ಪಠ್ಯಪುಸ್ತಕ ವಿಳಂಬ; ಅಭಿಮಾನಿ ಪ್ರಕಾಶನ ಸೇರಿ ೨೪ ಮುದ್ರಣಾಲಯ ಕಪ್ಪುಪಟ್ಟಿಗೆ?

ಶೈಕ್ಷಣಿಕ ವರ್ಷ ಆರಂಭವಾಗಿ ೪ ತಿಂಗಳು ಕಳೆದರೂ ಶಾಲೆಗಳಿಗೆ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕ ಸರಬರಾಜಾಗಿಲ್ಲ. ವಿಳಂಬ ಮಾಡಿರುವ ಖಾಸಗಿ ಮುದ್ರಣಾಲಯಗಳ ವಿರುದ್ಧ ಇಲಾಖೆ ಇದೇ ಮೊದಲ ಬಾರಿಗೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಎಚ್ಚರಿಕೆಯನ್ನು ರವಾನಿಸಿದೆ

ರಾಜ್ಯದ ಶಾಲೆಗಳಿಗೆ ಮೇ ತಿಂಗಳಾಂತ್ಯಕ್ಕೆ ಪಠ್ಯಪುಸ್ತಕಗಳ ಸರಬರಾಜು ಪೂರ್ಣಗೊಳ್ಳಬೇಕಿತ್ತು. ಆದರೆ, ಸೆಪ್ಟಂಬರ್ ಕಳೆಯುತ್ತ ಬಂದರೂ ಅದು ಸಾಧ್ಯವಾಗಿಲ್ಲ. ಹಾಗಾಗಿ, ಪಠ್ಯಪುಸ್ತಕಗಳ ಮುದ್ರಣಕ್ಕೆ ೫ ತಿಂಗಳು ಮೊದಲೇ ಆದೇಶ ಪಡೆದಿದ್ದರೂ ಕಡಿಮೆ ಪ್ರಮಾಣದಲ್ಲಿ ಸರಬರಾಜು ಮಾಡಿರುವ ಖಾಸಗಿ ಮುದ್ರಣಾಲಯಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಚಿಂತಿಸಿದೆ.

ಪಠ್ಯಪುಸ್ತಕಗಳ ಸರಬರಾಜಿನಲ್ಲಿ ಆಗಿರುವ ಈ ವಿಳಂಬವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಇನ್ನು ಮುಂದೆ ಈ ಮುದ್ರಣಾಲಯಗಳು ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ನಿರ್ಬಂಧಿಸುವ ಜೊತೆಗೆ ದಂಡ ವಿಧಿಸಲು ಮುಂದಾಗಿದೆ. ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಇಂತಹ ವ್ಯತ್ಯಾಸಗಳಾದಲ್ಲಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದಲೇ ವೆಚ್ಚ ವಸೂಲು ಮಾಡಲು ಕ್ರಮ ಕೈಗೊಳ್ಳಲು ಆಲೋಚಿಸಿದೆ.

ವಿಳಂಬ ಮಾಡಿರುವ ಮುದ್ರಣಾಲಯಗಳ ಪೈಕಿ ಪ್ರತಿಷ್ಠಿತ ಖಾಸಗಿ ಮುದ್ರಣಾಲಯ ಅಭಿಮಾನಿ ಪ್ರಕಾಶನ, ಅಭಿಮಾನಿ ಪಬ್ಲಿಕೇಷನ್ಸ್‌ , ಬ್ರಿಲಿಯಂಟ್ ಪ್ರಿಂಟರ್ಸ್ , ಕೆನರಾ ಸೆಕ್ಯೂರಿಟೀಸ್ , ಶೇಷಸಾಯಿ ಬಿಸಿನೆಸ್ ಪ್ರಿಂಟರ್ಸ್, ಸೌಂದರ್ಯ ಪ್ರಿಂಟರ್ಸ್ ಸೇರಿದಂತೆ ಒಟ್ಟು ೨೪ ಮುದ್ರಣಾಲಯಗಳೂ ಈ ಪಟ್ಟಿಯಲ್ಲಿವೆ. ಈ ಮುದ್ರಣಾಲಯಗಳು ಪಠ್ಯಪುಸ್ತಕಗಳನ್ನು ಶೇ.೫೦ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಸರಬರಾಜು ಮಾಡಿರುವ ಕಾರಣ ಕಪ್ಪು ಪಟ್ಟಿಗೆ ಸೇರಲಿವೆ ಎನ್ನಲಾಗಿದೆ.

ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅಧ್ಯಕ್ಷತೆಯಲ್ಲಿ ೨೦೧೮ರ ಸೆ.೧೧ರಂದು ನಡೆದ ಸಭೆಯಲ್ಲಿ ೨೦೧೮-೧೯ನೇ ಸಾಲಿನ ಪಠ್ಯಪುಸ್ತಕ ಪ್ರಗತಿ ಕುರಿತಂತೆ ಚರ್ಚಿಸಲಾಗಿದೆ. ಸಭೆಯ ನಡಾವಳಿಗಳು ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ.

ಕಪ್ಪುಪಟ್ಟಿಗೆ ಸೇರಿಸಲು ಪ್ರಧಾನ ಕಾರ್ಯದರ್ಶಿ ಸೂಚಿಸಿರುವ ನಡಾವಳಿ ಪ್ರತಿ

ಅದೇ ರೀತಿ, ಪಠ್ಯಪುಸ್ತಕಗಳನ್ನು ವಿತರಿಸದೆ ಉಳಿಕೆ ಹಾಗೂ ದಾಸ್ತಾನಿಗೆ ಕಾರಣವಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ದಾಸ್ತಾನಾಗಿರುವ ಪಠ್ಯಪುಸ್ತಕಗಳ ಮೊತ್ತವನ್ನು ವಸೂಲಿ ಮಾಡಲು ಸೂಚಿಸಿದೆ.

“೨೪ ಖಾಸಗಿ ಮುದ್ರಣಾಲಯಗಳಿಗೆ ಹೆಚ್ಚುವರಿಯಾಗಿ ನೀಡಿರುವ ಪಠ್ಯಪುಸ್ತಕಗಳ ಸರಬರಾಜು ಬಗ್ಗೆ ಪರಿಶೀಲಿಸಲಾಗಿದೆ. ಇದರಲ್ಲಿ ಶೇ.೫೦ಕ್ಕಿಂತ ಕಡಿಮೆ ಸರಬರಾಜು ಮಾಡಿರುವ ಅಭಿಮಾನಿ ಪ್ರಕಾಶನ, ಅಭಿಮಾನಿ ಪಬ್ಲಿಕೇಷನ್ಸ್‌, ಬ್ರಿಲಿಯಂಟ್‌ ಪ್ರಿಂಟರ್ಸ್, ಕೆನರಾ ಸೆಕ್ಯುರಿಟೀಸ್‌, ಶೇಷಸಾಯಿ ಬಿಸಿನೆಸ್‌ ಪ್ರಿಂಟರ್ಸ್‌ ಮತ್ತು ಸೌಂದರ್ಯ ಪ್ರಿಂಟರ್ಸ್‌ಗಳಿಗೆ ಇನ್ನು ಮುಂದೆ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ನಿರ್ಬಂಧ ಹೇರಿ ಮತ್ತು ದಂಡ ವಹಿಸಲು ಕ್ರಮ ವಹಿಸಿ,” ಎಂದು ಶಾಲಿನಿ ರಜನೀಶ್‌ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅಭಿಮಾನಿ ಪಬ್ಲಿಕೇಷನ್ಸ್‌ ಸೇರಿ ೨೪ ಖಾಸಗಿ ಮುದ್ರಣಾಲಯಗಳ ವಿರುದ್ಧ ಕ್ರಮಕ್ಕೆ ಸೂಚಿಸಿರುವ ನಡಾವಳಿ ಪ್ರತಿ

೨೦೧೮-೧೯ನೇ ಸಾಲಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಅಂಕಿ-ಅಂಶಗಳ ವಿವರಗಳನ್ನು ೨೦೧೭ರ ಸೆ.೩೦ರಂದು ಪೂರ್ಣಗೊಳಿಸಲಾಗಿತ್ತು. ಈ ಸಂಬಂಧ ಪಠ್ಯಪುಸ್ತಕ ಸಂಘದ ನಿರ್ದೇಶಕರು ೨೦೧೭ರ ಅಕ್ಟೋಬರ್‌ ೧೯ರಂದು ಸರ್ಕಾರಿ ಮುದ್ರಣಾಲಯಕ್ಕೆ ಪಠ್ಯಪುಸ್ತಕ ಮುದ್ರಣಕ್ಕೆ ಟೆಂಡರ್‌ ಆದೇಶಗಳನ್ನು ನೀಡಿದ್ದರಲ್ಲದೆ, ಖಾಸಗಿ ಮುದ್ರಣಾಲಯಗಳಿಗೆ ೨೦೧೮ರ ಜನವರಿ ೨೫ರಂದು ನೀಡಿದ್ದರು. ಆದರೆ, ಖಾಸಗಿ ಮುದ್ರಣಾಲಯಗಳು ಪಠ್ಯಪುಸ್ತಕಗಳನ್ನು ಮುದ್ರಿಸುವಲ್ಲಿ ೨-೩ ತಿಂಗಳು ವಿಳಂಬ ಮಾಡಿದ್ದವು ಎಂಬ ಅಂಶ ಸಭೆಯ ನಡಾವಳಿಯಿಂದ ತಿಳಿದುಬಂದಿದೆ.

ಎಸ್‌ಎಟಿಎಸ್‌ (Students Achievement Tracking System) ಪ್ರಕಾರ, ೬.೨೪ ಕೋಟಿ ಪಠ್ಯಪುಸ್ತಕಗಳ ಮುದ್ರಣಕ್ಕೆ ಬೇಡಿಕೆ ಇತ್ತು. ಆದರೆ, ಜಿಲ್ಲಾ ಉಪ ನಿರ್ದೇಶಕರುಗಳು ಖಾಸಗಿ ಶಾಲೆಗಳಿಗೆ ೨೭,೫೭,೦೬೪ ಹೆಚ್ಚುವರಿ ಪಠ್ಯಪುಸ್ತಕಗಳ ಬೇಡಿಕೆಯನ್ನು ೨೦೧೮ರ ಮೇ ತಿಂಗಳಿನಲ್ಲಿ ಸಲ್ಲಿಸಿದ್ದರು. ಇನ್ನು, ಜುಲೈ ತಿಂಗಳಿನವರೆಗೂ ಬೇಡಿಕೆ ಸಂಬಂಧದ ಮಾಹಿತಿಯನ್ನು ನೀಡದ ಉಪನಿರ್ದೇಶಕರಿಗೆ ಶೋಕಾಸ್‌ ನೋಟಿಸ್‌ ನೀಡಲು ಪ್ರಧಾನ ಕಾರ್ಯದರ್ಶಿ ಸೂಚಿಸಿದ್ದಾರೆ.

೬.೨೪ ಕೋಟಿ ಪಠ್ಯಪುಸ್ತಕಗಳ ಪೈಕಿ ೩೫ ಲಕ್ಷ ಪಠ್ಯಪುಸ್ತಕಗಳನ್ನು ಮುದ್ರಿಸಲು ಸರ್ಕಾರಿ ಮುದ್ರಣಾಲಯಕ್ಕೆ ವಹಿಸಲಾಗಿತ್ತು .ಆದರೆ, ಸರ್ಕಾರಿ ಮುದ್ರಣಾಲಯ, ಪ್ರತಿ ತಿಂಗಳು ೧೫-೨೦ ಸಾವಿರ ಪಠ್ಯ ಪುಸ್ತಕಗಳನ್ನು ಮುದ್ರಿಸುವ ಸಾಮರ್ಥ್ಯ ಹೊಂದಿತ್ತು. ಈ ಹಿನ್ನೆಲೆಯಲ್ಲಿ ೨೦೧೯-೨೦ನೇ ಸಾಲಿಗೆ ಸುಮಾರು ೨ ಲಕ್ಷ ಪಠ್ಯಪುಸ್ತಕಗಳಷ್ಟೇ ಮುದ್ರಣವಾಗಲಿದೆ.

“೨೦೧೮-೧೯ನೇ ಸಾಲಿಗೆ ಸರ್ಕಾರಿ ಮುದ್ರಣಾಲಯದಿಂದ ಸುಮಾರು ೪೦ ಲಕ್ಷ ಪಠ್ಯಪುಸ್ತಕಗಳ ಮುದ್ರಣಕ್ಕೆ ಕೋರಿ ಬೇಡಿಕೆ ಸಲ್ಲಿಸಲಾಗಿತ್ತು. ಬೇಡಿಕೆಯನ್ವಯ ೩೭ ಲಕ್ಷ ಪಠ್ಯಪುಸ್ತಕಗಳ ಮುದ್ರಣಕ್ಕೆ ಕಾರ್ಯಾದೇಶ ನೀಡಲಾಗಿತ್ತು. ಆದರೆ, ಈ ಪಠ್ಯಪುಸ್ತಕಗಳ ಪೈಕಿ ಮೇ ಅಂತ್ಯಕ್ಕೆ ಎಷ್ಟು ಪ್ರಮಾಣದಲ್ಲಿ ಇಲಾಖೆ ಹಂತಗಳಿಗೆ ಸರಬರಾಜು ಮಾಡಿದೆ? ಮೇ ಅಂತ್ಯಕ್ಕೆ ಸರಬರಾಜು ಮಾಡಬೇಕಾಗಿದ್ದನ್ನು ಸೆಪ್ಟೆಂಬರ್‌ನಲ್ಲಿ ಸರಬರಾಜಾಗಿದ್ದು, ವಿಳಂಬಕ್ಕೆ ಕಾರಣವೇನು? ವಿಳಂಬ ಮಾಡಿರುವ ಮುದ್ರಣಾಲಯಗಳನ್ನು ಕಪ್ಪುಪಟ್ಟಿಗೆ ಸೇರಿಸಿ,” ಎಂದು ಶಾಲಿನಿ ರಜನೀಶ್‌ ಅವರು ಸೂಚಿಸಿದ್ದಾರೆ.

ಅದೇ ರೀತಿ, ೨೦೧೯-೨೦ನೇ ಸಾಲಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಾಲೆಗಳಿಂದ ಸಲ್ಲಿಕೆಯಾಗುವ ಬೇಡಿಕೆಯಲ್ಲಿ ಯಾವುದೇ ವ್ಯತ್ಯಾಸವಾದಲ್ಲಿ, ಆ ವೆಚ್ಚವನ್ನು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ವಸೂಲು ಮಾಡಬೇಕಲ್ಲದೆ, ಖಾಸಗಿ ಶಾಲೆಗಳಿಂದ ವ್ಯತ್ಯಾಸವಾದಲ್ಲಿ ಬೇಡಿಕೆಯಂತೆ ಪಾವತಿಸಿರುವ ಮೊತ್ತವನ್ನು ಶಿಕ್ಷಣ ಸಂಸ್ಥೆಗಳಿಗೆ ವಾಪಸು ಮಾಡದಿರಲು ಸಭೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಇನ್ನು, ಪಠ್ಯಪುಸ್ತಕಗಳ ಸರಬರಾಜಿಗೆ ಸಂಬಂಧಿಸಿದಂತೆ ೨೦ ಡಯಟ್‌ ಪ್ರಾಂಶುಪಾಲರಷ್ಟೇ ಮಾಹಿತಿ ಒದಗಿಸಿದ್ದಾರೆ. ಇನ್ನುಳಿದ ಡಯಟ್‌ ಪ್ರಾಂಶುಪಾಲರು ಯಾವುದೇ ಮಾಹಿತಿ ಸಲ್ಲಿಸಿಲ್ಲ ಎಂದು ತಿಳಿದುಬಂದಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More