ಇಂದಿನ ಡೈಜೆಸ್ಟ್ | ನೀವು ಗಮನಿಸಲೇಬೇಕಾದ ಇತರ 10 ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ರಾಜ್ಯಪಾಲರಿಗೆ ಬಿಜೆಪಿ ದೂರು, ಸ್ಪೀಕರ್‌ಗೆ ಜೆಡಿಎಸ್‌ ಮನವಿ ಸಲ್ಲಿಕೆ

“ಸಮ್ಮಿಶ್ರ ಸರ್ಕಾರಕ್ಕೆ ಇದೇ ರೀತಿ ತೊಂದರೆ ನೀಡಿದರೆ ಸುಮ್ಮನಿರುವುದಿಲ್ಲ. ಬಿಜೆಪಿ ವಿರುದ್ಧ ದಂಗೆ ಹೇಳುವಂತೆ ಕರೆ ಕೊಡುತ್ತೇನೆ,” ಎನ್ನುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಯ ವಿರುದ್ಧ ಶುಕ್ರವಾರ ಬಿಜೆಪಿ ನಾಯಕರು ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿದರು. ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಅವರ ನೇತೃತ್ವದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ಮನವಿ ಸಲ್ಲಿಸಿ, ಕುಮಾರಸ್ವಾಮಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಇದಕ್ಕೆ ಪ್ರತಿತಂತ್ರ ಹೂಡಿರುವ ಜೆಡಿಎಸ್‌ ನಾಯಕರು, “ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ನಾಯಕರರು ಶಾಸಕರಿಗೆ ಆಮಿಷ ಒಡ್ಡುತ್ತಿದ್ದಾರೆ. ಸರ್ಕಾರ ಉರುಳಿಸಲು ಭೂಗತಲೋಕದ ಸಹಾಯ ಪಡೆಯುತ್ತಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳಬೇಕು,” ಎಂದು ವಿಧಾನಸಭಾ ಸ್ಪೀಕರ್‌ ರಮೇಶ್‌ ಕುಮಾರ್‌ ಅವರಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ.

‘ಕಾವೇರಿ’ಯಲ್ಲಿ ಸಿದ್ದರಾಮಯ್ಯ ಮತ್ತು ಸಿಎಂ ಎಚ್‌ಡಿಕೆ ಭೇಟಿ

ಸಮ್ಮಿಶ್ರ ಸರ್ಕಾರ ಕೆಡವಲು ಬಿಜೆಪಿ ಯತ್ನಿಸುತ್ತಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಕಮಲ ಪಾಳೆಯದ ರಾಜಕೀಯ ತಂತ್ರಗಳನ್ನು ವಿಫಲಗೊಳಿಸಲು ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಅವರ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮೊದಲ ಬಾರಿಗೆ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಕುಮಾರಸ್ವಾಮಿ ಅವರು ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಜಿ ಪರಮೇಶ್ವರ್‌, ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ ರಾವ್‌ ಉಪಸ್ಥಿತರಿದ್ದರು. ಗುರುವಾರದಂದು ಅವರ ತಂದೆ ಎಚ್‌ ಡಿ ದೇವೇಗೌಡರನ್ನು ಭೇಟಿ ಮಾಡಿದ್ದ ಕುಮಾರಸ್ವಾಮಿ ಅವರು, ಇಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದರ ಹಿಂದೆ ಬಿಜೆಪಿಯನ್ನು ಹಣಿಯುವ ತಂತ್ರ ಅಡಗಿದೆ ಎನ್ನಲಾಗಿದೆ.

ಕಾಶ್ಮೀರದಲ್ಲಿ ಪೊಲೀಸರ ಹತ್ಯೆ; ಪೊಲೀಸರ ರಾಜಿನಾಮೆ ವದಂತಿ ತಳ್ಳಿಹಾಕಿದ ಕೇಂದ್ರ

ಜಮ್ಮು-ಕಾಶ್ಮೀರದಲ್ಲಿ ಕಳೆದ ಹಲವು ದಿನಗಳಿಂದ ಉಗ್ರರ ಅಟ್ಟಹಾಸ ಹೆಚ್ಚಾಗುತ್ತಿದೆ. ಇದೀಗ ಅಪಹರಣವಾಗಿರುವ ನಾಲ್ವರು ಪೊಲೀಸ್ ಸಿಬ್ಬಂದಿ ಪೈಕಿ ಮೂವರನ್ನು ಹತ್ಯೆಗೈದಿದ್ದು, ಆತಂಕ ಸೃಷ್ಟಿಸಿದೆ. ಈ ಘಟನೆಯಿಂದ ಬೆದರಿರುವ ಪೊಲೀಸ್ ಅಧಿಕಾರಿಗಳು ರಾಜಿನಾಮೆಗೆ ಮುಂದಾಗಿದ್ದಾರೆ ಎಂಬ ವದಂತಿ ಹಬ್ಬುತ್ತಿದೆ. ಆದರೆ, ಇದೊಂದು ಸುಳ್ಳು ಸುದ್ದಿ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪೊಲೀಸರ ರಾಜೀನಾಮೆ ವಿಚಾರ ಸುಳ್ಳು ಹಾಗೂ ಪ್ರಚೋದನಕಾರಿಯಾಗಿದೆ ಎಂದವರು ಹೇಳಿದ್ದಾರೆ.

ಬುಹ್ರಾನ್ ವಾನಿ ಅಂಚೆ ಚೀಟಿ ಬಿಡುಗಡೆಗೊಳಿಸಿದ ಪಾಕಿಸ್ತಾನ

ಭಾರತದ ಭದ್ರತಾ ಪಡೆಗಳ ಗುಂಡೇಟಿಗೆ ಬಲಿಯಾದ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಬುಹ್ರಾನ್ ವಾನಿಯನ್ನು ಪಾಕಿಸ್ತಾನ ಸರ್ಕಾರ ಹುತಾತ್ಮ ಎಂದು ಪರಿಗಣಿಸಿ, ಆತನ ಭಾವಚಿತ್ರವುಳ್ಳ ವಿಶೇಷ ಅಂಚೆಚೀಟಿಯನ್ನು ಶುಕ್ರವಾರ ಬಿಡುಗಡೆಗೊಳಿಸಿದೆ. ಆತನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆಯಲಾಗಿದ್ದು, ಅಂಚೆಚೀಟಿ ಮೇಲೆ ‘ಕಾಶ್ಮೀರದಲ್ಲಿ ಜೀವಿಸುವವರ ಪಾಡು (Plight of people living in Kashmir)‘ ಎಂದು ಉಪಶೀರ್ಷಿಕೆ ಮುದ್ರಿಸಲಾಗಿದೆ.

ಪಾಕ್-ಭಾರತ ವಿದೇಶಾಂಗ ಸಚಿವರ ಭೇಟಿ ರದ್ದು

ವಿಶ್ವಸಂಸ್ಥೆ ಮಹಾಅಧಿವೇಶನದ ಸಂದರ್ಭದಲ್ಲಿ ಮುಂದಿನ ವಾರ ನ್ಯೂಯಾರ್ಕ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವರ ನಡುವಣ ಉದ್ದೇಶಿತ ಭೇಟಿಯನ್ನು, ಪ್ರಕಟಿಸಲಾದ ೨೪ ಗಂಟೆಯೊಳಗೇ ಭಾರತ ರದ್ದು ಮಾಡಿದೆ. “ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ಮೂವರು ಪೊಲೀಸರನ್ನು ಅಪಹರಿಸಿ ಹತ್ಯೆ ಮಾಡಿರುವುದನ್ನು ನೋಡಿದರೆ ಮಾತುಕತೆ ಪ್ರಸ್ತಾಪ ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಅವರ ತಂತ್ರ ಎನಿಸುತ್ತದೆ,” ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

2019ನೇ ಸಾಲಿನ ಜಿಡಿಪಿ ಮುನ್ನಂದಾಜು ಶೇ.7.8ಕ್ಕೆ ಏರಿಸಿದ ಫಿಡ್ಜ್ ರೇಟಿಂಗ್ ಏಜೆನ್ಸಿ

ಫಿಡ್ಜ್ ರೇಟಿಂಗ್ ಏಜೆನ್ಸಿ ಪ್ರಸಕ್ತ ವಿತ್ತೀಯ ವರ್ಷದ ಜಿಡಿಪಿ ಮುನ್ನಂದಾಜನ್ನು ಶೇ.7.8ಕ್ಕೆ ಏರಿಸಿದೆ. ಈ ಹಿಂದೆ ಶೇ.7.4ರಷ್ಟಾಗಲಿದೆ ಎಂದು ಅಂದಾಜಿಸಿತ್ತು. ಮೊದಲ ತ್ರೈಮಾಸಿಕದಲ್ಲಿ ನಿರೀಕ್ಷಿಸಿದ್ದಕ್ಕಿಂತಲೂ ಉತ್ತಮ ಬೆಳವಣಿಗೆ ದಾಖಲಾಗಿರುವುದು ಮುನ್ನಂದಾಜು ಹೆಚ್ಚಿಸಲು ಕಾರಣ ಎಂದು ಫಿಡ್ಜ್ ತಿಳಿಸಿದೆ. ಏಪ್ರಿಲ್- ಜೂನ್ ತ್ರೈಮಾಸಿಕದಲ್ಲಿ ಶೇ.7.7ರಷ್ಟು ಜಿಡಿಪಿ ಬೆಳವಣಿಗೆ ದಾಖಲಾಗಬಹುದು ಎಂದು ಫಿಡ್ಜ್ ಅಂದಾಜಿಸಿತ್ತು. ಆದರೆ, ಈ ಅವಧಿಯಲ್ಲಿ ಶೇ.8.2ರಷ್ಟು ಜಿಡಿಪಿ ಅಭಿವೃದ್ಧಿ ದಾಖಲಾಗಿರುವುದು ಮತ್ತು ಬರುವ ತ್ರೈಮಾಸಿಕಗಳಲ್ಲೂ ಈ ಅಭಿವೃದ್ಧಿ ಕಾಯ್ದುಕೊಳ್ಳುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಶೇ.7.8ಕ್ಕೆ ಏರಿಸಿರುವುದಾಗಿ ಫಿಡ್ಜ್ ತಿಳಿಸಿದೆ.

ಭಾರತದಲ್ಲಿ ೨೭೧ ಮಿಲಿಯನ್‌ ಜನರು ಬಡತನ ರೇಖೆಯಿಂದ ಹೊರಗೆ

ವಿಶ್ವಸಂಸ್ಥೆ ಬಿಡುಗಡೆ ಮಾಡಿದ 2018ರ ಜಾಗತಿಕ ಬಹು ಆಯಾಮದ ಬಡತನ ಸೂಚ್ಯಂಕದ ಪ್ರಕಾರ, 2005-06ರಿಂದ ಇಲ್ಲಿವರೆಗೆ ಭಾರತದ 270 ದಶಲಕ್ಷಕ್ಕೂ ಹೆಚ್ಚಿನ ಜನರು ಬಡತನ ರೇಖೆಯಿಂದ ಹೊರಗುಳಿದಿದ್ದಾರೆ. ಈ ಅವಧಿಯಲ್ಲಿ ಭಾರತದ ಬಡತನ ರೇಖೆ ಶೇ.54.7ರಿಂದ ಶೇ.27.5ಕ್ಕೆ ಇಳಿದಿದೆ ಎಂದು ವರದಿ ಹೇಳಿದೆ. ದಕ್ಷಿಣ ಏಷ್ಯಾದಲ್ಲಿ 546 ದಶಲಕ್ಷ ಜನರ (ಶೇ.31ರಷ್ಟು ಜನಸಂಖ್ಯೆ) ಬದುಕು ಕಷ್ಟವಾಗಿದೆ.

ಜಡೇಜಾ ಸ್ಪಿನ್ ಸುಳಿಗೆ ಸಿಲುಕಿದ ಬಾಂಗ್ಲಾದೇಶಕ್ಕೆ ಹಿನ್ನಡೆ

ರವೀಂದ್ರ ಜಡೇಜಾ (೨೯ಕ್ಕೆ ೪) ಸ್ಪಿನ್ ಜಾದೂಗೆ ಸಿಲುಕಿದ ಬಾಂಗ್ಲಾದೇಶ, ಏಷ್ಯಾಕಪ್ ಪಂದ್ಯಾವಳಿಯ ಮಹತ್ವಪೂರ್ಣ ಪಂದ್ಯದಲ್ಲಿ ತೀವ್ರ ಹಿನ್ನಡೆಗೆ ಸಿಲುಕಿತು. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ ೪ರ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ಶುರುವಿನಿಂದಲೇ ವಿಕೆಟ್ ಕಳೆದುಕೊಳ್ಳುತ್ತ ಸಾಗಿದ ಬಾಂಗ್ಲಾದೇಶ, ಯಾವ ಹಂತದಲ್ಲೂ ಚೇತರಿಕೆ ಕಾಣಲಿಲ್ಲ. ೩೫ ಓವರ್‌ಗಳಾದಾಗ ೭ ವಿಕೆಟ್‌ ನಷ್ಟಕ್ಕೆ ಕೇವಲ ೧೦೫ ರನ್ ಗಳಿಸಿದ್ದ ಬಾಂಗ್ಲಾದೇಶ ಅಲ್ಪಮೊತ್ತಕ್ಕೆ ಆಲೌಟ್ ಆಗುವ ಸುಳಿವು ನೀಡಿತ್ತು.

ಚೀನಾ ಓಪನ್ ಬ್ಯಾಡ್ಮಿಂಟನ್‌: ಸಿಂಧು ಸವಾಲಿಗೂ ತೆರೆ

ಚೀನಾ ಓಪನ್ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಸವಾಲಿಗೆ ತೆರೆಬಿದ್ದಿದೆ. ಇಂದು ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಕಿಡಾಂಬಿ ಶ್ರೀಕಾಂತ್, ಜಪಾನ್ ಆಟಗಾರ ಕೆಂಟೊ ಮೊಮೊಟಾ ವಿರುದ್ಧ ನೇರ ಗೇಮ್‌ಗಳಲ್ಲಿ ಪರಾಭವಗೊಂಡರೆ, ವನಿತೆಯರ ಸಿಂಗಲ್ಸ್ ವಿಭಾಗದ ಎಂಟರ ಘಟ್ಟದ ಪಂದ್ಯದಲ್ಲಿ ಸಿಂಧು ವಿಶ್ವದ ಆರನೇ ಶ್ರೇಯಾಂಕಿತೆ ಚೆನ್ ಯುಫಿ ವಿರುದ್ಧ ೧೧-೨೧, ೨೧-೧೧, ೧೫-೨೧ರಿಂದ ಸೋಲನುಭವಿಸಿದರು. ಮೊದಲ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದ ಸಿಂಧು, ಎರಡನೇ ಗೇಮ್‌ ಗೆಲ್ಲುವುದರೊಂದಿಗೆ ಪಂದ್ಯವನ್ನು ಜೀವಂತವಾಗಿಟ್ಟರೂ, ಮೂರನೇ ಗೇಮ್‌ನಲ್ಲಿ ಸಿಂಧು ಕುಸಿದರು. ಈ ಹಿಂದಿನ ಆರು ಮುಖಾಮುಖಿಯಲ್ಲಿ ೨೦ರ ಹರೆಯದ ಚೆನ್ ವಿರುದ್ಧ ಸಿಂಧು ನಾಲ್ಕರಲ್ಲಿ ಗೆಲುವು ಸಾಧಿಸಿದ್ದರಾದರೂ, ಇಂದು ಚೀನಿ ಆಟಗಾರ್ತಿಗೆ ಮಣಿದರು.

‘ದಿ ಐರನ್ ಲೇಡಿ’ಯಾಗಿ ಬರುತ್ತಿದೆ ಜಯಲಲಿತಾ ಬಯೋಪಿಕ್

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಜೀವನಚರಿತ್ರೆ 'ದಿ ಐರನ್ ಲೇಡಿ' ಚಿತ್ರದ ಶೀರ್ಷಿಕೆ ಪೋಸ್ಟರ್ ಅನಾವರಣಗೊಂಡಿದೆ. ಚಿತ್ರದಲ್ಲಿ ಜಯಲಲಿತಾ ಅವರ ಸಿನಿಮಾ ಹಾಗೂ ರಾಜಕೀಯ ಬದುಕನ್ನು ತೆರೆಗೆ ಅಳವಡಿಸುವ ಪ್ರಯತ್ನವಿದ್ದು, ಚಿತ್ರವನ್ನು ಪ್ರಿಯದರ್ಶಿನಿ ನಿರ್ದೇಶಿಸುತ್ತಿದ್ದಾರೆ. ‘ಐರನ್ ಲೇಡಿ’ ಚಿತ್ರ ತಮಿಳು ಸೇರಿದಂತೆ,ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ತಾಯಾರಾಗುತ್ತಿದ್ದು, ನಿರ್ದೇಶಕಿ ಪ್ರಿಯದರ್ಶಿನಿ ಈ ಮೂಲಕ ಇಡೀ ದೇಶಕ್ಕೆ ಜಯಲಲಿತಾರ ಬದುಕಿನ ಕತೆಯನ್ನು ಹೇಳ ಹೊರಟಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More