ಈಗಾಗಲೇ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಕಳೆದ ಹದಿನಾಲ್ಕು ತಿಂಗಳಲ್ಲಿ ಮೊದಲ ಬಾರಿಗೆ ಶತಕ ಬಾರಿಸಿದ ಮಿಥಾಲಿ ರಾಜ್ ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಏಳನೇ ಶತಕ ದಾಖಲಿಸಿದರು. ಮಿಥಾಲಿ ಇನ್ನಿಂಗ್ಸ್‌ನಲ್ಲಿ ೧೪೩ ಎಸೆತಗಳಲ್ಲಿ ೧೪ ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿತ್ತು. ಐದು ವಿಕೆಟ್‌ಗೆ ೨೫೩ ರನ್ ಗಳಿಸಿದ್ದ ಭಾರತ ವನಿತಾ ತಂಡ, ಈ ಮೊತ್ತವನ್ನು ಗೆಲುವಾಗಿ ಸಮರ್ಥಿಸಿಕೊಳ್ಳಲು ವಿಫಲವಾಯಿತು.

ಮೇರಿ ಕೋಮ್‌ಗೆ ಚಿನ್ನದ ಪದಕ, ಮನಿಷಾಗೆ ಬೆಳ್ಳಿ

ಪೋಲೆಂಡ್‌ನ ಗ್ಲಿವೈಸ್‌ನಲ್ಲಿ ನಡೆಯುತ್ತಿರುವ ೧೩ನೇ ಸಿಲೆಸಿಯಾನ್ ಓಪನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಇಂದು ಎರಡು ಪದಕಗಳನ್ನು ಜಯಿಸಿತು. ಐದು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ (೪೮  ಕೆಜಿ) ಋತುವಿನಲ್ಲಿ ಮೂರನೇ ಚಿನ್ನದ ಪದಕ ಜಯಿಸಿದರು. ಇನ್ನು, ಮನಿಷಾ (೫೪ ಕೆಜಿ) ರಜತ ಪದಕಕ್ಕೆ ತೃಪ್ತವಾಯಿತು. ಫಿಟ್ನೆಸ್ ಸಮಸ್ಯೆಯಿಂದ  ಏಷ್ಯಾಡ್‌ನಿಂದ ವಂಚಿತವಾದ ಮೇರಿ ಕೋಮ್, ಕಜಕ್‌ಸ್ತಾನದ ಏಜೆರಿಮ್ ಕಸ್ಸಾನಯೇವಾ ವಿರುದ್ಧ ೫-೦ ಅಂತರದಿಂದ ಗೆಲುವು ಸಾಧಿಸಿ ಬಂಗಾರದ ಪದಕ ಜಯಿಸಿದರು. ಈ ಮುನ್ನ ಮೇರಿ, ಚೊಚ್ಚಲ ಇಂಡಿಯಾ ಓಪನ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದುಕೊಂಡಿದ್ದರು. ಇನ್ನು, ಉಕ್ರೇನ್‌ನ ಇವಾನ್ನ ಕ್ರುಪೆನಿಯಾ ವಿರುದ್ಧ ಫೈನಲ್‌ನಲ್ಲಿ ೨-೩ ಅಂತರದಿಂದ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ನಿನ್ನೆ ಎಲ್ ಸರಿತಾ ದೇವಿ (೬೦ ಕೆಜಿ), ರಿತು ಗ್ರಿವಾಲ್ (೫೧ ಕೆಜಿ), ಲಾವ್ಲಿನಾ ಬೊರ್ಗೊಹೈನ್ (೬೯ ಕೆಜಿ) ಮತ್ತು ಪೂಜಾ ರಾಣಿ ೮೧ ಕೆಜಿ ವಿಭಾಗಗಳಲ್ಲಿ ಕಂಚಿನ ಪದಕ ಜಯಿಸಿದರು.

ಮ್ಯಾರಾಥಾನ್‌ನಲ್ಲಿ ನೂತನ ವಿಶ್ವದಾಖಲೆ ಬರೆದ ಕಿಪ್‌ಚೋಗೆ

ಮ್ಯಾರಾಥಾನ್‌ನಲ್ಲಿ ಕೀನ್ಯಾ ಮತ್ತೊಮ್ಮೆ ಪ್ರಭುತ್ವ ಮೆರೆದಿದೆ. ಇಂದು ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಮ್ಯಾರಾಥಾನ್‌ ಓಟದ ಸ್ಪರ್ಧೆಯಲ್ಲಿ ೩೩ರ ಹರೆಯದ, ಒಲಿಂಪಿಕ್ಸ್ ಚಾಂಪಿಯನ್ ಎಲಿಯಡ್ ಕಿಪ್‌ಚೋಗೆ ನಿಗದಿತ ಗುರಿಯನ್ನು ೨ ತಾಸು, ೧ ನಿಮಿಷ ಮತ್ತು ೪೦ ಸೆ.ಗಳಲ್ಲಿ ಕ್ರಮಿಸಿದರು. ೧೯೬೭ರಲ್ಲಿ ಡೆರೆಕ್ ಕ್ಲೇಟನ್ ನಿರ್ಮಿಸಿದ್ದ ದಾಖಲೆಗಿಂತ ೨:೨೩ ಸೆ. ಸಮಯ ತ್ವರಿತಗತಿಯಲ್ಲಿ ಕಿಪ್‌ಚೋಗೆ ನಿಗದಿತ ದೂರ ಕ್ರಮಿಸಿ ಚಿನ್ನದ ಪದಕ ಗೆದ್ದರು. "ನನ್ನ ಒಂದೇ ಒಂದು ಮಾತೆಂದರೆ, 'ವಂದನೆಗಳು ನಿಮಗೆ,' '' ಎಂದು ಚಾಂಪಿಯನ್ ಕಿಪ್‌ಚೋಗೆ ಸ್ಪರ್ಧೆಯ ಬಳಿಕ ತಿಳಿಸಿದರು. ೨೦೧೩ರಲ್ಲಿ ಮ್ಯಾರಾಥಾನ್ ಲೋಕಕ್ಕೆ ಕಾಲಿಟ್ಟ ಕಿಪ್‌ಚೋಗೆ ಅಲ್ಲಿಂದಲು ಏಕಸ್ವಾಮ್ಯ ಪ್ರದರ್ಶನ ನೀಡುತ್ತಾ ಬರುತ್ತಿದ್ದಾರೆ. ೨೦೦೩, ೨೦೦೭ರಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದಿದ್ದ ಕಿಪ್‌ಚೋಗೆ, ೫೦೦೦ ಮೀಟರ್ ಓಟದಲ್ಲಿ ೨೦೦೮ ಮತ್ತು ೨೦೦೪ರ ಒಲಿಂಪಿಕ್ಸ್ ಕೂಟದಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದಿದ್ದರು. ೧೧ ಮ್ಯಾರಾಥಾನ್‌ಗಳಲ್ಲಿ ೧೦ರಲ್ಲಿ ಚಾಂಪಿಯನ್ ಆಗಿರುವ ಕಿಪ್‌ಚೋಗೆ ತಾನೋರ್ವ  ಚಾಂಪಿಯನ್ ಎಂಬುದನ್ನು ನಿರೂಪಿಸಿದ್ದಾರೆ.

ರಫೇಲ್ ಟ್ವಿಸ್ಟ್ | ಮೋದಿ ಸರ್ಕಾರದ ‘ರಿಲಯನ್ಸ್’ ಸೂಚನೆ ಕುರಿತು ಬಾಯಿಬಿಟ್ಟ ಹೊಲಾಂದ್
ಯುವ ಮತದಾರರನ್ನು ಸೆಳೆಯುವ ಅಸ್ತ್ರ ಆಗಲಿದೆಯೇ ಸರ್ಜಿಕಲ್‌ ದಾಳಿ ದಿನಾಚರಣೆ?
ಇಂದಿನ ಡೈಜೆಸ್ಟ್ | ನೀವು ಗಮನಿಸಲೇಬೇಕಾದ ಇತರ 10 ಪ್ರಮುಖ ಸುದ್ದಿಗಳು
Editor’s Pick More