ಇಂದಿನ ಡೈಜೆಸ್ಟ್ | ನೀವು ಗಮನಿಸಬೇಕಾದ ಇತರ 10 ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ಪ್ರಮುಖ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳು  

ತ್ರಿವಳಿ ತಲಾಖ್ ನಿಷೇಧ; ಶಿಕ್ಷಾರ್ಹ ಅಪರಾಧ ಎಂದು ಸುಗ್ರಿವಾಜ್ಞೆ ಹೊರಡಿಸಿದ ಕೇಂದ್ರ ಸರ್ಕಾರ

ಒಂದೇ ಬಾರಿ ಮೂರು ಸಲ ತಲಾಖ್‌ ಪದವನ್ನು ಗಂಡನಾದವ ಹೇಳಿದರೆ ಹೆಂಡತಿಯೊಂದಿಗಿನ ಆತನ ಮದುವೆಯ ಬಂಧನ ಮುರಿದುಬೀಳುವ ನಿಯಮವನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುವ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ. ಸಂಸತ್‌ನ ಎರಡೂ ಸದನಗಳಲ್ಲಿ ತ್ರಿವಳಿ ತಲಾಖ್ ಮಸೂದೆಯನ್ನು ಅಂಗೀಕರಿಸುವುದಕ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ  ಕೇಂದ್ರ ಸರ್ಕಾರ ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡಿದ್ದು, ತ್ರಿವಳಿ ತಲಾಖ್ ನೀಡುವ ವ್ಯಕ್ತಿಗೆ 3 ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಈಗಾಗಲೇ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಅಂಗೀಕಾರಗೊಂಡಿದ್ದು, ಕರಡು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿರುವ ಅಂಶಗಳಿಗೆ ವಿರೋಧ ವ್ಯಕ್ತಪಡಿಸಿದ್ದ ವಿಪಕ್ಷಗಳು ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರಕ್ಕೆ ಅವಕಾಶ ನೀಡಿರಲಿಲ್ಲ.

ಕೆಂದ್ರದ ಬುಲೆಟ್ ರೈಲು ಯೋಜನೆ ವಿರೋಧಿಸಿ ೧೦೦೦ ರೈತರಿಂದ ಅಫಿಡವಿಟ್ ಸಲ್ಲಿಕೆ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಬುಲೆಟ್ ರೈಲು ಯೋಜನೆಗೆ ಗುಜರಾತ್‌ನ ರೈತರಿಂದ ವಿರೋಧ ವ್ಯಕ್ತವಾಗಿದ್ದು. 1,000 ಕ್ಕೂ ಹೆಚ್ಚು ರೈತರು ಬುಧವಾರ ಗುಜರಾತ್ ಹೈಕೋರ್ಟ್‌ಗೆ ಅಫಿಡವಿಟ್‌ಗಳನ್ನು ಸಲ್ಲಿಸಿದ್ದಾರೆ. ಗುಜರಾತ್ ರಾಜ್ಯದ ವಿವಿಧ ಜಿಲ್ಲೆಗಳ ಕೃಷಿ ಭೂಮಿಗಳು ಈ ಯೋಜನೆಯಿಂದ ಬಲಿಯಾಗಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ರೈತರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಆರ್ ಸುಭಾಷ್ ರೆಡ್ಡಿ ಹಾಗೂ ನ್ಯಾಯಮೂರ್ತಿ ವಿ ಎಂ ಪಾಂಚೊಲಿ ಅವರ ದ್ವಿ ಸದಸ್ಯ ಪೀಠವು ಈ ಹಿಂದೆ ಸಲ್ಲಿಸಿದ್ದ ನಾಲ್ಕು ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿದೆ. ಮುಂಬೈ- ಅಹಮದಾಬಾದ್‌ ಮಾರ್ಗದಲ್ಲಿ ೧. ೧೦ ಲಕ್ಷ ಕೋಟಿ ವೆಚ್ಚದಲ್ಲಿ ಬುಲೆಟ್ ರೈಲು ಯೋಜನೆಯನ್ನು ತರಲು ಕೇಂದ್ರ ಸರ್ಕಾರ ಮುಂದಾಗಿದೆ.

ಸಂಶೋಧನೆ ಮತ್ತು ಅಭಿವೃದ್ಧಿಗೆ ವಿನಿಯೋಜನೆ; ಟಾಪ್ 100 ಪಟ್ಟಿಯಲ್ಲಿ ಟಾಟಾ ಮೋಟಾರ್ಸ್

ಸಂಶೋಧನೆ ಮತ್ತು ಅಭಿವೃದ್ಧಿಗೆ(ಆರ್ & ಡಿ) ಹೆಚ್ಚು ಹೂಡಿಕೆ ಮಾಡುವಲ್ಲಿ ಭಾರತದ ಕಂಪನಿಗಳು ಹಿಂದೆ ಬಿದ್ದಿವೆ. ಜಾಗತಿಕ ಕಂಪನಿಗಳ ಪೈಕಿ ಆರ್&ಡಿಗೆ ಹೆಚ್ಚು ಹೂಡಿಕೆ ಮಾಡುವ ಟಾಪ್ 100ರ ಪಟ್ಟಿಯಲ್ಲಿ ಭಾರತದ ಒಂದೇ ಕಂಪನಿ ಸ್ಥಾನ ಪಡೆದಿದೆ. ಅದು ಟಾಟಾ ಮೋಟಾರ್ಸ್. ಪಟ್ಟಿಯಲ್ಲಿ ಟಾಟಾ ಮೋಟಾರ್ಸ್ ಗೆ 99ನೇ ಸ್ಥಾನ. ಟಾಟಾ ಮೋಟಾರ್ಸ್- ಜೆಎಲ್ಆರ್ ಸಂಯೋಜಿತ ಹೂಡಿಕೆ ಪ್ರಕಾರ ಜಾಗತಿಕ ಪಟ್ಟಿಯಲ್ಲಿ 13ನೇ ಸ್ಥಾನ. 100-224ನೇ ಸ್ಥಾನದವರೆಗೆ ಭಾರತದ 10 ಕಂಪನಿಗಳು ಸ್ಥಾನ ಪಡೆದಿದೆ. ಸನ್ ಫಾರ್ಮಾ, ಮಹಿಂದ್ರಾ ಅಂಡ್ ಮಹಿಂದ್ರಾ, ಲುಪಿನ್, ಡಾ. ರೆಡ್ಡಿ, ರಿಲಯನ್ಸ್, ಗ್ಲೆನ್ಮಾರ್ಕ್, ಸಿಪ್ಲಾ, ಮಾರುತಿ ಸುಜುಕಿ ಮತ್ತು ಬಿಎಚ್ಇಎಲ್ ಪಟ್ಟಿಯಲ್ಲಿವೆ.

ನಮೋ ಆಪ್ ಮೂಲಕ ದೇಣಿಗೆ ಸಂಗ್ರಹಕ್ಕೆ ಮುಂದಾದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರ ‘ನಮೋ ಅಪ್ಲಿಕೇಶನ್’ ಮೂಲಕ ‘ಮೈಕ್ರೊ ಡೊನೇಶನ್’ ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಿದ್ದು, ಬಿಜೆಪಿ ಪಕ್ಷಕ್ಕೆ ಆರ್ಥಿಕ ಬೆಂಬಲ ನೀಡಲು ಇಚ್ಛಿಸುವ ಜನರಿಗಾಗಿ ಅಪ್ಲಿಕೇಶನ್ ನಲ್ಲಿ ಈ ಸೇವೆಯನ್ನು ರೂಪಿಸಲಾಗಿದೆ ಎಂದು ತಿಳಿದು ಬಂದಿದೆ, ಅಪ್ಲಿಕೇಶನ್ ಬಳಕೆದಾರರು 5 ರೂಪಾಯಿಗಳಿಂದ 1000 ರೂಪಾಯಿಗಳ ವೆರೆಗೆ ದೇಣಿಗೆ ನೀಡಬಹುದಾಗಿದೆ. ಈ ಸೇವೆ ಸದ್ಯ ಆಂಡ್ರಾಯ್ಡ್ ಹಾಗೂಐಒಎಸ್ ಬಳಕೆದಾರರಿಗೆ ಲಭ್ಯವಿದೆ. ಈ ಹಿಂದೆ ಈ ಮೊಬೈಲ್‌ ಅಪ್ಲಿಕೇಷನ್‌ ಬಳಕೆದಾರರ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸುತ್ತದೆ ಎಂಬ ಆರೋಪಕ್ಕೆ ಗುರಿಯಾಗಿತ್ತು.

ಕ್ರೀಡಾ ಹಬ್ ನಿರ್ಮಾಣಕ್ಕೆ ಅನುದಾನ ನೀಡಲು ಕೇಂದ್ರ ಸಚಿವರಿಗೆ ಮನವಿ ಮಾಡಿದ ಜಿ ಪರಮೇಶ್ವರ್

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ವಿದ್ಯಾನಗರದಲ್ಲಿ ಸ್ಪೋರ್ಟ್ಸ್‌ ಹಬ್ ನಿರ್ಮಾಣಕ್ಕೆ 70 ಕೋಟಿ ರು. ಹಾಗೂ ರಾಜ್ಯದಲ್ಲಿ ಇತರೆ ಕ್ರೀಡಾಂಗಣಗಳ ಅಭಿವೃದ್ಧಿಗೆ ಅನುದಾನ ನೀಡುವಂತೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ರಾಜ್‌ವರ್ಧನ್ ಸಿಂಗ್ ರಾಥೋಡ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಬುಧವಾರ ದೆಹಲಿಯಲ್ಲಿ ಕೇಂದ್ರ ಕ್ರೀಡಾ ಸಚಿವರನ್ನು ಭೇಟಿ ಮಾಡಿದ ಪರಮೇಶ್ವರ್ ಅವರು, ರಾಜ್ಯ ಕ್ರೀಡಾ ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಸಿದರು. ಬೆಂಗಳೂರಿನ ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಯುವ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಹಬ್ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗಿದ್ದು 70 ಕೋಟಿ ರು. ವೆಚ್ಚ ಅಂದಾಜಿಸಲಾಗಿದೆ ಎಂದು ತಿಳಿದುಬಂದಿದೆ.

ವಿಶ್ವವಿಖ್ಯಾತ ಹಾಸ್ಯ ಕಲಾವಿದರಾದ ಲಾರೆಲ್ ಅಂ-ಡ್ ಹಾರ್ಡಿ ಬಯೋಪಿಕ್‌

ಹಾಲಿವುಡ್‌ನ ಜನಪ್ರಿಯ ಸ್ಲ್ಯಾಪ್‌ಸ್ಟಿಕ್ ಕಮೆಡಿಯನ್‌ಗಳಾದ ಲಾರೆಲ್ ಮತ್ತು ಹಾರ್ಡಿ ಬಯೋಪಿಕ್ ತಯಾರಾಗುತ್ತಿದೆ. ಜಾನ್‌ ಎಸ್ ಬೈರ್ಡ್ಸ್‌ ನಿರ್ದೇಶನದಲ್ಲಿ ಚಿತ್ರ ಸಿದ್ಧವಾಗುತ್ತಿದೆ. ಹಾಲಿವುಡ್‌ನ ಆರಂಭದ ದಿನಗಳಲ್ಲಿ ಸ್ಟ್ಯಾನ್ ಲಾರೆಲ್ ಮತ್ತು ಒಲಿವರ್ ಹಾರ್ಡಿ ತಮ್ಮ ಅತ್ಯುತ್ತಮ ಕಾಮಿಕ್ ಟೈಮಿಂಗ್‌ನಿಂದ ದೊಡ್ಡ ಜನಪ್ರಿಯತೆ ಗಳಿಸಿದ್ದರು. ಮೂಕಿ ಚಿತ್ರಗಳೂ ಸೇರಿದಂತೆ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಈ ಜೋಡಿ ಅಭಿನಯಿಸಿದ್ದಾರೆ. ಪ್ರಸ್ತುತ ಸಿದ್ಧವಾಗುತ್ತಿರುವ ಬಯೋಪಿಕ್‌ನಲ್ಲಿ ಸ್ಟೀವ್ ಕೂಗನ್ (ಲಾರೆಲ್‌)‌ ಮತ್ತು ಜಾನ್ ರಿಲ್ಲಿ (ಹಾರ್ಡಿ) ನಟಿಸುತ್ತಿದ್ದಾರೆ. ಟ್ರೈಲರ್ ಬಿಡುಗಡೆಯಾಗಿದ್ದು 2019ರ ಜನವರಿ 11ರಂದು ಸಿನಿಮಾ ತೆರೆಕಾಣಲಿದೆ.

ಆನ್‌ಲೈನ್ ಔಷಧ ಖರೀದಿಗೆ ವಿರೋಧ; ಸೆ ೨೮ ಕ್ಕೆ ಮುಷ್ಕರ

ಆನ್‌ಲೈನ್ ಮೂಲಕ ಔಷಧಿಗಳ ಖರೀದಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ (ಎಐಒಸಿಡಿ) ಸೆ 28ರಂದು ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದೆ. ಮುಷ್ಕರದ ದಿನ ಔಷಧ ಅಂಗಡಿಗಳು ಸಂಪೂರ್ಣವಾಗಿ ಮುಚ್ಚಿರುತ್ತದೆ. ರಾಜ್ಯದಲ್ಲಿ 20 ಸಾವಿರಕ್ಕೂ ಅಧಿಕ ಮೆಡಿಕಲ್ ಶಾಪ್ ಬಂದ್ ಆಗಲಿದೆ.

ಕಣ್ಣು ಗುಡ್ಡೆ ಕಿತ್ತು, ಕತ್ತು ಸೀಳಿ, ಭಾರತೀಯ ಯೋಧನನ್ನು ಹತ್ಯೆಗೈದ ಪಾಕ್ ಸೇನೆ

ಜಮ್ಮು ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕ್ ಸೈನಿಕರು, ಬಿಎಸ್ ಎಪ್ ಯೋಧನ ಗಂಟಲು ಸೀಳಿ, ಕಣ್ಣುಗುಡ್ಡೆಗಳನ್ನು ಕಿತ್ತು ಕ್ರೂರತ್ವ ಪ್ರದರ್ಶಿಸಿದ್ದು, ಗಡಿಯಲ್ಲಿ ಬಿಗಿವಿನ ವಾತಾವರಣ ಸೃಷ್ಟಿಯಾಗಿದೆ. ಘಟನೆ ಬಳಿಕ ಇದೀಗ ರಾಮ್ ಗಢ್ ಸೆಕ್ಟರ್ ನಲ್ಲಿ ಭದ್ರತಾ ಪಡೆಗಳು ಅಂತಾರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣ ರೇಖೆ ಬಳಿ ಹೈ ಅಲರ್ಟ್ ಘೋಷಿಸಿರುವುದಾಗಿ ಸೇನಾಧಿಕಾರಿಗಳು ತಿಳಿಸಿದ್ದಾರೆ. ಗಡಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ನರೇಂದ್ರಕುಮಾರ್ ನನ್ನು ಪಾಕ್ ಸೈನಿಕರು ಅಪಹರಿಸಿದ್ದರು. ಯೋಧನ ಹುಡುಕಾಟದಲ್ಲಿ ತೊಡಗಿದ್ದ ಭಾರತೀಯ ಸೇನೆಗೆ ಇದೀಗ ಮೃತದೇಹ ದೊರೆತಿದ್ದು, ನರೇಂದ್ರಕುಮಾರ್ ದೇಹದಲ್ಲಿ ಮೂರು ಬುಲೆಟ್ ಗಳು ಕೂಡ ದೊರೆತಿದ್ದು, ಕ್ರೂರವಾಗಿ ಅವರನ್ನು ಹಿಂಸಿಸಿ ಹತ್ಯೆಗೈಯ್ಯಲಾಗಿದೆ ಎಂದು ಸೇನಾಮೂಲಗಳು ತಿಳಿಸಿವೆ.

ಪ್ಯಾನ್ ಪೆಸಿಫಿಕ್ ಓಪನ್ ಕ್ವಾರ್ಟರ್‌ ಫೈನಲ್‌ಗೆ ಒಸಾಕ ಲಗ್ಗೆ

ಜಪಾನ್‌ನ ಯುವ ಆಟಗಾರ್ತಿ ನವೊಮಿ ಒಸಾಕ ಪ್ಯಾನ್ ಪೆಸಿಫಿಕ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯ ಕಂಡ ಪ್ರತಿಷ್ಠಿತ ಅಮೆರಿಕನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಕೃಷ್ಣಸುಂದರಿ ಸೆರೆನಾ ವಿಲಿಯಮ್ಸ್ ವಿರುದ್ಧ ನೇರ ಸೆಟ್‌ಗಳ ಗೆಲುವು ಕಂಡು ಚೊಚ್ಚಲ ಗ್ರಾಂಡ್‌ಸ್ಲಾಮ್ ಜಯಿಸಿದ ಒಸಾಕ, ಸ್ಲೊವೇಕಿಯಾದ ಡೊಮಿನಿಕಾ ಸಿಬುಲ್ಕೋವಾ ವಿರುದ್ಧ ೬-೨, ೬-೧ ನೇರ ಸೆಟ್‌ಗಳಲ್ಲಿ ಗೆಲುವು ಪಡೆದು ಮುಂದಿನ ಹಂತಕ್ಕೆ ಅರ್ಹತೆ ಪಡೆದರು. ೨೦ರ ಹರೆಯದ ಒಸಾಕ ಅನುಭವಿ ಆಟಗಾರ್ತಿ ಹಾಗೂ ಮಾಜಿ ವಿಂಬಲ್ಡನ್ ಚಾಂಪಿಯನ್ ಸಿಬುಲ್ಕೋವಾ ವಿರುದ್ಧ ೧೦ ಏಸ್‌ಗಳನ್ನು ಸಿಡಿಸಿದರು. ಎರಡನೇ ಸೆಟ್‌ನಲ್ಲಂತೂ ಸಂಪೂರ್ಣ ಆಕ್ರಮಣಕಾರಿಯಾದ ಒಸಾಕ, ಕೇವಲ ಒಂದು ಗೇಮ್ ಮಾತ್ರ ಬಿಟ್ಟುಕೊಟ್ಟು ಸುಲಭ ಗೆಲುವು ಸಾಧಿಸಿದರು.

ಪಾಕ್ ಕುಸಿತಕ್ಕೆ ಮುನ್ನುಡಿ ಬರೆದ ವೇಗಿ ಭುವನೇಶ್ವರ್

ತೀವ್ರ ಕೌತುಕ ಕೆರಳಿಸಿರುವ ಭಾರತ ಮತ್ತು ಪಾಕಿಸ್ತಾನ ನಡುವಣದ ಏಷ್ಯಾಕಪ್ ಪಂದ್ಯದಲ್ಲಿ ಭಾರತ ಸ್ಪಷ್ಟ ಮೇಲುಗೈ ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ವಿರುದ್ಧ ಪರಿಣಾಮಕಾರಿ ದಾಳಿ ನಡೆಸಿದ ಭಾರತದ ಬೌಲರ್‌ಗಳು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಿಂಚು ಹರಿಸಿದರು. ಕೇವಲ ಐದು ಓವರ್‌ಗಳಲ್ಲೇ ಆರಂಭಿಕರನ್ನು ಹೊರಗಟ್ಟಿದ ಭುವನೇಶ್ವರ್ ಕುಮಾರ್ (೧೩ಕ್ಕೆ ೨) ಪಾಕ್ ಕುಸಿತಕ್ಕೆ ಮುನ್ನುಡಿ ಬರೆದರು. ಕೇವಲ ೩ ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡ ಪಾಕಿಸ್ತಾನಕ್ಕೆ ಬಾಬರ್ ಆಜಮ್ (೪೭) ಮತ್ತು ಶೋಯೆಬ್ ಮಲಿಕ್ (೪೩) ತುಸು ಚೇತರಿಕೆ ತಂದರೂ, ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಮತ್ತು ಕೇದಾರ್ ಜಾಧವ್ (೭ಕ್ಕೆ ೨) ಈ ಇಬ್ಬರನ್ನೂ ಕ್ರೀಸ್ ತೊರೆಯುವಂತೆ ಮಾಡಿದರು. ೩೦ ಓವರ್‌ಗಳಾದಾಗ ಪಾಕಿಸ್ತಾನ ೬ ವಿಕೆಟ್ ನಷ್ಟಕ್ಕೆ ೧೧೩ ರನ್ ಗಳಿಸಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More