ವಾಜಪೇಯಿ ‘ಕ್ವಿಟ್ ಇಂಡಿಯಾ’ ಹೋರಾಟದ ಬಗ್ಗೆ ಪ್ರಶ್ನಿಸಿದ ನಿರೂಪಕಿ ಮೇಲೆ ಕ್ರಮ

‘ರಾಜ್ಯಸಭಾ ಟಿವಿ ಉನ್ನತ ಅಧಿಕಾರಿ ಅಶ್ಲೀಲ ಸಂದೇಶ ಕಳಿಸುತ್ತಿದ್ದಾರೆ’ ಎಂದು ಅದೇ ವಾಹಿನಿಯ ನಿರೂಪಕಿ ದೂರು ನೀಡಿದ ೨ ವಾರಗಳಲ್ಲಿ ಅವರ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾಗಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ‘ದಿ ವೈರ್’ ಪ್ರಕಟಿಸಿದ ವರದಿಯ ಭಾವಾನುವಾದ ಇಲ್ಲಿದೆ

“1942ರ ಚಳವಳಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಭಾಗವಹಿಸಿದ್ದರೇ?” ಎಂದು ರಾಜ್ಯಸಭಾ ಟಿವಿ (ಆರ್‌ಎಸ್ ಟಿವಿ) ನಿರೂಪಕಿಯೊಬ್ಬರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅತಿಥಿಯೊಬ್ಬರಿಗೆ ಕೇಳಿದ ಪ್ರಶ್ನೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಕೋಪಕ್ಕೆ ಕಾರಣವಾಗಿದೆ. ಪರಿಣಾಮ, ಕ್ಷಮೆಯಾಚನೆ ಪ್ರಸಾರ ಮಾಡುವ ಒತ್ತಡಕ್ಕೆ ವಾಹಿನಿ ಒಳಗಾಗಿದ್ದು, ನಿರೂಪಕಿಗೆ ವಾಗ್ದಂಡನೆ ವಿಧಿಸಿ ಕಾರ್ಯಕ್ರಮ ನಿರೂಪಿಸದಂತೆ ತಡೆಹಿಡಿಯಲಾಗಿದೆ.

ಪ್ರಸಾರದಲ್ಲಿ ದೇಶದಲ್ಲಿ ಮೂರನೇ ಸ್ಥಾನ ಪಡೆದಿರುವ ವಾಹಿನಿ, ಘಟನೆ ನಡೆದು ಒಂದು ತಿಂಗಳ ಬಳಿಕವೂ ನಿರೂಪಕಿ ನೀಲು ವ್ಯಾಸ್ ಅವರಿಗೆ ವಿಧಿಸಿರುವ ಶಿಕ್ಷೆಯನ್ನು ಹಿಂಪಡೆದಿಲ್ಲ. ಆರ್‌ಎಸ್ ಟಿವಿ ಯೂಟ್ಯೂಬ್ ವಾಹಿನಿಯಿಂದಲೂ ಸಂಬಂಧಿಸಿದ ವಿಡಿಯೋ ತೆಗೆದುಹಾಕಿರುವುದರಿಂದ ಅಂತರ್ಜಾಲದಲ್ಲಿ ಆ ದೃಶ್ಯದ ತುಣುಕು ಲಭ್ಯವಾಗುತ್ತಿಲ್ಲ ಎಂದು ‘ದಿ ವೈರ್’ ಜಾಲತಾಣ ವರದಿ ಮಾಡಿದೆ.

ನಾಯ್ಡು ಅವರು ಉಪರಾಷ್ಟ್ರಪತಿಯಾದ ಬಳಿಕ ಸಂಸತ್ ವಿಷಯಗಳನ್ನು ಪ್ರಸಾರ ಮಾಡುವ ಪತ್ರಕರ್ತರ ಸ್ಥಿತಿಗೆ ಕನ್ನಡಿ ಹಿಡಿಯುವಂತಿದೆ ನೀಲು ವ್ಯಾಸ್ ಅವರ ಪ್ರಕರಣ. “ಚಾನೆಲ್‌ನ ಉನ್ನತ ಅಧಿಕಾರಿಯೊಬ್ಬರು ತಮಗೆ ಪದೇಪದೇ ಲೈಂಗಿಕತೆಯ ಲೇಪವಿರುವ ಮೆಸೇಜ್ ಕಳಿಸುತ್ತಿದ್ದಾರೆ, ತಮ್ಮ ಕೆಲಸದಲ್ಲಿ ಅನಗತ್ಯವಾಗಿ ಮಧ್ಯಪ್ರವೇಶಿಸುತ್ತಿದ್ದಾರೆ,” ಎಂದು ನೀಲು ದೂರು ನೀಡಿದ ಎರಡು ವಾರಗಳ ಬಳಿಕ ಅವರ ವಿರುದ್ಧ ವಾಗ್ದಂಡನೆ ನಿರ್ಧಾರ ತೆಗೆದುಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸಂಸತ್ತಿನ ಮೇಲ್ಮನೆಯ ಒಡೆತನದಲ್ಲಿರುವ ಚಾನೆಲ್ ಉಪರಾಷ್ಟ್ರಪತಿ ನಾಯ್ಡು ಅವರಿಗೆ ಉತ್ತರದಾಯಿಯಾಗಿದೆ. ಆದರೆ, ಚಾನೆಲ್‌ಗೆ ಪ್ರಧಾನ ಸಂಪಾದಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇದ್ದು, ಅವರು ಚಾನೆಲ್‌ನ ನಿತ್ಯದ ಆಗುಹೋಗುಗಳಿಗೆ ಜವಾಬ್ದಾರರು. ರಾಜ್ಯಸಭೆ ಸೆಕ್ರೆಟರಿಯೇಟ್ ಅಧಿಕಾರಿಗಳು ಸಂಪಾದಕೀಯ ವಿಚಾರದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ.

2018ರ ಆಗಸ್ಟ್ 22ರಂದು ನೀಲು ಅವರಿಗೆ ಕಳುಹಿಸಲಾದ ಅಧಿಕೃತ ಪತ್ರದಲ್ಲಿ ಚಾನಲ್‌ನ ಪ್ರಧಾನ ಸಂಪಾದಕ ರಾಹುಲ್ ಮಹಾಜನ್, ಆಗಸ್ಟ್ 16ರಂದು ನಿಧನ ಹೊಂದಿದ ಮಾಜಿ ಪ್ರಧಾನಿ ವಾಜಪೇಯಿ ಅವರ ವಿರುದ್ಧ 'ಅಸಮಂಜಸ ಆರೋಪ' ಮಾಡಿರುವುದಾಗಿ ದೂಷಿಸಿದ್ದಾರೆ. “ಮಾಜಿ ಪ್ರಧಾನಿಯವರು ಮರಣಶಯ್ಯೆಯಲ್ಲಿರುವಾಗ ನೀವು ಅಸಾಂದರ್ಭಿಕ ವಿಚಾರವನ್ನು ಪ್ರಸ್ತಾಪಿಸಿದ್ದೀರಿ. ನಿರೂಪಣೆ ವೇಳೆ ನೀವಾಡಿದ ಘನತೆಗೆ ತಕ್ಕುದಲ್ಲದ ಮಾತಿನಿಂದಾಗಿ ಆರ್‌ಎಸ್ ಟಿವಿ ಮುಜುಗರ ಅನುಭವಿಸುವಂತಾಗಿ ಕ್ಷಮೆ ಕೇಳಬೇಕಾಯಿತು,” ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ಇದನ್ನೂ ಓದಿ : ಮೋದಿ-ಶಾ ಜೋಡಿಯ ಮಾಧ್ಯಮ ಬೇಹುಗಾರಿಕಾ ಯುದ್ಧಕೋಣೆಗಳು ಹೀಗಿವೆ!

ಏಳು ದಿನಗಳ ಒಳಗೆ ಉತ್ತರ ನೀಡುವಂತೆ ನೀಲು ಅವರಿಗೆ ಸೂಚಿಸಲಾಗಿದೆ. ಅಲ್ಲದೆ, ಎರಡು ವಾರಗಳ ಕಾಲ ಕಾರ್ಯಕ್ರಮ ನಿರೂಪಣೆಗೆ ಅವಕಾಶ ನೀಡುವುದಿಲ್ಲ ಎಂದು ಮೌಖಿಕವಾಗಿ ತಿಳಿಸಲಾಗಿದೆ. ಆ ಅವಧಿ ಮುಗಿದಿದ್ದರೂ ‘ಶಿಕ್ಷೆ’ ಇನ್ನೂ ಮುಂದುವರಿದಿದೆ ಎನ್ನುತ್ತದೆ ಜಾಲತಾಣದ ವರದಿ.

ವಿವಾದಿತ ಘಟನೆ ನಡೆದದ್ದು ಆಗಸ್ಟ್ 16ರಂದು. ವಾಜಪೇಯಿ ಅವರು ನಿಧನರಾಗಿರುವ ವದಂತಿ ಆಗ ಹರಡಿತ್ತು. ಅಲ್ಲದೆ, ಅಧಿಕೃತ ಘೋಷಣೆಗೂ ಮುನ್ನವೇ ‘ದೂರದರ್ಶನ’ ಅವರ ನಿಧನ ಕುರಿತ ಸಮಾಚಾರವನ್ನು ಬಿತ್ತರಿಸಿತ್ತು. ಬಳಿಕ ಆರ್‌ಎಸ್ ಟಿವಿ ಸೇರಿದಂತೆ ಅನೇಕ ಚಾನೆಲ್‌ಗಳು ಅಟಲ್ ಜೀವನಗಾಥೆ ಹೇಳುವ ಕಾರ್ಯಕ್ರಮ, ಚರ್ಚೆಗಳನ್ನು ಪ್ರಸಾರ ಮಾಡಿದವು.

ಇಂದಿರಾ ಗಾಂಧಿ, ನೆಹರು ಅವರ ಬಗ್ಗೆ ಅಟಲ್ ಅವರಿಗಿದ್ದ ನಿಲುವುಗಳೇನು ಎಂದು ಚರ್ಚಿಸಿದ ಬಳಿಕ ನೀಲು, ಅತಿಥಿಗಳಲ್ಲಿ ಒಬ್ಬರಾಗಿ ಭಾಗವಹಿಸಿದ್ದ (2016ರಲ್ಲಿ ಅಟಲ್ ಜೀವನಚರಿತ್ರೆ ‘ಹಾರ್ ನಹೀ ಮಾನೂಂಗಾ’ ಬರೆದಿದ್ದ) ಲೇಖಕ ವಿಜಯ್ ತ್ರಿವೇದಿ ಅವರಿಗೆ, 1942ರ ಹೋರಾಟ ಕುರಿತಂತೆ ಪ್ರಶ್ನೆ ಕೇಳಿದ್ದರು. “ರಾಷ್ಟ್ರೀಯತೆಯ ತುಡಿತಕ್ಕೆ ಜನಪ್ರಿಯವಾಗಿದ್ದ ಅವರು (ವಾಜಪೇಯಿ) ಬ್ರಿಟಿಷರ ವಿರುದ್ಧ ಘೋಷಣೆ ಕೂಗಲು ಸಾಧ್ಯವಿಲ್ಲ ಎಂದು ಹೇಳಿದ್ದಕ್ಕೆ ಹೊಂದಾಣಿಕೆಯಾಗುತ್ತಿಲ್ಲ ಅಲ್ಲವೇ?” ಎಂಬರ್ಥದ ಪ್ರಶ್ನೆ ಕೇಳಿದ್ದರು.

ನೀಲು ಅವರ ವಿರುದ್ಧ ಚಾನೆಲ್ ಪ್ರಧಾನ ಸಂಪಾದಕರ ಆರೋಪಗಳ ಹೊರತಾಗಿಯೂ ಗಮನಿಸಬೇಕಾದ ಅಂಶ ತ್ರಿವೇದಿ ಅವರು ಹೇಳಿದ್ದು: “ಘಟನೆ ವೇಳೆ ಬಂಧನಕ್ಕೊಳಗಾದ ವಾಜಪೇಯಿ ಅವರು ಬ್ರಿಟಿಷರ ವಿರೋಧ ಕಟ್ಟಿಕೊಳ್ಳುವುದಿಲ್ಲ ಎಂಬ ಮುಚ್ಚಳಿಕೆ ಪತ್ರಕ್ಕೆ ಸಹಿ ಹಾಕಿದ್ದರು.”

“ಘಟನೆ ನಡೆದಾಗ ವಾಜಪೇಯಿ ಅವರಿಗೆ ಕೇವಲ 17 ವರ್ಷ ವಯಸ್ಸು ಎಂಬುದನ್ನು ಎಲ್ಲರೂ ಗಮನಿಸಬೇಕು. ನಾನು ವಿವರವಾಗಿ ಸಂಶೋಧನೆ ನಡೆಸಿದ್ದೇನೆ. ಘಟನೆ ನಡೆದ ಸ್ಥಳ ಆಗ್ರಾ ಸಮೀಪದ ಭಾಟೇಶ್ವರಕ್ಕೂ ಭೇಟಿ ನೀಡಿದ್ದೆ. ಒಂದು ಸಣ್ಣ ಚಳವಳಿ ನಡೆದಿತ್ತು. ಅದರಲ್ಲಿ ವಾಜಪೇಯಿ ಕೂಡ ಪಾಲ್ಗೊಂಡಿದ್ದರು. ಪೊಲೀಸರು ಅವರನ್ನು ಹಿಡಿದಾಗ ಇಷ್ಟೆಲ್ಲ ಸಂಭವಿಸಿತು. ಪ್ರಮುಖ ವ್ಯಕ್ತಿಯೊಬ್ಬರ ಆಣತಿಯಂತೆ ಇವರು ಪತ್ರಕ್ಕೆ ಸಹಿ ಮಾಡಿದರು,” ಎಂದರು.

ಹೊಂದಾಣಿಕೆ ವಿಚಾರ ಇಲ್ಲಿ ಬರುವುದೇ ಇಲ್ಲ ಎಂದ ತ್ರಿವೇದಿ, “ನಂತರ ತಮ್ಮ ಬದುಕಿನಲ್ಲೆಲ್ಲೂ ವಾಜಪೇಯಿ ಅವರು ಈ ಘಟನೆಯನ್ನು ನಿರಾಕರಿಸಲಿಲ್ಲ, ಒಪ್ಪಿಕೊಳ್ಳಲೂ ಇಲ್ಲ. ಹಾಗೆಂದ ಮಾತ್ರಕ್ಕೆ ಅವರ ರಾಷ್ಟ್ರೀಯತೆ ಪರವಾದ ಧೋರಣೆಯನ್ನು ಯಾರು ಬೇಕಾದರೂ ಪ್ರಶ್ನಿಸಬಹುದು ಎಂದರ್ಥವಲ್ಲ,” ಎಂದು ಹೇಳಿದ್ದರು.

ನಂತರ ಚರ್ಚೆ ಅಟಲ್ ಜೀವನದತ್ತ ಹೊರಳಿತು; ಮತ್ತೆಲ್ಲಿಯೂ 1942ರ ವಿಚಾರವನ್ನು ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಲಿಲ್ಲ. ನಾಲ್ಕು ದಿನಗಳ ಬಳಿಕ ‘ನ್ಯಾಷನಲ್ ಸ್ಪೀಕ್’ ಎಂಬ ಜಾಲತಾಣ ಈ ಕುರಿತು ವರದಿ ಪ್ರಕಟಿಸಿದ ಬಳಿಕ ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರ ಕೆಂಗಣ್ಣಿಗೆ ನಿರೂಪಣೆಯ ಘಟನೆ ತುತ್ತಾಯಿತು.

ನಾಯ್ಡು ಅವರಿಗೆ ಆಪ್ತರಾಗಿರುವ, ರಾಜ್ಯಸಭೆ ಸೆಕ್ರೆಟರಿಯೆಟ್‌ ಹೆಚ್ಚುವರಿ ಕಾರ್ಯದರ್ಶಿ ಎ ಎ ರಾವ್ ಅವರು ಚಾನೆಲ್ ಸೂಕ್ತ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು ಎಂದು ತಿಳಿದುಬಂದಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More