ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶರಿಗೆ ತಲುಪಲಿಲ್ಲ

ಗಾಂಧಿ ಹತ್ಯೆಯ ಸಂಚಿನ ಬಗ್ಗೆ ಮಾಹಿತಿ ತಿಳಿದ ಬಳಿಕ ಪ್ರೊ.ಜೈನ್ ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್‌ರನ್ನು ಭೇಟಿಯಾಗುತ್ತಾರೆ. ಆದರೆ, ತೀರಾ ಕಾರ್ಯದೊತ್ತಡದಲ್ಲಿದ್ದ ಅವರೊಂದಿಗೆ ಈ ವಿಷಯವನ್ನು ಚರ್ಚಿಸುವುದು ಜೈನ್ ಅವರಿಗೆ ಸಾಧ್ಯವಾಗದೆ ಇದ್ದುದು ವಿಪರ್ಯಾಸ

ಸಂಚು ಹೇಗೆ ರೂಪುಗೊಂಡಿರಬಹುದು ಎಂಬ ಕುರಿತ ವಿಶೇಷ ನ್ಯಾಯಾಧೀಶರ ಈ ವಿವರಣೆಯನ್ನು ಪೂರ್ವ ಪಂಜಾಬ್ ಹೈಕೋರ್ಟ್ ಒಪ್ಪಿಕೊಂಡಿತು. ಅಲ್ಲದೆ, ಈ ವಿವರಣೆಗೆ ಪೂರಕವಾಗಿ ೩೩ನೇ ಸಾಕ್ಷಿಯಾದ ಗೋಪಾಲ ಗೋಡ್ಸೆಯ ಹೇಳಿಕೆ ಕೂಡ ದಾಖಲಾಗಿತ್ತು. ಗಾಂಧೀಜೀ ಅವರು ೧೯೪೮ರ ಜನವರಿ ೧೩ರಂದು ತಮ್ಮ ಉಪವಾಸದ ನಿರ್ಧಾರವನ್ನು ಸಮರ್ಥಿಸಿಕೊಂಡ ಬಳಿಕ ಅವರನ್ನು ಮುಗಿಸಲು ನಾಥೂರಾಂ ಗೋಡ್ಸೆ ಅಂತಿಮವಾಗಿ ನಿರ್ಧರಿಸಿದ್ದ ಎಂದು ಗೋಪಾಲ್ ಗೋಡ್ಸೆ ಹೇಳಿದ್ದ!

ಗೋಡ್ಸೆಯ ಆ ಸಂಚು ಮತ್ತು ಸಂಚಿನ ಕುರಿತ ಪೂರ್ವ ಮಾಹಿತಿಯ ಸುತ್ತ ತನಿಖೆ ನಡೆಸುವ ಉದ್ದೇಶದಿಂದಲೇ ಗಾಂಧಿ ಹತ್ಯೆಯ ಸಂಚಿನ ಕುರಿತ ತನಿಖೆಗಾಗಿ ನ್ಯಾಯಮೂರ್ತಿ ಕಪೂರ್ ಆಯೋಗವನ್ನು ನೇಮಿಸಲಾಗಿತ್ತು. ಜೊತೆಗೆ ‘ಸಂಚು’ ಎಂಬ ಪದದ ವ್ಯಾಖ್ಯಾನ ಮತ್ತು ತನಿಖೆಯ ವ್ಯಾಪ್ತಿಯ ಕುರಿತು ಕೆಲವು ಪ್ರಶ್ನೆಗಳು ಎದ್ದ ಹಿನ್ನೆಲೆಯಲ್ಲಿ ಮತ್ತೊಂದು ಅಧಿಸೂಚನೆ ಹೊರಡಿಸುವ ಮೂಲಕ ಆ ವಿಷಯಗಳನ್ನು ಸ್ಪಷ್ಟಪಡಿಲಾಗಿತ್ತು ಕೂಡ. ಪ್ರಮುಖವಾಗಿ ಜಿ ವಿ ಕೇತ್ಕರ್ ಮತ್ತು ಬಾಲುಕಾಕಾ ಕಾನಿಟ್ಕರ್ ಅವರ ಹೇಳಿಕೆಗಳನ್ನು ಪ್ರಮುಖವಾಗಿ ಆಧಾರವಾಗಿಟ್ಟುಕೊಂಡು ಅದರ ಬಳಿಕದ ಬೆಳವಣಿಗೆ ಮತ್ತು ಆ ಪೂರ್ವದ ವಿದ್ಯಮಾನಗಳನ್ನೂ ತನಿಖೆಯ ವ್ಯಾಪ್ತಿಗೆ ಒಳಪಡಿಸಲಾಗಿತ್ತು.

ವಾಸ್ತವವಾಗಿ ಕೇತ್ಕರ್ ಮತ್ತು ಕಾನಿಟ್ಕರ್ ಅವರುಗಳು ಅಂದಿನ ಆಡಳಿತಕ್ಕೆ, ಅಧಿಕಾರರೂಢರಿಗೆ ನಿರ್ದಿಷ್ಟವಾಗಿ ಏನು ಹೇಳಿದ್ದರು? ಅವರ ಅ ಹೇಳಿಕೆಗಳು ಗಾಂಧಿ ಹತ್ಯೆಯ ಸಂಚಿನ ಕುರಿತು ಯಾವೆಲ್ಲಾ ಮಾಹಿತಿಯನ್ನು ಒಳಗೊಂಡಿದ್ದವು. ಆ ಇಬ್ಬರಿಗೂ ಸಂಚಿನ ಕುರಿತು ಮಾಹಿತಿ ಇತ್ತೆ? ಸಂಚಿನ ಅರಿವಿದ್ದೇ ಅವರು ಆ ಮಾಹಿತಿಯನ್ನು ಸರ್ಕಾರದೊಂದಿಗೆ ಹಂಚಿಕೊಂಡಿದ್ದರೆ, ಅಥವಾ ಕೇವಲ ಮುನ್ನೆಚ್ಚರಿಕೆ ಮತ್ತು ಭೀತಿಯಿಂದ ತಮಗೆ ತಿಳಿದ ಮಾಹಿತಿಯನ್ನು ನೀಡಿದ್ದರೆ? ಎಂಬ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಆಯೋಗ ತನಿಖೆಯನ್ನು ಆರಂಭಿಸಿತ್ತು.

ಆಯೋಗಕ್ಕೆ ಲಭ್ಯವಾದ ಜಿ ವಿ ಕೇತ್ಕರ್ ಅವರ ಸಾಕ್ಷ್ಯಗಳ ಪ್ರಕಾರ(ಆಯೋಗದ ಮುಂದೆ ಅವರು ನೀಡಿದ ಹೇಳಿಕೆ ಮತ್ತು ಬಾಂಬೆ ಹೈಕೋರ್ಟಿನಲ್ಲಿ ಮತ್ತು ಡಿಟೆನಸ್ ರಿವ್ಯೂಯಿಂಗ್ ಬೋರ್ಡ್ ಮುಂದೆ ಅವರು ಸಲ್ಲಿಸಿದ ಪ್ರಮಾಣಪತ್ರದಲ್ಲಿನ ಹೇಳಿಕೆ ಒಳಗೊಂಡು), ೧೯೪೮ರ ಜನವರಿ ೨೦ಕ್ಕೆ ಮುನ್ನ ಅವರಿಗೆ ಸಂಚಿನ ಕುರಿತು ಮಾಹಿತಿ ಇತ್ತು ಎಂಬ ಬಗ್ಗೆ ಸ್ಪಷ್ಟಪಡಿಸಿಲ್ಲ. ವಾಸ್ತವವಾಗಿ ಹೇಳಬೇಕೆಂದರೆ; ೧೯೪೮ರ ಜನವರಿ ೨೦ಕ್ಕೆ ಮುಂಚೆ ಗಾಂಧಿ ಹತ್ಯೆಯ ಕುರಿತ ಸಂಚಿನ ಮಾಹಿತಿ ಹೊಂದಿದ್ದ ಏಕೈಕ ವ್ಯಕ್ತಿ ಪ್ರೊಫೆಸರ್ ಜೈನ್ ಮಾತ್ರ. ಆದರೆ, ತಮಗೆ ತಿಳಿದಿದ್ದ ಆ ಮಹತ್ವದ, ಆಘಾತಕಾರಿ ಮಾಹಿತಿಯ ಬಗ್ಗೆ ಅವರಿಗೇ ಅನುಮಾನವಿತ್ತು! ಹಾಗಾಗಿ ಆ ಮಾಹಿತಿಯನ್ನು ಸಕಾಲಕ್ಕೆ ಸರಿಯಾದ ವ್ಯಕ್ತಿಗೆ ತಲುಪಿಸಲು ಅವರು ಹಿಂಜರಿದರು ಮತ್ತು ಆರಂಭದಲ್ಲಿ ಅನುಮಾನಾಸ್ಪದವಾಗಿ ನಡೆದುಕೊಂಡರು. ಆ ಹಿನ್ನೆಲೆಯಲ್ಲಿ ಆಯೋಗ ಅವರನ್ನು ಹಲವು ಬಾರಿ ವಿಚಾರಣೆಗೊಳಪಡಿಸಿತು. ಯಾವಾಗ ಕರೆ ಕಳಿಸಿದರೂ ಅವರು ತಪ್ಪದೇ ಆಯೋಗದ ಮುಂದೆ ಹಾಜರಾಗುತ್ತಿದ್ದರು ಮತ್ತು ತಮಗೆ ಗೊತ್ತಿದ್ದ ಎಲ್ಲಾ ಮಾಹಿತಿಯನ್ನೂ ಮುಕ್ತವಾಗಿ ನೀಡಲು ಉತ್ಸುಕವಾಗಿದ್ದರು ಕೂಡ.

ಇದನ್ನೂ ಓದಿ : ಗಾಂಧಿ ಹತ್ಯೆ ಸಂಚು | ಕಂತು 16 | ಹಂತಕರನ್ನು ವೈಭವೀಕರಿಸುವ ಬಗ್ಗೆ ವ್ಯಾಪಕ ಖಂಡನೆ

ಸಂಚಿನ ಕುರಿತು ತಮಗೆ ತಿಳಿದಿದ್ದ ವಿವರಗಳನ್ನು ಪ್ರಮಾಣೀಕರಿಸಿದ್ದ ಪ್ರೊ. ಜೈನ್, ಜನವರಿ ಮೊದಲ ಭಾಗದಲ್ಲಿ ಒಮ್ಮೆ ಕಾಲೇಜಿನಿಂದ ತಾನು ಮನೆಗೆ ವಾಪಸ್ಸಾಗುತ್ತಿದ್ದಾಗ ಮದನ್‌ಲಾಲ್ ಭೇಟಿಯಾಗಿದ್ದ. ತಮ್ಮೊಂದಿಗೆ ಮಾತನಾಡಬೇಕಿದೆ ಎಂದು ಆತ ತಮ್ಮೊಂದಿಗೆ ತಮ್ಮ ಮನೆಗೆ ಧಾವಿಸಿದ್ದ ಎಂದಿದ್ದರು. ಅಂದು ಕರ್ಕರೆ ಕೂಡ ಅಲ್ಲಿದ್ದ ಮತ್ತು ಆತ ತುಸು ದೂರದಲ್ಲೇ ಇದ್ದು, ತಮ್ಮನ್ನು ಗಮನಿಸುತ್ತಿದ್ದ. ಅದೇ ದಿನ ರಾತ್ರಿ ಮತ್ತೆ ಮದನಲಾಲ್ ತಮ್ಮ ಮನೆಗೆ ಬಂದಿದ್ದ. ಆ ಬಾರಿ ಆತ ಏಕಾಂಗಿಯಾಗಿಯೇ ಬಂದಿದ್ದು, ಜೊತೆಗೆ ಯಾರನ್ನೂ ಕರೆತಂದಿರಲಿಲ್ಲ. ಮದನ್ ಲಾಲ್ ಅಂದು ರಾತ್ರಿ ಆರಂಭದಲ್ಲಿ ಒಂದಕ್ಕೊಂದು ಸಂಬಂಧವೇ ಇರದ ಸಂಗತಿಗಳ ಕುರಿತು ಲೋಕಾಭಿರಾಮವಾಗಿ ಹರಟಿದ. ಬಳಿಕ, ಯಾರನ್ನೋ ಒಬ್ಬರನ್ನು ಕೊಲ್ಲಲು ಒಂದು ಸಂಚು ನಡೆದಿದೆ ಎಂದು ಸಂಚಿನ ಕುರಿತು ಪ್ರೊಫೆಸರಿ‌ಗೆ ಮಾಹಿತಿ ನೀಡಿದ. ಆದರೆ, ಯಾರನ್ನು ಎಂಬುದನ್ನು ಆತ ಹೇಳಲಿಲ್ಲ. ಆಗ ಜೈನ್ ಅವರೇ ಒಂದೊಂದಾಗಿ ಹೆಸರುಗಳನ್ನು ಹೇಳುತ್ತಾ ಹೋದರು. ಅಂತಿಮವಾಗಿ ಮಹಾತ್ಮ ಹೆಸರನ್ನು ಆತ ಒಪ್ಪಿಕೊಂಡ. ಆದರೆ, ಅಂತಹ ಖೂಳ ಸಂಚಿನ ಕುರಿತ ತೀರಾ ಅಪಾಯಕಾರಿ ಮತ್ತು ಸೂಕ್ಷ್ಮ ವಿಷಯವನ್ನು ತಿಳಿದ ಬಳಿಕ ಪ್ರೊ ಜೈನ್ ಅವರು ಯಾವುದೇ ಗಂಭೀರ ಪ್ರಯತ್ನಕ್ಕೆ ಮುಂದಾಗದೇ, ಕೇವಲ ಮದನ್‌ಲಾಲನಿಗೆ ನೀತಿಪಾಠ ಮಾಡಿ ಸುಮ್ಮನಾದರು. ಅಲ್ಲದೆ, ತಮ್ಮ ಬುದ್ದಿವಾದದ ಮೂಲಕ ಮದನ್‌ಲಾಲನ ಮನಸ್ಸನ್ನು ಬದಲಾಯಿಸಿಬಿಟ್ಟಿರುವುದಾಗಿ ತಮಗೆ ತಾವೇ ಸಮಾಧಾನಪಟ್ಟುಕೊಂಡರು. ಅಂತಹ ದುರಾದೃಷ್ಟಕರ ಮತ್ತು ತೀರಾ ಅಮಾಯಕ ಎನಿಸುವ ರೀತಿಯಲ್ಲಿ ಅವರು ಏಕೆ ನಡೆದುಕೊಂಡರು ಎಂಬುದು ಕುತೂಹಲಕರ.

ಜೈನ್ ಮತ್ತು ಮದನ್‌ಲಾಲ್ ನಡುವಿನ ಈ ಮಾತುಕತೆ ನಡೆದದ್ದು ಜನವರಿ ಮೊದಲಾರ್ಧದ ಹೊತ್ತಿಗೆ. ಗಾಂಧಿ ಹತ್ಯೆಯ ಆ ಸಂಚಿನ ಬಗ್ಗೆ ಮಾಹಿತಿ ತಿಳಿದ ಬಳಿಕ ಪ್ರೊ ಜೈನ್ ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್ ಅವರನ್ನು ಭೇಟಿ ಮಾಡುತ್ತಾರೆ. ಆದರೆ, ಆ ನಾಯಕರು ತೀರಾ ಕಾರ್ಯದೊತ್ತಡದಲ್ಲಿದ್ದಿದ್ದರಿಂದ ಅವರೊಂದಿಗೆ ಈ ವಿಷಯವನ್ನು ಚರ್ಚಿಸುವುದು ಜೈನ್ ಅವರಿಗೆ ಸಾಧ್ಯವಾಗುವುದಿಲ್ಲ. ಆ ಬಳಿಕ ಪ್ರೊ ಜೈನ್ ಈ ವಿಷಯವನ್ನು ತನ್ನ ಇಬ್ಬರು ಸಹೋದ್ಯೋಗಿಗಳ ಬಳಿ ಹಂಚಿಕೊಳ್ಳುತ್ತಾರೆ. ಆ ಪೈಕಿ ಒಬ್ಬರು ಅಂಗದ್ ಸಿಂಗ್ ಮತ್ತೊಬ್ಬರು ಪ್ರೊಫೆಸರ್ ಯಾಗ್ನಿಕ್. ಆ ಪೈಕಿ ಅಂಗದ್ ಸಿಂಗ್ ಅವರು ವಿಷಯವನ್ನು ಸಮಾಜವಾದಿ ಪಕ್ಷದ ನಾಯಕರಾದ ಅಶೋಕ್ ಮೆಹ್ತಾ ಮತ್ತು ಹ್ಯಾರೀಸ್ ಅವರಿಗೆ ತಿಳಿಸುತ್ತಾರೆ. ಆದರೆ, ಮೆಹ್ತಾ ಮತ್ತು ಹ್ಯಾರಿಸ್ ಆ ಮಾತುಕತೆಯನ್ನು ಆಯೋಗದ ವಿಚಾರಣೆಯ ವೇಳೆ ನೆನಪಿಸಿಕೊಳ್ಳಲಿಲ್ಲ. ಅಲ್ಲದೆ, ಈ ವಿಷಯವನ್ನು ಸ್ವತಃ ಜಯಪ್ರಕಾಶ್ ನಾರಾಯಣ್ ಅವರಿಗೆ ತಾವು ತಿಳಿಸಿದ್ದಾಗೆ ಅಂಗದ್ ಸಿಂಗ್ ಹೇಳಿದ್ದರೂ, ಜಯಪ್ರಕಾಶ್ ನಾರಾಯಣ್ ಅವರು ಅ ಮಾಹಿತಿಯ ಬಗ್ಗೆಯಾಗಲೀ, ಅಂಗದ್ ಬಗ್ಗೆಯಾಗಲೀ ತಮಗೆ ಏನೂ ನೆನಪಿಲ್ಲ ಎಂದರು.

ಹಾಗಾಗಿ ಸದ್ಯಕ್ಕೆ ಸಂಚಿನ ಬಗ್ಗೆ ಪೂರ್ವಮಾಹಿತಿ ಇದ್ದದ್ದು ಸ್ವತಃ ಸಂಚುಕೋರರು, ಪ್ರೊ ಜೈನ್ ಮತ್ತು ಅವರ ಇಬ್ಬರು ಸಹೋದ್ಯೋಗಿಗಳಿಗೆ ಮಾತ್ರ. ಆದರೆ, ಪ್ರೊ ಜೈನ್ ಅವರು ಹೇಳಿದ ಮಾತುಗಳ ಬಗ್ಗೆ ಅವರ ಇಬ್ಬರು ಸಹೋದ್ಯೋಗಿಗಳು, ಸ್ನೇಹಿತರೂ ಆದ ಅಂಗದ್ ಮತ್ತು ಯಾಗ್ನಿಕ್ ಅವರಿಗೆ ನಂಬಿಕೆಯೇ ಇರಲಿಲ್ಲ. ಆದಾಗ್ಯೂ ನ್ಯಾಯಾಲಯದ ವಿಚಾರಣೆಯಿಂದ ತಿಳಿದುಬಂದ ಸಂಗತಿಯೆಂದರೆ; ಗಾಂಧಿ ಹತ್ಯೆಯ ಸಂಚು ೧೯೪೮ರ ಜನವರಿ ೯ಕ್ಕೂ ಮುಂಚೆಯೇ ರೂಪುಗೊಂಡಿತ್ತು. ಆದರೆ, ಪ್ರಾಸಿಕ್ಯೂಷನ್ ಪ್ರಕಾರ ಅಂತಹದ್ದೊಂದು ಸಂಚು ೧೯೪೭ರ ಡಿಸೆಂಬರಿನಲ್ಲಿಯೇ ರೂಪುಗೊಂಡಿತ್ತು. ಆ ಹಿನ್ನೆಲೆಯಲ್ಲಿ ಹೇಳುವುದಾದರೆ; ೧೯೪೭ರ ಜುಲೈನಲ್ಲಿ ಬಾಲುಕಾಕಾ ಕಾನಿಟ್ಕರ್ ಬರೆದಿದ್ದ ಪತ್ರದಲ್ಲಿ, ‘ಗಾಂಧಿ ಹತ್ಯೆಯ ಸಂಚು’ ಎಂಬ ಅಂಶ ತಾಂತ್ರಿಕವಾಗಿ ಬಳಕೆಯಾಗಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಸಂಚು ಎಂಬ ಪದ ಬಳಸದೆಯೇ, ಆ ಪತ್ರದಲ್ಲಿ ಗಾಂಧೀಜಿ ಅವರ ಜೀವಕ್ಕೆ ಅಪಾಯವಿದೆ, ಅವರನ್ನು ಕೊಲ್ಲಲು ಯೋಜಿಸಲಾಗಿದೆ ಅಥವಾ ಉದ್ದೇಶಿಸಲಾಗಿದೆ ಎಂದಷ್ಟೇ ಹೇಳಿರಬಹುದು. ಆಯೋಗಕ್ಕೆ ಸಿಕ್ಕ ಮಾಹಿತಿಯ ಪ್ರಕಾರ, ಕಾನಿಟ್ಕರ್ ಅವರ ಆ ಪತ್ರದಲ್ಲಿ ಮಹಾತ್ಮ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರ ಜೀವಕ್ಕೆ ಅಪಾಯವಿದೆ ಎಂದಷ್ಟೇ ನಮೂದಿಸಲಾಗಿತ್ತು.

ಆ ಹಿನ್ನೆಲೆಯಲ್ಲಿ ಆಯೋಗವು, ವಿಚಾರಣೆಯ ವ್ಯಾಪ್ತಿಗೆ ಒಳಪಡಿಸಿರುವ, ‘ನಾಥೂರಾಂ ಗೋಡ್ಸೆ ಮತ್ತು ಆತನ ಸಹಚರರ ಗಾಂಧಿ ಹತ್ಯೆಯ ಸಂಚಿನ’ ಕುರಿತ ಮಾಹಿತಿಯೊಂದಿಗೆ, ಗಾಂಧಿ ಹತ್ಯೆ ಅಥವಾ ಅವರ ಜೀವಕ್ಕೆ ಅಪಾಯ ತರುವ ಯಾವುದೇ ಬಗೆಯ ಸಂಚು, ಉದ್ದೇಶದ ಕುರಿತ ಯಾವುದೇ ಮಾಹಿತಿ ಅಥವಾ ಅರಿವಿನ ಕುರಿತೂ ವಿಚಾರಣೆ ನಡೆಸುವುದು ಕೂಡ ತನ್ನ ವಿಚಾರಣೆಯ ವ್ಯಾಪ್ತಿಗೊಳಪಟ್ಟಿದೆ ಎಂದು ತೀರ್ಮಾನಿಸಿತ್ತು.

ಆ ಹಿನ್ನೆಲೆಯಲ್ಲಿ ಹೇಳುವುದೇ ಆದರೆ; ಆಯೋಗದ ಮುಂದೆ ಅನಾವರಣಗೊಂಡ ಸಾಕ್ಷ್ಯಾಧಾರಗಳ ಪ್ರಕಾರ; ಮಹಾತ್ಮ ಗಾಂಧಿ ಸೇರಿದಂತೆ ಉನ್ನತ ಕಾಂಗ್ರೆಸ್ ನಾಯಕರ ಜೀವಕ್ಕೆ ಅಪಾಯವಿರುವ ಬಗ್ಗೆ ಬಾಲುಕಾಕ ಕಾನಿಟ್ಕರ್ ಅವರಿಗೆ ೧೯೪೭ರ ಜುಲೈ ವೇಳೆಗೆ ಮಾಹಿತಿ ಸಿಕ್ಕಿತ್ತು ಮತ್ತು ಆ ಮಾಹಿತಿಯನ್ನೊಳಗೊಂಡ ರಿಜಿಸ್ಟರ್ಡ್ ಪತ್ರವೊಂದನ್ನು ಅವರು ದೆಹಲಿಯ ಬಿ ಜಿ ಖೇರ್ ಅವರಿಗೆ ಕಳಿಸಿದ್ದರು. ಹಾಗಾಗಿ ಆಯೋಗವು ತನ್ನ ತನಿಖಾ ವ್ಯಾಪ್ತಿಯನ್ನು ವ್ಯಾಖ್ಯಾನಿಸಿರುವ ‘ಗಾಂಧಿ ಹತ್ಯೆಯ ಕುರಿತ ಗೋಡ್ಸೆ ಮತ್ತು ಆತನ ಸಹಚರರ ಸಂಚು’ ಕುರಿತು ಮಾತ್ರ ಸೀಮಿತಗೊಳಿಸಿದರೆ, ಆಯೋಗದ ರಚನೆಯ ಉದ್ದೇಶವೇ ಈಡೇರದು ಮತ್ತು ಆಯೋಗ ರಚನೆಯ ಹಿಂದಿನ ಸಂಸತ್ತಿನ ವ್ಯಾಪಕ ಚರ್ಚೆ ಮತ್ತು ಗುರಿ ಕೂಡ ನಿಷ್ಪ್ರಯೋಜಕವಾಗಲಿದೆ ಎಂಬುದು ನ್ಯಾ. ಕಪೂರ್ ಅವರ ಅಭಿಪ್ರಾಯವಾಗಿತ್ತು. ಆ ಹಿನ್ನೆಲೆಯಲ್ಲಿ; ‘ಗಾಂಧಿ ಹತ್ಯೆಯ ಸಂಚಿನ ಪೂರ್ವಮಾಹಿತಿ’ ಎಂಬ ಪದಪುಂಜಗಳನ್ನು, ಕೇವಲ ಹತ್ಯೆಯ ಸಂಚು ಎಂಬುದಷ್ಟೇ ಅಲ್ಲದೆ, ಮಹಾತ್ಮ ಗಾಂಧಿಯ ಜೀವಕ್ಕೆ ಅಪಾಯ ಇರುವ ಕುರಿತ ಪೂರ್ವಮಾಹಿತಿ ಎಂದೂ ವ್ಯಾಖ್ಯಾನಿಸಲಾಯಿತು. ಆ ಮೂಲಕ ಗಾಂಧಿ ಹತ್ಯೆಯ ಹಿಂದಿನ ಸಂಚು ಮತ್ತು ಸಂಚುಕೋರರನ್ನು ಬಯಲಿಗೆಳೆಯುವ ಅಂದಿನ ಸಂಸತ್ತಿನ ಉದ್ದೇಶವನ್ನು ಸಫಲಗೊಳಿಸುವುದು ಕೂಡ ಆಯೋಗದ ಧೋರಣೆಯಾಗಿತ್ತು.

ಆ ಹಿನ್ನೆಲೆಯಲ್ಲಿಯೇ, ಆಯೋಗದ ತನಿಖೆಯ ವ್ಯಾಪ್ತಿಯನ್ನು ಪುನರ್ ವ್ಯಾಖ್ಯಾನಿಸಲಾಯಿತು ಮತ್ತು ಆ ಮೂಲಕ ಗಾಂಧಿ ಹತ್ಯೆಯ ಸಂಚು ಮಾತ್ರವಲ್ಲ, ಯಾವುದೇ ಒಬ್ಬ ವ್ಯಕ್ತಿ ಅಥವಾ ಹಲವರಿಂದ ಗಾಂಧಿಯ ಹತ್ಯೆ ಅಥವಾ ಜೀವಕ್ಕೆ ಅಪಾಯ ತರುವ ಯಾವುದೇ ಬಗೆಯ ಉದ್ದೇಶ, ಯೋಜನೆ ಕುರಿತ ಮಾಹಿತಿ ಕೂಡ ವಿಚಾರಣಾ ವ್ಯಾಪ್ತಿಗೆ ಸೇರಿಸಲಾಯಿತು. ಹಾಗಾಗಿ, ಗಾಂಧಿ ಜೀವಕ್ಕೆ ಅಪಾಯವಿರುವ ಬಗ್ಗೆ ಜಿ ವಿ ಕೇತ್ಕರ್, ಬಾಲುಕಾಕಾ ಕಾನಿಟ್ಕರ್, ಎಸ್‌ ಆರ್ ಭಾಗವತ್, ಕೇಶವರಾವ್ ಜಢೆ, ಆರ್ ಕೆ ಖಾಂಡಿಲ್ಕರ್ ಮತ್ತು ಎನ್‌ ವಿ ಗಾಡ್ಗೀಳ್ ಅವರಿಗೆ ಇದ್ದ ಮಾಹಿತಿ ಕೂಡ ಆಯೋಗದ ವ್ಯಾಪ್ತಿಗೆ ಸೇರಿತು. ಆ ಹಿನ್ನೆಲೆಯಲ್ಲಿಯೇ ಕೇತ್ಕರ್ ಅವರನ್ನು ಒಂದನೇ ಸಾಕ್ಷಿಯಾಗಿ ಹೆಸರಿಸಲಾಯಿತು ಮತ್ತು ಆ ಒಂದನೇ ಸಾಕ್ಷಿ ನೀಡಿದ ದಾಖಲೆ, ಹೇಳಿಕೆ ಮತ್ತು ಸಾಂದರ್ಭಿಕ ಸಾಕ್ಷ್ಯಗಳ ಹಿನ್ನೆಲೆಯಲ್ಲಿ ಆಯೋಗದ ಮುಂದಿನ ಅವರ ಹೇಳಿಕೆಯನ್ನು ವಿಶ್ಲೇಷಿಸಲಾಯಿತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More