ದೇಶದಲ್ಲಿರುವ ಒಟ್ಟು ಗೋವುಗಳೆಷ್ಟು? ಇನ್ನಷ್ಟೇ ಲೆಕ್ಕ ಹಾಕಬೇಕಿದೆ ಸರ್ಕಾರ!

2017ರ ಜುಲೈನಲ್ಲೇ 20ನೇ ಜಾನುವಾರು ಗಣತಿ ನಡೆಯಬೇಕಿತ್ತು. ಆದರೆ, 13 ತಿಂಗಳು ಕಳೆದರೂ ಕಾರ್ಯರೂಪಕ್ಕೆ ಬಂದಿಲ್ಲ. ಡಿಜಿಟಲ್ ಇಂಡಿಯಾಗೆ ಪ್ರಧಾನಿ ಕರೆನೀಡಿದ್ದರೂ ತಂತ್ರಜ್ಞಾನದ ಸಮಸ್ಯೆ ಗಣತಿಗೆ ಅಡ್ಡಿ ಆಗಿರುವುದು ವಿಪರ್ಯಾಸ. ಈ ಕುರಿತ ‘ದಿ ಕ್ವಿಂಟ್’ ವರದಿಯ ಭಾವಾನುವಾದ ಇಲ್ಲಿದೆ

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಗೋ ಸಂತತಿ ಬಗ್ಗೆ ಸಾಕಷ್ಟು ಜಾಗೃತಿ ಮೂಡಿದೆ. ‘ಅವುಗಳ ಕೊಂಬಿನಿಂದ ವಿಕಿರಣಗಳನ್ನು ತಡೆಯಬಹುದು’, ‘ನೆಲ ಸ್ವಚ್ಛ ಮಾಡಲು ಗೋಮೂತ್ರಕ್ಕಿಂತಲೂ ಉತ್ತಮ ದ್ರವ್ಯ ಇನ್ನೊಂದಿಲ್ಲ’ ಎಂಬುದೆಲ್ಲ ನಮಗೆ ಗೊತ್ತಿದೆ! ಆದರೆ, ನಮಗೆ ತಿಳಿಯದ ಇನ್ನೊಂದು ವಿಚಾರ ಇದೆ; ಇಡೀ ದೇಶದಲ್ಲಿ ಗೋವುಗಳ ಸಂಖ್ಯೆ ಎಷ್ಟು ಇದೆ ಎಂಬುದು.

ಹೀಗೆ ಕೇಳಲು ಕಾರಣ, ಸರ್ಕಾರ ಇನ್ನೂ ಜಾನುವಾರು ಗಣತಿಗೆ ಮುಂದಾಗದೆ ಇರುವುದು. 2017ರ ಜುಲೈನಲ್ಲೇ 20ನೇ ಜಾನುವಾರು ಗಣತಿ ನಡೆಯಬೇಕಿತ್ತು. ಆದರೆ, ಹದಿಮೂರು ತಿಂಗಳು ಕಳೆದರೂ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಪಶುಸಂಗೋಪನಾ ಇಲಾಖೆ ಮತ್ತು ಮೀನುಗಾರಿಕೆ ಇಲಾಖೆ (ಡಿ ಎ ಎಚ್ ಡಿ ಎಫ್) ಹಿರಿಯ ಅಧಿಕಾರಿಗಳು ‘ಕ್ವಿಂಟ್’ ಜಾಲತಾಣಕ್ಕೆ ಮಾಹಿತಿ ನೀಡಿರುವ ಪ್ರಕಾರ, ಸೆಪ್ಟೆಂಬರ್ ಕೊನೆಯ ವಾರದಲ್ಲಿ ಗಣತಿ ಆರಂಭವಾಗುವ ಸಾಧ್ಯತೆಗಳಿವೆ. ಇದರರ್ಥ, ಸರ್ಕಾರ ಇನ್ನೂ 2012ರ ಗಣತಿಯನ್ನೇ ನೆಚ್ಚಿಕೊಂಡು ಜಾನುವಾರುಗಳಿಗೆ ಸಂಬಂಧಪಟ್ಟ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದೆ.

ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಗಣತಿಯನ್ನು ಇದೇ ಮೊದಲ ಬಾರಿಗೆ ಟ್ಯಾಬ್ಲೆಟ್ ಬಳಸಿ ಡಿಜಿಟಲ್ ಪ್ರಕ್ರಿಯೆ ಮೂಲಕ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಸರ್ಕಾರ ಎಡವಿರುವುದು ಇಲ್ಲಿಯೇ. ಗಣತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕಿದ್ದ ಟ್ಯಾಬ್ಲೆಟ್‌ಗಳೇ ವಿಳಂಬಕ್ಕೆ ಕಾರಣವಾಗಿರುವುದು ವಿಪರ್ಯಾಸದ ಸಂಗತಿ. “ಬಹುತೇಕ ರಾಜ್ಯಗಳಿಗೆ ಟ್ಯಾಬ್ಲೆಟ್ ತಲುಪಿಸಲಾಗಿದೆ. ಆದರೆ, ಇನ್ನೂ ಕೆಲವು ರಾಜ್ಯಗಳು ಪಡೆದುಕೊಂಡಿಲ್ಲ. ಗಣತಿಗಾಗಿಯೇ ಸುಮಾರು 50 ಸಾವಿರ ಟ್ಯಾಬ್ಲೆಟ್‌ಗಳನ್ನು ದೇಶಾದ್ಯಂತ ಹಂಚಲಾಗಿದೆ ಎನ್ನುತ್ತಾರೆ ಡಿ ಎ ಎಚ್ ಡಿ ಎಫ್ ಅಧಿಕಾರಿಯೊಬ್ಬರು.

ಟ್ಯಾಬ್ಲೆಟ್ ಹಂಚಿಕೆಯಲ್ಲಿ ವಿಳಂಬವಾದುದರಿಂದ ಗಣತಿ ಪ್ರಕ್ರಿಯೆ ಒಂದು ವರ್ಷದಿಂದ ನಡೆದಿಲ್ಲ. ಇದು ‘ಡಿಜಿಟಲ್ ಇಂಡಿಯಾ’ ಎಷ್ಟರ ಮಟ್ಟಿಗೆ ಸಾಕಾರಗೊಂಡಿದೆ ಎಂಬುದಕ್ಕೆ ಉತ್ತರದಂತೆಯೂ ಇದೆ. ಫಲಿತಾಂಶವನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪಡೆಯುವ ಉದ್ದೇಶದಿಂದ ಜಾನುವಾರು ಗಣತಿಯನ್ನು ಡಿಜಿಟಲೀಕರಣಗೊಳಿಸಲು ನಿರ್ಧರಿಸಲಾಗಿದೆ. 2012ರ ಗಣತಿಯನ್ನು ಕ್ಷೇತ್ರ ಗಣತಿಕಾರರಿಂದ ನಡೆಸಲಾಗಿತ್ತು. ಅವರು ಪಡೆದ ಮಾಹಿತಿಯನ್ನು ವಿಭಾಗೀಯ ಮೇಲ್ವಿಚಾರಕರು ಸಂಗ್ರಹಿಸಿ ನಂತರ ಅದನ್ನು ಜಿಲ್ಲೆ ಮತ್ತು ರಾಜ್ಯಮಟ್ಟದ ಅಧಿಕಾರಿಗಳಿಗೆ ಪರಿಶೀಲನೆಗಾಗಿ ಕಳಿಸುತ್ತಿದ್ದರು.

ಕೇಂದ್ರ ಮತ್ತು ರಾಜ್ಯಗಳ ಪಶುಸಂಗೋಪನಾ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದಾಗ ವಿಳಂಬಕ್ಕೆ ಎರಡು ಕಾರಣಗಳಿರುವುದು ತಿಳಿದುಬಂತು. ಮೊದಲನೆಯದು, ಸಾಕಷ್ಟು ರಾಜ್ಯಗಳಿಗೆ ಇನ್ನೂ ಟ್ಯಾಬ್ಲೆಟ್ ತಲುಪಿಲ್ಲ. ಎರಡನೆಯದು, ಪಡೆದ ಮಾಹಿತಿಯನ್ನು ಸಂಗ್ರಹಿಸಿಡುವ ಕ್ಲೌಡ್ ಸರ್ವರ್‌ನಲ್ಲಿ ದೋಷ ಕಾಣಿಸಿಕೊಂಡಿರುವುದು.

ಕೇಂದ್ರ ಸರ್ಕಾರವೇ ಟ್ಯಾಬ್ಲೆಟ್‌ಗಳನ್ನು ರಾಜ್ಯಗಳಿಗೆ ಹಂಚಬೇಕಿತ್ತು. ಆದರೆ, ಕೆಲ ವರದಿಗಳ ಪ್ರಕಾರ ರಾಜ್ಯಗಳೇ ಈ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು 2017ರ ಏಪ್ರಿಲ್‌ನಲ್ಲಿ ತಿಳಿಸಲಾಯಿತು. ಐದು ರಾಜ್ಯಗಳ ಪಶುಸಂಗೋಪನಾ ಇಲಾಖೆಗಳನ್ನು ‘ಕ್ವಿಂಟ್’ ಸಂಪರ್ಕಿಸಿತು. ಅವುಗಳಲ್ಲಿ ನಾಲ್ಕು ಇಲಾಖೆಗಳಿಗೆ ಇನ್ನೂ ಟ್ಯಾಬ್ಲೆಟ್ ತಲುಪಿಲ್ಲ ಎಂಬ ಮಾಹಿತಿ ದೊರೆತಿದೆ. ಒಟ್ಟು ವೆಚ್ಚದಲ್ಲಿ ಶೇ.90ರಷ್ಟರನ್ನು ಕೇಂದ್ರ ಭರಿಸಲಿದ್ದು, ಉಳಿದದ್ದನ್ನು ರಾಜ್ಯಗಳು ನೋಡಿಕೊಳ್ಳಬೇಕಿದೆ.

ನ್ಯಾಷನಲ್ ಇನ್ಫಾರ್ಮೆಟಿಕ್ ಸೆಂಟರ್ ಅಭಿವೃದ್ಧಿಪಡಿಸಿರುವ ಕ್ಲೌಡ್ ಸರ್ವರ್‌ನಲ್ಲಿ 2018ರ ಆಗಸ್ಟ್‌ನಿಂದ ತೊಂದರೆ ಎದುರಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಈ ಬಗ್ಗೆ ರಾಜ್ಯಗಳಿಗೆ ಮಾಹಿತಿ ನೀಡಲಾಗಿದೆ.

ಹರ್ಯಾಣದ ಪಶುಸಂಗೋಪನಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, “ನಾವೇನೋ ಆಗಸ್ಟ್ 20ರಂದು ಗಣತಿ ನಡೆಸಲು ತಯಾರಿ ಮಾಡಿಕೊಂಡಿದ್ದೆವು. ಆದರೆ, ಟ್ಯಾಬ್ಲೆಟ್ ನಿಂದ ಪಡೆಯುವ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುವ ಸರ್ವರ್ ಸರಿಯಾಗುವವರೆಗೂ ಗಣತಿ ಕಾರ್ಯ ವಿಳಂಬವಾಗಲಿದೆ ಎಂಬ ಪತ್ರ ತಲುಪಿತು,” ಎಂದಿದ್ದಾರೆ.

ಸರ್ವರ್ ಸಮಸ್ಯೆ ಕುರಿತು ಎನ್ ಐಸಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ, “ನಮ್ಮ ಅಪ್ಲಿಕೇಷನ್ ಕುರಿತಂತೆ ಸಚಿವಾಲಯಕ್ಕೆ ಈಗಾಗಲೇ ಪ್ರಾತ್ಯಕ್ಷಿಕೆ ನೀಡಿದ್ದೇವೆ. ಅದು ಆಗ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಅಪ್ಲಿಕೇಷನ್ ಆಡಿಟ್ ವರದಿ ಬರಬೇಕಿದೆ. ಅದು ಬಂದ ಒಂದು ವಾರದಲ್ಲಿ ಗಣತಿ ಕಾರ್ಯ ಆರಂಭಿಸಲಾಗುವುದು,” ಎಂದು ಹೇಳಿದ್ದಾರೆ.

ಜಾನುವಾರುಗಳು ಹಳ್ಳಿಗಳ ಆರ್ಥಿಕತೆಯ ಆಧಾರ ಸ್ಥಂಭಗಳು. ಅವು ರೈತರಿಗೆ ಆದಾಯ ತಂದುಕೊಡುವುದಷ್ಟೆ ಅಲ್ಲ ಖಾತರಿ ನಿಧಿಯಂತೆಯೂ ಕೆಲಸ ಮಾಡುತ್ತವೆ. ರೈತರಿಗೆ ಕಷ್ಟ ಬಂದಾಗ ಅವುಗಳನ್ನು ಮಾರಿ ಹಣ ಗಳಿಸುತ್ತಾರೆ. 2015ರಲ್ಲಿ ಜಾನುವಾರುಗಳ ವಧೆ ನಿಷೇಧ ಕಾಯ್ದೆಯನ್ನು ಎತ್ತುಗಳಿಗೂ ಸರ್ಕಾರ ವಿಸ್ತರಿಸಿದ್ದು, ಅದು ಪರಿಣಾಮಕಾರಿಯಾಗಿ ಜಾರಿಯಾಗಿದೆಯೇ ಎಂಬುದರ ಮೇಲೆ ಗಣತಿ ಬೆಳಕು ಚೆಲ್ಲಲಿದೆ. ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (‘ಪರಿ’) ಸಂಘಟನೆ ನಡೆಸಿರುವ ಅಧ್ಯಯನದ ಪ್ರಕಾರ, ನಿಷೇಧದಿಂದಾಗಿ ಹಳ್ಳಿಗರ ಆರ್ಥಿಕತೆ ಮೇಲೆ ಭಾರಿ ಪರಿಣಾಮ ಬೀರಿದೆ. ಒಂದೆಡೆ ನಿಷೇಧ, ಮತ್ತೊಂದೆಡೆ ಹಿಂಸಾಚಾರದಿಂದಾಗಿ ಗೋವುಗಳನ್ನು ಮಾರಿ ಹಣ ಪಡೆಯುವುದು ಆಕಳುಗಳ ಮಾಲೀಕರಿಗೆ ಕಷ್ಟವಾಗುತ್ತಿದೆ.

ಗೋ ಸಂಬಂಧಿ ವಿಚಾರವಾಗಿ ನಡೆದ ಗುಂಪುಹಲ್ಲೆಗಳಿಂದ ಇತ್ತೀಚೆಗೆ ಭಾರಿ ಸುದ್ದಿ ಮಾಡಿದ್ದ ರಾಜಸ್ಥಾನಕ್ಕೆ ಇನ್ನೂ ಗಣತಿ ಟ್ಯಾಬ್ಲೆಟ್ ಗಳು ತಲುಪಿಲ್ಲ. ಹರ್ಯಾಣದಲ್ಲಿ ಐಟಿ ಇಲಾಖೆಯಿಂದಲೇ 2800 ಟ್ಯಾಬ್ಲೆಟ್ ಗಳನ್ನು ಗಣತಿಗಾಗಿ ಎರವಲು ಪಡೆಯಲಾಗಿದೆ. ಉತ್ತರಾಖಂಡದಲ್ಲಿ 680 ಟ್ಯಾಬ್ಲೆಟ್ ಪೂರೈಕೆಗಾಗಿ ಟೆಂಡರ್ ಕರೆಯಲಾಗಿದೆ.

ದೇಶದಲ್ಲಿ ಮೊದಲ ಜಾನುವಾರು ಗಣತಿ ನಡೆದದ್ದು 1919ರಲ್ಲಿ. 1971 ಮತ್ತು 2002ರಲ್ಲಿ ಮಾತ್ರ ಎರಡು ಬಾರಿ ವಿಳಂಬವಾಗಿತ್ತು. ಈಗ ಲಭ್ಯ ಇರುವ ಜಾನುವಾರು ಸಂಬಂಧಿ ಮಾಹಿತಿ ಆರು ವರ್ಷಗಳಷ್ಟು ಹಳೆಯದು. ಹಸು, ಎತ್ತು ಎಮ್ಮೆಗಳನ್ನಷ್ಟೇ ಅಲ್ಲದೆ ಜಾನುವಾರು ಗಣತಿಯಲ್ಲಿ ಕುರಿ, ಕತ್ತೆ, ಯಾಕ್ (ಹಿಮಾಲಯದಲ್ಲಿ ಕಂಡುಬರುವ ಸಾಕುಪ್ರಾಣಿ), ಹೇಸರಗತ್ತೆ, ಹಂದಿ, ಮೇಕೆ, ಒಂಟೆ, ನಾಯಿ, ಆನೆಗಳನ್ನೂ ಲೆಕ್ಕ ಹಾಕಲಾಗುತ್ತದೆ. ಬೆಕ್ಕುಗಳನ್ನು ಲೆಕ್ಕ ಹಾಕುವ ಪರಿಪಾಠ ಭಾರತದ ಜಾನುವಾರು ಗಣತಿಯಲ್ಲಿ ಇನ್ನೂ ಸೇರ್ಪಡೆಯಾಗಿಲ್ಲ.

ಇದನ್ನೂ ಓದಿ : ಊರು ಕೇರಿ | ಬಳಗಾನೂರಿನ ಜಾತ್ರೆಯಲ್ಲಿ ಜಾನುವಾರು ಸಂತೆಯೇ ದೊಡ್ಡ ಆಕರ್ಷಣೆ

2012ರ ಜಾನುವಾರು ಗಣತಿಯ ಮುಖ್ಯಾಂಶಗಳು

  • ವಿದೇಶಿ ತಳಿಗಳ ಬೆಳವಣಿಗೆ ಪ್ರಮಾಣ ಶೇ.20ರಷ್ಟು ಹೆಚ್ಚಿದ್ದರೆ, ದೇಸಿ ತಳಿಗಳ ಸಂಖ್ಯೆ ಶೇ.9ರಷ್ಟು ಕುಸಿತ
  • 2012ರಲ್ಲಿ 11.60 ದಶಲಕ್ಷದಷ್ಟಿದ್ದ ನಾಯಿಗಳ ಸಂಖ್ಯೆ 2007ರ ಗಣತಿಗೆ ಹೋಲಿಸಿದರೆ ಶೇ.39ರಷ್ಟು ಕುಸಿತ
  • 2007ರಲ್ಲಿ ಕೇವಲ 1,000ದಷ್ಟಿದ್ದ ಸಾಕಾನೆಗಳು ಮುಂದಿನ ಐದು ವರ್ಷಗಳಲ್ಲಿ 22,000ದಷ್ಟು ಹೆಚ್ಚಳ
  • ಹಿಂದಿನ ಗಣತಿಗೆ ಹೋಲಿಸಿದರೆ ಮೊಲಗಳ ಸಂಖ್ಯೆ 2012ರಲ್ಲಿ ಶೇ.40ರಷ್ಟು ವೃದ್ಧಿ
  • ಕತ್ತೆಗಳ ಸಂಖ್ಯೆ ಶೇ.27.17ರಷ್ಟು ಕುಸಿದು, ಅವುಗಳ ಒಟ್ಟು ಸಂಖ್ಯೆ 3,19,000ದಷ್ಟಿತ್ತು
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More