ಟ್ವಿಟರ್ ಸ್ಟೇಟ್ | ಪೌರಕಾರ್ಮಿಕನ ಕುಟುಂಬಕ್ಕೆ ನೆರವು ಸಂಗ್ರಹಿಸಿದ ಟ್ವೀಟಿಗರು

ದೆಹಲಿಯಲ್ಲಿ ಒಳಚರಂಡಿ ಸ್ವಚ್ಛ ಮಾಡುತ್ತಿದ್ದಾಗ ಉಸಿರುಗಟ್ಟಿ ಪ್ರಾಣ ಕಳೆದುಕೊಂಡ ಪೌರಕಾರ್ಮಿಕನ ಕುಟುಂಬಕ್ಕೆ ಟ್ವಿಟರ್ ಸಾಮಾಜಿಕ ಜಾಲತಾಣದ ಬಳಕೆದಾರರು ದೇಣಿಗೆ ಸಂಗ್ರಹಿಸಿದ್ದಾರೆ. ಟ್ವೀಟಿಗರು ಸಂಗ್ರಹಿಸಿದ ೨೪ ಲಕ್ಷ ರು.ಗಳನ್ನು ಪೌರಕಾರ್ಮಿಕನ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಡಲಾಗಿದೆ

ಬಾಲಕನೊಬ್ಬ ತನ್ನ ತಂದೆಯ ಶವಕ್ಕೆ ಮುಚ್ಚಿದ ಬಿಳಿ ಹೊದಿಕೆಯನ್ನು ನಿಧಾನವಾಗಿ ತೆಗೆದು ತಂದೆಯ ಮುಖವನ್ನು ನೋಡಿ ದುಃಖಿಸುವ ಫೋಟೋ ಟ್ವಿಟರ್‌ ಸಾಮಾಜಿಕ ಜಾಲತಾಣದಲ್ಲಿ ಸೋಮವಾರದಂದು ವೈರಲ್ ಆಗಿದೆ. ಆ ಬಾಲಕ, ದೆಹಲಿಯ ೩೭ ವರ್ಷ ವಯಸ್ಸಿನ ಪೌರಕಾರ್ಮಿಕ ಅನಿಲ್‌ ಎಂಬುವರ ಮಗ ಗೌರವ್. ಕಳೆದ ಶುಕ್ರವಾರ ನವದೆಹಲಿಯ ಪಶ್ಚಿಮ ಪ್ರಾಂತ್ಯದ ದಾದ್ರಿಯಲ್ಲಿ ದೆಹಲಿ ಜಲಮಂಡಳಿಗೆ ಸೇರಿದ ಒಳಚರಂಡಿಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಅನಿಲ್ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈ ಪೌರಕಾರ್ಮಿಕನನ್ನು ದಾದ್ರಿ ನಿವಾಸಿ ಸತ್‌ಬೀರ್ ಕಾಲಾ ಖಾಸಗಿಯಾಗಿ ಕೆಲಸಕ್ಕೆ ನೇಮಿಸಿಕೊಂಡು ಒಳಚರಂಡಿ ಸ್ವಚ್ಛ ಮಾಡಲು ಹೇಳಿದ್ದರು. ಆದರೆ, ಸ್ವಚ್ಛತಾ ಕಾರ್ಯಕ್ಕೆ ಬೇಕಾಗುವ ರಕ್ಷಣಾ ವಸ್ತುಗಳನ್ನು ಅನಿಲ್‌ಗೆ ಒದಗಿಸಿರಲಿಲ್ಲ. ಇದು ಕೊನೆಗೆ ಅವರ ಪ್ರಾಣಕ್ಕೇ ಎರವಾಯಿತು.

ಗೌರವ್ ಕೆಲವೇ ದಿನಗಳ ಹಿಂದೆ ತನ್ನ ಹಸುಗೂಸು ತಮ್ಮನನ್ನು ಕಳೆದುಕೊಂಡಿದ್ದ. ನಾಲ್ಕು ತಿಂಗಳ ಆ ಹಸುಳೆ ನ್ಯುಮೋನಿಯಾದಿಂದ ಅಸುನೀಗಿತ್ತು. ಆರು ದಿನಗಳ ನಂತರ ಗೌರವ್ ತಂದೆಯೂ ಇಹಲೋಕ ತ್ಯಜಿಸಿದ್ದಾರೆ. ಅನಿಲ್ ಮತ್ತು ಅವರ ಪತ್ನಿ ರಾಣಿ ಮೂವರು ಮಕ್ಕಳ ಜೊತೆಗೆ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಅನಿಲ್‌ ಶವ ಕಂಡು ರೋದಿಸುತ್ತಿದ್ದ ಮಗನ ಚಿತ್ರವನ್ನು ಪತ್ರಕರ್ತ ಶಿವ್ ಸನ್ನಿ ಟ್ವಿಟರ್‌ನಲ್ಲಿ ಹಾಕಿದ್ದರು. ಈ ಫೋಟೋ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಅನಿಲ್‌ ಅಂತ್ಯಕ್ರಿಯೆಗೂ ಕುಟುಂಬದ ಬಳಿ ಹಣವಿಲ್ಲ ಎಂದು ಶಿವ್ ಸನ್ನಿ ತಮ್ಮ ಟ್ವೀಟ್‌ನಲ್ಲಿ ಬರೆದಿದ್ದರು. ಹೀಗಾಗಿ, ಟ್ವಿಟರ್ ಬಳಕೆದಾರರು ಅನಿಲ್ ಕುಟುಂಬಕ್ಕೆ ನೆರವು ನೀಡಲು ಆನ್‌ಲೈನ್‌ನಲ್ಲಿ ಚಂದಾ ಎತ್ತಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಅನಿಲ್‌ನ ನೆರೆಹೊರೆಯವರು ಅಂತ್ಯಕ್ರಿಯೆಗಾಗಿ ಹಣ ಹೊಂದಿಸಿದ್ದ ಕಾರಣ, ಚಂದಾ ಮೂಲಕ ಸಂಗ್ರಹಿಸಿದ ಹಣವನ್ನು ಅನಿಲ್ ಅವರ ಮಕ್ಕಳ ಶಿಕ್ಷಣಕ್ಕಾಗಿ ನೀಡಲು ನಿರ್ಧರಿಸಲಾಗಿದೆ.

ಉದಯ್ ಫೌಂಡೇಶನ್ ಎನ್ನುವ ಸರ್ಕಾರೇತರ ಸಂಸ್ಥೆಯ ಸಂಸ್ಥಾಪಕರಾದ ರಾಹುಲ್ ವರ್ಮಾ ಅವರು ಆನ್‌ಲೈನ್ ಚಂದಾ ಸಂಗ್ರಹಿಸುವ ವೆಬ್‌ತಾಣ ‘ಕೆಟೋ’ವನ್ನು ಟ್ವಿಟರ್ ಮೂಲಕ ಸಂಪರ್ಕಿಸಿ ತಮ್ಮ ಅಭಿಯಾನ ಆರಂಭಿಸಿದ್ದಾರೆ. ರಾಹುಲ್ ಮಾಡಿದ ಟ್ವೀಟ್‌ಗೆ ತಕ್ಷಣವೇ ಉತ್ತರಿಸಿದ ಕೆಟೋ ಸಂಸ್ಥೆಯ ಟ್ವಿಟರ್ ಖಾತೆ ಚಂದಾ ಎತ್ತಲು ತಾವು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಕೋರ್ಟ್‌ನಲ್ಲಿ ಸುಮ್ಮನಿದ್ದು ಮಾಧ್ಯಮದೆದುರು ಪೌರುಷ ತೋರಿದರೇ ಪುಣೆ ಪೊಲೀಸರು?

“ನಾವು ಅನಿಲ್ ಮರಣದ ಸುದ್ದಿ ತಿಳಿಯುತ್ತಲೇ ಚಂದಾ ಎತ್ತಲು ನಿರ್ಧರಿಸಿ ಪ್ರಚಾರ ಆರಂಭಿಸಿದೆವು. ೨೪ ಗಂಟೆಯೊಳಗೆ ನಿರೀಕ್ಷಿತ ಗುರಿಯಾದ ೨೪ ಲಕ್ಷ ಸಂಗ್ರಹಿಸಿದ್ದೇವೆ. ಅದನ್ನು ಅನಿಲ್ ಅವರ ಮಕ್ಕಳ ಶಿಕ್ಷಣಕ್ಕಾಗಿ ಬಳಸಲಿದ್ದೇವೆ. ಉಳಿದ ಹಣವನ್ನು ಮಕ್ಕಳ ಭವಿಷ್ಯಕ್ಕಾಗಿ ಸ್ಥಿರ ಠೇವಣಿಯಾಗಿ ಇಡಲಿದ್ದೇವೆ,” ಎಂದು ಕೆಟೋದ ಪ್ರಚಾರ ಮ್ಯಾನೇಜರ್ ಪ್ರಿಯಾಂಕಾ ಅರಿಶಮ್ ತಿಳಿಸಿದ್ದಾರೆ.

ನಟ ಮನೋಜ್ ಬಾಜಪೇಯಿ, ಸಿ ವೋಟರ್ ಸಂಸ್ಥೆಯ ಯಶವಂತ್ ದೇಶ್‌ಮುಖ್ ಮೊದಲಾದವರು ಟ್ವಿಟರ್‌ನಲ್ಲಿ ಪೌರಕಾರ್ಮಿಕನ ಕುಟುಂಬಕ್ಕೆ ಹಣ ಹೊಂದಿಸಲು ಪ್ರಚಾರ ನಡೆಸಿದ್ದಾರೆ. ಇನ್ನೂ ಹಲವು ಮಂದಿ ತಮ್ಮ ಕೈಲಾದ ನೆರವು ನೀಡಿದ್ದೇವೆ ಎಂದು ಟ್ವೀಟ್‌ ಮಾಡಿದ್ದಾರೆ.

ಕುಟುಂಬಕ್ಕೆ ಸಣ್ಣ ನೆರವು ನೀಡುವ ಮೂಲಕ ಪೌರಕಾರ್ಮಿಕ ಗೌರವ್‌ಗೆ ಹೊಸ ಸೈಕಲ್ ನೀಡಿರುವ ಬಗ್ಗೆ ರಾಹುಲ್ ವರ್ಮಾ ಟ್ವಿಟರ್‌ನಲ್ಲಿ ವಿವರ ನೀಡಿದ್ದಾರೆ. “ಅನಿಲ್ ಅವರು ಮುಂದಿನ ತಿಂಗಳು ಗೌರವ್‌ನ ಹುಟ್ಟುಹಬ್ಬಕ್ಕೆ ಹೊಸ ಸೈಕಲ್ ಕೊಡಿಸುವ ಭರವಸೆ ನೀಡಿದ್ದರು. ಅವರ ತಂದೆಯನ್ನು ವಾಪಸು ಕರೆದುತರಲು ಸಾಧ್ಯವಿಲ್ಲದೆ ಇದ್ದರೂ, ಮಕ್ಕಳ ಮೊಗದಲ್ಲಿ ನಗು ತರಲು ಸಾಧ್ಯವಾಗಿದೆ,” ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಚಿತ್ರ: ಸಾಂದರ್ಭಿಕ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More