ರಫೇಲ್ ಟ್ವಿಸ್ಟ್ | ಮೋದಿ ಸರ್ಕಾರದ ‘ರಿಲಯನ್ಸ್’ ಸೂಚನೆ ಕುರಿತು ಬಾಯಿಬಿಟ್ಟ ಹೊಲಾಂದ್

“ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ಆಯ್ದುಕೊಳ್ಳದೆ ಬೇರೆ ದಾರಿ ಇರಲಿಲ್ಲ. ಭಾರತ ಸರ್ಕಾರವು ಅದೇ ಕಂಪನಿಯನ್ನು ಆಯ್ದುಕೊಳ್ಳುವಂತೆ ಸೂಚಿಸಿತ್ತು,” ಎಂದು ಫ್ರಾನ್ಸ್ ಮಾಜಿ ಅಧ್ಯಕ್ಷ ಹೊಲಾಂದ್ ಆಡಿರುವ ಮಾತು ಸಂಚಲನ ಸೃಷ್ಟಿಸಿದೆ. ಪ್ರತಿಪಕ್ಷಗಳು ಮಾಡುತ್ತಿದ್ದ ಆರೋಪಕ್ಕೆ ಇದು ಆನೆಬಲ ತಂದಿದೆ

ರಫೇಲ್ ಯುದ್ಧ ವಿಮಾನ ಒಪ್ಪಂದಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದನ್ನು ಫ್ರಾನ್ಸ್ ಮಾಜಿ ಅಧ್ಯಕ್ಷ ಹೊಲಾಂದ್ ಬಹಿರಂಗಪಡಿಸಿದ್ದು, ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಡಿಫೆನ್ಸ್ ಇಂಡಸ್ಟ್ರೀಸ್ (ಆರ್ ಡಿ ಐ) ಅನ್ನು ಡಸಾಲ್ಟ್ ಏವಿಯೇಷನ್ ಕಂಪನಿಯ ಭಾರತೀಯ ಪಾಲುದಾರನನ್ನಾಗಿ ಮಾಡಬೇಕು ಎಂದು ಭಾರತ ಸರ್ಕಾರ ಕೋರಿತ್ತು ಎಂಬುದಾಗಿ ತಿಳಿಸಿದ್ದಾರೆ.

ಫ್ರಾನ್ಸ್‌ನ ‘ಮೀಡಿಯಾ ಪಾರ್ಟ್’ ಜಾಲತಾಣಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು, “ರಿಲಯನ್ಸ್ ಕಂಪನಿ ಹೊರತುಪಡಿಸಿ ಬೇರೆ ಕಂಪನಿಗಳನ್ನು ಆಯ್ದುಕೊಳ್ಳಲು ನಮಗೆ ಅವಕಾಶ ಇರಲಿಲ್ಲ,” ಎಂದಿದ್ದಾರೆ. ಸ್ಥಾಪನೆಯಾದ ಕೆಲ ದಿನಗಳಲ್ಲೇ ಮಹತ್ವದ ಒಪ್ಪಂದ ಕುದುರಿಸಿದ ವೈಮಾನಿಕ ಕ್ಷೇತ್ರದ ಅನನುಭವಿ ಕಂಪನಿ ರಿಲಯನ್ಸ್ ಡಿಫೆನ್ಸ್ ಇಂಡಸ್ಟ್ರೀಸ್ ಎಂದು ವಿರೋಧ ಪಕ್ಷಗಳು ಈ ಹಿಂದೆ ಆರೋಪಿಸಿದ್ದವು. ಆದರೆ, ಪದೇಪದೇ ಈ ಆರೋಪವನ್ನು ಅಲ್ಲಗಳೆದ ಕೇಂದ್ರ ಸರ್ಕಾರ, “ಡಸಾಲ್ಟ್ ಕಂಪೆನಿಯೇ ಸ್ವತಃ ರಿಲಯನ್ಸ್ ಡಿಫೆನ್ಸ್ ಅನ್ನು ತನ್ನ ಪಾಲುದಾರನನ್ನಾಗಿ ಮಾಡಿಕೊಂಡಿದೆ. ಇದರಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ,” ಎಂದು ಹೇಳಿತ್ತು.

ಅವ್ಯವಹಾರಕ್ಕೆ ಸಂಬಂಧಿಸಿದಂತೆ ಹೊಲಾಂದ್ ಕೂಡ ಸ್ವತಃ ಆರೋಪ ಎದುರಿಸುತ್ತಿದ್ದು, ತನ್ನ ಸಂಗಾತಿ ನಟಿ ಜ್ಯೂಲಿ ಗಯೇ ಅವರಿಗಾಗಿ ಅನಿಲ್ ಅಂಬಾನಿ ಅವರ ರಿಲಯನ್ಸ್ ಎಂಟರ್‌ಟೇನ್ಮೆಂಟ್ ಸಿನಿಮಾವೊಂದನ್ನು ತಯಾರಿಸಲು ಮುಂದಾಗಿತ್ತು ಎಂಬ ವಿಚಾರ ಅಲ್ಲಿನ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಗಣರಾಜ್ಯೋತ್ಸವ ಸಂದರ್ಭದಲ್ಲಿ ಹೊಲಾಂದ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಲು ಆಗಮಿಸುವ ಎರಡು ದಿನಗಳ ಮೊದಲು, ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ ಸಿನಿಮಾ ನಿರ್ಮಾಣ ವಿಚಾರವನ್ನು ಬಯಲಿಗೆಳೆದಿತ್ತು.

ರಫೇಲ್ ವಿವಾದಕ್ಕೆ ಸಂಬಂಧಿಸಿದಂತೆ ಗುರುತರ ಆರೋಪ ಮಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಡಿಸೆಂಬರ್‌ನಲ್ಲಿ ಎರಡು ಪುಟಗಳ ಪತ್ರ ಬರೆದಿದ್ದ ರಿಲಯನ್ಸ್ ಡಿಫೆನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಅನಿಲ್ ಅಂಬಾನಿ, ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರ ಇಲ್ಲ ಎಂದಿದ್ದರು. "ಅಗತ್ಯ ಅನುಭವ ಇರುವುದು ಮಾತ್ರವಲ್ಲ, ನಾವಿಬ್ಬರೂ (ಡಸಾಲ್ಟ್ ಏವಿಯೇಷನ್ ಮತ್ತು ಆರ್ ಡಿಐ ) ಸೇನಾ ಸಾಧನಗಳ ನಿರ್ಮಾಣದಲ್ಲಿ ಮುಂಚೂಣಿ ನಾಯಕರು,” ಎಂದು ಬಿಂಬಿಸಿಕೊಂಡಿದ್ದರು.

ಒಪ್ಪಂದದ ಪ್ರಕಾರ, ಭಾರತ 30,000 ಕೋಟಿ ರು. ಮೊತ್ತದ ಬಂಡವಾಳವನ್ನು ಭಾರತದಲ್ಲಿ ಸೃಷ್ಟಿಸಬೇಕಿದೆ. ರಫೇಲ್ ಗಾಗಿ ಯಾವುದೇ ಸಾಧನವನ್ನು ಡಸಾಲ್ಟ್ ತಯಾರಿಸಿಕೊಡದಿದ್ದರೂ ಡಸಾಲ್ಟ್ ಬ್ಯುಸಿನೆಸ್ ಜೆಟ್‌ಗಳಿಗೆ ರಿಲಯನ್ಸ್ ಸಂಬಂಧಪಟ್ಟ ಉಪಕರಣಗಳನ್ನು ತಯಾರಿಸಿಕೊಡಬೇಕಿದೆ. ರಫೇಲ್ ಎಂಜಿನ್ ಅನ್ನು ತಯಾರಿಸುವ ಸ್ಯಾಫ್ರಾನ್, ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಒದಗಿಸುವ ಎಂಬಿಡಿಎ, ಎವಿಯೋನಿಕ್ಸ್ ಸೌಲಭ್ಯ ಕಲ್ಪಿಸುವ ಥೇಲ್ಸ್ ಕಂಪನಿಗಳು ಕೂಡ ಒಪ್ಪಂದದಲ್ಲಿ ಭಾಗಿಯಾಗಿರುವ ಇನ್ನಿತರ ಫ್ರಾನ್ಸ್ ಕಂಪನಿಗಳು.

ಈಗ ಹೊಲಾಂದ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ದೇಶದೆಲ್ಲೆಡೆ ಟೀಕೆಗಳು ವ್ಯಕ್ತವಾಗುತ್ತಿವೆ. ರಾಹುಲ್ ಗಾಂಧಿ, “ಕದ್ದುಮುಚ್ಚಿ ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದಾಗಿ ರಫೇಲ್ ಒಪ್ಪಂದದಲ್ಲಿ ಮಧ್ಯಸ್ಥಿಕೆ ವಹಿಸಿ ಅದನ್ನು ಬದಲಿಸಿದ್ದಾರೆ. ಹೊಲಾಂದ್ ಅವರಿಗೆ ಧನ್ಯವಾದಗಳು; ದಿವಾಳಿಯಾಗಿದ್ದ ಅನಿಲ್ ಅಂಬಾನಿಗೆ ಅವರೇ ಸ್ವತಃ ದಶಕೋಟಿ ಡಾಲರ್ ಮೊತ್ತದ ಹಣ ಹರಿಯುವಂತೆ ಮಾಡಿದ್ದರು,” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಕರ್ನಾಟಕ ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ರಕ್ಷಣಾ ಸಚಿವರಾಗಿ ರಾಜ್ಯಕ್ಕಾದ ಲಾಭವೇನು?

ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, “ರಫೇಲ್ ಒಪ್ಪಂದ ಒಂದು ಹಗರಣ. ಮೋದಿ ಸರ್ಕಾರ ಸುಳ್ಳು ಹೇಳಿತು ಮತ್ತು ದೇಶದ ಜನರನ್ನು ದಿಕ್ಕುತಪ್ಪಿಸಿತು. ಸತ್ಯ ಹೊರಬರಬೇಕು. ಸೇನಾ ಶಸ್ತ್ರಾಸ್ತ್ರ ನಿರ್ಮಾಣದಲ್ಲಿ ಅನುಭವ ಹೊಂದಿರದ ಕಂಪನಿಯೊಂದರ ಪರ ಭಾರತ ಸರ್ಕಾರ ನಿಂತಿದ್ದೇಕೆ?” ಎಂದು ಟ್ವಿಟರ್ ನಲ್ಲಿ ಪ್ರಶ್ನಿಸಿದ್ದಾರೆ. ಆದರೆ, ಹೊಲಾಂದ್ ಅವರ ಹೇಳಿಕೆಯನ್ನು ರಕ್ಷಣಾ ಸಚಿವಾಲಯ ಅಲ್ಲಗಳೆದಿದೆ.

ಇದಕ್ಕೂ ಕೆಲದಿನಗಳ ಮೊದಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಭಾರತೀಯ ವೈಮಾನಿಕ ಕಂಪನಿ ಎಚ್ ಎ ಎಲ್ ಸಾಮರ್ಥ್ಯ ಪ್ರಶ್ನಿಸುವಂತಹ ಮಾತುಗಳನ್ನಾಡಿದ್ದರು. ಅಲ್ಲದೆ, ಎಚ್ ಎಎಲ್ ಸ್ಥಿತಿಗೆ ಕಾಂಗ್ರೆಸ್ ಕಾರಣ ಎಂದೂ ದೂಷಿಸಿದ್ದರು. ನಂತರ ಎಚ್ ಎಎಲ್ ಅಧ್ಯಕ್ಷರು ಸಚಿವರ ಮಾತಿಗೆ ತಕರಾರು ವ್ಯಕ್ತಪಡಿಸಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More