ಕೆಎಎಸ್ ನೇಮಕಾತಿ ಅಕ್ರಮ; ಮಾಜಿ ಅಧ್ಯಕ್ಷ ಕೃಷ್ಣ ವಿರುದ್ಧ ಮತ್ತೆ ವಿಚಾರಣೆ

ಕೆಎಎಸ್ ಅಧಿಕಾರಿಗಳ ನೇಮಕಾತಿ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಈ ಕುರಿತು ಹೈಕೋರ್ಟ್‌ ನೀಡಿದ್ದ ಆದೇಶ ಅನುಸಾರ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದ್ದರ ನಡುವೆಯೇ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಕೃಷ್ಣ ಅವರ ವಿರುದ್ಧ ಮ್ಯಾಜಿಸ್ಟ್ರೇಟ್‌ ಕೋರ್ಟ್ ಪುನಃ ವಿಚಾರಣೆ ಕೈಗೆತ್ತಿಕೊಂಡಿದೆ

ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳ (೧೯೯೮, ೯೯ ಮತ್ತು ೨೦೦೪ನೇ ಸಾಲಿನ) ನೇಮಕಾತಿಯಲ್ಲಿ ನಡೆದಿರುವ ವಿವಿಧ ಸ್ವರೂಪದ ಅಕ್ರಮಗಳ ಆರೋಪಕ್ಕೆ ಗುರಿಯಾಗಿರುವ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಎಚ್‌ ಎನ್ ಕೃಷ್ಣ ಅವರ ವಿರುದ್ಧದ ಪ್ರಕರಣದ ವಿಚಾರಣೆ ತ್ವರಿತಗತಿಯಲ್ಲಿ ಮುಂದುವರಿದಿದೆ.

ಒಂದು ವರ್ಷದ ಹಿಂದೆ ಕೃಷ್ಣ ಅವರ ವಿರುದ್ಧ ಕ್ರಿಮಿನಲ್ ಸಂಚು, ಕ್ರಿಮಿನಲ್ ಬೆದರಿಕೆ, ವಂಚನೆ, ದಾಖಲೆ ತಿದ್ದಿರುವುದು ಸೇರಿದಂತೆ ಕೈಬಿಡಲಾಗಿದ್ದ ಇನ್ನಿತರ ಆರೋಪಗಳನ್ನು ಒಂದನೇ ಹೆಚ್ಚುವರಿ ಪ್ರಧಾನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಪುನಃ ದಾಖಲಿಸಿಕೊಂಡಿದೆ. ನೇಮಕ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ೨೦೧೬ರ ಆಗಸ್ಟ್ ೨೬ರಂದು ವಜಾಗೊಳಿಸಿತ್ತು. ಅಲ್ಲದೆ, “ಆಶಾ ಪರ್ವೀನ್‌ ಮತ್ತಿತರರ ಪ್ರಕರಣದಲ್ಲಿ ವಿಚಾರಣೆ ಈಗಲೇ ಆರಂಭಿಸಿ ಎಷ್ಟು ಸಾಧ್ಯವೋ ಅಷ್ಟು ಬೇಗ ಪೂರ್ಣಗೊಳಿಸಬೇಕು,” ಎಂದು ಸುಪ್ರೀಂ ಕೋರ್ಟ್ ೨೦೧೮ರ ಏಪ್ರಿಲ್ ೧೩ರಂದು ತೀರ್ಪು ನೀಡಿ ಸೂಚಿಸಿದ್ದರ ಹಿನ್ನೆಲೆಯಲ್ಲಿ ಕೃಷ್ಣ ಸೇರಿದಂತೆ ಇನ್ನಿತರ ಆರೋಪಿಗಳ ವಿರುದ್ಧ ವಿಚಾರಣೆಯನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಪುನಃ ಕೈಗೆತ್ತಿಕೊಂಡಿದೆ. ಈ ಪ್ರಕರಣ ಕುರಿತು ಇದೇ ಸೆಪ್ಟೆಂಬರ್ ೨೯ರಂದು ವಿಚಾರಣೆ ನಡೆಯಲಿದೆ.

ನ್ಯಾಯಾಲಯದ ಅಂದಿನ ನ್ಯಾಯಾಧೀಶರಾಗಿದ್ದ ಹೇಮಾ ಪಾಸ್ತಾಪುರ್‌, ಐಪಿಸಿ ೪೧೮ ಅಡಿ ವಿಚಾರಣೆ ನಡೆಸಲು ೨೦೧೭ರ ಫೆ.೨೨ರಂದು ಆದೇಶಿಸಿದ್ದರಲ್ಲದೆ, ಐಪಿಸಿ ೪೧೭ ಸೇರಿದಂತೆ ಒಟ್ಟು ೭ ಆರೋಪಗಳನ್ನು ಕೈಬಿಟ್ಟಿದ್ದರು. ಆದರೆ, ಕೆಲವು ತಿಂಗಳ ಹಿಂದೆ ಪ್ರಕರಣವನ್ನು ಹೆಚ್ಚುವರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಂಡಿದೆ.‌ ವರ್ಷದ ಹಿಂದೆ ಕೈಬಿಡಲಾಗಿದ್ದ ಉಳಿದ ಎಲ್ಲ ಆರೋಪಗಳನ್ನು ಹಾಲಿ ನ್ಯಾಯಾಧೀಶರಾದ ಜಗದೀಶ್‌ ಅವರು ಪುನಃ ದಾಖಲಿಸಿಕೊಂಡಿದ್ದಾರೆ.

ಕೆಎಎಸ್‌ ಅಧಿಕಾರಿಗಳಾದ ಆಶಾ ಪರ್ವೀನ್‌, ಸಲ್ಮಾ ಫಿರ್ದೋಸ್‌ (ಇಬ್ಬರೂ 1998ರ ಬ್ಯಾಚ್‌ನ ಅಧಿಕಾರಿಗಳು), ಕೆಪಿಎಸ್‌ಸಿ ಉದ್ಯೋಗಿಗಳಾದ ಕೆ ನರಸಿಂಹ ಹಾಗೂ ಎಂ ಬಿ ಬಣಕಾರ್ ಅವರು ತಮ್ಮ ವಿರುದ್ಧ ಸಿಐಡಿ ದಾಖಲಿಸಿದ್ದ ದೋಷಾರೋಪ ಪಟ್ಟಿಯನ್ನು ವಜಾಗೊಳಿಸಲು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಆರೋಪಿಗಳ ಅರ್ಜಿ ಪುರಸ್ಕರಿಸಿ, ಸಿಐಡಿ ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನು ವಜಾಗೊಳಿಸಿತ್ತು. ಇದನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಪ್ರಕರಣ ಕುರಿತು ಸುಪ್ರೀಂ ಕೋರ್ಟ್ (೨೦೧೮ರ ಏಪ್ರಿಲ್ ೧೩) ರಾಜ್ಯ ಸರ್ಕಾರದ ಮನವಿ ಪುರಸ್ಕರಿಸಿ ಹೈಕೋರ್ಟ್ ನೀಡಿದ್ದ ಆದೇಶವನ್ನು ವಜಾಗೊಳಿಸಿತ್ತಲ್ಲದೆ, ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಎಚ್‌ ಎನ್ ಕೃಷ್ಣ ವಿರುದ್ಧ ನಡೆಯುತ್ತಿರುವ ಪ್ರಕರಣದಲ್ಲೂ ವಿಚಾರಣೆಯನ್ನೂ ಎದುರಿಸಬೇಕು ಎಂದು ಸೂಚಿಸಿತ್ತು. ಹೀಗಾಗಿ, ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಚಾರಣೆಯನ್ನು ಪುನಃ ಕೈಗೆತ್ತಿಕೊಂಡಿದೆ.

ಇದನ್ನೂ ಓದಿ : ಕೆಪಿಎಸ್ಸಿ ಅಕ್ರಮ: ತೀರ್ಪು ಪಾಲಿಸದ ರಾಜ್ಯ ಸರ್ಕಾರದಿಂದ ಮುಂದೂಡಿಕೆ ತಂತ್ರ?

ಏನಿದು ಪ್ರಕರಣ?: ಆಶಾ ಪರ್ವೀನ್‌ ಅವರು ತಹಶೀಲ್ದಾರರಾಗಿ ಮತ್ತು ಸಲ್ಮಾ ಫಿರ್ದೋಸ್‌ ಅವರು ಸಹಕಾರ ಸಂಘಗಳ ಸಹಾಯಕ ರಿಜಿಸ್ಟ್ರಾರ್‌ ಆಗಿ ಆಯ್ಕೆಯಾಗಿದ್ದರು. ಆದರೆ, ಇವರು ಜಾತಿ ಪ್ರಮಾಣಪತ್ರಗಳನ್ನು ತಿದ್ದಿದ್ದಾರೆ ಎಂಬ ಆರೋಪ ಸಂಬಂಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ 2011ರ ಆಗಸ್ಟ್‌ 11ರಂದು ಪ್ರಕರಣ ದಾಖಲಾಗಿತ್ತು.

ಕೆಪಿಎಸ್‌ಸಿ ನಡೆಸಿದ ಎ ಮತ್ತು ಬಿ ವರ್ಗದ ಅಧಿಕಾರಿಗಳ ನೇಮಕ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಬಳಿಕ ತನಿಖೆ ನಡೆಸುವಂತೆ ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿತ್ತು. ಸಿಐಡಿ ನಡೆಸಿದ ತನಿಖೆಯ ಆಧಾರದಲ್ಲಿ ಈ ದೂರು ದಾಖಲಿಸಲಾಗಿತ್ತು.

ಆರೋಪಿಯು ರಾಜಕೀಯ ಹಾಗೂ ಅಧಿಕಾರ ಪ್ರಭಾವ ಹೊಂದಿರುವುದರಿಂದ ಸಾಕ್ಷಿಗಳಿಗೆ ಬೆದರಿಕೆ ಹಾಕಿ ದಾಖಲೆಗಳನ್ನು ನಾಶ ಮಾಡುವ ಸಾಧ್ಯತೆ ಇದೆ ಎಂದು ಸಿಐಡಿ ಪೊಲೀಸರ ಪರ ವಕೀಲರಾದ ಅರುಂಧತಿ ಕುಲಕರ್ಣಿ ವಾದಕ್ಕೆ ಸಮ್ಮತಿಸಿದ್ದ ನ್ಯಾಯಮೂರ್ತಿ ಕಿರಣ್ ಕಿಣಿ ಅವರು, ಕೃಷ್ಣ ಅವರಿಗೆ ಜಾಮೀನು ನಿರಾಕರಿಸಿದ್ದರು.

1998, 1999 ಮತ್ತು 2004ರಲ್ಲಿ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಅವ್ಯವಹಾರ ಹಾಗೂ ಅಭ್ಯರ್ಥಿಗೆ ಜೀವಬೆದರಿಕೆ ಒಡ್ಡಿದ್ದ ಆರೋಪ ಕೃಷ್ಣ ಅವರ ಮೇಲಿದೆ. ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಸ್ಥಾನದಂತಹ ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು ಸರ್ಕಾರಿ ಹುದ್ದೆಗಳಿಗೆ ನೇಮಕಾತಿಯಲ್ಲಿ ವಂಚನೆ ಮಾಡಿ ವಿಚಾರಣೆಗೆ ಒಳಗಾಗುವಂತಹ ಸ್ಥಿತಿ ನಿರ್ಮಾಣ ಆಗಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿತ್ತು. "ಕೆಪಿಎಸ್‌ಸಿಯ ಮಾಜಿ ಅಧ್ಯಕ್ಷರ ವಿರುದ್ಧ ಅಪರಾಧ ಪ್ರಕರಣ ದಾಖಲಾಗಿದೆ. ಈ ದೇಶದಲ್ಲಿ ಏನು ನಡೆಯುತ್ತಿದೆ?” ಎಂದು ನ್ಯಾಯಮೂರ್ತಿಗಳಾದ ರಂಜನ್‌ ಗೊಗೊಯ್‌ ಮತ್ತು ಆರ್‌ ಭಾನುಮತಿ ಪ್ರಶ್ನಿಸಿದ್ದನ್ನು ಸ್ಮರಿಸಬಹುದು.

ಟ್ವಿಟರ್ ಸ್ಟೇಟ್ | ಜಮ್ಮು-ಕಾಶ್ಮೀರ ಶಾಲೆಗಳಲ್ಲಿ ಭಗವದ್ಗೀತೆ ಪರಿಚಯ, ವಿವಾದ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ಎಎನ್ಐ ಸುದ್ದಿಸಂಸ್ಥೆಯ ಎಡವಟ್ಟು ವರದಿಗಳ ಹಿಂದಿನ ಮರ್ಮವೇನು?
Editor’s Pick More