ಕೊನಾರ್ಕ್ ದೇಗುಲದ ಬಗ್ಗೆ ಹೇಳಿಕೆ ಪ್ರಕರಣ: ಬಂಧಿತ ಪತ್ರಕರ್ತನಿಗೆ ಜಾಮೀನು

ಕೋನಾರ್ಕ್ ಮಿಥುನ ಶಿಲ್ಪಗಳ ಬಗ್ಗೆ ಅವಹೇಳನಕಾರಿ ಮಾತನಾಡಿದ ಆರೋಪದ ಮೇಲೆ ಬಂಧಿಸಲಾಗಿದ್ದ ಪತ್ರಕರ್ತನಿಗೆ ಕೋರ್ಟ್ ಜಾಮೀನು ನೀಡಿದೆ. ಅವರ ಹೇಳಿಕೆಗಳು ಒಡಿಶಾ ವಿಧಾನಸಭೆಯಲ್ಲಿ ಗದ್ದಲ ಸೃಷ್ಟಿಸಿತ್ತು. ಈ ಕುರಿತು ‘ಸ್ಕ್ರಾಲ್’ ಜಾಲತಾಣ ಪ್ರಕಟಿಸಿರುವ ವರದಿಯ ಭಾವಾನುವಾದ ಇಲ್ಲಿದೆ

ಕೋನಾರ್ಕ್ ದೇಗುಲದ ಬಗ್ಗೆ ಟ್ವಿಟರ್‌ನಲ್ಲಿ ನೀಡಿದ್ದ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ ಒಡಿಶಾ ಪೊಲೀಸರು ಪತ್ರಕರ್ತ ಅಭಿಜಿತ್ ಅಯ್ಯರ್ ಮಿತ್ರ ಎಂಬಾತನನ್ನು ನವದೆಹಲಿಯಲ್ಲಿ ಗುರುವಾರ ಬಂಧಿಸಿದ್ದರು. ಸದ್ಯ ಅವರಿಗೆ ದೆಹಲಿಯ ನ್ಯಾಯಾಲಯ ಜಾಮೀನು ನೀಡಿದೆ.

ತಮ್ಮ ವಶಕ್ಕೆ ಒಪ್ಪಿಸಬೇಕೆಂಬ ಪೊಲೀಸರ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ. ಈ ತಿಂಗಳ 28ರ ಒಳಗೆ ಭುವನೇಶ್ವರದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ‘ಎಎನ್ಐ’ ಸುದ್ದಿಸಂಸ್ಥೆ ವರದಿ ಮಾಡಿದೆ.

ಮಿತ್ರ ವಿರುದ್ಧ ಐಪಿಸಿ ಸೆಕ್ಷನ್ 153 ಎ (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಬಿತ್ತುವುದು), 295 ಎ ಮತ್ತು 298 (ಯಾವುದೇ ವ್ಯಕ್ತಿ ಅಥವಾ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಅಥವಾ ಉದ್ದೇಶ ಪೂರ್ವಕವಾಗಿ ನೋವುಂಟುಮಾಡುವಂತಹ ಅಪರಾಧ ಅಥವಾ ಪದ ಬಳಕೆ), 34ರ ಅಡಿ (ಸಾಮಾನ್ಯ ಉದ್ದೇಶದೊಂದಿಗೆ ಹಲವಾರು ಕೃತ್ಯದಲ್ಲಿ ಭಾಗಿಯಾಗುವುದು) ಪ್ರಕರಣ ದಾಖಲಿಸಲಾಗಿದೆ.

ಇದಕ್ಕೂ ಮುನ್ನ, ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮಿತ್ರ ಪರ ವಕೀಲರು, “ಯಾರು ದೂರು ನೀಡಿದ್ದಾರೆ ಮತ್ತು ಯಾವ ಸೆಕ್ಷನ್ ಅಡಿ ಮಿತ್ರ ಅವರನ್ನು ಬಂಧಿಸಲಾಗಿದೆ ಎಂಬುದು ಗೊತ್ತಿಲ್ಲ. ಎಫ್ಐಆರ್ ಪ್ರತಿಯನ್ನು ನೀಡಿಲ್ಲ,” ಎಂದಿದ್ದಾರೆ. ಮಿತ್ರ ಅವರನ್ನು ಮೊದಲು ನಿಜಾಮುದ್ದೀನ್ ಠಾಣೆಗೆ ಕರೆದೊಯ್ದು ನಂತರ ಸಾಕೇತ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗುರುವಾರ ಬೆಳಗ್ಗೆ ಒಡಿಶಾ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಲಾಯಿತು. ಅಲ್ಲದೆ, ವಿರೋಧಪಕ್ಷದ ನಾಯಕ ನರಸಿಂಗ ಮಿಶ್ರಾ ಅವರ ನೇತೃತ್ವದಲ್ಲಿ ಸದನ ಸಮಿತಿಯೊಂದನ್ನು ರಚಿಸಿ ತನಿಖೆ ನಡೆಸಲು ಸ್ಪೀಕರ್ ಆದೇಶ ನೀಡಿದ್ದಾರೆ. ಇದಕ್ಕೂ ಮುನ್ನ ಮಂಗಳವಾರ, ಕೊನಾರ್ಕ್ ಸೂರ್ಯ ದೇವಾಲಯದ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದ ಮಿತ್ರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ವಿಧಾನಸಭೆಯಲ್ಲಿ ಗದ್ದಲ ಉಂಟಾಗಿತ್ತು.

ಇದನ್ನೂ ಓದಿ : ಬಿಹಾರದ ಕೋಮು ಗಲಭೆಯ ಹಿಂದಿದೆಯೇ ಬಿಜೆಪಿಯ ಹಿಂದುತ್ವದ ದಾಳ?

ಸೆ.16ರಂದು ಟ್ವಿಟರ್‌ನಲ್ಲಿ ವೀಡಿಯೊ ಪ್ರಕಟಿಸಿದ್ದ ಪತ್ರಕರ್ತ ಮಿತ್ರ, ದೇವಾಲಯದ ಆವರಣದಲ್ಲಿರುವ ವಿವಿಧ ಮಿಥುನ ಶಿಲ್ಪಗಳನ್ನು ತೋರಿಸುತ್ತ, “ಇದನ್ನು ಪವಿತ್ರ ಸ್ಥಳ ಎನ್ನಬಹುದೇ? ಖಂಡಿತ ಇಲ್ಲ. ಇದೆಲ್ಲ ಮುಸ್ಲಿಮರ ಪಿತೂರಿ. ನಮ್ಮ ಹೊಸ ರಾಮಮಂದಿರದಲ್ಲಿ ಇಂತಹ ಅಶ್ಲೀಲ ಶಿಲ್ಪಗಳು ಇರುವುದಿಲ್ಲ,” ಎಂದಿದ್ದರು.
ಕೆಲ ಹೊತ್ತಿನಲ್ಲೇ ಮತ್ತೊಂದು ಟ್ವೀಟ್ ಮಾಡಿದ ಮಿತ್ರ, ತಾವು ಮಾಡಿದ್ದು ಜೋಕ್ ಎಂದಿದ್ದರು. ಅಲ್ಲದೆ, “ತಮಾಷೆಯ ಸಂಗತಿ ಹೊರತುಪಡಿಸಿದರೆ ದೇಗುಲ ಅದ್ಭುತವಾಗಿದೆ. ಶಿಲ್ಪಗಳು ಅತಿ ಸುಂದರವಾಗಿದೆ,” ಎಂದೂ ಹೇಳಿದ್ದರು.

ಹಾರಾಟ ನಿಷೇಧ ಪ್ರದೇಶವಾದ ಚಿಲಿಕಾ ಸರೋವರದ ಮೇಲೆ ಸೆ.15ರಂದು ಬಿಜು ಜನತಾದಳದ ಮಾಜಿ ಸಂಸದ ಬೈಜಯಂತ್ ಜಯ್ ಪಾಂಡಾ ಸಂಚರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅವರ ಹೆಲಿಕಾಪ್ಟರ್ ಅನ್ನು ವಶಕ್ಕೆ ಪಡೆದಿದ್ದರು. ಮಿತ್ರ ಪ್ರಕರಣದಲ್ಲಿ ಪಾಂಡಾ ಅವರನ್ನು ಪೊಲೀಸರು ಹೆಸರಿಸಿದ್ದು, ಕುತೂಹಲ ಮೂಡಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More