ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು

ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರಿದಿದ್ದು, ಇವರ ಮೈಮರೆಯುವಿಕೆಯಿಂದಾಗಿ ವಿವಿಧ ಮಂಡಳಿಗಳಲ್ಲಿರುವ ಸಾವಿರಾರು ಕೋಟಿ ರು. ಮೊತ್ತದ ಕಾಯ್ದಿಟ್ಟ ನಿಧಿ ಆದಾಯ ತೆರಿಗೆ ಇಲಾಖೆ ಪಾಲಾಗಿದೆ. ಇದಕ್ಕೆ ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯೇ ಉತ್ತಮ ನಿದರ್ಶನ

ಹಿರಿಯ ಐಎಎಸ್‌ ಅಧಿಕಾರಿಗಳ ಸತತ ನಿರ್ಲಕ್ಷ್ಯದಿಂದಾಗಿ ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ನಿಧಿಯ ೫,೫೦೦ ಕೋಟಿ ರು. ಪೈಕಿ ೪೫೦ ಕೋಟಿ ರು.ಗಳನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ. ಹಲವು ಬ್ಯಾಂಕ್‌ಗಳಲ್ಲಿಟ್ಟಿದ್ದ ನಿಧಿಯನ್ನು ನಿರ್ದಿಷ್ಟ ಬ್ಯಾಂಕಿಗೆ ವರ್ಗಾಯಿಸಿರುವುದು ಮತ್ತು ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯದಿರುವುದೇ ಇದಕ್ಕೆ ಮೂಲ ಕಾರಣ ಎನ್ನಲಾಗಿದೆ. ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿಕೊಂಡಿರುವುದರಿಂದ ಇದು ಮಂಡಳಿಗೆ ಆದ ನಷ್ಟ ಎಂದು ಹೇಳಲಾಗಿದೆ.

ಮಂಡಳಿಯ ಆದಾಯ ಮತ್ತು ನಿಧಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ವಿನಾಯಿತಿ ಪಡೆಯಬೇಕು ಎಂದು ಇಲಾಖೆ ಈ ಹಿಂದೆಯೇ ಎಚ್ಚರಿಸಿತ್ತಲ್ಲದೆ, ಶೋಕಾಸ್‌ ನೋಟಿಸ್ ಜಾರಿಗೊಳಿಸಿತ್ತು. ಆದರೆ, ಇಲಾಖೆಯ ಕಾರ್ಯದರ್ಶಿಗಳಾಗಿದ್ದ ಐಎಎಸ್‌ ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಪರಿಣಾಮ, ಮಂಡಳಿಯ ನಿಧಿ ಇದೀಗ ಆದಾಯ ತೆರಿಗೆ ಇಲಾಖೆ ವಶದಲ್ಲಿದೆ. ಹಾಗೆಯೇ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ೨೦೦೭ರಿಂದ ಮೌಲ್ಯಮಾಪನ ಕಾರ್ಯ ಕೈಗೆತ್ತಿಕೊಂಡಿರುವುದರಿಂದ ಮಂಡಳಿಗೆ ಭಾರಿ ಪ್ರಮಾಣದಲ್ಲಿ ನಷ್ಟ ಉಂಟಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಈ ಪ್ರಕರಣ ಕುರಿತು ಕರ್ನಾಟಕ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ೨ ಸಭೆಯಲ್ಲಿಯೂ ಚರ್ಚೆಯಾಗಿದೆ. ಇಷ್ಟೊಂದು ಮೊತ್ತವನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿಕೊಳ್ಳುವುದರಿಂದ ತಪ್ಪಿಸಬಹುದಾಗಿದ್ದರೂ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಮತ್ತು ಇತರ ಉನ್ನತ ಅಧಿಕಾರಿಗಳ ಅಸಡ್ಡೆ ವರ್ತನೆಗೆ ಸಮಿತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದಕ್ಕೆ ಸಂಬಂಧಿಸಿದಂತೆ ಐಎಎಸ್‌ ಅಧಿಕಾರಿ ಹಾಗೂ ಕಾರ್ಯದರ್ಶಿಯೂ ಆಗಿರುವ ಆಮ್ಲಾನ್‌ ಆದಿತ್ಯ ಬಿಸ್ವಾಸ್‌ ಅವರನ್ನು ಸಮಿತಿ ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡರು ಎಂದು ಸಭೆಯಲ್ಲಿದ್ದ ಸದಸ್ಯ ಶಾಸಕರೊಬ್ಬರು ‘ದಿ ಸ್ಟೇಟ್‌’ಗೆ ತಿಳಿಸಿದ್ದಾರೆ.

ರಾಜ್ಯದಲ್ಲಿ 10 ಲಕ್ಷ ರು. ವೆಚ್ಚ ಮೇಲ್ಪಟ್ಟು ಖರ್ಚು ಮಾಡಿ ಕಟ್ಟಡ ನಿರ್ಮಾಣ ಮಾಡುವಾಗ ಶೇ.1ರಷ್ಟು ಕಾರ್ಮಿಕ ಕಲ್ಯಾಣ ಸೆಸ್‌ ವಿಧಿಸುವ ಪದ್ಧತಿ 2007ರಲ್ಲಿ ಜಾರಿಗೆ ಬಂದಿತ್ತು. ಕಾರ್ಮಿಕರ ಕಲ್ಯಾಣಕ್ಕೆ ಈ ಹಣ ಬಳಸಬೇಕು ಎಂಬ ನಿಯಮವಿದೆ. ಈ ಪ್ರಕಾರ, ಕಟ್ಟಡ ನಿರ್ಮಾಣ ಕಂಪನಿಯೂ ಸೇರಿದಂತೆ ಕಟ್ಟಡ ಮಾಲೀಕರಿಂದ ಈವರೆಗೆ ೫,೫೦೦ ಕೋಟಿ ರು. ಸಂಗ್ರಹವಾಗಿದೆ. ಈ ಹಣವನ್ನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಠೇವಣಿ ರೂಪದಲ್ಲಿ ಇರಿಸಲಾಗಿತ್ತು.

ಆದರೆ, ಆಮ್ಲಾನ್‌ ಆದಿತ್ಯ ಬಿಸ್ವಾಸ್‌ ಅವರು ಕಾರ್ಯದರ್ಶಿಯಾಗಿ ಅಧಿಕಾರಕ್ಕೆ ಬಂದ ನಂತರ ವಿವಿಧ ಬ್ಯಾಂಕ್‌ಗಳಲ್ಲಿ ಇರಿಸಿದ್ದ ೫,೫೦೦ ಕೋಟಿ ರು.ಗಳನ್ನು ಕೆನರಾ ಬ್ಯಾಂಕೊಂದರಲ್ಲೇ ಠೇವಣಿ ರೂಪದಲ್ಲಿ ಇರಿಸಿದ್ದರು. ಅಲ್ಲದೆ, ಮಂಡಳಿ ೨೦೧೫-೧೬ನೇ ಸಾಲಿನಲ್ಲಿ ೧,೦೦೦ ಕೋಟಿ ರು. ಆದಾಯ ಇದೆ ಎಂದು ಆದಾಯ ತೆರಿಗೆ ಇಲಾಖೆಗೆ ಘೋಷಿಸಿತ್ತು.

ಇದನ್ನೂ ಓದಿ : ಗುತ್ತಿಗೆದಾರರಿಗೆ ಪಾವತಿಸಿರುವ ಮೊತ್ತದ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣು

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ೨೦೧೫-೧೬ನೇ ಸಾಲಿನಲ್ಲಿ ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ಇದನ್ನು ಗಮನಿಸಿದ್ದರಲ್ಲದೆ, ಈ ಸಂಬಂಧ ಒಟ್ಟು ಆದಾಯಕ್ಕೆ ಶೇ.೩೦ರಷ್ಟು ಆದಾಯ ತೆರಿಗೆ ವಿಧಿಸಿ ಕೆನರಾ ಬ್ಯಾಂಕಿಗೆ ೨೦೧೮ರ ಫೆ.೨೮ರಂದು ನೋಟಿಸ್ ಜಾರಿಗೊಳಿಸಿದ್ದರಿಂದ ಅದೇ ದಿನದಂದು ಬ್ಯಾಂಕ್ ೪೫೦ ಕೋಟಿ ರು.ಗಳನ್ನು ಆದಾಯ ತೆರಿಗೆ ಇಲಾಖೆಗೆ ಜಮಾ ಮಾಡಿರುವುದು ಗೊತ್ತಾಗಿದೆ.

ಇದಕ್ಕೂ ಮೊದಲು ಕಾರ್ಯದರ್ಶಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಶೋಕಾಸ್‌ ನೋಟಿಸ್‌ ಕೂಡ ಜಾರಿಗೊಳಿಸಿದ್ದರು. ಆದರೆ, ನಿಗದಿತ ಅವಧಿಯಲ್ಲಿ ಮಂಡಳಿ ಅಧಿಕಾರಿಗಳು ಉತ್ತರಿಸಿರಲಿಲ್ಲ ಮತ್ತು ವಿನಾಯಿತಿ ಪಡೆದುಕೊಳ್ಳುವ ಸಂಬಂಧ ಯಾವುದೇ ಕ್ರಮ ವಹಿಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

೨೦೧೧-೧೩ರಲ್ಲಿಯೂ ಮಂಡಳಿಯ ನಿಧಿ ಪೈಕಿ ೪೫ ಕೋಟಿ ರು.ಗಳನ್ನು ಆದಾಯ ತೆರಿಗೆ ಇಲಾಖೆ ಜಫ್ತಿ ಮಾಡಿತ್ತು. ಆ ನಂತರ ಎಚ್ಚೆತ್ತುಕೊಂಡಿದ್ದ ಅಧಿಕಾರಿಯೊಬ್ಬರು, ಆದಾಯ ತೆರಿಗೆ ಇಲಾಖೆಗೆ ಪ್ರಮಾಣಪತ್ರ ಸಲ್ಲಿಸಿದ್ದರ ಪರಿಣಾಮ ೧೫ ಕೋಟಿ ರು. ಮಂಡಳಿಗೆ ವಾಪಸ್‌ ಬಂದಿತ್ತು. ಆದರೆ, “೨೦೧೪-೧೫ರ ನಂತರ ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಕಾರಣ, ೪೫೦ ಕೋಟಿ ರು. ಆದಾಯ ತೆರಿಗೆ ಇಲಾಖೆ ಪಾಲಾಗಿದೆ,” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದಲ್ಲಿರುವ ಒಟ್ಟು ಕಟ್ಟಡ ನಿರ್ಮಾಣ ಕಾರ್ಮಿಕರ ಪೈಕಿ ಇಲ್ಲಿವರೆಗೆ ಶೇ.50ರಷ್ಟು ಕಾರ್ಮಿಕರು ಮಾತ್ರ ಮಂಡಳಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಕಾರ್ಮಿಕ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, 2007ರಿಂದ ಇಲ್ಲಿವರೆಗೆ 10.10 ಲಕ್ಷ ಕಾರ್ಮಿಕರಷ್ಟೇ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಾರ್ಪಸ್‌ ಫಂಡ್‌ನಲ್ಲಿದ್ದ ೪೪೧ ಕೋಟಿ ರು.ಗಳನ್ನು ಆರು ವರ್ಷಗಳ ಹಿಂದೆ ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿಕೊಂಡಿತ್ತು. ಈ ಸಂಬಂಧ ವಿಟಿಯುಗೆ ನೋಟಿಸ್‌ ಜಾರಿಗೊಳಿಸಿದ್ದ ಆದಾಯ ತೆರಿಗೆ ಇಲಾಖೆ, ಬಾಕಿ ಮೇಲಿನ 127 ಕೋಟಿ ರು. ಬಡ್ಡಿ ಮೊತ್ತವನ್ನು ಪಾವತಿಸುವಂತೆ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಚಿತ್ರ: ಐಎಎಸ್‌ ಅಧಿಕಾರಿ ಆಮ್ಲಾನ್‌ ಆದಿತ್ಯ ಬಿಸ್ವಾಸ್‌

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More