ಹತ್ತು ವರ್ಷಗಳ ಗೊಂದಲಕ್ಕೆ ತೆರೆ; ಗೋಕರ್ಣ ದೇವಸ್ಥಾನ ಸರ್ಕಾರದ ಸುಪರ್ದಿಗೆ

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೈಗೊಂಡಿದ್ದ ನಿರ್ಧಾರದಿಂದಾಗಿ ರಾಮಚಂದ್ರಾಪುರ ಮಠದ ವಶದಲ್ಲಿದ್ದ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಆಡಳಿತ ಕಡೆಗೂ ಸರ್ಕಾರದ ಸುಪರ್ದಿಗೆ ಬಂದಿದೆ. ಆದರೆ ಮಠದ ಪರ ವಕೀಲರು ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದೆ ಎಂದು ತಕರಾರು ಎತ್ತಿದ್ದಾರೆ

ಕಡೆಗೂ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಆಡಳಿತ ಸರ್ಕಾರದ ಸುಪರ್ದಿಗೆ ಬಂದಿದೆ. ಹೈಕೋರ್ಟ್ ಆದೇಶದ ಪ್ರಕಾರ ಬುಧವಾರ ದೇವಸ್ಥಾನದ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ, ಜಿಲ್ಲಾಧಿಕಾರಿ ಎನ್ ಎಸ್ ನಕುಲ್ ದೇವಸ್ಥಾನದ ಆಡಳಿತವನ್ನು ತಮ್ಮ ಸುಪರ್ದಿಗೆ ಪಡೆದಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ದೇವಸ್ಥಾನದ ಸಾಮಗ್ರಿ ಅಮೂಲ್ಯ ಆಭರಣ ಮತ್ತಿತರ ವಸ್ತುಗಳನ್ನು ಪರಿಶೀಲಿಸಿ ಸಮಿತಿಯ ವಶಕ್ಕೆ ಪಡೆಯಲಾಗಿದೆ.

ಇದರೊಂದಿಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕೈಗೊಂಡಿದ್ದ ಹಿಂದಿನ ನಿರ್ಧಾರಕ್ಕೆ ಮತ್ತು ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಹಿನ್ನಡೆಯಾದಂತಾಗಿದೆ. 2008ರಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಮಠಕ್ಕೆ ದೇವಸ್ಥಾನದ ಆಡಳಿತ ವಹಿಸಿಕೊಟ್ಟಿದ್ದರು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರಾದ ಈ ಹಿಂದಿನ ಮೇಲುಸ್ತುವಾರಿ ಟ್ರಸ್ಟಿ ಬಾಲಚಂದ್ರ ದೀಕ್ಷಿತ್ ಮತ್ತು ಕೆಲ ಅರ್ಚಕರು ದೇವಸ್ಥಾನವು 1977ರ ಧಾರ್ಮಿಕ ದತ್ತಿ ಇಲಾಖೆ ಕಾಯ್ದೆಗೆ ಒಳಪಡುತ್ತದೆ. ಹೀಗಾಗಿ ಹಸ್ತಾಂತರ ಪ್ರಕ್ರಿಯೆ ಕಾನೂನುಬದ್ಧವಲ್ಲ ಎಂದು ಹೈಕೋರ್ಟಿಗೆ ಮನವರಿಕೆ ಮಾಡಿಕೊಟ್ಟಿದ್ದರು. ವಿಚಾರಣೆ ನಡೆಸಿದ್ದ ನ್ಯಾ. ಬಿ ವಿ ನಾಗರತ್ನ ಮತ್ತು ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠ ದೇವಾಲಯವನ್ನು ಪುನಃ ಸರ್ಕಾರದ ವಶಕ್ಕೆ ಒಪ್ಪಿಸಲು ಇತ್ತೀಚೆಗೆ ಸೂಚಿಸಿದ್ದರು.

ಜಿಲ್ಲಾಡಳಿತದ ನಿರ್ಧಾರಕ್ಕೆ ಮಠದ ಪರ ವಕೀಲ ಶಂಭುಶರ್ಮ ಆಕ್ಷೇಪ ವ್ಯಕ್ತಪಡಿಸಿದ್ದು. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.

ವಿವಾದಗಳ ಹುತ್ತ

ಇದನ್ನೂ ಓದಿ : ಭೂಕಬಳಿಕೆ ಪ್ರಕರಣ; ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ಮರುದೂರು

ಇದಲ್ಲದೆ ಮತ್ತೊಂದು ವಿವಾದವೂ ದೇವಸ್ಥಾನವನ್ನು ಸುತ್ತು ಹಾಕಿಕೊಂಡಿತ್ತು. ಮಠ ಆಡಳಿತ ವಹಿಸಿಕೊಂಡ ಬಳಿಕ 33 ಉಪಾಧಿವಂತ ಕುಟುಂಬಗಳ ಸಾಂಪ್ರದಾಯಿಕ ಪೂಜಾ ಕಾರ್ಯಕ್ಕೆ ತಡೆ ಒಡ್ಡಲಾಗಿತ್ತು. ನೋಂದಾಯಿಸಿಕೊಂಡ ಅರ್ಚಕರಿಗೆ ಮಾತ್ರ ಪೂಜೆ ಸಲ್ಲಿಸಲು ಅವಕಾಶವಿದೆ ಎಂದು ಮಠ ಹೇಳಿತ್ತು. ಈ ಸಂಬಂಧ ವಿಚಾರಣೆ ನಡೆಸಿದ್ದ ಕಾರವಾರ ಜಿಲ್ಲಾ ನ್ಯಾಯಾಲಯ, ಕಳೆದ ಮೇ 30ರಂದು 33 ಉಪಾಧಿವಂತ ಕುಟುಂಬಗಳಿಗೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತ್ತು. ಆ ಬಳಿಕ ಮಧುಕರ ಸೂರಿ ಎಂಬ ಅರ್ಚಕರು ಭಕ್ತರೊಂದಿಗೆ ದೇವಸ್ಥಾನದಲ್ಲಿ ಪೂಜೆಗೆ ತೆರಳಿದ್ದರು. ಇದನ್ನು ಅಂದಿನ ಆಡಳಿತ ಮಂಡಳಿ ವಿರೋಧಿಸಿದ್ದರಿಂದ ವಿವಾದ ಉಂಟಾಗಿತ್ತು. ಇದು ನ್ಯಾಯಾಲಯ ಆದೇಶದ ಸ್ಪಷ್ಟ ಉಲ್ಲಂಘನೆ ಎಂದು ಸೂರಿ ಆರೋಪಿಸಿದ್ದರು.

ಈಗಿನ ಹಸ್ತಾಂತರ ಪ್ರಕ್ರಿಯೆಯಿಂದ ಹತ್ತು ವರ್ಷಗಳ ಹಿಂದೆ ಇದ್ದ ಗೊಂದಲವನ್ನು ಬಗೆಹರಿಸಿದೆಯಾದರೂ ಮಠದ ಪರ ವಕೀಲರು ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದು ಪ್ರಕರಣ ಇನ್ನೂ ತಾತ್ವಿಕ ಅಂತ್ಯ ಕಂಡಿಲ್ಲ. ಸುಪ್ರೀಂಕೋರ್ಟ್ ಹೈಕೋರ್ಟ್ ತೀರ್ಪನ್ನು ಹೇಗೆ ಸ್ವೀಕರಿಸುತ್ತದೆ ಎಂಬ ಪ್ರಶ್ನೆ ಇದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More