ಇಂದಿನ ಡೈಜೆಸ್ಟ್ | ನೀವು ಗಮನಿಸಬೇಕಾದ ಇತರ 10 ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ಪ್ರಮುಖ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳು

60 ಬಿಲಿಯನ್ ಡಾಲರ್ ಸುಂಕ ಹೇರಿ ಅಮೆರಿಕಗೆ ತಿರುಗೇಟು ನೀಡಿದ ಚೀನಾ

ಚೀನಾದ ಸರಕುಗಳ ಮೇಲೆ 200 ಬಿಲಿಯನ್ ಡಾಲರ್ ಸುಂಕ ಹೇರಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ರಮಕ್ಕೆ ಚೀನಾ ತೀಕ್ಷ್ಣ ಪ್ರತೀಕಾರ ಕೈಗೊಂಡಿದ್ದು, ಅಮೆರಿಕದ ಸರಕುಗಳ ಮೇಲೆ 60 ಬಿಲಿಯನ್ ಡಾಲರ್ ಸುಂಕ ಹೇರಿದೆ. ಇದರೊಂದಿಗೆ ಜಾಗತಿಕ ವ್ಯಾಪಾರ ಸಮರ ಮತ್ತೆ ಭುಗಿಲೇಳುವ ಸಾಧ್ಯತೆ ನಿಚ್ಚಳವಾಗಿದೆ. ಶಾಂಘೈ-ವಾಷಿಂಗ್ಟನ್ ನಡುವೆ ವ್ಯಾಪಾರ ಸಮರ ತಗ್ಗಿಸುವ ಮಾತುಕತೆಗಳಿಗೆ ಈ ಬೆಳವಣಿಗೆಯಿಂದ ಹಿನ್ನಡೆಯಾಗಲಿದೆ. ಡೊನಾಲ್ಡ್ ಟ್ರಂಪ್ 200 ಬಿಲಿಯನ್ ಡಾಲರ್ ಸುಂಕ ಹೇರಿದ್ದ ಬೆನ್ನಲ್ಲೇ ಚೀನಾವು ತ್ವರಿತ ಪ್ರತೀಕಾರ ಕ್ರಮವಾಗಿ 60 ಬಿಲಿಯನ್ ಡಾಲರ್ ಸುಂಕ ಹೇರಿದೆ.

ನಿರ್ದಿಷ್ಟ ಪಕ್ಷವೊಂದಕ್ಕೆ ಕೆಲಸ ಮಾಡಲು ಆರೆಸ್ಸೆಸ್‌ ಹೇಳುವುದಿಲ್ಲ: ಭಾಗವತ್‌

ನಿರ್ದಿಷ್ಟ ಪಕ್ಷವೊಂದಕ್ಕೆ ಕೆಲಸ ಮಾಡಬೇಕೆಂದು ಸಂಘಟನೆಯ ಸ್ವಯಂಸೇವಕರಿಗೆ ಆರೆಸ್ಸೆಸ್‌ ಹೇಳುವುದಿಲ್ಲವೆಂದು ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ ‘ಭವಿಷ್ಯ ಕಾ ಭಾರತ್’ ಸಮಾವೇಶದಲ್ಲಿ ಮಾತನಾಡಿರುವ ಅವರು, “ಯಾವುದೇ ನಿರ್ದಿಷ್ಟ ಪಕ್ಷವೊಂದಕ್ಕೆ ಕೆಲಸ ಮಾಡುವಂತೆ ತಮ್ಮ ಸಂಘಟನೆಯ ಸ್ವಯಂಸೇವಕರಿಗೆ ಆರೆಸ್ಸೆಸ್‌ ಹೇಳುವುದಿಲ್ಲ. ರಾಷ್ಟ್ರದ ಒಳಿತಿನ ಪರ ನಿಂತಿರುವವರಿಗೆ ಬೆಂಬಲ ನೀಡಿ ಎಂದು ಆರೆಸ್ಸೆಸ್‌ ಹೇಳುತ್ತದೆ,” ಎಂದು ಭಾಗವತ್‌ ಹೇಳಿದ್ದಾರೆ. ಮಂಗಳವಾರ ಬೆಳಗ್ಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್‌ ಪಕ್ಷದ ಪಾತ್ರವನ್ನು ಭಾಗವತ್‌ ಹೊಗಳಿದ್ದನ್ನು ಇಲ್ಲಿ ನೆನೆಯಬಹುದು.

ಐಪಿಒ ಲಿಸ್ಟಿಂಗ್ ಅವಧಿ ತಗ್ಗಿಸಿದ ಸೆಬಿ

ಭಾರತೀಯ ಷೇರು ವಿನಿಮಯ ಮಂಡಳಿ (ಸೆಬಿ) ಐಪಿಒ ಲಿಸ್ಟಿಂಗ್ ಅವಧಿಯನ್ನು ಆರು ದಿನಗಳಿಂದ ಮೂರು ದಿನಗಳಿಗೆ ತಗ್ಗಿಸಿದೆ. ಪ್ರಸ್ತುತ ಕಂಪನಿಯು ಐಪಿಒ ಅವಧಿ ಮುಕ್ತಾಯಗೊಳಿಸಿದ ನಂತರ ಷೇರು ವಿನಮಯ ಕೇಂದ್ರದಲ್ಲಿ ಲಿಸ್ಟ್ ಮಾಡಲು ಆರು ದಿನಗಳು ಕಾಯಬೇಕಿತ್ತು. ಹಿಂದೆ ಈ ಅವಧಿಯು 12 ದಿನಗಳಷ್ಟಿತ್ತು. 2015ರಲ್ಲಿ ಸೆಬಿ ಆರು ದಿನಗಳಿಗೆ ತಗ್ಗಿಸಿತ್ತು. ಸೆಬಿ ಅಧ್ಯಕ್ಷ ಅಜಯ್ ತ್ಯಾಗಿ ಮಂಗಳವಾರ ಈ ನಿರ್ಧಾರ ಪ್ರಕಟಿಸಿದರು. ನಾವೀಗ ಐಪಿಒ ಲಿಸ್ಟ್ ಅವಧಿಯನ್ನು ಮೂರು ವಹಿವಾಟುಗಳ ದಿನಕ್ಕೆ ತಗ್ಗಿಸಿದ್ದೇವೆ. ಮತ್ತಷ್ಟು ಅವಧಿ ತಗ್ಗಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ ಎಂದು ತ್ಯಾಗಿ ಹೇಳಿದ್ದಾರೆ.

ಅತ್ಯಾಚಾರ ಆರೋಪ; ಬಿಷಪ್‌ ನಿರೀಕ್ಷಣಾ ಜಾಮೀನು ವಿಚಾರಣೆ ಮುಂದೂಡಿದ ಕೋರ್ಟ್

ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಜಲಂಧರ್‌ನ ಕ್ಯಾಥೋಲಿಕ್ ಬಿಷಪ್ ಫ್ರಾಂಕೋ ಮುಲ್ಲಕಲ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಕೇರಳ ಹೈಕೋರ್ಟ್ ಮುಂದೂಡಿದೆ. 2014ರಿಂದ 2016ರ ಅವಧಿಯಲ್ಲಿ 13 ಬಾರಿ ಬಿಷಪ್ ತನ್ನ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ಸಂತ್ರಸ್ಥ ಕ್ರೈಸ್ತ ಸನ್ಯಾಸಿನಿ ಆರೋಪಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ 19ರಂದು ಬಿಷಪ್ ತನಿಖಾ ತಂಡದ ಮುಂದೆ ಹಾಜರಾಗಬೇಕಿದ್ದು, ಈ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಇದರ ವಿಚಾರಣೆಯನ್ನು ಕೇರಳ ಹೈಕೋರ್ಟ್ ಸೆ.25ಕ್ಕೆ ಮುಂದೂಡಿದೆ.

ಕರ್ನಾಟಕದ 203 ಶಾಸಕರು ದೇಶದಲ್ಲೇ ಸಿರಿವಂತರು!

ಕರ್ನಾಟಕದ ೨೨೪ ವಿಧಾನಸಭಾ ಸದಸ್ಯರ ಪೈಕಿ ೨೦೩ ಮಂದಿ ೧೧೧.೪ ಲಕ್ಷ ಆದಾಯ ಹೊಂದುವ ಮೂಲಕ ದೇಶದಲ್ಲೇ ಅತಿ ಹೆಚ್ಚು ವಾರ್ಷಿಕ ಆದಾಯ ಹೊಂದಿದ ಶಾಸಕರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಮಹಾರಾಷ್ಟ್ರದ ೨೫೬ ಶಾಸಕರು ವಾಷರ್ಷಿಕ ೪೩.೪ ಲಕ್ಷ ಆದಾಯ ಹೊಂದುವ ಮೂಲಕ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್‌ (ಎಡಿಆರ್‌) ಹೇಳಿದೆ. ದೇಶದ ಎಲ್ಲ ರಾಜ್ಯಗಳ ೩,೧೪೫ ಶಾಸಕರ ಐಟಿ ದಾಖಲೆಗಳನ್ನು ವಿಶ್ಲೇಷಿಸಿರುವ ಎಡಿಆರ್‌ ವರದಿ ಸಿದ್ಧಪಡಿಸಿದೆ. ಈ ಪೈಕಿ ೯೪೧ ಶಾಸಕರು ಆದಾಯ ಘೋಷಿಸಿಲ್ಲ ಎಂದು ಎಡಿಆರ್‌ ತಿಳಿಸಿದೆ.

ಬಾಂಗ್ಲಾ, ಅಫ್ಘನ್ ನಿರಾಶ್ರಿತರಿಗೆ ರಾಷ್ಟ್ರೀಯ ಪೌರತ್ವ ನೀಡಲು ಮುಂದಾದ ಪಾಕಿಸ್ತಾನ

ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶೀಯ ನಿರಾಶ್ರಿತರಿಗೆ ಪಾಕಿಸ್ತಾನದ ಪೌರತ್ವವನ್ನು ನೀಡಲಾಗುವುದು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ೨.೭ ಮಿಲಿಯನ್ ನಿರಾಶ್ರಿತರಿಗೆ ಪಾಕಿಸ್ತಾನದ ಸರ್ಕಾರ ಪಾಸ್‌ಪೋರ್ಟ್ ಹಾಗೂ ರಾಷ್ಟ್ರೀಯ ಪೌರತ್ವದ ದಾಖಲೆ ಪ್ರಮಾಣಪತ್ರವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. ಪಾಕಿಸ್ತಾನ ಪೌರತ್ವ ನೋಂದಣಿ ಕಾಯಿದೆ ೧೯೫೧ ರ ಪ್ರಕಾರ ನಿರಾಶ್ರಿತರಿಗೆ ಪೌರತ್ವವನ್ನು ಖಾತರಿಪಡಿಸಲಾಗುತ್ತಿದೆ.

ಮಾರ್ಕ್ ಬೆನಿಯೋಫ್ ಕೈಸೇರಿದ ‘ಟೈಮ್’ ನಿಯತಕಾಲಿಕೆ

ಮೆರೆಡಿತ್ ಕಾರ್ಪ್ ಕಂಪನಿಯು ಅಮೆರಿಕದ ವಾರಪತ್ರಿಕೆ ‘ಟೈಮ್’ ನಿಯತಕಾಲಿಕೆಯನ್ನು ಸೇಲ್ಸ್‌ಫೋರ್ಸ್‌ ಸಹಸ್ಥಾಪಕ ಮಾರ್ಕ್ ಬೆನಿಯೋಫ್ ಅವರಿಗೆ ಮಾರಾಟ ಮಾಡಿದೆ. ಪತ್ರಿಕೆಯನ್ನು ‘ಕ್ಲೌಡ್ ಕಂಪ್ಯೂಟಿಂಗ್’ ಕ್ಷೇತ್ರದ ದಿಗ್ಗಜ ‘ಸೇಲ್ಸ್‌ಫೋರ್ಸ್’ನ ನಾಲ್ವರು ಸಹಸ್ಥಾಪಕರಲ್ಲಿ ಒಬ್ಬರಾದ ಬೆನಿಯೋಫ್‌ರಿಗೆ 190 ಮಿಲಿಯ ಡಾಲರ್‌ಗೆ (ಸುಮಾರು 1,376 ಕೋಟಿ ರೂಪಾಯಿ) ಮಾರಾಟ ಮಾಡಲಾಗಿದೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.

ಈ ವರ್ಷ ಅರ್ಜುನ ಪ್ರಶಸ್ತಿ ಶಿಫಾರಸು ನಿರೀಕ್ಷಿಸಿರಲಿಲ್ಲ

ಭಾರತೀಯ ಯುವ ಮಹಿಳಾ ಸ್ಪ್ರಿಂಟರ್ ಹಿಮಾ ದಾಸ್ ಈ ಬಾರಿ ತಾನು ಅರ್ಜುನ ಪ್ರಶಸ್ತಿಯನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ. ೨೦ ಮಂದಿ ಕ್ರೀಡಾಪಟುಗಳ ಜತೆಗೆ ಹಿಮಾದಾಸ್ ಹೆಸರನ್ನೂ ಆಯ್ಕೆಸಮಿತಿ ಶಿಫಾರಸು ಮಾಡಿರುವ ದಿಸೆಯಲ್ಲಿ ಹಿಮಾ ದಾಸ್ ಹೀಗೆಂದು ಪ್ರತಿಕ್ರಿಯಿಸಿದ್ದಾರೆ. ವನಿತೆಯರ ೪/೪೦೦  ಮೀಟರ್ ಓಟದ ಸ್ಪರ್ಧೆಯಲ್ಲಿ ಹಿಮಾ ದಾಸ್ ಚಿನ್ನ ಸೇರಿದಂತೆ  ಇತ್ತೀಚೆಗಷ್ಟೇ ಮುಗಿದ ಏಷ್ಯಾಡ್‌ನಲ್ಲಿ ಹಿಮಾ ದಾಸ್ ಮೂರು ಪದಕಗಳನ್ನು ಗೆದ್ದುಕೊಂಡಿದ್ದರು. ಇದಕ್ಕೂ ಮುನ್ನ ಫಿನ್‌ಲ್ಯಾಂಡ್‌ನಲ್ಲಿ ನಡೆದ ಐಎಎಎಫ್ ವಿಶ್ವ ಕಿರಿಯರ ಅಥ್ಲೆಟಿಕ್ಸ್ ಕೂಟದಲ್ಲಿ ಹಿಮಾ ದಾಸ್ ಚಿನ್ನದ ಪದಕ ಜಯಿಸಿ ಐತಿಹಾಸಿಕ ಸಾಧನೆ ಮೆರೆದಿದ್ದರು. "ಖಂಡಿತವಾಗಿ ನಾನು ಈ ವ‍ರ್ಷ ಅರ್ಜುನ ಪ್ರಶಸ್ತಿಗೆ ಶಿಫಾರಸ್ಸು ನಿರೀಕ್ಷಿಸಿರಲಿಲ್ಲ. ಬಹುಶಃ ಮುಂದಿನ ವರ್ಷ ಈ ಪ್ರಶಸ್ತಿಗೆ ಶಿಫಾರಸ್ಸು ಮಾಡಬಹುದು ಎಂದುಕೊಂಡಿದ್ದೆ. ಆದರೆ, ಈ ಋತುವಿನಲ್ಲೇ ಪ್ರಶಸ್ತಿಗೆ ಪರಿಗಣಿಸಿರುವುದು ಸಂತಸ ತಂದಿದೆ,'' ಎಂದು ಹಿಮಾ ದಾಸ್ ಹೇಳಿದ್ದಾರೆ.

ಕಾಫಿ ವಿತ್ ಕರಣ್‌ 6ನೇ ಸೀಸನ್‌

ಚಿತ್ರ ನಿರ್ದೇಶಕ ಕರಣ್ ಜೋಹರ್‌ ನಿರೂಪಣೆಯ ಜನಪ್ರಿಯ ಶೋ ‘ಕಾಫಿ ವಿತ್ ಕರಣ್‌’ 6ನೇ ಸೀಸನ್‌ ಆರಂಭವಾಗುತ್ತಿದೆ. ಸ್ಟಾರ್‌ವರ್ಲ್ಡ್‌ ಚಾನೆಲ್‌ನಲ್ಲಿ ಮುಂದಿನ ತಿಂಗಳು ಅಕ್ಟೋಬರ್‌ 21ರಿಂದ ಶೋಗೆ ಚಾಲನೆ ಸಿಗಲಿದೆ. 2004ರಲ್ಲಿ ‘ಕಾಫಿ ವಿಥ್ ಕರಣ್‌’ ಮೊದಲನೇ ಸೀಸನ್‌ ಮೂಡಿಬಂದಿತ್ತು. ಶೋನಲ್ಲಿ ಬಾಲಿವುಡ್‌ ತಾರೆಯರು ತಮ್ಮ ಸಿನಿಮಾ ಹಾಗೂ ಬದುಕಿನ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಕಳೆದ ಸೀಸನ್‌ ಸಂದರ್ಭದಲ್ಲಿ ಬಾಲಿವುಡ್‌ ನಟಿ ಕಂಗನಾ ರಣಾವತ್‌, “ಶೋನಲ್ಲಿ ಕರಣ್‌ ಪಕ್ಷಪಾತಿ ಧೋರಣೆ ಅನುಸರಿಸುತ್ತಾರೆ” ಎಂದು ದೂರಿದ್ದರು. ಇದು ತೀವ್ರ ಚರ್ಚೆಗೆ ಆಸ್ಪದ ನೀಡಿತ್ತು.

ಧವನ್ ಭರ್ಜರಿ ಶತಕ; ಸವಾಲಿನ ಮೊತ್ತದತ್ತ ಭಾರತ

ಪ್ರತಿಷ್ಠಿತ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ತನ್ನ ಮೊದಲ ಪಂದ್ಯ ಆಡುತ್ತಿರುವ ಭಾರತ ತಂಡ, ಹಾಂಕಾಂಗ್ ವಿರುದ್ಧ ಬೃಹತ್ ಮೊತ್ತದತ್ತ ಸಾಗಿದೆ. ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿಂದು ನಡೆದ ಪಂದ್ಯದಲ್ಲಿ ಆರಂಭಿಕ ಆಟಗಾರ ಶಿಖರ್ ಧವನ್ ದಾಖಲಿಸಿದ ಶತಕದ ನೆರವಿನಿಂದ ಭಾರತ ತಂಡ ೪೦ ಓವರ್‌ಗಳದಾಗ ೨ ವಿಕೆಟ್ ನಷ್ಟಕ್ಕೆ ೨೩೭ ರನ್ ಗಳಿಸಿತ್ತು. ಮೊದಲು ಬ್ಯಾಟಿಂಗ್‌ಗಿಳಿದ ಭಾರತ ತಂಡ, ನಾಯಕ ರೋಹಿತ್ ಶರ್ಮಾ (೨೩) ಅವರನ್ನು ಬಲುಬೇಗ ಕಳೆದುಕೊಂಡಿತು. ಆದರೆ, ತದನಂತರ ಆಡಲಿಳಿದ ಅಂಬಟಿ ರಾಯುಡು (೬೦: ೭೦ ಎಸೆತ, ೩ ಬೌಂಡರಿ, ೨ ಸಿಕ್ಸರ್) ಜತೆಗೆ ಧವನ್ ೧೧೬ ರನ್ ಕಲೆಹಾಕಿದರು. ಯಶಸ್ವಿ ಅರ್ಧಶತಕದ ನಂತರ ಅಂಬಟಿ ರಾಯುಡು ನಿರ್ಗಮಿಸಿದರೂ, ಧವನ್ ಮಾತ್ರ ಆಕ್ರಮಣಕಾರಿ ಆಟ ಮುಂದುವರೆಸಿದರಾದರೂ, ೪೧ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಔಟಾದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More