ಟ್ವಿಟರ್ ಸ್ಟೇಟ್ | ಮೋದಿಯವರಿಗೆ ಭ್ರಷ್ಟ ಬಣ್ಣ ಬಳಿದ ಹೊಲಾಂದ್ ಮಾತಿನ ಬಗ್ಗೆ ಬಿಸಿ ಚರ್ಚೆ

ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಹೊಲಾಂದ್ ಅವರು ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿ ನೀಡಿರುವ ಹೇಳಿಕೆಯಿಂದ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಭರವಸೆ ಕೊಟ್ಟಿದ್ದ ನರೇಂದ್ರ ಮೋದಿ ವರ್ಚಸ್ಸಿಗೆ ಅತಿ ಹೆಚ್ಚು ನಷ್ಟವಾಗಿದೆ. ಟ್ವಿಟರ್‌ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆಯೇ ಹೆಚ್ಚು ಚರ್ಚೆಯಾಗಿದೆ

“ಅನಿಲ್ ಅಂಬಾನಿಯವರ ಕಂಪನಿ ಜೊತೆಗೆ ರಫೇಲ್ ಒಪ್ಪಂದಕ್ಕೆ ಸಹಿ ಮಾಡಿರುವ ವಿಚಾರದಲ್ಲಿ ತಮ್ಮ ಆಯ್ಕೆಯೇನೂ ಇರಲಿಲ್ಲ, ಭಾರತ ಹೇಳಿದ ಸಂಸ್ಥೆಯ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಅನಿವಾರ್ಯತೆ ಇತ್ತು,” ಎಂದು ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಹೊಲಾಂದ್ ಅವರು ನೀಡಿರುವ ಹೇಳಿಕೆಯಿಂದ, ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಮೇಲೆ ಗುರುತರವಾದ ಭ್ರಷ್ಟಾಚಾರದ ಆರೋಪ ಬಿದ್ದಂತಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಟ್ವಿಟರ್‌ನಲ್ಲೂ ಹೊಲಾಂದ್ ಹೇಳಿಕೆಯ ಬಗ್ಗೆ ಬಿಸಿಬಿಸಿ ಚರ್ಚೆ ಆಗುತ್ತಿದೆ.

ಮೊದಲಿಗೆ ‘ಲಿ ಮೊಂದೆ’ ಪತ್ರಿಕೆಯ ದಕ್ಷಿಣ ಏಷ್ಯಾದ ವರದಿಗಾರ ಜ್ಯುಲಿಯನ್ ಬೊಯುಶ್ಯು ಅವರು ಹೊಲಾಂದ್ ಅವರ ಸಂದರ್ಶನದ ವಿವರವನ್ನು ಟ್ವೀಟ್ ಮಾಡಿದ್ದರು. “ಅನಿಲ್ ಅಂಬಾನಿ ಸಂಸ್ಥೆಯನ್ನು ರಫೇಲ್ ಒಪ್ಪಂದಕ್ಕಾಗಿ ಡಸಾಲ್ಟ್ ಆರಿಸಿಲ್ಲ ಎಂದು ಹೊಲಾಂದ್ ಹೇಳಿದ್ದಾರೆ,” ಎಂಬುದಾಗಿ ಜ್ಯುಲಿಯನ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ನಂತರ ಭಾರತದ ಹಲವು ಪತ್ರಿಕೆಗಳು ಹೊಲಾಂದ್ ಅವರ ಇಂಗ್ಲಿಷ್ ಸಂದರ್ಶನದ ಅನುವಾದಗಳನ್ನು ಪ್ರಕಟಿಸಿದವು. ಆದರೆ, ಒಟ್ಟಾರೆ ಪ್ರಕರಣದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನೀಡುವುದಾಗಿ ಹೇಳುತ್ತಿದ್ದ ನರೇಂದ್ರ ಮೋದಿಯವರ ವರ್ಚಸ್ಸಿಗೆ ಅತಿ ಹೆಚ್ಚು ನಷ್ಟವಾಗಿದೆ. ಟ್ವಿಟರ್ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆಯೇ ಹೆಚ್ಚು ಚರ್ಚೆಯಾಗಿದೆ.

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು ಎರಡು ಟ್ವೀಟ್‍ಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ‘ದೇಶದ ಕಾವಲುಗಾರ ಕಳ್ಳ’ ಎಂಬ ಗಂಭೀರ ಆರೋಪ ಹೊರಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿಯೂ ಮಾತನಾಡಿದ ರಾಹುಲ್ ಗಾಂಧಿ, “ದೇಶದ ಪ್ರಧಾನಿ ಭ್ರಷ್ಟ ಎನ್ನುವುದು ನಮಗೆ ಸಂಪೂರ್ಣ ಖಚಿತವಾಗಿದೆ. ಭಾರತದ ಜನರ ಮನದಲ್ಲಿ ಈಗ ದೇಶದ ಕಾವಲುಗಾರ ಕಳ್ಳ ಎನ್ನುವ ವಿಚಾರ ಮನದಟ್ಟಾಗಿದೆ,” ಎಂದು ಹೇಳಿದ್ದಾರೆ. “ಪ್ರಧಾನಿ ನರೇಂದ್ರ ಮೋದಿಯವರು ವೈಯಕ್ತಿಕವಾಗಿ ಈ ಒಪ್ಪಂದದ ವ್ಯವಹಾರವನ್ನು ಚರ್ಚಿಸಿ ಸಹಿ ಹಾಕಿರುವ ಕಾರಣದಿಂದ ಒಟ್ಟಾರೆ ಪ್ರಕರಣದಲ್ಲಿ ರಕ್ಷಣಾ ಸಚಿವರನ್ನು ದೂರುವ ಹಾಗಿಲ್ಲ. ಪ್ರಧಾನಮಂತ್ರಿಯೇ ರಫೇಲ್ ಒಪ್ಪಂದದಲ್ಲಿ ನಡೆದ ಸಂಪೂರ್ಣ ಭ್ರಷ್ಟಾಚಾರಕ್ಕೆ ಹೊಣೆಗಾರರು,” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ನನ್ನ ಪ್ರಧಾನಮಂತ್ರಿ ಕಳ್ಳ (#Mera_PM_Chor_Hai) ಎನ್ನುವ ಹ್ಯಾಷ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ. ಕಾಂಗ್ರೆಸ್ ಪರ ಟ್ವೀಟಿಗರು #RafaleModiKaKhel ಎನ್ನುವ ಹ್ಯಾಷ್‌ಟ್ಯಾಗ್ ಟ್ರೆಂಡ್ ಮಾಡುತ್ತಿದ್ದಾರೆ. ಇದಕ್ಕೆ ಉತ್ತರವಾಗಿ ಬಿಜೆಪಿ ಟ್ವೀಟಿಗರು #RahulKaPuraKhandanChor ಎನ್ನುವ, ವೈಯಕ್ತಿಕವಾಗಿ ರಾಹುಲ್ ಗಾಂಧಿ ಅವರನ್ನು ಟೀಕಿಸುವ ಹ್ಯಾಷ್‌ಟ್ಯಾಗ್‌ ಅನ್ನು ಟ್ರೆಂಡ್ ಮಾಡುತ್ತಿದ್ದಾರೆ.

ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಭ್ರಷ್ಟಾಚಾರದ ಆರೋಪವನ್ನು ತಳ್ಳಿಹಾಕುವ ಸ್ಥಿತಿಯಲ್ಲಿ ಇಲ್ಲ ಎಂದು ಇತರ ಟ್ವೀಟಿಗರೂ ಅಭಿಪ್ರಾಯಪಡುತ್ತಿದ್ದಾರೆ. “ನರೇಂದ್ರ ಮೋದಿಯವರು ಭ್ರಷ್ಟರಲ್ಲ ಎಂದು ನಂಬಿದವರು ಮೂರ್ಖರು. ಅವರು ಅತಿದೊಡ್ಡ ಪ್ರಮಾಣದ ಬಂಡವಾಳಶಾಹಿ ಪರವಾಗಿರುವ ಆಡಳಿತಗಾರ,” ಎಂದು ಪತ್ರಕರ್ತ ನಿಖಿಲ್ ವಾಘ್ಲೆ ಅಭಿಪ್ರಾಯಪಟ್ಟಿದ್ದಾರೆ. “ಹಿಂದೆ ಭ್ರಷ್ಟಾಚಾರ ಮುಕ್ತ ಭಾರತ ಎಂದು ಹೇಳುತ್ತಿದ್ದ ಬಿಜೆಪಿ ಪರ ಟ್ವಿಟರ್ ಬೆಂಬಲಿಗರು ಈಗ ‘ಭ್ರಷ್ಟಾಚಾರ ಎನ್ನುವುದು ಸಾಮಾನ್ಯ ವಿಚಾರ’ ಎಂದು ಹೇಳಲಾರಂಭಿಸಿದ್ದಾರೆ,” ಎಂದು ಪತ್ರಕರ್ತೆ ವೀಣಾ ವೇಣುಗೋಪಾಲ್ ಟ್ವೀಟ್ ಮಾಡಿದ್ದಾರೆ. ಬಿಜೆಪಿಯ ಸಂಸದರಾಗಿರುವ ಶತ್ರುಘ್ನ ಸಿನ್ಹಾ ಅವರು, “ಈಗ ನಾವು ಏನು ಹೇಳಬೇಕು ಸರ್‌ಜೀ...? ಈಗಲಾದರೂ ಈ ವಿಚಾರದಲ್ಲಿ ನಾವು ವಾಸ್ತವವನ್ನು ಮುಂದಿಡಬೇಕಿದೆ. ಒಪ್ಪಂದದ ನಿಯಮಗಳು ಮತ್ತು ವಿವರಗಳನ್ನು ಸಾರ್ವಜನಿಕರ ಮುಂದಿಡಬೇಕು. ಬೆಲೆ ಮೂರು ಪಟ್ಟು ಏರಿರುವುದು ನಿಜವೇ ಎನ್ನುವುದನ್ನು ತಿಳಿಸಬೇಕು,” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಸಂಕಲನ | ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತ ವರದಿ-ವಿಶ್ಲೇಷಣೆಗಳು

ಆದರೆ, ಹೊಲಾಂದ್ ಅವರ ಮಾತುಗಳನ್ನು ನಂಬಬೇಕೇ, ಬೇಡವೇ ಎನ್ನುವ ಚರ್ಚೆಯೂ ಟ್ವಿಟರ್‌ನಲ್ಲಿ ನಡೆದಿದೆ. ಪತ್ರಕರ್ತ ಶಬೀರ್ ಅಹಮದ್ ಅವರು ಟ್ವೀಟ್ ಮಾಡಿ, “ಫ್ರಾನ್ಸ್‌ನ ಮಾಜಿ ಅಧ್ಯಕ್ಷರು ವಿಷಯವನ್ನು ಬಹಿರಂಗಪಡಿಸಿದ ಕಾರಣ ನಂಬಲೇಬೇಕಾ‍ಗುತ್ತದೆ. ಬೋಫೋರ್ಸ್ ಬಗ್ಗೆ ರಹಸ್ಯ ಬಹಿರಂಗಪಡಿಸಿದ್ದು ಸ್ವೀಡನ್ ರೇಡಿಯೋ. ಈಗ ರಫೇಲ್ ಬಗ್ಗೆ ಫ್ರೆಂಚ್ ಮಾಧ್ಯಮ ಭ್ರಷ್ಟಾಚಾರವನ್ನು ಹೊರಗೆಡವಿದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ. ರಫೇಲ್ ಒಪ್ಪಂದದ ಕಾರಣದಿಂದ ಬಿಜೆಪಿ ತನ್ನ ‘ಭ್ರಷ್ಟಾಚಾರ’ದ ಅಸ್ತ್ರವನ್ನು ಕಳೆದುಕೊಂಡಿದೆ. ವಿರೋಧ ಪಕ್ಷಗಳು ಬಿಜೆಪಿಯ ಅಸ್ತ್ರವನ್ನೇ ಅದರ ಕಡೆಗೆ ಎಸೆಯುತ್ತಿವೆ ಎಂದು ಪತ್ರಕರ್ತ ಸುನೀಲ್ ಜೈನ್ ಅಭಿಪ್ರಾಯಪಟ್ಟಿದ್ದಾರೆ. ಪತ್ರಕರ್ತ ಶಿವಂ ವಿಜ್ ಅವರು ರಫೇಲ್ ಒಪ್ಪಂದದ ಬಗ್ಗೆ ಭಾರತದಲ್ಲಿ ವಿಚಾರಣೆಯಾಗಬೇಕು ಎಂದು ಹೇಳಿದ್ದಾರೆ.

ಈ ನಡುವೆ, ಬಿಜೆಪಿ ಪರ ಮಾಧ್ಯಮಗಳು ಮತ್ತು ಕೇಂದ್ರ ಸರ್ಕಾರದ ಸಚಿವರು ತರಾತುರಿಯಲ್ಲಿ ಸ್ಪಷ್ಟನೆ ಕೊಡುತ್ತಿದ್ದಾರೆ. ಫ್ರಾನ್ಸ್ ಸರ್ಕಾರ ಮತ್ತು ಡಸಾಲ್ಟ್ ಸಂಸ್ಥೆ ಈ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆಗಳನ್ನು ಬಿಡುಗಡೆ ಮಾಡಿದ್ದು, ರಫೇಲ್ ಒಪ್ಪಂದದಲ್ಲಿ ಭಾರತೀಯ ಸಂಸ್ಥೆಯನ್ನು ಆರಿಸುವ ವಿಚಾರದಲ್ಲಿ ಫ್ರೆಂಚ್ ಸಂಸ್ಥೆಗಳಿಗೆ ಸಂಪೂರ್ಣ ಸ್ವಾತಂತ್ರ್ಯವಿತ್ತು ಎಂದು ಹೇಳಿಕೆ ನೀಡಿವೆ. ಆದರೆ, ಹೊಲಾಂದ್ ಅವರ ಹೇಳಿಕೆ ತಪ್ಪು ಎಂದು ಈ ಪತ್ರಿಕಾ ಹೇಳಿಕೆಗಳು ನಿರಾಕರಿಸಿಲ್ಲ. “ಹೊಲಾಂದ್ ಅವರು ಭಾರತ ಸರ್ಕಾರ ಅನಿಲ್ ಅಂಬಾನಿ ಹೆಸರನ್ನು ಪ್ರಸ್ತಾಪಿಸಿತ್ತು ಎಂದು ಹೇಳಿದ್ದಾರೆ. ಫ್ರೆಂಚ್ ಸರ್ಕಾರ ಅಥವಾ ಡಸಾಲ್ಟ್ ಈ ವಿಚಾರವನ್ನು ಅಲ್ಲಗಳೆದಿಲ್ಲ. ಹಾಗಿರುವಾಗ ಭಾರತ ಸರ್ಕಾರ ಈ ವಿಚಾರದಲ್ಲಿ ತನ್ನದು ತಪ್ಪಿಲ್ಲ ಎಂದು ಹೇಳುವುದು ಹೇಗೆ?” ಎಂದು ಸುಪ್ರೀಂ ಕೋರ್ಟ್ ನ್ಯಾಯವಾದಿ ಸಿದ್ ಟ್ವೀಟ್ ಮಾಡಿದ್ದಾರೆ.

ಈ ವಿಚಾರವಾಗಿ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಏಕಾಂಗಿ ಹೋರಾಟ ಮಾಡಿ ಯಶಸ್ವಿಯಾಗಿದ್ದಾರೆ ಎಂದು ಪತ್ರಕರ್ತೆ ರೋಹಿಣಿ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಸರ್ಕಾರವನ್ನು ‘ಭ್ರಷ್ಟ ಸರ್ಕಾರ’ ಎಂದು ಸಾಬೀತು ಮಾಡುವಲ್ಲಿ ರಾಹುಲ್ ಗಾಂಧಿ ಸಂಪೂರ್ಣ ಕಾರ್ಯಕಾರಿಣಿಯನ್ನು ಬಳಸಿಕೊಂಡಿದ್ದಾರೆ. ಕಾಂಗ್ರೆಸ್ ಮುಖಂಡರು ದೇಶಾದ್ಯಂತ ಈ ವಿಚಾರವಾಗಿ ಹಲವು ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದಾರೆ. ಆದರೆ ಮಾಧ್ಯಮಗಳು ಬಹುತೇಕ ಈ ಬಗ್ಗೆ ಮೌನ ವಹಿಸಿದ್ದವು. ಭಾರತೀಯ ರಕ್ಷಣಾ ವಿಚಾರಗಳನ್ನು ವರದಿ ಮಾಡುವ ಪತ್ರಕರ್ತರು ಈ ಬಗ್ಗೆ ಮಾತೇ ಎತ್ತಿಲ್ಲ. ಹಾಗಿದ್ದರೂ ಕಾಂಗ್ರೆಸ್ ಕೆಲವೇ ಪತ್ರಿಕೆಗಳ ನೆರವಿನಿಂದ ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಸುಳ್ಳುಗಳನ್ನು ಬಹಿರಂಗಪಡಿಸಿದೆ ಎಂದು ಹಲವು ಪತ್ರಕರ್ತರು ಟ್ವಿಟರ್‌ನಲ್ಲಿ ಚರ್ಚಿಸಿದ್ದಾರೆ. “ಹೊಲಾಂದ್ ಅವರ ಹೇಳಿಕೆ ಹೊರಬಂದ ನಂತರ ‘ಟೈಮ್ಸ್‌ ನೌ’ನಂತಹ ಮೋದಿ ಪರ ಸುದ್ದಿವಾಹಿನಿಗಳು ಆ ಬಗ್ಗೆ ಚರ್ಚಿಸಲೇಬೇಕಾದ ಅನಿವಾರ್ಯತೆ ಎದುರಿಸಿವೆ. ಆದರೆ, ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಅವರ ನೇತೃತ್ವದ ಸುದ್ದಿವಾಹಿನಿ ‘ರಿಪಬ್ಲಿಕ್‌’ ಸಂಪಾದಕ ಅರ್ನಬ್ ಗೋಸ್ವಾಮಿ ರಫೇಲ್ ಒಪ್ಪಂದದ ಬಗ್ಗೆ ಮಾತೂ ಎತ್ತಲಿಲ್ಲ,” ಎಂದು ‘ಜನತಾ ಕಿ ರಿಪೋರ್ಟರ್’ ಜಾಲತಾಣ ವರದಿ ಮಾಡಿದೆ. ಈ ನಡುವೆ, ಕೇಂದ್ರ ಸರ್ಕಾರ ರಫೇಲ್ ಒಪ್ಪಂದದಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಮತ್ತೊಂದು ದೊಡ್ಡ ಸುದ್ದಿಯ ಅನ್ವೇಷಣೆಯಲ್ಲಿದೆ ಎಂದು ಕೆಲವು ಪತ್ರಕರ್ತರು ತಮಾಷೆ ಮಾಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More