ಟ್ವಿಟರ್ ಸ್ಟೇಟ್ | ಎಡ-ಬಲ ಸಂಘರ್ಷದಲ್ಲಿ ಮುಳುಗಿದ ದೆಹಲಿ ವಿವಿ ಕ್ಯಾಂಪಸ್‌ಗಳು

ವಿದ್ಯಾರ್ಥಿ ಚುನಾವಣೆಯ ಫಲಿತಾಂಶ ಪ್ರಕಟವಾದ ಜೆಎನ್‌ಯುನಲ್ಲಿ ಎಬಿವಿಪಿ ಸದಸ್ಯರು ದಾಂಧಲೆ ನಡೆಸಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಈ ಬಗ್ಗೆ ಎಡ ಮತ್ತು ಬಲಪಂಥೀಯ ವಿದ್ಯಾರ್ಥಿ ಸಂಘಟನೆಗಳು ಪರಸ್ಪರರ ಮೇಲೆ ಆರೋಪ ಹೊರಿಸುತ್ತಿವೆ

ವಿದ್ಯಾರ್ಥಿ ಸಂಘಟನೆಯಾಗಿ ಎಬಿವಿಪಿ ರಾಷ್ಟ್ರಾದ್ಯಂತ ಬಲಿಷ್ಠವಾಗಿ ಬೆಳೆಯುತ್ತಿದ್ದಂತೆಯೇ ಹಿಂಸಾಚಾರಕ್ಕೆ ಇಳಿಯುತ್ತಿರುವ ಪ್ರಕರಣಗಳೂ ಹೆಚ್ಚಾಗುತ್ತಿದೆ. ಈ ಹಿಂಸಾಚಾರಕ್ಕೆ ರಾಷ್ಟ್ರದ ರಾಜಧಾನಿಯ ಅತಿದೊಡ್ಡ ವಿಶ್ವವಿದ್ಯಾಲಯಗಳೆರಡು ಸಾಕ್ಷಿಯಾಗಿವೆ. ಇತ್ತೀಚೆಗೆ ವಿದ್ಯಾರ್ಥಿ ಚುನಾವಣೆಯ ಫಲಿತಾಂಶ ಪ್ರಕಟವಾಗಿರುವ ಜವಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಎಬಿವಿಪಿ ಸದಸ್ಯರು ದಾಂಧಲೆ ನಡೆಸಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಇದಕ್ಕೆ ಮೊದಲು ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಟನೆ ಚುನಾವಣೆಯ ಪ್ರಚಾರದ ಕೊನೆಯ ಹಂತದಲ್ಲಿ ಕನಿಷ್ಠ ೫೦-೧೦೦ ಮಂದಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸದಸ್ಯರು ದೆಹಲಿ ವಿಶ್ವವಿದ್ಯಾಲಯದ ಝಾಕೀರ್ ಹುಸೇನ್ ಕಾಲೇಜಿನಲ್ಲಿ ಘೋಷಣೆಗಳನ್ನು ಕೂಗುತ್ತ ಬಡಿಗೆಗಳನ್ನು ಹಿಡಿದು ದಾಂಧಲೆ ಎಬ್ಬಿಸಿ ಹೂಕುಂಡ ಮತ್ತು ಪೀಠೋಪಕರಣಗಳನ್ನು ಮುರಿದು ಹಾಕಿರುವುದೂ ವರದಿಯಾಗಿತ್ತು. ಕಾಲೇಜು ಆವರಣದಲ್ಲಿ ಎಬಿವಿಪಿ ಸಂಘಟನೆಯ ಸದಸ್ಯರಿಗೆ ಪ್ರಚಾರ ನಡೆಸಲು ಅವಕಾಶ ಕೊಡಲಿಲ್ಲ ಎನ್ನುವ ಕಾರಣಕ್ಕೆ ಈ ದಾಂಧಲೆ ನಡೆದಿದೆ. ದಾಂಧಲೆಯ ನೇತೃತ್ವ ವಹಿಸಿದ್ದ ಎಬಿವಿಪಿ ಅಭ್ಯರ್ಥಿ ಶಕ್ತಿ ಸಿಂಗ್ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ, ಅಲ್ಲಿ ಎಬಿವಿಪಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಜಂಟಿ ಕಾರ್ಯದರ್ಶಿಗಳ ಸ್ಥಾನವನ್ನು ಗೆದ್ದುಕೊಂಡಿದೆ.

ಆದರೆ, ಎಡಪಂಥೀಯ ಪ್ರಭಾವ ಹೆಚ್ಚಾಗಿರುವ ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಚುನಾವಣೆಯಲ್ಲಿ ವ್ಯತಿರಿಕ್ತ ಫಲಿತಾಂಶ ಬಂದಿದೆ. ಈ ಚುನಾವಣೆಯಲ್ಲಿ ಎಬಿವಿಪಿ, ಎನ್‌ಎಸ್‌ಯುಐ, ದಲಿತ ವಿದ್ಯಾರ್ಥಿ ಸಂಘಟನೆಗಳಯ ಶೂನ್ಯ ಸಂಪಾದನೆ ಮಾಡಿವೆ. ಚುನಾವಣೆಯಲ್ಲಿ ಎಡಪಕ್ಷಗಳು ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಕಾರ್ಯದರ್ಶಿಯಾದಿಯಾಗಿ ಎಲ್ಲ ಸ್ಥಾನಗಳನ್ನೂ ಗೆದ್ದಿವೆ. ಬಲಪಂಥೀಯ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿ ಒಂದು ಸ್ಥಾನವನ್ನೂ ಗಳಿಸಲು ಸಾಧ್ಯವಾಗಿಲ್ಲ. ಫಲಿತಾಂಶ ತಮ್ಮ ವಿರುದ್ಧ ಬಂದಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ರಾತ್ರೋರಾತ್ರಿ ಎಬಿವಿಪಿ ಸಂಘಟನೆಯ ಅಭ್ಯರ್ಥಿಗಳು ಮತ್ತು ಬೆಂಬಲಿಗರು ದಾಂಧಲೆ ಎಬ್ಬಿಸಿರುವುದು ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿ ಆಯ್ಕೆಯಾದ ಎನ್ ಸಾಯಿ ಬಾಲಾಜಿ ಮತ್ತು ಮಾಜಿ ಅಧ್ಯಕ್ಷೆ ಗೀತಾ ಕುಮಾರಿ ಅವರ ಮೇಲೆ ಸೆಪ್ಟೆಂಬರ್ ೧೭ರ ಬೆಳಗಿನ ಜಾವ ಎಬಿವಿಪಿ ಸದಸ್ಯರು ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು ಚಿತ್ರೀಕರಣ ನಡೆಸಿದ ವಿಡಿಯೋಗಳು ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಎಬಿವಿಪಿ ಸದಸ್ಯರು ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳನ್ನು ಅಟ್ಟಾಡಿಸಿ ಹೊಡೆಯುವ ವಿಡಿಯೋ ವೈರಲ್ ಆಗಿದೆ. ಜೆಎನ್‌ಯು ಅಧ್ಯಕ್ಷ ಸಾಯಿ ಬಾಲಾಜಿ ಅವರ ಹೇಳಿಕೆಯ ಪ್ರಕಾರ, ಎಬಿವಿಪಿ ಸದಸ್ಯರು ಸೋಮವಾರ ಮಧ್ಯರಾತ್ರಿ ೧ ಗಂಟೆಗೆ ಕೆಲವು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದಾರೆ. “ಪರಿಸ್ಥಿತಿ ನಿಯಂತ್ರಣ ಮೀರಿದಾಗ ನಾನು ಮಧ್ಯಪ್ರವೇಶಿಸಬೇಕಾಗಿ ಬಂದಿತ್ತು. ಆಗ ಎಬಿವಿಪಿ ಸದಸ್ಯರು ನನ್ನ ಮೇಲೆಯೂ ದಾಳಿ ನಡೆಸಿದರು,” ಎಂದು ಬಾಲಾಜಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಎಬಿವಿಪಿ ಸದಸ್ಯರ ದಾಂಧಲೆಯನ್ನು ತೋರಿಸುವ ಎರಡು ವಿಡಿಯೋಗಳು ಇವೆ. ಒಂದು ವಿಡಿಯೋದಲ್ಲಿ ಎಬಿವಿಪಿಯ ಅಭ್ಯರ್ಥಿಯಾಗಿದ್ದ ಸೌರಬ್ ಶರ್ಮಾ ನಾನು ರಕ್ಷಣೆ ಪಡೆದಿದ್ದ ಪಿಸಿಆರ್ ವ್ಯಾನ್ ತಡೆಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಮತ್ತೊಂದು ವಿಡಿಯೋದಲ್ಲಿ ಜೆಎನ್‌ಯು ಭದ್ರತಾ ಪಡೆಯ ಎದುರು ಎಬಿವಿಪಿ ಸದಸ್ಯರು ಅಭಿನಯ್‌ ಮೇಲೆ ಹಲ್ಲೆ ನಡೆಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ,” ಎಂದು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಅಂತರ್ಜಾಲ ಮೀರಿ ಬೆಳೆದ ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ಕೊಲೆ ಬೆದರಿಕೆ

“ಜೆಎನ್‌ಯುನ ಮಾಜಿ ಜಂಟಿ ಕಾರ್ಯದರ್ಶಿಯಾಗಿದ್ದ ಸೌರಭ್ ಶರ್ಮಾ ಹಾಗೂ ಆಶುತೋಶ್ ಮಿಶ್ರಾ ನೇತೃತ್ವದ ಸಮೂಹವು ಹಾಸ್ಟೆಲ್ ಆವರಣದಲ್ಲಿ ಮತ್ತೊಬ್ಬ ಜೆಎನ್‌ಯು ವಿದ್ಯಾರ್ಥಿ ಅಭಿನಯ್ ಮೇಲೆ ಹಲ್ಲೆ ನಡೆಸಿದೆ. ಆದರೆ, ವಿದ್ಯಾರ್ಥಿಯನ್ನು ರಕ್ಷಿಸಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ ಕಾರಣ ಪ್ರಾಣ ಉಳಿದುಕೊಂಡಿದೆ,” ಎಂದೂ ಬಾಲಾಜಿ ಹೇಳಿದ್ದಾರೆ. ತಮ್ಮ ಅನುಭವವನ್ನು ಬಾಲಾಜಿ ಭಯಾನಕ ಎಂದು ಹೇಳಿದ್ದಾರೆ. ದಾಳಿಯಿಂದ ರಕ್ಷಣೆ ಪಡೆದುಕೊಳ್ಳಲು ಪೊಲೀಸ್ ಕಂಟ್ರೋಲ್ ರೂಂ ವಾಹನದಲ್ಲಿ ಕೂರುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದಾಗಿ ಬಾಲಾಜಿ ಹೇಳಿದ್ದಾರೆ. ಆದರೆ, ಆ ವಾಹನವನ್ನೂ ಎಬಿವಿಪಿ ತಡೆಯುವ ಪ್ರಯತ್ನ ನಡೆಸಿದೆ ಎಂದು ಅವರು ಆರೋಪಿಸಿದ್ದಾರೆ. “ಶರ್ಮಾ ಮತ್ತು ಮಿಶ್ರಾ ಪೊಲೀಸ್ ಕಂಟ್ರೋಲ್ ರೂಂ ವಾಹನವನ್ನು ತಡೆಯುವ ಪ್ರಯತ್ನವನ್ನು ಮಾಡಿದ್ದಾರೆ. ವಾಹನದ ಒಳಗಿದ್ದ ಎಬಿವಿಪಿ ವಿದ್ಯಾರ್ಥಿಗಳು ಬಾಗಿಲು ತೆರೆದು ಅವರಿಗೆ ನೆರವಾಗಿದ್ದಾರೆ. ವಾಹನದೊಳಗೇ ನುಗ್ಗಿ ನನ್ನ ಮೇಲೆ ಹಲ್ಲೆ ನಡೆಸಿ ಬೆದರಿಸಿದ್ದಾರೆ,” ಎಂದು ಬಾಲಾಜಿ ಹೇಳಿದ್ದಾರೆ. ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್ ಮತ್ತಿತರರೂ ಈ ಬಗ್ಗೆ ವಿವರಗಳನ್ನು ನೀಡಿ, ಟ್ವಿಟರ್‌ನಲ್ಲಿ ಹಲವು ವಿಡಿಯೋಗಳನ್ನು ಹಾಕಿದ್ದಾರೆ.

ದೂರು ನೀಡಲು ವಸಂತ್ ಕುಂಜ್ ಠಾಣೆಗೆ ಆಗಮಿಸಿದಾಗಲೂ ಎಬಿವಿಪಿ ಮತ್ತು ಆರ್‌ಎಸ್‌ಎಸ್‌ ಸದಸ್ಯರು ಪೊಲೀಸ್ ಠಾಣೆಗೆ ಆಗಮಿಸಿ ಬಹಿರಂಗವಾಗಿಯೇ ಬಾಲಾಜಿ ಅವರನ್ನು ಬೆದರಿಸಿದ್ದಾರೆ. ವಿಶ್ವವಿದ್ಯಾಲಯದ ಅಧ್ಯಾಪಕರೂ ಈ ಸಂದರ್ಭದಲ್ಲಿ ಠಾಣೆಯಲ್ಲಿ ಉಪಸ್ಥಿತರಿದ್ದರು. ಈ ಹಿನ್ನೆಲೆಯಲ್ಲಿ, ಬಾಲಾಜಿ ಮತ್ತು ಇತರ ವಿದ್ಯಾರ್ಥಿಗಳನ್ನು ರಕ್ಷಿಸುವಂತೆ ಪೊಲೀಸ್ ಮತ್ತು ಆಡಳಿತ ಸರ್ಕಾರವನ್ನು ಟ್ವಿಟರ್ ಮೂಲಕ ಹಲವರು ಕೇಳಿಕೊಂಡಿದ್ದಾರೆ.

ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಎಬಿವಿಪಿ ತನ್ನದೇ ಆದ ವಿವರಗಳನ್ನು ನೀಡುತ್ತಿದೆ. ಜೆಎನ್‌ಯುನ ಎಬಿವಿಪಿ ಸಂಘಟನೆಯ ಅಧ್ಯಕ್ಷ ವಿಜಯ ಕುಮಾರ್ ಅವರು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಸುಳ್ಳು ಹೇಳುತ್ತಿವೆ ಎಂದು ಹೇಳುತ್ತಿದ್ದಾರೆ. ವಿಶ್ವವಿದ್ಯಾಲಯದ ಆವರಣದಲ್ಲಿ ಎಡಪಕ್ಷಗಳೇ ಮೊದಲು ಹಿಂಸೆಯನ್ನು ಆರಂಭಿಸಿವೆ ಎಂದು ಅವರು ಹೇಳಿದ್ದಾರೆ. “ಸುಮಾರು ೧೫-೨೦ ವಿದ್ಯಾರ್ಥಿಗಳಿದ್ದ ಎಐಎಸ್‌ಎ ಸಂಘಟನೆಯ ಸದಸ್ಯರು ಝೇಲಂ ಹಾಸ್ಟೆಲ್ ಬಳಿ ಸೇರಿ ಒತ್ತಡಪೂರ್ವಕವಾಗಿ ಎಬಿವಿಪಿಯ ಸುಜಲ್ ಯಾದವ್ ಕೋಣೆಗೆ ನುಗ್ಗಿ ಆತನನ್ನು ಹೊಡೆದಿದ್ದಾರೆ. ಅವರು ರಾಜೇಶ್ವರ್ ದುಬೆ, ಸುಶೀಲ್ ಕುಮಾರ್, ಓಂಕಾರ್ ಶ್ರೀವಾಸ್ತವ ಮತ್ತು ಪೀಯೂಶ್ ಮೊದಲಾದವರ ಕೋಣೆಗೂ ಹೋಗಿದ್ದಾರೆ. ಅವರೆಲ್ಲರೂ ಸದ್ಯ ಎಐಐಎಂಎಸ್‌ನಲ್ಲಿ ದಾಖಲಾಗಿದ್ದಾರೆ,” ಎಂದು ವಿಜಯ ಕುಮಾರ್ ಹೇಳಿದ್ದಾರೆ. “ಎಬಿವಿಪಿ ಸಂಘಟನೆಯ ಸದಸ್ಯರು ಪೊಲೀಸ್ ಠಾಣೆಯ ಹೊರಗೆ ಸೇರಿದ್ದು ಬಾಲಾಜಿ ಅವರನ್ನು ಬೆದರಿಸಲಲ್ಲ, ಬದಲಾಗಿ ಎಡಸಂಘಟನೆಗಳ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದೇವೆ,” ಎಂದು ವಿಜಯಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಎಡಪಕ್ಷಗಳ ಮುಖಂಡರು ಮತ್ತು ಮಾಜಿ ಜೆಎನ್‌ಯು ವಿದ್ಯಾರ್ಥಿನಿಯಾಗಿರುವ ಕವಿತಾ ಕೃಷ್ಣನ್ ಅವರು ಟ್ವೀಟ್ ಮಾಡಿ, “ಎಬಿವಿಪಿ ಮತ್ತು ಬಿಜೆಪಿ, ಜೆಎನ್‌ಯು ಆವರಣವು ರಣಾಂಗಣವಾಗಬೇಕು ಎಂದು ಬಯಸುತ್ತಿದೆ. ಇದೇ ಕಾರಣಕ್ಕಾಗಿ ಎಬಿವಿಪಿ ಹಲ್ಲೆಗಳನ್ನು ನಡೆಸಿ ಪ್ರೇರೇಪಿಸುತ್ತದೆ. ಆದರೆ, ಎಡಸಂಘಟನೆಗಳು ಇಂಥ ಹಲ್ಲೆಗಳಿಗೆ ಪ್ರತೀಕಾರ ಬಯಸುವುದಿಲ್ಲ. ಉಪಕುಲಪತಿಯವರು ವಿದ್ಯಾರ್ಥಿ ಕಾರ್ಯಕರ್ತರನ್ನು ಜೈಲಿಗೆ ತಳ್ಳಿ, ಒಟ್ಟು ವಿಶ್ವವಿದ್ಯಾಲಯವನ್ನೇ ಮುಚ್ಚುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಜೆಎನ್‌ಯುನಂತಹ ವಿದ್ಯಾಲಯದಲ್ಲಿ ದಾಂಧಲೆಗಳಿಗೆ ಉತ್ತರಿಸುವುದರಲ್ಲಿ ಅರ್ಥವಿಲ್ಲ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ತಾಣಗಳಲ್ಲಿ ಹಲವರು ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಎಬಿವಿಪಿ ಬೆಂಬಲಿತ ಸದಸ್ಯರು ಜೆಎನ್‌ಯುನಲ್ಲಿ ದಾಂಧಲೆ ಎಬ್ಬಿಸುವ ಮೂಲಕ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸ್ವಾತಂತ್ರ್ಯ ಕಡಿತಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಆಪಾದನೆ ಕೇಳಿಬಂದಿದೆ. ಅವಂತಿಕಾ ತಿವಾರಿ ಎನ್ನುವ ವಿದ್ಯಾರ್ಥಿನಿ ಜೆಎನ್‌ಯುನಲ್ಲಿ ಹೊರಡಿಸಲಾಗಿರುವ ಹೊಸ ಸುತ್ತೋಲೆಯನ್ನು ಟ್ವೀಟ್ ಮಾಡಿದ್ದಾರೆ. ಹಿಂಸೆಯನ್ನು ತಡೆಯುವ ಹೆಸರಿನಲ್ಲಿ ವಿದ್ಯಾರ್ಥಿಗಳ ಮೇಲೆ ನಿಯಂತ್ರಣ ಹೇರಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜೆಎನ್‌ಯು ಹಳೇ ವಿದ್ಯಾರ್ಥಿನಿ ಸ್ವರ ಭಾಸ್ಕರ್ ಸೇರಿದಂತೆ ಹಲವರು ಟ್ವಿಟರ್ ಮೂಲಕ ಜೆಎನ್‌ಯುನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು ಪ್ರತಿಭಟಿಸಿದ್ದಾರೆ. ಸಣ್ಣ ವಿದ್ಯಾರ್ಥಿ ಚುನಾವಣೆಯೊಂದರ ಸೋಲು ಮತ್ತು ಗೆಲುವನ್ನು ಇಷ್ಟೊಂದು ಗಂಭೀರವಾಗಿ ತೆಗೆದುಕೊಂಡು ದಾಂಧಲೆ ನಡೆಸುವ ಅಗತ್ಯವಿಲ್ಲ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ. ಅಲ್ಲದೆ, ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು ದೇಶಾದ್ಯಂತ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಖಂಡಿಸಿವೆ. ಈ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲೂ ವಿದ್ಯಾರ್ಥಿಗಳು ತಮ್ಮ ಕಾಲೇಜುಗಳ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More