ಇಂದಿನ ಡೈಜೆಸ್ಟ್ | ನೀವು ಗಮನಿಸಬೇಕಾದ ಇತರ 6 ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ಪ್ರಮುಖ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳು

ತೈಲ ಆಮದು; ಇರಾನ್‌ಗೆ ರುಪಾಯಿ ಮೂಲಕ ಪಾವತಿ ಮಾಡಲು ಭಾರತ ನಿರ್ಧಾರ

ಇರಾನ್ ಮೇಲೆ ಅಮೆರಿಕ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಭಾರತವು ಇರಾನ್ ದೇಶದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲಕ್ಕೆ ರುಪಾಯಿ ಮೂಲಕ ಪಾವತಿ ಮಾಡಲಿದೆ. ನವೆಂಬರ್ 4ರಿಂದ ಅಮೆರಿಕ ನಿರ್ಬಂಧ ಜಾರಿ ಆಗುವುದರಿಂದ ಡಾಲರ್ ಮೂಲಕ ಪಾವತಿ ಮಾಡಲು ಅವಕಾಶ ಇರುವುದಿಲ್ಲ. ಹೀಗಾಗಿ, ರುಪಾಯಿ ಮೂಲಕ ಪಾವತಿ ಮಾಡಲಿದೆ. ಇರಾನ್ ದೇಶವು ತಾನು ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳಿಗೆ ರುಪಾಯಿ ಮೂಲಕ ಪಾವತಿ ಮಾಡಬಹುದಾಗಿದೆ. ಹೆಚ್ಚು ತೈಲ ಆಮದು ಮಾಡಿಕೊಳ್ಳುತ್ತಿರುವ ಇಂಡಿಯನ್ ಆಯಿಲ್ ಕಾರ್ಪೊರೆಷನ್ ಮತ್ತು ಮಂಗಳೂರು ರಿಫೈನರೀಸ್ ಕಂಪನಿಗಳು ಯುಕೊ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್ ಮೂಲಕ ಇರಾನ್ ದೇಶಕ್ಕೆ ರುಪಾಯಿ ಮೂಲಕ ಪಾವತಿ ಮಾಡಲಿವೆ. ನ.4ರ ನಂತರ ಇರಾನ್ ದೇಶವು ಡಾಲರ್ ಮೂಲಕ ಯಾವುದೇ ವಹಿವಾಟು ನಡೆಸಲು ನಿರ್ಬಂಧಿಸಲಾಗಿದೆ.

ಭಾರತ-ಪಾಕ್ ನಡುವೆ ದ್ವಿಪಕ್ಷೀಯ ಮಾತುಕತೆಗೆ ವೇದಿಕೆ ಸಜ್ಜು

ಭಾರತ-ಪಾಕಿಸ್ತಾನ ನಡುವೆ ಮತ್ತೆ ಶಾಂತಿ ಸೌಹಾರ್ದ ವೃದ್ಧಿ ನಿಟ್ಟಿನಲ್ಲಿ ಮಾತುಕತೆಗೆ ವೇದಿಕೆ ಸಜ್ಜಾಗಿದ್ದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉಭಯ ದೇಶಗಳ ನಾಯಕರು ಪರಸ್ಪರ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರಸ್ತಾವನೆಗೆ ಭಾರತ ಒಪ್ಪಿಗೆ ಸೂಚಿಸಿದೆ ಎಂದು ಎಂಇಎ ವಕ್ತಾರ ರವೀಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ನಡೆಸುವುದಕ್ಕೆ ಮನವಿ ಮಾಡಿತ್ತು. ಭಾರತ ಇದಕ್ಕೆ ಒಪ್ಪಿಗೆ ಸೂಚಿಸಿದ್ದು, ಸುಷ್ಮಾ ಸ್ವರಾಜ್ ಹಾಗೂ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ ಯುಎನ್‌ಜಿಎ ಸಭೆಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದವರು ಹೇಳಿದ್ದಾರೆ.

ಬಿಷಪ್ ಫ್ರಾಂಕೊರನ್ನು ಹುದ್ದೆಯಿಂದ ಬಿಡುಗಡೆ ಮಾಡಿದ ವ್ಯಾಟಿಕನ್

ಕೇರಳದ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಜಲಂಧರ್‌ನ ರೋಮನ್ ಕ್ಯಾಥೊಲಿಕ್ ಬಿಷಪ್ ಫ್ರಾಂಕೋ ಮುಲಕ್ಕಲ್ ಅವರನ್ನು ತಾತ್ಕಾಲಿಕವಾಗಿ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ತನ್ನನ್ನು ಹುದ್ದೆಯಿಂದ ಕೆಳಗಿಳಿಸುವಂತೆ ವ್ಯಾಟಿಕನ್ ಪೋಪ್‌ಗೆ ಮುಲಕ್ಕಲ್ ಪತ್ರ ಬರೆದಿದ್ದರು. ಮುಕ್ಕಲ್ ಅವರ ಪತ್ರ ಮನವಿಯನ್ನು ಪರಿಗಣಿಸಿ, ತನಿಖೆ ಮುಗಿಯುವವರೆಗೆ ತಾತ್ಕಾಲಿಕವಾಗಿ ಹುದ್ದೆಯಿಂದ ಕೆಳಗಿಳಿಸಲಾಗಿದೆ.‌

ಬರಿಗಾಲಿನ ಓಟಗಾರ್ತಿ ಹಿಮಾ ದಾಸ್‌ಗೆ ಅಡಿಡಾಸ್ ರಾಯಭಾರತ್ವ!

ಒಂದೊಮ್ಮೆ ಬರಿಗಾಲಿನಲ್ಲಿ ಓಡುತ್ತ ರನ್ನಿಂಗ್ ರೇಸ್‌ ಅಭ್ಯಾಸ ನಡೆಸುತ್ತಿದ್ದಾಕೆಗೆ ಈಗ ವಿಶ್ವದ ಮುಂಚೂಣಿ ಕ್ರೀಡಾ ಉತ್ಪನ್ನ ಕಂಪನಿಯಾದ ಅಡಿಡಾಸ್‌ನ ರಾಯಭಾರತ್ವ ಸಿಕ್ಕಿದೆ. ಭಾರತದ ಮಹಿಳಾ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಉದಯಿಸಿರುವ ನವತಾರೆ ಹಿಮಾ ದಾಸ್ ಈಗ ಅಡಿಡಾಸ್‌ನ ನೂತನ ರಾಯಭಾರಿ. ಅಸ್ಸಾಂ ಗುಡ್ಡಗಾಡಿನ ಮಣ್ಣಿನ ರಸ್ತೆಗಳಲ್ಲಿ ಬರಿಯ ಕಾಲಿನಲ್ಲಿ ಓಡುತ್ತ ಅಭ್ಯಾಸ ನಡೆಸಿದ ಹಿಮಾ ದಾಸ್ ಕಠಿಣ ಪರಿಶ್ರಮಕ್ಕೆ ಈಗ ಫಲ ಸಿಕ್ಕಿದೆ. ಅಡಿಡಾಸ್ ಕಂಪನಿ ಇಂದು ನವದೆಹಲಿಯಲ್ಲಿ ಬಿಡುಗಡೆ ಮಾಡಿದ ನೂತನ ಶೂನಲ್ಲಿ 'ಧಿಂಗ್ ಎಕ್ಸ್‌ಪ್ರೆಸ್' ಎಂದು ಹೆಸರಿಸಲಾಗಿದೆ. "ಈ ಋತು ಮುಗಿಯುತ್ತ ಬಂದಿದೆ. ಮುಂದಿನ ವರ್ಷ ದಕ್ಷಿಣ ಏಷ್ಯಾ ಕ್ರೀಡಾಕೂಟ, ಏಷ್ಯಾ ಚಾಂಪಿಯನ್‌ಶಿಪ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ಸ್ಪರ್ಧೆಗಳಿವೆ. ಇವುಗಳತ್ತ ಹೆಚ್ಚು ಗಮನ ವಹಿಸಿದ್ದೇನೆ,'' ಎಂದು ಹಿಮಾ ದಾಸ್ ಇದೇ ವೇಳೆ ತಿಳಿಸಿದರು.

ಖೇಲ್‌ ರತ್ನ ವಂಚಿತ ಪುನಿಯಾ ಬೆದರಿಕೆ

ಕೇಂದ್ರ ಸರ್ಕಾರದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಯಾದ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ತನ್ನನ್ನು ಪರಿಗಣಿಸಿಲ್ಲ ಎಂದು ಕ್ರುದ್ಧಗೊಂಡಿರುವ ಕುಸ್ತಿಪಟು ಬಜರಂಗ್ ಪುನಿಯಾ, ಕೋರ್ಟ್ ಮೆಟ್ಟಿಲೇರುವ ಬೆದರಿಕೆ ಒಡ್ಡಿದ್ದಾರೆ. ಆದರೆ, ಇಂದು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಮಹಿಳಾ ವೇಟ್‌ಲಿಫ್ಟರ್ ಮಿರಾಬಾಯಿ ಚಾನುಗೆ ಕ್ರೀಡಾ ಸಚಿವಾಲಯ ನೀಡಿದೆ. "ಈ ಬೆಳವಣಿಗೆಯಿಂದ ನಿಜವಾಗಿಯೂ ನನಗೆ ನಿರಾಶೆ ಮತ್ತು ಆಘಾತವಾಗಿದೆ. ಪ್ರಶಸ್ತಿಗಾಗಿ ನಾನು ಭಿಕ್ಷೆ ಬೇಡುತ್ತಿಲ್ಲ. ಆದರೆ, ಪ್ರತಿ ಕ್ರೀಡಾಪಟುವಿಗೂ ಖೇಲ್ ರತ್ನ ಹೆಮ್ಮೆ ತರುವ ಸಂಗತಿ. ಇಷ್ಟಕ್ಕೂ ಈ ಪ್ರಶಸ್ತಿಗೆ ನಾನು ಅರ್ಹನಾಗಿದ್ದರೂ, ಕಡೆಗಣಿಸಿದ್ದೇಕೆ ಎಂಬುದೇ ತಿಳಿಯುತ್ತಿಲ್ಲ,'' ಎಂದು ೨೦೧೩ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಮತ್ತು ಇತ್ತೀಚಿನ ಏಷ್ಯಾಡ್‌ನಲ್ಲಿ ಸ್ವರ್ಣ ಪದಕ ಗೆದ್ದ ಬಜರಂಗ್ ಪುನಿಯಾ ಬೇಸರ ವ್ಯಕ್ತಪಡಿಸಿದ್ದಾರೆ.

ಆಫ್ಘಾನಿಸ್ತಾನಕ್ಕೆ ಕಡಿವಾಣ ಹಾಕಿದ ಶಕೀಬ್

ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಆರನೇ ಪಂದ್ಯದಲ್ಲಿಂದು ಬಾಂಗ್ಲಾದೇಶ, ಆಫ್ಘಾನಿಸ್ತಾನ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಸಫಲವಾಯಿತು. ಆಲ್ರೌಂಡರ್ ಶಕೀಬ್ ಅಲ್ ಹಸನ್ (೪೨ಕ್ಕೆ ೪) ಚಮತ್ಕಾರಿ ಸ್ಪಿನ್ ಸುಳಿಗೆ ಸಿಲುಕಿದ ಆಫ್ಘಾನಿಸ್ತಾನ ತಂಡ, ಬ್ಯಾಟಿಂಗ್ ವೈಫಲ್ಯ ಕಂಡಿತು. ಆದಾಗ್ಯೂ, ಮಧ್ಯಮ ಕ್ರಮಾಂಕದಲ್ಲಿ ಹಶ್ಮತುಲ್ಲಾ ಶಾಹಿದಿ (೫೮) ದಾಖಲಿಸಿದ ಅರ್ಧಶತಕವು ಆಫ್ಘನ್ನರ ಇನ್ನಿಂಗ್ಸ್‌ಗೆ ಚೇತರಿಕೆ ನೀಡಿತು. ೪೪ ಓವರ್‌ಗಳಾದಾಗ ಆಫ್ಘಾನಿಸ್ತಾನ ೭ ವಿಕೆಟ್ ನಷ್ಟಕ್ಕೆ ೧೮೧ ರನ್ ಕಲೆಹಾಕಿತ್ತು. ಗುಲ್ಬದಿನ್ ನಯೀಬ್ ಮತ್ತು ರಶೀದ್ ಖಾನ್ ಕ್ರಮವಾಗಿ ೧೮ ಮತ್ತು ೧೦ ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಮುಜೀಬ್ ಉರ್ ರೆಹಮಾನ್ ಮತ್ತು ರಶೀದ್ ಖಾನ್‌ರಂಥ ಪರಿಣಾಮಕಾರಿ ಸ್ಪಿನ್ ಬೌಲರ್‌ಗಳನ್ನು ಒಳಗೊಂಡಿರುವ ಆಫ್ಘಾನಿಸ್ತಾನ ಅಲ್ಪಮೊತ್ತವನ್ನೂ ಸಮರ್ಥಿಸಿಕೊಳ್ಳುವಂಥ ತಂಡವಾಗಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಇನ್ನಿಂಗ್ಸ್ ಕುತೂಹಲ ಮೂಡಿಸಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More