ಟ್ವಿಟರ್‌ ಸ್ಟೇಟ್‌ | ಶಾರುಖ್‌ ಖಾನ್ ಗಣೇಶನ ಹಬ್ಬ ಆಚರಿಸಿದರೆ ತಪ್ಪಿಲ್ಲ 

ಶಾರುಖ್ ಖಾನ್ ತಮ್ಮ ಮನೆಯಲ್ಲಿ ಗಣೇಶ ಹಬ್ಬ ಆಚರಿಸಿದ  ಫೋಟೋವನ್ನು ಸಾಮಾಜಿಕ ಜಾಲತಾಣಗಳಿಗೆ ಪೋಸ್ಟ್ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಕಟ್ಟಾ ಸಂಪ್ರದಾಯವಾದಿಗಳು ಶಾರುಖ್ ಮೂರ್ತಿ ಪೂಜೆ ಮಾಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೆ, ಹಲವರು ಬಹುತ್ವ ಸಂಸ್ಕೃತಿ ಎಂದು ಪ್ರಶಂಸಿಸಿದ್ದಾರೆ

ಬಾಲಿವುಡ್ ನಟ ಶಾರುಖ್‌ ಖಾನ್ ಇತ್ತೀಚೆಗೆ ತಮ್ಮ ಮನೆಯಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಿದ್ದರು. ಶಾರುಖ್ ಮನೆಯಲ್ಲಿ ಗಣೇಶ ಚತುರ್ಥಿ, ಕೃಷ್ಣಾಷ್ಟಮಿ, ದೀಪಾವಳಿ ಹಬ್ಬಗಳನ್ನು ಈದ್ ಹಬ್ಬಕ್ಕೆ ಕೊಟ್ಟಷ್ಟೇ ಪ್ರಾಮುಖ್ಯ ನೀಡಿ ಆಚರಿಸಲಾಗುತ್ತದೆ. ಅದಕ್ಕೆ ಕಾರಣವೂ ಇರಬಹುದು. ಶಾರುಖ್‌ ಖಾನ್ ಅವರ ಪತ್ನಿ ಗೌರಿ ಹಿಂದು. ದಶಕಗಳ ಅವರ ದಾಂಪತ್ಯ ಧರ್ಮನಿರಪೇಕ್ಷತೆ ಮತ್ತು ಸರ್ವ ಧರ್ಮಗಳನ್ನೂ ಗೌರವಿಸಿ ಆಧರಿಸುವ ನಿಲುವನ್ನೇ ಶಾರುಖ್ ಮತ್ತು ಗೌರಿ ತೋರಿಸುತ್ತಾ ಬಂದಿದ್ದಾರೆ. ತಮ್ಮ ಮಕ್ಕಳಿಗೂ ಅವರು ಅದನ್ನೇ ಕಲಿಸುತ್ತಿದ್ದಾರೆ. ಹೀಗಾಗಿ ಶಾರುಖ್‌ ಖಾನ್ ತಮ್ಮ ಮನೆಯಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದು ಅಚ್ಚರಿಯ ವಿಚಾರವೇನಲ್ಲ.

ಈ ಬಾರಿಯೂ ಶಾರುಖ್ ಖಾನ್ ಅವರು ತಮ್ಮ ಮನೆಯಲ್ಲಿ ಚೌತಿಗೆ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ತಮ್ಮ ಕಿರಿಯ ಮಗ ಅಬ್ರಾಮ್ ಅವರು ಗಣೇಶನಿಗೆ ವಂದಿಸುತ್ತಿರುವ ಫೋಟೋವನ್ನು ಶಾರುಖ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆದರೆ ಈ ಫೋಟೋಗೆ ಬಹಳಷ್ಟು ಟೀಕೆಗಳು ಮತ್ತು ಪ್ರಶಂಸೆಗಳೂ ವ್ಯಕ್ತವಾಗಿವೆ. ಶಾರುಖ್ ತಮ್ಮ ಮಗನ ಗಣೇಶ ವಂದನೆಯ ಫೋಟೋ ಮೂಲಕ ಸಂಪ್ರದಾಯವಾದಿ ಇಸ್ಲಾಂ ಧರ್ಮೀಯರನ್ನು ಕೆರಳಿಸಿದ್ದಾರೆ. ಶಾರುಖ್ ಖಾನ್ ಅವರು ಇಸ್ಲಾಂ ಧರ್ಮೀಯರಾಗಿರುವ ಕಾರಣದಿಂದ ಮೂರ್ತಿ ಪೂಜೆ ಮಾಡುವುದು ಸರಿಯಲ್ಲ ಎಂದು ಹಲವು ಸಂಪ್ರದಾಯವಾದಿಗಳು ಟೀಕಿಸಿದ್ದಾರೆ.

ಕಟ್ಟಾ ಇಸ್ಲಾಂ ಧರ್ಮೀಯರು ಶಾರುಖ್ ಖಾನ್‌ ಅವರು ತಮ್ಮ ಮೂಲ ನೆಲೆಯನ್ನು ಮರೆಯುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಇಸ್ಲಾಂ ಮತ್ತು ಇತರ ಧರ್ಮದ ಶಾರುಖ್ ಅಭಿಮಾನಿಗಳು ಅನೇಕರು ಗಣೇಶನನ್ನು ಪೂಜಿಸುವುದರಲ್ಲಿ ತಪ್ಪೇನಿಲ್ಲ ಎಂದೂ ಅಭಿಪ್ರಾಯಪಟ್ಟಿದ್ದಾರೆ. “ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿರುವುದು ಶಾರುಖ್‌ ಖಾನ್ ಅವರು ನಿಜವಾದ ಜಾತ್ಯತೀತವಾದಿ ಎನ್ನುವುದನ್ನು ತೋರಿಸುತ್ತದೆ. ಭಾರತೀಯರ ಸಹಬಾಳ್ವೆಗೆ ಉದಾಹರಣೆಯಾಗಿದ್ದಾರೆ ಶಾರುಖ್ ಖಾನ್” ಎಂದೂ ಹಲವು ಮಂದಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಪೌರಕಾರ್ಮಿಕನ ಕುಟುಂಬಕ್ಕೆ ನೆರವು ಸಂಗ್ರಹಿಸಿದ ಟ್ವೀಟಿಗರು

ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಖಾತೆ, ನಟಿ ಸ್ವರ ಭಾಸ್ಕರ್ ಸೇರಿದಂತೆ ಹಲವರು ಶಾರುಖ್ ಖಾನ್ ಅವರ ಗಣೇಶ ಹಬ್ಬ ಆಚರಣೆಯನ್ನು ವಿರೋಧಿಸುತ್ತಿರುವ ಸಂಪ್ರದಾಯವಾದಿಗಳನ್ನು ಟೀಕಿಸಿದ್ದಾರೆ. “ಭಾರತದ ಸೌಂದರ್ಯ ವೈವಿಧ್ಯತೆಯಲ್ಲಿ ಅಡಗಿದೆ. ದ್ವೇಷವು ಅದನ್ನು ನಿವಾರಿಸಲು ಅವಕಾಶ ಕೊಡಬಾರದು” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More