ಆರೆಸ್ಸೆಸ್ ತುರ್ತುಪರಿಸ್ಥಿತಿ ಬೆಂಬಲಿಸಿತ್ತು ಎಂದ ಗುಪ್ತಚರ ದಳದ ಮಾಜಿ ಮುಖ್ಯಸ್ಥ

ತುರ್ತುಪರಿಸ್ಥಿತಿಯನ್ನು ಆರೆಸ್ಸೆಸ್ ಬೆಂಬಲಿಸಿತ್ತು, ಅಷ್ಟೇ ಅಲ್ಲ ಇಂದಿರಾ ಗಾಂಧಿ ಅವರ ನಿಕಟವರ್ತಿಯಾಗಲು ಕೂಡ ಯತ್ನಿಸಿತ್ತು ಎಂಬ ವಿಚಾರವನ್ನು ಗುಪ್ತಚರ ದಳದ ಮಾಜಿ ಮುಖ್ಯಸ್ಥರೊಬ್ಬರು ಬಹಿರಂಗಪಡಿಸಿದ್ದಾರೆ. ಈ ಕುರಿತು ‘ಟೈಮ್ಸ್ ಆಫ್ ಇಂಡಿಯಾ’ ಪ್ರಕಟಿಸಿರುವ ವರದಿಯ ಭಾವಾನುವಾದ ಇಲ್ಲಿದೆ

ಆರೆಸ್ಸೆಸ್ ತುರ್ತುಪರಿಸ್ಥಿತಿಯನ್ನು ಬೆಂಬಲಿಸಿತ್ತು ಎಂಬ ಮಾಹಿತಿಯನ್ನು ಗುಪ್ತಚರ ದಳದ ಮಾಜಿ ಮುಖ್ಯಸ್ಥ ಟಿ ವಿ ರಾಜೇಶ್ವರ್ ಬಹಿರಂಗಪಡಿಸಿದ್ದಾರೆ. ಖಾಸಗಿ ಟಿವಿ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿರುವ ಅವರು, “ಆರೆಸ್ಸೆಸ್‌ನ ಆಗಿನ ಸರಸಂಘಚಾಲಕರಾಗಿದ್ದ ಬಾಳಾಸಾಹೇಬ್ ದೇವರಸ್ ಅವರು, ಪ್ರಧಾನಿ ನಿವಾಸದೊಂದಿಗೆ ಸ್ವಲ್ಪಮಟ್ಟಿನ ಸಂಪರ್ಕ ಹೊಂದಿದ್ದರು. ದೇಶದಲ್ಲಿ ಕಾನೂನು ಸುವ್ಯವಸ್ಥೆ ಜಾರಿಗೆ ತರಲು ಅಗತ್ಯ ಬೆಂಬಲ ನೀಡುವುದಾಗಿ ಹೇಳಿದ್ದರು,” ಎಂದು ತಿಳಿಸಿದ್ದಾರೆ.

ಅಲ್ಲದೆ, “ಆರೆಸ್ಸೆಸ್ ತುರ್ತುಪರಿಸ್ಥಿತಿಯನ್ನು ಬೆಂಬಲಿಸಿತ್ತು. ಅದಕ್ಕೆ ಸಂಘದ ವಿರೋಧ ಇರಲಿಲ್ಲ. ಕೇವಲ ಬೆಂಬಲಿಸುವುದಷ್ಟೇ ಅಲ್ಲದೆ, ಇಂದಿರಾ ಗಾಂಧಿ ಮತ್ತು ಸಂಜಯ್ ಗಾಂಧಿ ಅವರೊಂದಿಗೆ ಸಂಪರ್ಕ ಹೊಂದುವ ಬಯಕೆ ಸಂಘದ ಮುಖ್ಯಸ್ಥರಿಗಿತ್ತು. ಆದರೆ, ಆರೆಸ್ಸೆಸ್ಸಿನೊಂದಿಗೆ ಗುರುತಿಸಿಕೊಳ್ಳುವುದು ಇಷ್ಟವಿಲ್ಲದೆ ಇದ್ದುದರಿಂದ ಅದನ್ನು ಇಂದಿರಾ ನಿರಾಕರಿಸಿದರು,” ಎಂದು ಹೇಳಿದ್ದಾರೆ.

“ಗುಪ್ತಚರ ದಳ ಅಥವಾ ಗೃಹ ಇಲಾಖೆಯನ್ನು ಸಂಪರ್ಕಿಸದೆ 1975ರಲ್ಲಿ ತುರ್ತುಪರಿಸ್ಥಿತಿಯನ್ನು ಹೇರಲಾಯಿತು. ತುರ್ತುಪರಿಸ್ಥಿತಿ ಹೇರಿರುವ ವಿಚಾರ ರೇಡಿಯೊ ಮೂಲಕ ಬಿತ್ತರವಾದಾಗ ಇಡೀ ಗುಪ್ತಚರ ದಳ ಅಚ್ಚರಿಗೊಂಡಿತ್ತು,” ಎಂಬ ಮಾಹಿತಿಯನ್ನೂ ಅವರು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ತುರ್ತುಪರಿಸ್ಥಿತಿ ನೆಪದಲ್ಲಿ ತಮ್ಮದೇ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರೇ ಜೇಟ್ಲಿ?

“ತುರ್ತುಪರಿಸ್ಥಿತಿ ವಿರೋಧಿಸಿದವರನ್ನು ಬಂಧಿಸುವ ಉದ್ದೇಶದಿಂದ ಸ್ವತಃ ಇಂದಿರಾ ಅವರೇ ಪಟ್ಟಿಯನ್ನು ತಯಾರಿಸಿದರೇ ಎಂಬುದು ಗೊತ್ತಿಲ್ಲ. ಆದರೆ, ಅದು ಪ್ರಧಾನಿ ನಿವಾಸದಲ್ಲೇ ತಯಾರಾಗಿತ್ತು. ಗುಪ್ತಚರ ದಳದಿಂದ ತ್ರೈಮಾಸಿಕ, ಅರ್ಧವಾರ್ಷಿಕ ವರದಿಗಳನ್ನು ಪಡೆಯುತ್ತಿದ್ದ ಇಂದಿರಾ ಅವರಿಗೆ ತುರ್ತು ಪರಿಸ್ಥಿತಿ ಕೈಮೀರಿತೆಂಬುದರ ಬಗ್ಗೆ ಅರಿವು ಇತ್ತೆಂದು ಹೇಳಬಹುದು. ಆದರೂ ಏನಾಗುತ್ತಿದೆ ಎಂಬುದರ ಗಂಭೀರತೆ ಅವರಿಗೆ ಇದ್ದಂತೆ ಇರಲಿಲ್ಲ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜವಹರಲಾಲ್ ನೆಹರು ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಎಂ ಒ ಮಥಾಯ್ ಬರೆದ ‘ರಿಮಿನಿಸೆನ್ಸೆಸ್ ಆಫ್ ನೆಹರು ಏಜ್’ ಕೃತಿಯ ಒಂದು ಅಧ್ಯಾಯ ನಾಪತ್ತೆಯಾದ ಹಿನ್ನೆಲೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ. “ಇಂದಿರಾ ಅವರೊಂದಿಗೆ ಮಥಾಯ್ ಅನ್ಯೋನ್ಯವಾಗಿದ್ದರು ಎಂಬ ವಿಚಾರದಿಂದಾಗಿ ಆ ಅಧ್ಯಾಯವನ್ನು ಪುಸ್ತಕದಿಂದ ತೆಗೆದುಹಾಕಲಾಯಿತು,” ಎಂದು ಅವರು ಹೇಳಿದ್ದಾರೆ. “1981ರಲ್ಲಿ ಗುಪ್ತಚರ ದಳದ ಮುಖ್ಯಸ್ಥನಾಗಿದ್ದಾಗ, ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಎಂ ಜಿ ರಾಮಚಂದ್ರನ್ ಆ ಅಧ್ಯಾಯವನ್ನು ನನಗೆ ಒಪ್ಪಿಸಿದರು. ನಾನು ಅದನ್ನು ಇಂದಿರಾ ಗಾಂಧಿ ಅವರಿಗೆ ಹಸ್ತಾಂತರಿಸಿದೆ. ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ ಇಂದಿರಾ ಅದನ್ನು ಸ್ವೀಕರಿಸಿದರು,” ಎಂದು ಮೆಲುಕು ಹಾಕಿದ್ದಾರೆ.

“ಆ ಅಧ್ಯಾಯವನ್ನು ತಾವು ಓದಿದ್ದೀರಾ?” ಎಂಬ ಸಂದರ್ಶಕರ ಪ್ರಶ್ನೆಗೆ ಉತ್ತರಿಸಿದ ರಾಜೇಶ್ವರ್, “ನಾನು ಓದಲಿಲ್ಲ. ಅದರ ಅಗತ್ಯವೂ ಇರಲಿಲ್ಲ. ಅದರ ಬಗ್ಗೆ ಚರ್ಚೆ ಕೂಡ ನಡೆಯಲಿಲ್ಲ,” ಎಂದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ರಾಜೇಶ್ವರ್ ಅವರ ‘ಇಂಡಿಯಾ ದಿ ಕ್ರೂಶಿಯಲ್ ಇಯರ್ಸ್’ ಕೃತಿಯಲ್ಲಿಯೂ ಆ ವಿಚಾರ ಪ್ರಸ್ತಾಪವಾಗಿದೆ.

ಮಥಾಯ್ ಅವರ ಕೃತಿ ಪ್ರಕಟಣೆಗೂ ಮುನ್ನವೇ ಆ ಅಧ್ಯಾಯವನ್ನು ಅದರಿಂದ ತೆಗೆದುಹಾಕಲಾಗಿತ್ತು. ಪುಸ್ತಕದ 153ನೇ ಪುಟದಲ್ಲಿರುವ ಪ್ರಕಾಶಕರ ಟಿಪ್ಪಣಿಯಲ್ಲಿ ಮಥಾಯ್ ಅವರೇ ಅಧ್ಯಾಯವನ್ನು ಹಿಂಪಡೆದರು ಎಂಬ ಉಲ್ಲೇಖವಿದೆ. ಮತ್ತೊಂದೆಡೆ, ಅಂಥದ್ದೊಂದು ಅಧ್ಯಾಯ ಅಸ್ತಿತ್ವದಲ್ಲಿತ್ತು ಎಂಬ ಬಗ್ಗೆಯೇ ಊಹಾಪೋಹಗಳಿವೆ. 1946-59ರವರೆಗೆ ಮಥಾಯ್ ನೆಹರು ಅವರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ತಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದ ಬಳಿಕ ಅವರು ರಾಜಿನಾಮೆ ನೀಡಬೇಕಾಯಿತು.

80ರ ದಶಕದ ಸಿಖ್ ದಂಗೆಯ ಬಗ್ಗೆ ಮಾತನಾಡಿರುವ ರಾಜೇಶ್ವರ್, “ಪಂಜಾಬ್ ಮುಖ್ಯಮಂತ್ರಿ ಆಗಿದ್ದ ದರ್ಬಾರಾ ಸಿಂಗ್ ಮತ್ತು ಗೃಹ ಸಚಿವ ಗ್ಯಾನಿ ಜೈಲ್ ಸಿಂಗ್ ಅವರು, ಅಂದಿನ ಸಿಖ್ ಧಾರ್ಮಿಕ ಮುಖಂಡ ಜರ್ನೈಲ್ ಸಿಂಗ್ ಬಿಂದ್ರಾನ್ವಾಲೆ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದಂತೆ ರಕ್ಷಿಸಿದರು. ಈ ಬಗ್ಗೆ ಇಂದಿರಾ ಅವರಿಗೆ ಅನುಮಾನವಿತ್ತು. ಆದರೆ, ಯಾವುದೇ ದೃಢವಾದ ಪುರಾವೆ ಅವರ ಬಳಿ ಇರಲಿಲ್ಲ,” ಎಂದು ತಿಳಿಸಿದ್ದಾರೆ.

“1984ರಲ್ಲಿ ಬ್ಲೂ ಸ್ಟಾರ್ ಕಾರ್ಯಾಚರಣೆ ನಡೆಸದಂತೆ ಇಂದಿರಾ ಅವರಿಗೆ ಸಲಹೆ ನೀಡಿದ್ದೆ. ದೇಶ ವಿಭಜನೆ ಬಳಿಕ ಎಲ್ಲೆಡೆ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವುದು ಕಷ್ಟವಾಗಿತ್ತು. ಆದರೂ ಅವರು ಮುಂದುವರಿದರು. ಸ್ವರ್ಣ ಮಂದಿರದ ಮೇಲೆ ಸಂಭವನೀಯ ದಾಳಿ ನಡೆಯುವುದು ಅವರಿಗೆ ಮತ್ತು ಸರ್ಕಾರಕ್ಕೆ ಇಷ್ಟವಿರಲಿಲ್ಲ. ಆದರೆ, ಇಂದಿರಾ ಅವರಿಗೆ ಗೊತ್ತಿಲ್ಲದೆ ಸೇನೆಯು ಟ್ಯಾಂಕ್ ಮತ್ತು ಹೆಲಿಕಾಪ್ಟರ್‌ಗಳನ್ನು ಕಾರ್ಯಾಚರಣೆಗೆ ಬಳಸಲಾಯಿತು. ಈ ಬಗ್ಗೆ ಪ್ರಧಾನಿ ಅಪ್ಪಣೆ ಪಡೆಯಬೇಕೇ ಬೇಡವೇ ಎಂಬುದು ಸ್ವತಃ ಸೇನೆಗೂ ತಿಳಿದಿರಲಿಲ್ಲ,” ಎಂದಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More