ಯುವ ಮತದಾರರನ್ನು ಸೆಳೆಯುವ ಅಸ್ತ್ರ ಆಗಲಿದೆಯೇ ಸರ್ಜಿಕಲ್‌ ದಾಳಿ ದಿನಾಚರಣೆ?

೨೦೧೬ರ ಸೆ.೨೯ರಂದು ಭಾರತೀಯ ಸೇನೆ ನಡೆಸಿದ ಸರ್ಜಿಕಲ್‌ ದಾಳಿ ಸಾಧನೆ ಸ್ಮರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ದಿನಾಚರಣೆ ಸಂಬಂಧ ದೇಶದ ಎಲ್ಲ ವಿವಿ, ಕಾಲೇಜುಗಳಿಗೆ ಯುಜಿಸಿಯಿಂದ ನಿರ್ದೇಶನ ಹೊರಡಿಸುವ ಮೂಲಕ ಹೊಸ ಮತದಾರರನ್ನು ಸೆಳೆಯಲು ಮುಂದಾದಂತೆ ತೋರುತ್ತಿದೆ

ಎರಡು ವರ್ಷದ ಹಿಂದೆ (೨೦೧೬ರ ಸೆ.೨೯) ಪಾಕ್‌ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಉಗ್ರರ ಅಡಗುದಾಣಗಳನ್ನು ಗುರಿಯಾಗಿಸಿ ಭಾರತೀಯ ಸೇನೆ ನಡೆಸಿದ ‘ಸರ್ಜಿಕಲ್ ದಾಳಿ’ಯನ್ನು ತನ್ನ ರಾಜಕೀಯ ವರ್ಚಸ್ಸು ಹೆಚ್ಚಳಕ್ಕೆ ಅಗತ್ಯಕ್ಕಿಂತ ಹೆಚ್ಚು ಬಳಸಿಕೊಂಡಿರುವ ಮತ್ತು ‘ಮಹಾ ಪರಾಕ್ರಮ’ ಎನ್ನುವಂತೆ ಬಿಂಬಿಸಿಕೊಂಡಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಈ ಸೆ.೨೯ನ್ನು ‘ಸರ್ಜಿಕಲ್‌ ದಾಳಿ ದಿನ’ವನ್ನಾಗಿ ಆಚರಿಸಲು ಮುಂದಾಗಿದೆ. ಮಾತ್ರವಲ್ಲ, ದೇಶದ ಎಲ್ಲ ವಿಶ್ವವಿದ್ಯಾಲಯ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಸೆ.೨೯ರಂದು ‘ಸರ್ಜಿಕಲ್‌ ದಾಳಿ ದಿನ’ ಆಚರಿಸಬೇಕೆಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಮೂಲಕ ನಿರ್ದೇಶನ ಕೊಡಿಸಿರುವುದು ವಿವಾದದ ಸ್ವರೂಪ ಪಡೆದಿದೆ. “ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಸರ್ಕಾರ ಸೇನೆಯನ್ನೂ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ,’’ ಎನ್ನುವುದು ಪ್ರತಿಪಕ್ಷಗಳ ಆಕ್ಷೇಪ. “ಆಚರಣೆ ಕಡ್ಡಾಯವಲ್ಲ. ಇದು ದೇಶಭಕ್ತಿಗೆ ಸಂಬಂಧಿಸಿದ ವಿಷಯ,’’ ಎನ್ನುವುದು ಕೇಂದ್ರ ಸರ್ಕಾರ ಸ್ಪಷ್ಟನೆ.

“ಪಾಕ್ ಪ್ರಚೋದಿತ ಭಯೋತ್ಪಾದಕರ ಹುಟ್ಟಡಗಿಸುವ ನಿಟ್ಟಿನಲ್ಲಿ ನಡೆದ ಸರ್ಜಿಕಲ್‌ ದಾಳಿ ಮೋದಿ ಸರ್ಕಾರದ ಮಹಾ ಪರಾಕ್ರಮ,’’ ಎಂದು ಕೇಂದ್ರ ಸರ್ಕಾರ ವ್ಯಾಪಕ ಪ್ರಚಾರ ಪಡೆದಿದೆ. ಬಿಜೆಪಿ ಮತ್ತು ಮೋದಿ ಭಕ್ತರು ಈ ನಿರಂತರ ಸೇನಾ ವಿದ್ಯಮಾನಕ್ಕೆ ‘ಮೋದಿ ಶಕ್ತಿ’ಯೇ ಕಾರಣ ಎಂದು ಬಹುಪರಾಕು ಹಾಕಿದ್ದಾರೆ. ೨೦೧೬ರ ಸೆ.೨೯ಕ್ಕಿಂತ ಮೊದಲೂ ಅನೇಕ ಬಾರಿ ಭಾರತೀಯ ಸೇನೆ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ, ಪಾತಕಿಗಳ ಹುಟ್ಟಡಗಿಸಲು ಪ್ರಯತ್ನಿಸಿತ್ತು. ಆದರೆ, ಆಗಿನ ಆಡಳಿತಾರೂಢರು ಆ ಕಾರ್ಯಾಚರಣೆಗಳ ‘ಗರಿಷ್ಠ ಶ್ರೇಯ’ವನ್ನು ಸೇನೆಗೆ ನೀಡಿದ್ದರು. ದೇಶ ರಕ್ಷಣೆ ವಿಷಯದಲ್ಲಿ ಕಡ್ಡಾಯ ಕಾಯ್ದುಕೊಳ್ಳಬೇಕಾದ ಗೌಪ್ಯತೆಯ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿದ್ದರು. ಆದರೆ, “ಭಯೋತ್ಪಾದಕರನ್ನು ಹತ್ತಿಕ್ಕುವಲ್ಲಿ ಕೇಂದ್ರ ವಿಫಲವಾಗಿದೆ,’’ ಎಂದು ಅಂದಿನ ಸರ್ಕಾರಗಳ ಮೇಲೆ ಮುಗಿಬೀಳುತ್ತಿದ್ದ ಬಿಜೆಪಿಗೆ, ತಾನು ಅಧಿಕಾರಕ್ಕೆ ಬಂದ ಬಳಿಕ ಆ ವಿಷಯವೇ ಸವಾಲಾಗಿ ಪರಿಣಮಿಸಿತು. ಆದ್ದರಿಂದಲೇ, ‘ಸರ್ಜಿಕಲ್‌ ದಾಳಿ’ಯನ್ನು ‘ಐತಿಹಾಸಿಕ’ ಎನ್ನುವಂತೆ ಬಿಂಬಿಸಿತು ಮತ್ತು ಇದನ್ನು ಈ ಎರಡು ವರ್ಷಗಳಲ್ಲಿ ತನ್ನ ರಾಜಕೀಯ ಶಕ್ತಿವರ್ಧನೆಗೆ ಬಳಸಿಕೊಳ್ಳಲು ಯತ್ನಿಸಿತು. ದೇಶವಾಸಿಗಳನ್ನು ನಂಬಿಸುವ ಪ್ರಯತ್ನದ ಭಾಗವಾಗಿಯೇ ಕೆಲವು ತಿಂಗಳ ಹಿಂದೆ ಸರ್ಜಿಕಲ್‌ ದಾಳಿಯ ವೀಡಿಯೋ ತುಣುಕುಗಳ ಸೋರಿಕೆಯೂ ಆಯಿತು.

ಅದೇನೇ ಆದರೂ, ಎರಡು ವರ್ಷದ ಹಿಂದಿನ ‘ನಿರ್ದಿಷ್ಟ ದಾಳಿ’ಯ ಬಳಿಕವೂ ಕಾಶ್ಮೀರದಲ್ಲಿ ಶಾಂತಿ ನೆಲೆಸಿಲ್ಲ. ಉಗ್ರರ ಉಪಟಳ ನಿಂತಿಲ್ಲ. ಆ ನಂತರವೂ ಸೇನೆ ಮತ್ತು ಉಗ್ರರ ಮಧ್ಯೆ ಹಲವು ಬಾರಿ ಚಕಮಕಿ ನಡೆದಿದ್ದು, ೧೫೦ಕ್ಕೂ ಹೆಚ್ಚು ಸೈನಿಕರು, ೮೦ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದಾರೆ. ಮಾತ್ರವಲ್ಲ, “ಗಡಿ ನಿಯಂತ್ರಣ ರೇಖೆ ಗುಂಟ ಸರ್ಜಿಕಲ್‌ ದಾಳಿ ನಡೆಸಿ ಉಗ್ರರ ತಾಣಗಳನ್ನು ಧ್ವಂಸಗೊಳಿಸಲಾಯಿತು,’’ ಎನ್ನುವ ಭಾರತದ ವಾದವನ್ನು ಪಾಕಿಸ್ತಾನ ನಿರಾಕರಿಸುತ್ತಲೇ ಇದೆ. “ಗಡಿಯಲ್ಲಿ ಯಾವತ್ತೂ ನಡೆಯುವ ಚಕಮಕಿಗೇ ಭಾರತ ‘ಸರ್ಜಿಕಲ್‌ ದಾಳಿ’ ಪದವನ್ನು ಬಳಸಿ ಮಾಧ್ಯಮಗಳಲ್ಲಿ ಪ್ರಚಾರ ಪಡೆದಿದೆ,’’ ಎನ್ನುವುದು ಪಾಕ್‌ ಆಕ್ಷೇಪ. ನಮ್ಮ ಸೇನೆಯಿಂದ ಪೆಟ್ಟು ತಿಂದಿರುವ ಪಾಕಿಸ್ತಾನ ಹೀಗೆ ಹೇಳುವುದು ಸಹಜ. ಆದರೆ, ಈ‌ ದಾಳಿ ನಂತರದ ವಾಸ್ತವ ಸ್ಥಿತಿಗತಿಗಳನ್ನು ಬಿಂಬಿಸದೆ, ಸರ್ಜಿಕಲ್‌ ಪರಾಕ್ರಮವನ್ನಷ್ಟೆ ಸಾರಿಕೊಳ್ಳುತ್ತಿರುವ ಕೇಂದ್ರ ಸರ್ಕಾರದ ನಡೆ ಸಹಜವಾಗಿ ಕಾಣಿಸುತ್ತಿಲ್ಲ.

ಈಗ, ದೇಶದ ಎಲ್ಲ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ಅಂದರೆ ‘ನವ’ ಮತ್ತು ಯುವ ಮತದಾರರಿಗೆ ಆ ದಾಳಿಯ ಪರಾಕ್ರಮವನ್ನು ಮನದಟ್ಟು ಮಾಡಲು, ಅವರ ‘ಸಂವೇದನೆ’ಯನ್ನು ತನ್ನತ್ತ ಹೆಚ್ಚು ಸೆಳೆದುಕೊಳ್ಳಲು ಮುಂದಾಗಿರುವಂತೆ ತೋರುತ್ತಿದೆ. ಯುಜಿಸಿ ಕಾರ್ಯದರ್ಶಿ ರಜನೀಶ್‌ ಜೈನ್‌ ಹೊರಡಿಸಿರುವ ಆದೇಶದಲ್ಲಿರುವ ಪ್ರಮುಖ ಸೂಚನೆಗಳು ಅದನ್ನೇ ಸಾರುವಂತಿವೆ. ಈ ಪೈಕಿ ಕೆಲವು ಹೀಗಿವೆ:

  • ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ಎನ್‌ಸಿಸಿ ಜೊತೆ ಸೇರಿ ಸೆ.೨೯ರಂದು ವಿಶೇಷ ಪರೇಡ್‌ ಆಯೋಜಿಸಬೇಕು. ನಂತರ ಎನ್‌ಸಿಸಿ ಕಮಾಂಡರ್‌ ಗಡಿ ರಕ್ಷಣೆಯ ವಿಧಾನಗಳ ಬಗ್ಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಬೇಕು.
  • ವಿವಿಗಳು ಮತ್ತು ಕಾಲೇಜುಗಳಲ್ಲಿ ನಿವೃತ್ತ ಸೇನಾಧಿಕಾರಿಗಳಿಂದ ಉಪನ್ಯಾಸ ಆಯೋಜಿಸಬೇಕು. ದೇಶ ರಕ್ಷಣೆಗಾಗಿ ಸಶಸ್ತ್ರ ಪಡೆಗಳು ಮಾಡುವ ತ್ಯಾಗ, ಬಲಿದಾನದ ಕುರಿತು ಅವರು ಮಾತನಾಡಿ, ವಿದ್ಯಾರ್ಥಿಗಳ ಸಂವೇದನೆಯನ್ನು ಹೆಚ್ಚಿಸಬೇಕು.
  • ದೆಹಲಿಯ ಇಂಡಿಯಾ ಗೇಟ್‌ನಲ್ಲಿ ಅಂದು ಮಲ್ಟಿಮೀಡಿಯಾ ಪ್ರದರ್ಶನ ಆಯೋಜಿಸಲಾಗಿದೆ. ಅಂತೆಯೇ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿ ಮತ್ತು ಪ್ರಮುಖ ನಗರಗಳಲ್ಲಿ ಇಂಥ ಪ್ರದರ್ಶನವನ್ನು ಸಾರ್ವಜನಿಕವಾಗಿ ಆಯೋಜಿಸಬೇಕು. ವಿದ್ಯಾರ್ಥಿಗಳು, ಅಧ್ಯಾಪಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರದರ್ಶನದಲ್ಲಿ ಪಾಲ್ಗೊಳ್ಳುವಂತೆ ಉನ್ನತ ಶಿಕ್ಷಣ ಸಂಸ್ಥೆಗಳು ಪ್ರೋತ್ಸಾಹ ನೀಡಬೇಕು.
  • ಪತ್ರ, ಕಾರ್ಡ್ ಬರೆಯುವ (ಡಿಜಿಟಲ್‌ ಮತ್ತು ಭೌತಿಕ ಸ್ವರೂಪ ಎರಡರಲ್ಲೂ) ಮೂಲಕ ವಿದ್ಯಾರ್ಥಿಗಳು ಸಶಸ್ತ್ರ ಪಡೆಗಳಿಗೆ ಬೆಂಬಲ ನೀಡಬೇಕು. ಈ ಪತ್ರ, ಕಾರ್ಡ್‌ಗಳನ್ನು ಸೇನೆ ಮತ್ತು ಪ್ರೆಸ್ ಇನ್‌ಫರ್ಮೇಷನ್ ಬ್ಯೂರೋ (ಪಿಐಬಿ) ಪಿಆರ್‌ಒ ಜೊತೆ ಹಂಚಿಕೊಳ್ಳಬೇಕು. ಸಾಮಾಜಿಕ ಮಾಧ್ಯಮ ಸಹಿತ ಎಲ್ಲ ಮಾಧ್ಯಮಗಳಲ್ಲಿ ಇವು ಬಿತ್ತರಗೊಳ್ಳುವಂತೆ ಗಮನ ಹರಿಸಬೇಕು.

ಇಂಥ ಪ್ರಕಟಣೆ ಹೊರಬೀಳುತ್ತಿದ್ದಂತೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದವು. “ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪ್ರಚಾರಕ್ಕಾಗಿ ಸೇನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ, ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ,’’ ಎಂದು ಪಶ್ಚಿಮ ಬಂಗಾಳ ಶಿಕ್ಷಣ ಮಂತ್ರಿ ಪ್ರತಾಪ್‌ ಚಟರ್ಜಿ ಆಕ್ಷೇಪಿಸಿದ್ದಾರೆ. “ಇದು ಬಿಜೆಪಿಯ ಅಜೆಂಡಾ. ೨೦೧೯ರ ಚುನಾವಣೆ ಮುನ್ನೆಲೆಯಲ್ಲಿ ಬಿಜೆಪಿ ತನ್ನ ರಾಜಕೀಯ ಕಾರ್ಯಸೂಚಿ ಹೇರಲು ಯುಜಿಸಿಯನ್ನು ಬಳಸುತ್ತಿರುವುದು ಅವಮಾನಕರ,’’ ಎನ್ನುವುದು ಚಟರ್ಜಿ ಟೀಕೆ. ಯುಜಿಸಿ ನಿರ್ದೇಶನವನ್ನು ಆಘಾತಕಾರಿ ಎಂದು ಬಣ್ಣಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್‌, “ವಿಶ್ವವಿದ್ಯಾಲಯಗಳಿಗೆ ಈ ಬಗೆಯ ನಿರ್ದೇಶನವನ್ನು ಯುಜಿಸಿ ಹಿಂದೆಂದೂ ನೀಡಿದ್ದಲ್ಲ. ನಿಜಕ್ಕೂ ಇದು ಆಘಾತಕಾರಿ ವಿಷಯ. ಕೇಂದ್ರ ಸರ್ಕಾರ ಯುಜಿಸಿಯ ಸ್ವಾತಂತ್ರ್ಯವನ್ನು ನಾಶಪಡಿಸುತ್ತಿದೆ,’’ ಎಂದು ಹೇಳಿದ್ದಾರೆ.

ಹಲವು ನಿಟ್ಟಿನಿಂದ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟನೆ ರೂಪದ ಹೇಳಿಕೆ ನೀಡಿದ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್, “ಸರ್ಜಿಕಲ್‌ ದಾಳಿ ದಿನಕ್ಕೆ ಸಂಬಂಧಿಸಿ ಯುಜಿಸಿ ಹೊರಡಿಸಿರುವ ನಿರ್ದೇಶನವನ್ನು ಶೈಕ್ಷಣಿಕ ಸಂಸ್ಥೆಗಳು ಅಥವಾ ವಿದ್ಯಾರ್ಥಿಗಳು ಅನುಸರಿಸುವುದು ಕಡ್ಡಾಯವೇನಲ್ಲ,’’ ಎಂದಿದ್ದಾರೆ. “ನಾವು ಯಾವುದನ್ನೂ ಕಡ್ಡಾಯ ಮಾಡಿಲ್ಲ, ಸಲಹೆ ನೀಡಿದ್ದೇವಷ್ಟೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಇದು ದೇಶಭಕ್ತಿ ಮಾತ್ರ,’’ ಎಂದೂ ಸೇರಿಸಿದ್ದಾರೆ. “ಸರ್ಜಿಕಲ್‌ ದಾಳಿ ದಿನವನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂದು ಅನೇಕ ವಿದ್ಯಾರ್ಥಿಗಳು, ಅಧ್ಯಾಪಕರೇ ಸಲಹೆ ನೀಡಿದರು. ಆದ್ದರಿಂದ ದಾಳಿಯ ೨ನೇ ವರ್ಷದ ಕಾರ್ಯಕ್ರಮ ರೂಪಿಸಲಾಯಿತು. ಆಸಕ್ತಿ ಇರುವವರು ಅಂದು ನಿವೃತ್ತ ಸೇನಾಧಿಕಾರಿಗಳಿಂದ ಉಪನ್ಯಾಸ ಆಯೋಜಿಸುತ್ತಾರೆ. ರಕ್ಷಣಾ ಪಡೆಗಳು ದೇಶವನ್ನು ಹೇಗೆ ರಕ್ಷಿಸಿಕೊಳ್ಳುತ್ತವೆ ಮತ್ತು ಸರ್ಜಿಕಲ್‌ ದಾಳಿ ಹೇಗೆ ಯೋಜಿತವಾಗಿ ನಡೆಯಿತು ಎನ್ನುವುದನ್ನವರು ವಿದ್ಯಾರ್ಥಿಗಳಿಗೆ ವಿವರಿಸುತ್ತಾರೆ,’’ ಎಂದಿದ್ದಾರೆ.

ಇದನ್ನೂ ಓದಿ : ಯುಜಿಸಿ ಬದಲಿಗೆ ಯೋಜಿಸಿರುವ ಉನ್ನತ ಶಿಕ್ಷಣ ಆಯೋಗ ಮಸೂದೆ ಅಪಾಯಕಾರಿ

ಅಂದರೆ, ‘ಕಡ್ಡಾಯವಲ್ಲ; ದೇಶಭಕ್ತಿ ವಿಷಯ’ ಎನ್ನುವ ಜಾವಡೇಕರ್‌ ಮಾತಿನ ಅರ್ಥ ಸ್ಪಷ್ಟವಿದೆ. ಯಾವುದನ್ನೂ ಅವರು ಕಡ್ಡಾಯ ಮಾಡುತ್ತಿಲ್ಲ ಎನ್ನುವುದು ನಿಜ. ಆದರೆ, ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಅಡಿ ಬರುವ ಉನ್ನತ ಶಿಕ್ಷಣ ಸಂಸ್ಥೆಗಳು ‘ದೇಶಭಕ್ತಿ’ ಯನ್ನು ಪ್ರದರ್ಶಿಸಿಕೊಳ್ಳದಿದ್ದರೆ ಮುಂದೆ ಅದರ ಅಡ್ಡ ಪರಿಣಾಮಗಳನ್ನು ಖಂಡಿತ ಎದುರಿಸಬೇಕಾಗುತ್ತದೆ. ಸಂಘಟಿಸುವ ಎಲ್ಲ ಕಾರ್ಯಕ್ರಮಗಳನ್ನು ತನ್ನ ತಾಣದಲ್ಲಿ ಅಪ್‌ಲೋಡ್ ಮಾಡಬೇಕು ಮತ್ತು ಎಲ್ಲ ಮಾಧ್ಯಮಗಳ ಮೂಲಕ ಹಂಚಿಕೊಳ್ಳಬೇಕು ಎನ್ನುವ ಸೂಚನೆಗಳು ಯುಜಿಸಿ ನಿರ್ದೇಶನದಲ್ಲೇ ಇವೆ. ಅವುಗಳನ್ನು ಪಾಲಿಸದವರು ‘ಸರ್ಜಿಕಲ್‌ ದಾಳಿ ದಿನ’ ಆಚರಿಸಿಲ್ಲ ಎನ್ನುವುದು ಸುಲಭ ವೇದ್ಯವಾಗುತ್ತದೆ. ಇಂಥ ‘ದೇಶದ್ರೋಹಿ’ಗಳ ಅಥವಾ ‘ದೇಶಭಕ್ತಿ’ಯನ್ನು ಪ್ರಕಟಪಡಿಸದವರ ವಿರುದ್ಧ ಮುಂದೊಂದು ದಿನ ಸ್ಥಳೀಯವಾಗಿ ಯೋಜಿತ ‘ಸರ್ಜಿಕಲ್‌ ದಾಳಿ’ಗಳು ನಡೆಯುವುದಿಲ್ಲ ಎಂದು ಹೇಳಲಾಗದು. ‘ದಾಳಿ ದಿನಾಚರಣೆ’ ಸಂಘಟಿಸಿ ‘ಸೆ.೨೯ರ ನಿರ್ದಿಷ್ಟ ದಾಳಿ ಹೇಗೆ ನಡೆಯಿತು’ ಎನ್ನುವುದನ್ನು ವಿದ್ಯಾರ್ಥಿಗಳಿಗೆ ವಿವರಿಸುವುದೆಂದರೆ, ಅಲ್ಲಿ ‘ಮೋದಿ ಶಕ್ತಿ’ ಗುಣಗಾನ ನಿಶ್ಚಿತವಾಗಿ ನಡೆಯಬೇಕು; ಅಷ್ಟೊಂದು ‘ನಿರ್ದಿಷ್ಟ’ ಮತ್ತು ಯೋಜಿತವಾಗಿ ಸರ್ಜಿಕಲ್‌ ದಾಳಿಯ ಕತೆಯನ್ನು ಹೆಣೆದು ಹಬ್ಬಿಸಲಾಗಿದೆ ಕೂಡ!

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More