ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ 5 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು  

ಬಿಎಸ್ವೈ ನೇತೃತ್ವದಲ್ಲಿ ಬಿಜೆಪಿ ವಿಶೇಷ ಸಭೆ

ರಾಜ್ಯ ಬಿಜೆಪಿಯ ವಿಶೇಷ ಸಭೆ ಬುಧವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ‌ನಡೆಯಲಿದೆ. ಸಮ್ಮಿಶ್ರ ಸರ್ಕಾರದಲ್ಲಿನ ಭಿನ್ನಮತಗಳ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸಾಕಷ್ಟು ರಾಜಕೀಯ ಚಟುವಟಿಕೆಗಳು ನಡೆದಿವೆ. ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಸಭೆ ಕರೆಯಲಾಗಿದೆ ಎನ್ನಲಾಗಿದೆ. ಮೂರು ದಿನಗಳ‌ ಹಿಂದೆಯೇ ಎಲ್ಲಾ ಶಾಸಕರಿಗೂ ಬೆಂಗಳೂರಿಗೆ ಬರುವಂತೆ ಆಹ್ವಾನ ನೀಡಲಾಗಿದೆ. ರಾಜ್ಯ ಘಟಕದ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್ ಪಾಲ್ಗೊಳ್ಳಲಿದ್ದಾರೆ.

ಹೈಕಮಾಂಡ್-ರಾಜ್ಯ ಕಾಂಗ್ರೆಸ್ ನಾಯಕರ ಸಭೆ

ಕಾಂಗ್ರೆಸ್‌ನಲ್ಲಿನ ಭಿನ್ನಮತ, ಸಂಪುಟ ವಿಸ್ತರಣೆ, ವಿಧಾನ ಪರಿಷತ್‌ನ ಮೂರು ನಾಮ ನಿರ್ದೇಶಿತ ಸದಸ್ಯರು ಸೇರಿದಂತೆ ಕಾಂಗ್ರೆಸ್ ಪಾಲಿಗೆ ಲಭಿಸಲಿರುವ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಕಾಂಗ್ರೆಸ್ ನಾಯಕರು ಬುಧವಾರ ದೆಹಲಿಯಲ್ಲಿ ಹೈಕಮಾಂಡ್ ಜೊತೆ ಚರ್ಚಿಸಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಮಂಗಳವಾರ ರಾತ್ರಿ ದೆಹಲಿ ತಲುಪಿದ್ದಾರೆ. ದಿನೇಶ್ ಗುಂಡೂರಾವ್ ನಿನ್ನೆಯಿಂದಲೇ ದೆಹಲಿಯಲ್ಲಿ ತಂಗಿದ್ದಾರೆ. ಡಿಸಿಎಂ ಜಿ ಪರಮೇಶ್ವರ್ ಅವರು ಇಂದು ಉಳಿದ ನಾಯಕರನ್ನು ಕೂಡಿಕೊಳ್ಳಲಿದ್ದಾರೆ.

ಏಷ್ಯಾ ಕಪ್; ಸಮರಕ್ಕೆ ಅಣಿಯಾದ ಭಾರತ ಹಾಗೂ ಪಾಕಿಸ್ತಾನ

ಜೂನ್ ೨೦೧೭ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ ಬಳಿಕ ಭಾರತ ಮತ್ತು ಪಾಕಿಸ್ತಾನ ತಂಡ ಇದೇ ಮೊದಲ ಬಾರಿಗೆ ಕ್ರಿಕೆಟ್ ಅಂಗಣದಲ್ಲಿ ಎದುರಾಗುತ್ತಿವೆ. ಹೆಚ್ಚೂಕಮ್ಮಿ ವರ್ಷದ ಬಳಿಕದ ಮುಖಾಮುಖಿಯಲ್ಲಿ ಕೊಹ್ಲಿ ಇಲ್ಲದ ಟೀಂ ಇಂಡಿಯಾವನ್ನು ಹಣಿಯಲು ಪಾಕ್ ಉತ್ಸುಕವಾಗಿದೆ. ಬುಧವಾರ (ಸೆ.೧೯) ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡವನ್ನು ಮಣಿಸುವ ಅದಮ್ಯ ವಿಶ್ವಾಸದಲ್ಲಿದೆ ಪಾಕಿಸ್ತಾನ ತಂಡ. ಇದಕ್ಕೆ ಪ್ರಮುಖ ಕಾರಣ, ವಿರಾಟ್ ಕೊಹ್ಲಿ ಈ ಟೂರ್ನಿಗೆ ಅಲಭ್ಯವಾಗಿರುವುದು. ಇಂಗ್ಲೆಂಡ್ ಸರಣಿಯ ಬಳಿಕ ಏಷ್ಯಾ ಕಪ್‌ ಪಂದ್ಯಾವಳಿಯಿಂದ ವಿಶ್ರಾಂತಿ ಪಡೆದಿರುವ ಕೊಹ್ಲಿಯ ಈ ಅನುಪಸ್ಥಿತಿಯನ್ನು ಸದುಪಯೋಗಪಡಿಸಿಕೊಳ್ಳಲು ಪಾಕ್ ತಂಡ ಸನ್ನಾಹ ನಡೆಸಿದೆ.

ದಲಿತ ನೌಕರರ ಬಡ್ತಿ. ಇಂದು ಸುಪ್ರೀಂ ನಲ್ಲಿ ವಿಚಾರಣೆ

ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರ ಬಡ್ತಿ ಮೀಸಲಾತಿ ವಿಚಾರಣೆ ಇಂದು ಸುಪ್ರೀಂಕೋರ್ಟ್ ನಲ್ಲಿ ನಡೆಯಲಿದೆ. ನ್ಯಾ. ಮೂರ್ತಿ ಎ. ಎಂ ಸಪ್ರೆ ನೇತೃತ್ವದ ನ್ಯಾಯಪೀಠ ವಿಚಾರಣೆ ಕೈಗೆತ್ತಿಕೊಳ್ಳಲಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರಿಗೆ ಬಡ್ತಿ ಮೀಸಲಾತಿ ಸಂಬಂಧ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ರಾಷ್ಟ್ರಪತಿಗಳಿಂದ ಅಂಕಿತಗೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರದ ನಡೆ ಪ್ರಶ್ನಿಸಿ ಹಲವು ಮಂದಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಬ್ಯಾಂಕ್ ವಿಲೀನ ವಿರೋಧಿಸಿ ಇಂದು ಧರಣಿ

ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ವಿಲೀನ ವಿರೋಧಿಸಿ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ ಕರ್ನಾಟಕ ಘಟಕ ಬುಧವಾರ ಧರಣಿಗೆ ಮುಂದಾಗಿದೆ. ಮುಂದಿನ ವರ್ಷ ಏಪ್ರಿಲ್ ೧ ರಿಂದ ಮೂರು ಬ್ಯಾಂಕ್‌ಗಳು ವಿಲೀನಗೊಂಡು ಹೊಸ ಬ್ಯಾಂಕ್ ರಚನೆಯಾಗಿ ಕಾರ್ಯಾರಂಭ ಮಾಡಲಿವೆ ಎನ್ನಲಾಗಿದೆ. ಬೆಂಗಳೂರಿನ ಟ್ರಿನಿಟಿ ವೃತ್ತದ ಬಳಿ ವಿಜಯ್ ಬ್ಯಾಂಕ್ ಮುಖ್ಯ ಕಚೇರಿಯ ಎದುರು ಧರಣಿ ನಡೆಸಲಾಗುವುದು ಎಂದು ತಿಳಿಸಲಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More