ಸರಸಂಘಚಾಲಕ ಭಾಗವತ್‌ ಬೋಧಿಸಿದ ಹಿಂದುತ್ವದ ಹಿಂದಿನ ಅಸಲಿಯತ್ತೇನು?

ಸರಸಂಘಚಾಲಕ ಮೋಹನ್‌ ಭಾಗವತ್‌ ಅವರ ಇತ್ತೀಚಿನ ಕೆಲವು ನಡೆಗಳು ಹತ್ತು ಹಲವು ಅರ್ಥ ಹೊಮ್ಮಿಸುತ್ತಿವೆ. ಗೋಳವಾಲ್ಕರ್‌ ಹಿಂದುತ್ವಕ್ಕೆ ಪರ್ಯಾಯವಾಗಿ ಭಾಗವತ್‌ ಮುಂದುಮಾಡಿರುವ ಹಿಂದುತ್ವಕ್ಕೆ ಸಂಘದೊಳಗೇ ಅಪಸ್ವರಗಳಿವೆ. ಅಷ್ಟಕ್ಕೂ ಇಂಥ ನಿರ್ಧಾರ ಮೂಡಿರುವುದೇಕೆ?

"ಹಿಂದುತ್ವ ಎನ್ನುವುದು ಸತ್ಯದ ಅನವರತ ಹುಡುಕಾಟ," ಎನ್ನುವ ಗಾಂಧೀಜಿಯವರ ಹೇಳಿಕೆಯನ್ನೇ ಆರೆಸ್ಸೆಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ಇತ್ತೀಚೆಗೆ ದೆಹಲಿಯಲ್ಲಿ ಮುಕ್ತಾಯಗೊಂಡ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂರು ದಿನಗಳ ವಿಶೇಷ ಉಪನ್ಯಾಸ ಮಾಲೆಯ ವೇಳೆ ಹೇಳಿದ್ದಾರೆ. ದೇಶದ ಶಕ್ತಿಕೇಂದ್ರವಾದ ದೆಹಲಿಯಲ್ಲಿ ನಡೆದ ಉಪನ್ಯಾಸ ಮಾಲಿಕೆ ಆರೆಸ್ಸೆಸ್‌ನ‌ ಐತಿಹಾಸಿಕ ‘ಯು ಟರ್ನ್‌’ಗೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲ, ಗುರೂಜಿ ಎಂದೇ ಇಂದಿಗೂ ಸಂಘದೊಳಗೆ ಕರೆಯಲ್ಪಡುವ ಎರಡನೆಯ ಸರಸಂಘಚಾಲಕ ಹಾಗೂ ಸ್ವಾತಂತ್ರ್ಯಪೂರ್ವ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸುಮಾರು ಮೂವತ್ತು ವರ್ಷಕಾಲ ಸಂಘದ ಚಿಂತನೆಯನ್ನು ರೂಪಿಸಿ, ಮುನ್ನಡೆಸಿದ ಗೋಳವಾಲ್ಕರ್ ಅವರ ಅನೇಕ ಚಿಂತನೆಗಳನ್ನು ಇಂದಿನ ಸನ್ನಿವೇಶದಲ್ಲಿ ಅನ್ವಯಿಸಲಾಗದು; ಅವು ಆ ಕಾಲಘಟ್ಟಕ್ಕೆ ಸೀಮಿತವಾದ ಆಲೋಚನೆಗಳು ಎಂದೂ ಭಾಗವತ್ ಹೇಳಿದ್ದಾರೆ.

ಮುಸ್ಲಿಮರಿಲ್ಲದ ಹಿಂದುತ್ವವಿಲ್ಲ ಎನ್ನುವ ಅರ್ಥದ, ಎಲ್ಲರನ್ನೂ ಒಳಗೊಳ್ಳುವ ಸಮ್ಮಿಳನದ ಭಾಷೆಯನ್ನು ಭಾಗವತ್‌ ಅವರು ಇದೇ ಉಪನ್ಯಾಸ ಮಾಲಿಕೆಯ ಎರಡನೆಯ ದಿನ ಪ್ರಯೋಗಿಸಿದ್ದರು. “ಹಿಂದೂ ರಾಷ್ಟ್ರ ಎಂದರೆ ಮುಸಲ್ಮಾನರಿಗೆ ಜಾಗವಿಲ್ಲ ಎಂದು ಅರ್ಥವಲ್ಲ. ಮುಸಲ್ಮಾನರು ಈ ದೇಶದಲ್ಲಿ ಬೇಡವೆಂದ ದಿನವೇ ಹಿಂದುತ್ವವೂ ಇರುವುದಿಲ್ಲ,” ಎಂದು ಹೇಳಿದ್ದರು. ಇದೇ ವೇಳೆ, ಹಿಂದುತ್ವ ಮತ್ತು ಭಾರತೀಯತೆಯನ್ನು ಏಕರೂಪಗೊಳಿಸುವ ಪ್ರಯತ್ನವನ್ನೂ ಅವರು ಮಾಡಿದ್ದರು. ಇದರೊಟ್ಟಿಗೇ, ಮೀಸಲಾತಿ ವಿಚಾರದಲ್ಲಿಯೂ, “ಸಂವಿಧಾನಬದ್ಧವಾದ ಮೀಸಲಾತಿ ಪರ ಸಂಘ ಎಂದಿಗೂ ಇದೆ. ಎಲ್ಲಿಯವರೆಗೆ ಮೀಸಲಾತಿ ಪಡೆಯುವವರು ಮೀಸಲಾತಿ ಅಗತ್ಯವಿಲ್ಲ ಎಂದು ಹೇಳುತ್ತಾರೋ ಅಲ್ಲಿಯವರೆಗೂ ಮೀಸಲಾತಿ ಇರಬೇಕು ಎಂದು ನಾವು ಹೇಳುತ್ತೇವೆ. ನಾವು ಮೀಸಲಾತಿ ವಿರೋಧಿಗಳಲ್ಲ. ಆದರೆ, ಮೀಸಲಾತಿ ಹೆಸರಿನಲ್ಲಿ ನಡೆಸುವ ರಾಜಕಾರಣದ ವಿರೋಧಿಗಳು,” ಎಂದೂ ಅವರು ಹೇಳಿದ್ದರು.

‌ವಾಸ್ತವದಲ್ಲಿ ಭಾಗವತ್‌ ಅವರ ಈ ವಿಚಾರಗಳನ್ನು ಸಂಘದ ಹಿರಿಯ ಕಾರ್ಯಕರ್ತರು, ಸುದೀರ್ಘ ಅವಧಿಯಿಂದ ಸಂಘದೊಟ್ಟಿಗೆ ಗುರುತಿಸಿಕೊಂಡಿರುವವರು ಎಷ್ಟು ಅನುಮೋದಿಸುತ್ತಾರೆ ಎನ್ನುವ ಪ್ರಶ್ನೆ ಏಳದೆ ಇರುವುದಿಲ್ಲ. ಸಂಘದ ಸಂಹಿತೆ ಎನ್ನುವ ರೀತಿಯಲ್ಲಿಯೇ ಪರಿಗಣಿಸಲ್ಪಟ್ಟಿದ್ದ ಗೋಳವಾಲ್ಕರ್‌ ಅವರ ‘ಬಂಚ್‌ ಆಫ್ ಥಾಟ್ಸ್‌’ ಪುಸ್ತಕದಲ್ಲಿರುವ ಅನೇಕ ಸಂಗತಿಗಳನ್ನು ಆಯಾ ಕಾಲ, ಸನ್ನಿವೇಶಕ್ಕೆ ಮಾತ್ರವೇ ಸೀಮಿತಗೊಳಿಸಿ ಬದಿಗೆ ಸರಿಸಬೇಕೆನ್ನುವ ಭಾಗವತ್ ಅವರ ಹೇಳಿಕೆ ಸಂಘದೊಳಗೆಯೇ ಅನೇಕರಿಗೆ ಕಸಿವಿಸಿ ಉಂಟುಮಾಡಿದೆ. ಇದೇ ಕಾರಣಕ್ಕೆ, “ಇದು ಗುರೂಜಿಯವರು ಕಟ್ಟಿದ ಸಂಘವಲ್ಲ, ಭಾಗವತ್‌ ಅವರ ಸಂಘ,” ಎನ್ನುವ ಟೀಕೆಗಳೂ ಸಂಘದೊಳಗೆ, ಹೊರಗೆ ಕೇಳಿಬಂದಿವೆ. ಅದೇನೇ ಇದ್ದರೂ, ‘ಏಕ ರಾಷ್ಟ್ರ, ಏಕ ಸಂಸ್ಕೃತಿ’ಯ ವಿಚಾರದಿಂದ ಆರೆಸ್ಸೆಸ್‌ ತನ್ನನ್ನು ತಾನು ಸ್ಪಷ್ಟವಾಗಿ ದೂರವಿರಿಸಿಕೊಳ್ಳುವ ಪ್ರಯತ್ನವನ್ನು ಮಾಡಿದೆ. ಹಿಂದುತ್ವ ಎಂದರೆ ಬಹುತ್ವ, ಹಿಂದುತ್ವ ಎಂದರೆ ಸತ್ಯದ ಹುಡುಕಾಟ ಎನ್ನುವುದನ್ನು ಮೋಹನ್‌ ಭಾಗವತ್‌ ಅವರು ಹೇಳುವ ಮೂಲಕ, ಆರೆಸ್ಸೆಸ್‌ ಏಕಸಂಸ್ಕೃತಿಯನ್ನು ಉಗ್ರವಾಗಿ ಪ್ರತಿಪಾದಿಸುವ ಮುಖೇನ ದೇಶದ ಬಹುಸಂಸ್ಕೃತಿಗೆ, ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರುತ್ತಿದೆ, ಅಸಹಿಷ್ಣುತೆ ಪಸರಿಸುತ್ತಿದೆ ಎನ್ನುವ ಅದರ ಮೇಲಿನ ದೊಡ್ಡ ಆರೋಪದಿಂದ ನುಣುಚಿಕೊಳ್ಳುವ ಪ್ರಯತ್ನವನ್ನೂ ಮಾಡಿದ್ದಾರೆ.

ಏಕಸಂಸ್ಕೃತಿ, ಏಕಧರ್ಮದ ಸುತ್ತ ಹೊಂದಿದ್ದ ನಿಷ್ಠೆಯನ್ನು, ಅಖಂಡ ಹಿಂದೂ ರಾಷ್ಟ್ರದ ಕಲ್ಪನೆಯಲ್ಲಿ ಹೊಂದಿದ್ದ ಆಸ್ಥೆಯನ್ನು ಆರೆಸ್ಸೆಸ್‌ ಯಾಕಾಗಿ ಬದಲಾಯಿಸಿತು, ಎಂದಿನಿಂದ ಬದಲಾಯಿಸಿತು ಎನ್ನುವ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಭಾಗವತ್‌ ಅವರು ಹೋಗಿಲ್ಲ. ಸಂಘದಲ್ಲಿನ ಈ ಬದಲಾವಣೆ ದೆಹಲಿಯಲ್ಲಿ ಧುತ್ತನೆ ಆದದ್ದೋ, ಅದರ ಹಿಂದೆ ಸುದೀರ್ಘವಾದ ‘ಹಿಂದುತ್ವದ ಹುಡುಕಾಟ’ವಿದೆಯೋ ಎನ್ನುವ ಪ್ರಶ್ನೆಗಳು ಈ ಕಾರಣಕ್ಕೆ ಇಂದು ಹೆಚ್ಚು ಮುಖ್ಯವಾಗಿವೆ. ಮೋಹನ್‌ ಭಾಗವತ್‌ ಅವರಾಗಲೀ, ಅವರು ಪ್ರತಿನಿಧಿಸುವ ಸಂಘವಾಗಲೀ, ಹಿಂದೂ ಧರ್ಮದ ಏಕೈಕ ವಾರಸುದಾರರಾಗಿರಲಿಲ್ಲ. ಹಾಗಿದ್ದರೂ, “ಒಂದೇ ಆಚಾರ, ಒಂದೇ ವಿಚಾರ, ಒಂದೇ ಸಂಸ್ಕೃತಿಯನ್ನು ಅನುಸರಿಸುವ ಜನರು ಒಂದು ಭೂಪ್ರದೇಶದಲ್ಲಿ ನೆಲೆಸುವುದೇ ರಾಷ್ಟ್ರ ಎನಿಸಿಕೊಳ್ಳುತ್ತದೆ,” ಎನ್ನುವ ಹೆಡಗೆವಾರ್‌ ಅವರ ಸಂದೇಶವನ್ನು ಸುದೀರ್ಘ ಕಾಲ ಆರೆಸ್ಸೆಸ್‌ ಪ್ರಚುರಪಡಿಸುತ್ತಲೇ ಬಂದಿತ್ತು. ಇಂದು ಮೋಹನ್‌ ಭಾಗವತ್‌ ಅವರು ಸಲೀಸಾಗಿ ಗಾಂಧೀಜಿಯವರ ಹಿಂದುತ್ವವನ್ನು ಒಪ್ಪಿದ್ದಂತೆ, ಸ್ವಾತಂತ್ರ್ಯಪೂರ್ವದಲ್ಲಿ ಹೆಡಗೇವಾರ್‌, ಸಾವರ್ಕರ್‌ ಅವರೂ ಒಪ್ಪಿದ್ದರೆ ಹಿಂದೂ ಮಹಾಸಭಾ, ರಾಷ್ಟ್ರೀಯ ಸ್ವಯಂ ಸೇವಕ ಸಂಘಗಳ ಹುಟ್ಟಿಗೆ ಕಾರಣವೇ ಇರುತ್ತಿರಲಿಲ್ಲ. ಅಷ್ಟೇ ಅಲ್ಲ, ಧರ್ಮದ ವಿಚಾರದಲ್ಲಿ ಇಷ್ಟೆಲ್ಲ ಅಸಹಿಷ್ಣುತೆ ಬೆಳೆದು ಕೋಮುದ್ವೇಷಗಳು ಉಲ್ಬಣಿಸಿ ಮಂದಿರ, ಮಸೀದಿಗಳ ಹೆಸರಿನಲ್ಲಿ ರಕ್ತಪಾತಗಳೂ ಜರುಗುತ್ತಿರಲಿಲ್ಲ.

ಈ ಹಿನ್ನೆಲೆಯಲ್ಲಿಯೇ, ಆರೆಸ್ಸೆಸ್‌ ಹೀಗೆ ಏಕಾಏಕಿ ತನ್ನ ಪಥವನ್ನು ಬದಲಿಸಿಕೊಳ್ಳಲು ಕಾರಣವಾದರೂ ಏನಿರಬಹುದು ಎನ್ನುವ ಪ್ರಶ್ನೆ ಮೂಡದೆ ಇರದು. ತಾನೊಂದು ಸಾಮಾಜಿಕ, ಸಾಂಸ್ಕೃತಿಕ ಸಂಘಟನೆ ಎಂದು ವ್ಯಾಖ್ಯಾನಿಸಿಕೊಳ್ಳುತ್ತಲೇ, ದೇಶದಲ್ಲಿ ಹಿಂದುತ್ವ ರಾಜಕಾರಣದ ಭೂಮಿಕೆ ಸಿದ್ಧಪಡಿಸಿದ ಸಂಘದಲ್ಲಿ ಇಂತಹದ್ದೊಂದು ಬದಲಾವಣೆ ಕಳೆದೊಂದು ದಶಕದ ಅವಧಿಯಿಂದಲೇ ಆರಂಭವಾಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆ, ಸಂಘವು ೨೦೦೮ರಲ್ಲಿ ಹೊರತಂದ ಗೋಳವಾಲ್ಕರ್‌ ಅವರ ಭಾಷಣ ಹಾಗೂ ಬದುಕಿನ ಕುರಿತಾದ ಹನ್ನೆರಡು ಸಂಪುಟಗಳು. ಇದರಲ್ಲಿ ಸಂಘವು‌‌ ಪ್ರಜ್ಞಾಪೂರ್ವಕವಾಗಿಯೇ ಗೋಳವಾಲ್ಕರ್‌ ಅವರ ಸಾಕಷ್ಟು ವಿವಾದಾತ್ಮಕ ಬರಹ, ಭಾಷಣಗಳನ್ನು ಕೈಬಿಟ್ಟಿತು. ಧಾರ್ಮಿಕ ವಿಭಜಕತೆ, ಉಗ್ರ ಹಿಂದುತ್ವ ಪ್ರತಿಪಾದನೆಯ ಅಂಶಗಳುಳ್ಳ ಗೋಳವಾಲ್ಕರ್ ಅವರ ಬರಹ, ಭಾಷಣಗಳನ್ನು‌ ಈ ಸಂಪುಟಗಳಿಂದ ಹೊರಗಿಡಲಾಯಿತು. ಸಂಘದ ಒಳಗೆ ಹಲವು ವರ್ಷಗಳ ಕಾಲ ಈ ವಿಚಾರವಾಗಿ ನಡೆದ ಚಿಂತನ ಮಂಥನದ ಫಲವಾಗಿ ಇಂತಹದ್ದೊಂದು ನಿರ್ಧಾರಕ್ಕೆ ಬರಲಾಯಿತು ಎನ್ನುವುದು ಸಂಘದೊಳಗಿನ ಮುಖಂಡರ ಅಭಿಪ್ರಾಯ. ಈ ಸಂಪುಟ ಹೊರಬಂದ ಕಾಲಘಟ್ಟವನ್ನು ಇಲ್ಲಿ ಗಮನಿಸಬೇಕು. ಬಿಜೆಪಿಯು ೨೦೦೪ರ ಲೋಕಸಭಾ ಚುನಾವಣೆಯ ನಂತರ ಮುಂದಿನ ಹತ್ತು ವರ್ಷಗಳ ಕಾಲ ಚುನಾವಣೆಯಲ್ಲಿ ಹಿನ್ನಡೆಯನ್ನು ಅನುಭವಿಸಿದ್ದೇ ಅಲ್ಲದೆ, ರಾಜಕೀಯವಾಗಿ ತನ್ನನ್ನು ತಾನು ಹೇಗೆ ಪುನರ್ರೂಪಿಸಿಕೊಳ್ಳಬೇಕು, ತನ್ನ ಚುನಾವಣಾ ಹಿನ್ನೆಡೆಗೆ ಕಾರಣವಾಗಿರುವ ಅಂಶಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎನ್ನುವತ್ತ ಗಮನ ಹರಿಸಿತ್ತು. ಇತ್ತ, ಬಿಜೆಪಿಯ ಮೂಲಮಾತೃಕೆ ಎಂದೇ ಗುರುತಿಸಲಾಗುವ ಸಂಘದಲ್ಲಿ ಈ ಕುರಿತಾಗಿ ನಡೆದ ಚಿಂತನ ಮಂಥನಗಳೇ ಮುಂದೆ ಬಿಜೆಪಿಯು ೨೦೧೪ರ ಚುನಾವಣೆಯಲ್ಲಿ ಮಂದಿರ, ಹಿಂದುತ್ವದಂಥ ವಿಷಯಗಳಿಂದ ಗಮನವನ್ನು ಬೇರೆಡೆಗೆ ಸರಿಸಿ, ವಿಕಾಸಶೀಲವೂ, ಭ್ರಷ್ಟಾಚಾರ-ಕಾಳಧನ ಮುಕ್ತವೂ ಆದ ರಾಷ್ಟ್ರ ನಿರ್ಮಾಣದಂತಹ ವಿಷಯಗಳನ್ನು ಪ್ರಸ್ತಾಪಿಸಲು ಕಾರಣವಾಗಿತ್ತು. ಗೋಳವಾಲ್ಕರ್‌ ಅವರ ಆಶಯಗಳನ್ನು ಕನಿಷ್ಠಪಕ್ಷ ರಾಜಕೀಯವಾಗಿಯಾದರೂ ಬಿಡಿಸಿಕೊಳ್ಳದೆ ಹೋದರೆ ಅಧಿಕಾರ ಎನ್ನುವುದು ಮರೀಚಿಕೆಯಾಗಲಿದೆ ಎನ್ನುವ ಅಭಿಪ್ರಾಯ ಆ ಸಂದರ್ಭದಲ್ಲಿ ಸಂಘ ಹಾಗೂ ಪಕ್ಷಗಳೆರಡರಲ್ಲೂ ಮೂಡಿತ್ತು. ಆದರೆ, ಇದೇ ವೇಳೆ, ತನ್ನನ್ನು ತಾನು ‘ಬಹುತ್ವ’ದತ್ತ ಹೊರಳಿದ ಸಂಘಟನೆ ಎನ್ನುವುದನ್ನು ಬಿಜೆಪಿಯಾಗಲೀ, ಸಂಘವಾಗಲೀ ಅಂದು ಘಂಟಾಘೋಷವಾಗಿ ಹೇಳಿಕೊಳ್ಳಲು ಬಯಸಲಿಲ್ಲ. ಮುಸಲ್ಮಾನರನ್ನು ಅಪ್ಪಿಕೊಳ್ಳುವ ಪ್ರಯತ್ನವನ್ನೂ ಮಾಡಲು ಹೋಗಲಿಲ್ಲ. ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಒಂದು ಸಂಗತಿ ಇದೆ; ಒಂದು ವೇಳೆ, ಗೋಳವಾಲ್ಕರ್‌ ಅವರ ಉಗ್ರ ಹಿಂದೂ ಚಿಂತನೆಗಳಿಂದ ಹೊರಬರುವ ಪ್ರಯತ್ನವನ್ನು ಸಂಘ ಹಾಗೂ ಬಿಜೆಪಿ ಪ್ರಾಮಾಣಿಕವಾಗಿ ಮಾಡಿದ್ದರೆ, ಮೋಹನ್‌ ಭಾಗವತ್‌ ಅವರು ಈಗ ನೀಡಿರುವ ಹೇಳಿಕೆಗಳೇನಿವೆ, ಅಂತಹ ಹೇಳಿಕೆಗಳು ೨೦೧೪ರ ಚುನಾವಣೆಗೂ ಮುನ್ನವೇ ಬಹಿರಂಗವಾಗಿ ಹೊಮ್ಮಬೇಕಿತ್ತು. ಇಂದು ಮುಸಲ್ಮಾನರಿಲ್ಲದ ಹಿಂದುತ್ವವಿಲ್ಲ ಎನ್ನುವ ಮಾತುಗಳನ್ನಾಡುವ ಸಂಘ, ಅಂದು ತನ್ನ ಸಂಘಟನೆಯ ಮೂಲದಿಂದಲೇ ಪ್ರಧಾನಿ ಹುದ್ದೆಯ ಆಕಾಂಕ್ಷಿಯಾಗಿ ರೂಪುಗೊಂಡ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಬಾಯಿಂದ ಗೋಧ್ರೋತ್ತರ ಗಲಭೆಗಳ ಕುರಿತಾಗಿ ಕ್ಷಮೆಯನ್ನಾದರೂ ಕೇಳಿಸಬೇಕಿತ್ತು. ಆದರೆ, ಇದಾವುದೂ ಆಗಲಿಲ್ಲವೇಕೆ?

ಇದನ್ನೂ ಓದಿ : ಆರ್‌ಎಸ್‌ಎಸ್ ನಾಯಕ ಭಾಗವತ್‌ ಅವರ ‘ಉದಾರವಾದಿ’ ಮಾತುಗಳ ಸಂದೇಶವೇನು?

ಬಹುಶಃ ಹಾಗೇನಾದರೂ ಮಾಡಿದ್ದರೆ, ಅದು ತನ್ನ ಮತಬುಟ್ಟಿಯನ್ನು ಛಿದ್ರವಾಗಿಸಿಕೊಳ್ಳುತ್ತಿತ್ತು. ಉಗ್ರ ಹಿಂದುತ್ವವಾದವನ್ನು ಆರಾಧಿಸುವ, ಮುಸಲ್ಮಾನ ವಿರೋಧಿ ಭಾವನೆಯಲ್ಲಿ ಕುದಿದು ರೂಪುಗೊಂಡಂತಹ, ‘ರಥಯಾತ್ರೆ’, ‘ರಾಮಮಂದಿರ’, ‘ಕಮಂಡಲ’ದ ಸುತ್ತಲೇ ಬೆಳೆದು ಬಂದ, ಕೇವಲ ಬಿಜೆಪಿಗೆ ಮಾತ್ರವೇ ಮತ ನೀಡಲು ಇಚ್ಛಿಸುವ ‘ಹಿಂದೂ ಮತೀಯ ಭಾವನೆ’ ಹೊಂದಿರುವ ತನ್ನ ಮತವರ್ಗಕ್ಕೆ ದ್ರೋಹ ಎಸಗುತ್ತಿತ್ತು! ಭಾಗವತ್ ಅವರು ಈಗ ಬಹಿರಂಗವಾಗಿ ‘ಬಹುತ್ವವೇ ಹಿಂದುತ್ವ’ ಎನ್ನುವ ಅರ್ಥದ ಮಾತನಾಡುತ್ತಿರಬಹುದು, ಆದರೆ, ಇಷ್ಟು ಸುದೀರ್ಘ ಅವಧಿವರೆಗೆ ಗೋಳವಾಲ್ಕರ್‌ ಹೇಳಿರುವ ಹಿಂದುತ್ವದ ವ್ಯಾಖ್ಯಾನಗಳಿಗೆ ಅನುಗುಣವಾಗಿ ಮತಾಂಧತೆಯಲ್ಲಿ ರೂಪುಗೊಂಡ ಎರಡು-ಮೂರು ತಲೆಮಾರುಗಳಿಗೆ ತಮಗಾದ ಜ್ಞಾನೋದಯವನ್ನೇ ಭಾಗವತ್‌ ಮಾಡಿಸಬಲ್ಲರೇ? ಬಹುತ್ವವೇ ಹಿಂದುತ್ವ ಎಂದಾದರೆ ಹಿಂದುತ್ವ ಎನ್ನುವುದು ಜಾತ್ಯತೀತತೆಯನ್ನು ಎತ್ತಿಹಿಡಿಯುತ್ತದೆ. ಹಾಗಾಗಿ, ಮತೀಯ ಆಲೋಚನೆಗಳಿಂದ ತನ್ನ ಕಾರ್ಯಕರ್ತರನ್ನು ಹೊರತರುವ ಗುರುತರ ಜವಾಬ್ದಾರಿಯೂ ಸಂಘದ ಹೆಗಲಿಗೆ ಬೀಳುತ್ತದೆ. ಅದೇ ರೀತಿ, ದೇಶಾದ್ಯಂತ ಜಾತ್ಯತೀತತೆ ಪಸರಿಸುವ, ಸಂವಿಧಾನದ ಆಶಯಗಳಿಗೆ ಬದ್ಧವಾಗಿರುವ ಪ್ರಚಾರಾಂದೋಲನವನ್ನು ಕೈಗೊಳ್ಳುವಂತೆ ತನ್ನ ಕಾರ್ಯಕರ್ತರಿಗೆ ಹೇಳಬೇಕಾಗುತ್ತದೆ. ಇದೆಲ್ಲವನ್ನೂ ಸಂಘ ಮಾಡಲಿದೆಯೇ? ಅಸಲಿಗೆ, ಇದೆಲ್ಲವನ್ನೂ ಚರ್ಚಿಸಲು ಅಗತ್ಯವಾದ ಆಂತರಿಕ ಪ್ರಜಾಪ್ರಭುತ್ವವನ್ನು ಸಂಘ ಹೊಂದಿದೆಯೇ? ಮೇಲಿನ ಈ ಪ್ರಶ್ನೆಗಳಿಗೆಲ್ಲ ಖಚಿತ, ತಾರ್ಕಿಕ ಉತ್ತರಗಳನ್ನು ಮುಂದಿನ ದಿನಗಳಲ್ಲಿ ಸಂಘ ನೀಡದೆಹೋದಲ್ಲಿ ಅದು ಈಗ ಧಿಗ್ಗನೆ ಹಿಂದುತ್ವದಿಂದ ಬಹುತ್ವದೆಡೆಗೆ ಪಡೆದಿರುವ ರೂಪಾಂತರವೇನಿದೆ, ಅದು ಯಾವುದೇ ನೈಜ ಪ್ರಕ್ರಿಯೆ, ಪರಿವರ್ತನೆಗಳಿಗೆ ಒಳಪಡದ ಒಂದು ಅವಕಾಶವಾದಿ ಘಟನೆಯಾಗಿ ಮಾತ್ರವೇ ಇತಿಹಾಸದಲ್ಲಿ ದಾಖಲಾಗುತ್ತದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More