೬೫೦ ಕೋಟಿ ಸಾಲ ಎತ್ತಲು ೪೫೭ ಎಕರೆ ಒತ್ತೆ; ಕೈತಪ್ಪಲಿದೆಯೇ ಕೃಷಿ ಫಾರಂ ಜಮೀನು?

ಉಗ್ರಾಣ ಮಳಿಗೆಗಳ ನಿರ್ಮಾಣ ವಿಚಾರದಲ್ಲಿ ಸಹಕಾರ ಇಲಾಖೆ ತೋರಿಸುತ್ತಿರುವ ಉತ್ಸುಕತೆಯಿಂದ ಸರ್ಕಾರಕ್ಕೆ ನಷ್ಟವಾಗುವ ಸಂಭವವೇ ಹೆಚ್ಚು. ಕಾನೂನು ಇಲಾಖೆ ಅಸಮ್ಮತಿ ನಡುವೆಯೂ ಬೆಲೆಬಾಳುವ ೪೫೭ ಎಕರೆ ಜಮೀನನ್ನು ಅಡಮಾನ ಇರಿಸುವ ಪ್ರಸ್ತಾಪ ಸಲ್ಲಿಕೆಯಾಗಿದೆ!

ರಾಜ್ಯದ ವಿವಿಧೆಡೆ ವೈಜ್ಞಾನಿಕ ಉಗ್ರಾಣ ಮಳಿಗೆಗಳ ನಿರ್ಮಾಣಕ್ಕೆ ೪೫೭ ಎಕರೆ ವಿಸ್ತೀರ್ಣದ ಫಲವತ್ತಾದ ಮತ್ತು ಅತ್ಯಂತ ಬೆಲೆಬಾಳುವ ಕೃಷಿ ಫಾರಂಗಳ ಜಮೀನುಗಳನ್ನು ಬಹುಕೋಟಿ ರು.ಗಳಿಗೆ ಅಡಮಾನ ಇಡಲು ಕೃಷಿ ಮತ್ತು ಸಹಕಾರ ಇಲಾಖೆ ಮುಂದಾಗಿದೆ. ಅಡಮಾನ ಇರಿಸಲು ಸ್ವತ್ತು ಹಸ್ತಾಂತರ ಅಧಿನಿಯಮಗಳಲ್ಲಿ ಯಾವುದೇ ಅವಕಾಶ ಇಲ್ಲದಿದ್ದರೂ ಸಹಕಾರ ಇಲಾಖೆ ಅತ್ಯಂತ ಉತ್ಸುಕತೆಯಿಂದ ಪ್ರಸ್ತಾಪ ಸಲ್ಲಿಸಿದೆ. ಆದರೆ, ಈ ಪ್ರಸ್ತಾಪ ವಿವಾದಕ್ಕೆ ಈಡಾಗಿದೆ.

ಅಡಮಾನ ಇರಿಸುವ ಜಮೀನುಗಳನ್ನು ಮರಳಿ ಪಡೆಯಲು ಒಂದೊಮ್ಮೆ ವಿಫಲವಾದಲ್ಲಿ ಆ ಜಮೀನುಗಳನ್ನು ಕಳೆದುಕೊಳ್ಳುವುದಲ್ಲದೆ, ಸರ್ಕಾರಕ್ಕೆ ಆರ್ಥಿಕ ನಷ್ಟ ಸಂಭವಿಸುವ ಸಾಧ್ಯತೆ ಇದೆ ಎಂಬ ಅರಿವು ಸಹಕಾರ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ಇಲ್ಲದಿರುವುದೇ ವಿವಾದಕ್ಕೆ ಮೂಲ ಕಾರಣ ಎನ್ನಲಾಗಿದೆ.

ಉಗ್ರಾಣ ಮಳಿಗೆಗಳನ್ನು ನಿರ್ಮಿಸಲು ೪೫೭ ಎಕರೆ ಜಮೀನು, ರಾಜ್ಯ ಉಗ್ರಾಣ ನಿಗಮಕ್ಕೆ ೩೦ ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇರೆಗೆ ಈಗಾಗಲೇ ಹಸ್ತಾಂತರವಾಗಿದೆ. ಇದಕ್ಕಾಗಿ ನಬಾರ್ಡ್‌ ಸಂಸ್ಥೆಯಿಂದ ೬೫೦ ಕೋಟಿ ರು. ಸಾಲ ಪಡೆಯಲು ಮುಂದಾಗಿರುವ ಸಹಕಾರ ಇಲಾಖೆ, ಈ ಜಮೀನುಗಳನ್ನು ಅಡಮಾನ ಇರಿಸಲು ಉದ್ದೇಶಿಸಿದೆ. ಇಲಾಖೆಯ ಈ ಪ್ರಸ್ತಾಪಕ್ಕೆ ಕಾನೂನು ಇಲಾಖೆ ಸಮ್ಮತಿ ವ್ಯಕ್ತಪಡಿಸಿಲ್ಲ ಎಂದು ತಿಳಿದು ಬಂದಿದೆ. ಆದರೂ ಪ್ರಸ್ತಾಪವನ್ನು ಸಚಿವ ಸಂಪುಟದ ಮುಂದಿರಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಅಧಿಕಾರಿಯೊಬ್ಬರು ‘ದಿ ಸ್ಟೇಟ್‌’ಗೆ ಖಚಿತಪಡಿಸಿದ್ದಾರೆ.

“ಕೃಷಿ ಇಲಾಖೆಯ ಮೂಲ ಮಾಲೀಕತ್ವದಲ್ಲಿರುವ ಕೃಷಿ ಫಾರಂಗಳ ಈ ಜಮೀನುಗಳನ್ನು ನಬಾರ್ಡ್‌ ಸಂಸ್ಥೆಯಿಂದ ಸಾಲ ಪಡೆಯುವ ಸಲುವಾಗಿ ಅಡಮಾನ ಇಡಲು ಸಹಕಾರ ಇಲಾಖೆಗೆ ಯಾವುದೇ ಅಧಿಕಾರವಿಲ್ಲ. ಒಂದು ವೇಳೆ, ಅಡಮಾನ ಇರಿಸಲು ಅನುಮತಿ ನೀಡಿದ್ದೇ ಆದಲ್ಲಿ ೬೫೦ ಕೋಟಿ ರು. ಸಾಲವನ್ನು ಉಗ್ರಾಣ ನಿಗಮ ಮರುಪಾವತಿಸಲು ವಿಫಲವಾದಲ್ಲಿ ಈ ಜಮೀನುಗಳನ್ನು ಕಳೆದುಕೊಳ್ಳುವ ಸಂಭವವೇ ಹೆಚ್ಚಿದೆ. ಹಾಗೆಯೇ, ಈ ಜಮೀನುಗಳನ್ನು ಕೃಷಿ ಇಲಾಖೆಗೆ ಹಿಂಪಡೆಯಲು ಕಾನೂನು ಹೋರಾಟ ನಡೆಸಬೇಕಾಗುತ್ತದೆ,” ಎನ್ನುತ್ತಾರೆ ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

ಕೃಷಿ ಇಲಾಖೆಯಿಂದ ಅಡಮಾನದ ಆಧಾರದ ಮೇಲೆ ಪಡೆದಂತಹ ಭೂಮಿಯನ್ನು ನಬಾರ್ಡ್‌ನಿಂದ ಪಡೆಯುವ ಸಾಲಕ್ಕೆ ಅಡಮಾನಕ್ಕೆ ಖಾತರಿ ನೀಡಬೇಕು. ಖಾತರಿ ನೀಡಿದಲ್ಲಿ ಸಾಲ ಪಡೆದ ಇಲಾಖೆ ಅಥವಾ ಸಂಸ್ಥೆಯಿಂದ ಅವಧಿ ಮುಗಿದ ನಂತರ ಜಮೀನನ್ನು ಹಿಂಪಡೆಯಲು ಅವಕಾಶಗಳಿಲ್ಲ. ಏಕೆಂದರೆ, ನಬಾರ್ಡ್‌ ಸಂಸ್ಥೆ ನೀಡುವ ಸಾಲವನ್ನು ಸಹಕಾರ ಇಲಾಖೆ ಮರುಪಾವತಿಸದೆ ಇದ್ದಲ್ಲಿ ಆ ಜಮೀನನ್ನು ಸ್ವತ್ತು ಹಸ್ತಾಂತರ ಅಧಿನಿಯಮ ೬೧ರ ಅಡಿಯಲ್ಲಿ ಮಾರಾಟ ಮಾಡುವ ಸಾಧ್ಯತೆಯೇ ಹೆಚ್ಚಿದೆ. ಹೀಗಾಗಿ, ಮೂಲ ಇಲಾಖೆಯಾಗಿರುವ ಕೃಷಿ ಇಲಾಖೆ ತನ್ನ ಮಾಲೀಕತ್ವದಲ್ಲಿನ ೪೫೭ ಎಕರೆ ಭೂಮಿಯನ್ನು ಕಳೆದುಕೊಳ್ಳುವ ಸಂಭವವಿದೆ ಎಂದು ಗೊತ್ತಾಗಿದೆ.

ಇದನ್ನೂ ಓದಿ : ಸರ್ಕಾರಿ ಜಮೀನು ಕಬಳಿಸಲು ಭೂಮಿ ಸಾಫ್ಟ್‌ವೇರ್‌ಗೆ ಕೈ ಹಾಕಿತೇ ಭೂ ಮಾಫಿಯಾ?

ವೈಜ್ಞಾನಿಕ ಉಗ್ರಾಣ ಮಳಿಗೆಗಳನ್ನು ನಿರ್ಮಿಸಲು ಬೇಕಾಗುವ ಹಣಕಾಸಿನ ವೆಚ್ಚಕ್ಕೆ ಸಂಬಂಧಿಸಿದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಲ್ಲಿ ರಾಜ್ಯ ಉಗ್ರಾಣ ನಿಗಮ ವಿಫಲವಾಗಿದೆ. ಹೀಗಾಗಿ, ನಬಾರ್ಡ್‌ನಿಂದ ಸಾಲ ಪಡೆಯುವ ಸಂಬಂಧ ನಿರಾಕ್ಷೇಪಣಾ ಪತ್ರ ನೀಡುವ ನಿರ್ಧಾರವನ್ನು ಕೈಬಿಡುವುದೇ ಸೂಕ್ತ ಎಂದು ಕಾನೂನು ಇಲಾಖೆ ತನ್ನ ಅಭಿಪ್ರಾಯದಲ್ಲಿ ಸ್ಪಷ್ಟಪಡಿಸಿದೆ ಎಂದು ಗೊತ್ತಾಗಿದೆ.

ಇನ್ನು, “ಇತರ ಇಲಾಖೆಗಳು ಮತ್ತು ನಬಾರ್ಡ್‌ ನಡುವೆ ಯಾವುದೇ ರೀತಿಯ ಕರಾರು, ಒಪ್ಪಂದ ಆಗಿರುವುದಿಲ್ಲ. ಹಾಗೆಯೇ ಇತರ ಇಲಾಖೆಗಳು ಹಾಗೂ ನಬಾರ್ಡ್‌ ನಡುವೆ ನೇರವಾದ ಸಂಬಂಧವೂ ಇರುವುದಿಲ್ಲ. ಸಹಕಾರ ಇಲಾಖೆ ಹಾಗೂ ನಬಾರ್ಡ್‌ ನಡುವೆ ಆದಂತಹ ಅಡಮಾನ ವ್ಯವಹಾರಕ್ಕೆ ಕೃಷಿ ಇಲಾಖೆಗೆ ಯಾವುದೇ ರೀತಿ ಸಂಬಂಧ ಹೊಂದಿರುವುದಿಲ್ಲ. ಹೀಗಾಗಿ, ನಬಾರ್ಡ್‌ ಸಂಸ್ಥೆ ಕೊಟ್ಟಂತಹ ಸಾಲದ ಹಣವನ್ನು ಮರುಪಾವತಿಸದೆ ಇದ್ದಾಗ ನಬಾರ್ಡ್‌ ಸಂಸ್ಥೆ ಜಮೀನನ್ನು ಮಾರಾಟ ಮಾಡಲು ಹರಾಜು ಹಾಕುವ ಅಧಿಕಾರ ಹೊಂದಿದೆ. ಇದರಿಂದ ಬೆಲೆಬಾಳುವ ಜಮೀನನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ,” ಎಂಬ ವಿಚಾರ ಕಾನೂನು ಇಲಾಖೆ ನೀಡಿರುವ ಅಭಿಪ್ರಾಯದಿಂದ ತಿಳಿದುಬಂದಿದೆ.

ನಬಾರ್ಡ್‌ ಸಂಸ್ಥೆಗೆ ೩೦ ವರ್ಷಗಳ ಅವಧಿಗೆ ಜಮೀನನ್ನು ಅಡಮಾನ ಇರಿಸಲು ಖಾತರಿ ನೀಡಿದ್ದಲ್ಲಿ, ಸಾಲ ಪಡೆದ ಇಲಾಖೆ ಆ ಜಮೀನನ್ನು ಅವಧಿ ಮುಗಿದ ನಂತರ ಯಾವ ರೀತಿಯಾಗಿ ಹಿಂಪಡೆಯಬೇಕು ಹಾಗೂ ಜಮೀನನ್ನು ಯಾವ ರೀತಿಯಾಗಿ ಉಪಯೋಗಿಸಬೇಕು ಎಂಬ ಕುರಿತು ಏನು ಕ್ರಮ ಕೈಗೊಂಡಿದೆ ಎಂಬ ವಿವರಗಳನ್ನು ಸರ್ಕಾರಕ್ಕೆ ತಿಳಿಸಿಲ್ಲ. ಅಲ್ಲದೆ, ೬೫೦ ಕೋಟಿ ರು.ಗಳನ್ನು ಪಾವತಿಸದೆ ಇದ್ದಾಗ ನಬಾರ್ಡ್‌ ಮತ್ತು ಇಲಾಖೆ ಯಾವ ಕ್ರಮ ಕೈಗೊಳ್ಳಬೇಕು ಮತ್ತು ಜಮೀನನ್ನು ಸ್ವಾಧೀನಕ್ಕೆ ಪಡೆದು ಮಾರಾಟ ಮಾಡಿದರೆ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸಹಕಾರ ಇಲಾಖೆ ಸ್ಪಷ್ಟತೆ ಹೊಂದಿಲ್ಲ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More