ಇಂದಿನ ಡೈಜೆಸ್ಟ್ | ನೀವು ಗಮನಿಸಲೇಬೇಕಾದ ಇತರ 8 ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು  

ಆರೋಪ ಸಾಬೀತು; ರಾಘವೇಶ್ವರ ಸ್ವಾಮೀಜಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಕೆ

ಯುವತಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖಾ ತಂಡ 1ನೇ ಎಸಿಎಂಎಂ ನ್ಯಾಯಾಲಯದಲ್ಲಿ ೨೦೧೮ ರ ಸೆ.೭ರಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ೨೦೧೫ರ ಆ.೨೯ರಂದು ರಾಘವೇಶ್ವರ ಭಾರತೀ ಸ್ವಾಮೀಜಿ ಸೇರಿದಂತೆ ಒಟ್ಟು ೭ ಜನರ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ದೂರು ನೀಡಿರುವ ಸಂತ್ರಸ್ತೆ ರಾಮಚಂದ್ರಾಪುರ ಮಠಕ್ಕೆ ಸೇರಿದ ಸಾಗರದ ಚದುರವಳ್ಳಿ ಭಾರತೀ ವಿದ್ಯಾನಿಕೇತನ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದರು. ಚಾತುರ್ಮಾಸ ನಡೆಯುತ್ತಿದ್ದ ಸಂದರ್ಭದಲ್ಲಿ ರಾಮಚಂದ್ರಾಪುರ ಮಠದ ಸ್ವಾಮೀಜಿ ಹಾಗೂ ಅವರ ಬೆಂಬಲಿಗರು ಸಂತ್ರಸ್ತೆಯನ್ನು ಕಾರಿನಲ್ಲಿ ಅಪಹರಿಸಿಕೊಂಡು ಕಕ್ಕಾರು ಎಂಬಲ್ಲಿ ದಿಗ್ಬಂಧನದಲ್ಲಿರಿಸಿದ್ದರು. ಅಲ್ಲದೆ, ರಾಘವೇಶ್ವರ ಭಾರತೀ ಸ್ವಾಮಿ ಸಂತ್ರಸ್ಥೆಯ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿದ್ದರು ಎಂದು ಎಫ್‌ಐಆರ್‌ನಲ್ಲಿ ದಾಖಲಾಗಿದೆ.

ರಫೇಲ್ ಒಪ್ಪಂದ: ಪ್ರಧಾನಿ ಮೋದಿ ರಾಜಿನಾಮೆ ನೀಡಬೇಕು ಎಂದ ಮಲ್ಲಿಕಾರ್ಜುನ ಖರ್ಗೆ

“ರಫೇಲ್ ಡೀಲ್ ಒಂದು ದೊಡ್ಡ ಹಗರಣವಾಗಿದ್ದು, ಪ್ರಧಾನಿ‌ ತಮಗೆ ಬೇಕಾದವರನ್ನು ಜೊತೆಯಲ್ಲೇ ಕರೆದೊಯ್ದಿದ್ದಾರೆ. ಎಚ್‌ಎಎಲ್‌ಗೆ ಸಿಗಬೇಕಾದ ಟೆಂಡರನ್ನು ಅಂಬಾನಿಗೆ ಕೊಡಿಸಿದ್ದಾರೆ,” ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಶನಿವಾರ ವಾಗ್ದಾಳಿ ನಡೆಸಿದ್ದಾರೆ. “ಈಗ ಫ್ರಾನ್ಸ್ ಮಾಜಿ ಅಧ್ಯಕ್ಷರೇ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಪ್ರಕರಣದಲ್ಲಿ ಪ್ರಧಾನಿ ಮೋದಿಯವರ ಕೈವಾಡ ಇರುವುದು ಎಲ್ಲರಿಗೂ ಗೊತ್ತಾಗಿದೆ,” ಎಂದು ಹೇಳಿದ್ದಾರೆ.

ಕಮಲ ಪಕ್ಷದ ನನ್ನ ಆಯ್ಕೆ ತಪ್ಪಾಗಿತ್ತು: ಮಾನ್ವೇಂದ್ರ ಸಿಂಗ್

ಬಹುಕಾಲ ಬಿಜೆಪಿಯೊಂದಿಗೆ ನಂಟು ಹೊಂದಿದ್ದ ಮಾಜಿ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಅವರ ಪುತ್ರ ಮಾನ್ವೇಂದ್ರ ಸಿಂಗ್ ಶನಿವಾರ ಬಿಜೆಪಿ ಪಕ್ಷದಿಂದ ಅಧಿಕೃತವಾಗಿ ಹೊರನಡೆದಿದ್ದಾರೆ. ರಾಜಸ್ಥಾನ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಬಿಜೆಪಿ ವಲಯದಲ್ಲಿ ಈ ಬೆಳವಣಿಗೆ ನಡೆದಿರುವುದು ಬಿಜೆಪಿ ನಾಯಕರನ್ನು ಆತಂಕಕ್ಕೆ ಈಡುಮಾಡಿದೆ. ಮಾನ್ವೇಂದ್ರ ಸಿಂಗ್ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂಬ ವದಂತಿಗಳಿಗೆ ಇಂದಿನ ಬೆಳವಣಿಗೆ ಪುಷ್ಟಿ ನೀಡಿದೆ ಎನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಮಾತಾಡಿದ ಮಾನ್ವೇಂದ್ರ ಸಿಂಗ್, ಬಿಜೆಪಿ ಆಯ್ಕೆ ತಮ್ಮ ತಪ್ಪು ಎಂದಿದ್ದಾರೆ.

ನಟ ಸಂಜಯ್ ಖಾನ್‌ ಆತ್ಮಕತೆ ಅ.27ಕ್ಕೆ ಬಿಡುಗಡೆ

ಬಾಲಿವುಡ್‌‌ ನಟ, ಚಿತ್ರನಿರ್ದೇಶಕ, ನಿರ್ಮಾಪಕ ಸಂಜಯ್‌ ಖಾನ್‌ ಆಟೋಬಯೋಗ್ರಫಿ ‘ದಿ ಬೆಸ್ಟ್ ಮಿಸ್ಟೇಕ್ಸ್ ಆಫ್ ಮೈ ಲೈಫ್‌’ ಅಕ್ಟೋಬರ್‌ 27ರಂದು ಬಿಡುಗಡೆಯಾಗಲಿದೆ. “ಇಲ್ಲಿ ನಟ ತಮ್ಮ ಸಿನಿಮಾ ಹಾಗೂ ಬದುಕಿನ ಹೋರಾಟ, ಅಚ್ಚರಿ, ಸುಖ-ದುಃಖಗಳನ್ನು ಹಂಚಿಕೊಂಡಿದ್ದಾರೆ” ಎಂದು ಪುಸ್ತಕದ ಸಿನಾಪ್ಸಿಸ್‌ ಹೇಳುತ್ತದೆ. ಬೆಂಗಳೂರು ಮೂಲದ ಸಂಜಯ್ ಖಾನ್‌ ಅವರಿಗೀಗ 78 ವರ್ಷ. ಚೇತನ್ ಆನಂದ್ ನಿರ್ದೇಶನದ ‘ಹಕೀಕತ್‌’ ಚಿತ್ರದ ನಟನಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಅವರು ಮುಂದೆ ಚಿತ್ರನಿರ್ದೇಶಕ, ನಿರ್ಮಾಪಕನಾಗಿಯೂ ಚಿತ್ರರಂಗದಲ್ಲಿ ಗುರುತಿಸಿಕೊಂಡರು.

ಎಸ್‌ಸಿ, ಎಸ್‌ಟಿ ಬಡ್ತಿ ಮೀಸಲು ಜಾರಿಗೆ ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯ

ಎಸ್‌ಸಿ, ಎಸ್‌ಟಿ ಬಡ್ತಿ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಒತ್ತಾಯಿಸಿದ್ದು, ಅದು ನಮ್ಮ ಬದ್ಧತೆಯಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ಹೇಳಿದ್ದಾರೆ. “ಸಿಎಂ ಮತ್ತು ಡಿಸಿಎಂ ಜೊತೆ ಈ ಬಗ್ಗೆ ಮಾತಾಡಿದ್ದೇನೆ. ಜಾರಿ ಮಾಡುವ ವಿಶ್ವಾಸ ನನಗಿದೆ. ಈ ವಿಚಾರ ಸುಪ್ರೀಂ ಕೋರ್ಟ್ ಮುಂದಿದೆ.‌ ಹೀಗಾಗಿ ಸ್ವಲ್ಪ ತಡವಾಗಬಹುದು. ಆದರೆ, ಸಿಎಂ ಕುಮಾರಸ್ವಾಮಿ ಇದಕ್ಕೆ ತಡೆಯೊಡ್ಡುತ್ತಿದ್ದಾರೆ ಎನ್ನುವುದು ಸುಳ್ಳು. ನಮಗೆ ಆ ವಿಚಾರದಲ್ಲಿ ಬದ್ಧತೆಯಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.

ಭಯೋತ್ಪಾದನೆ ಹಾಗೂ ಮಾತುಕತೆ ಜೊತೆಯಾಗಿ ಸಾಗಲು ಸಾಧ್ಯವಿಲ್ಲ: ಬಿಪಿನ್ ರಾವತ್

ಭಯೋತ್ಪಾದನಾ ಚಟುವಟಿಕೆಗಳನ್ನು ಮಟ್ಟಹಾಕುವವರೆಗೆ ಪಾಕಿಸ್ತಾನದ ಜೊತೆಗೆ ಸಮಗ್ರವಾದ ಮಾತುಕತೆ ಸಾಧ್ಯವಿಲ್ಲ, ಭಯೋತ್ಪಾದನೆ ಮತ್ತು ಮಾತುಕತೆ ಜೊತೆಜೊತೆಯಾಗಿ ಸಾಗಲು ಸಾಧ್ಯವಿಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಪಿನ್ ರಾವತ್, “ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮ ಸರಿಯಾಗಿದ್ದು, ಭಯೋತ್ಪಾದನೆಯನ್ನು ಕೊನೆಗೊಳಿಸಲು ಪಾಕಿಸ್ತಾನ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಭಯೋತ್ಪಾದಕರನ್ನು ಪ್ರೇರೆಪಿಸುತ್ತಿರುವ ಪಾಕ್ ಸೈನಿಕರ ನಡೆಗೆ ತಕ್ಕ ಉತ್ತರ ನೀಡಬೇಕಿದೆ. ಆದರೆ, ಪ್ರತಿಕಾರ ತೀರಿಸಿಕೊಳ್ಳಲು ಅವರು ಅನುಸರಿಸಿದ ಮಾರ್ಗವನ್ನು ನಾವು ಅನುಸರಿಸುತ್ತಿಲ್ಲ. ದೌರ್ಜನ್ಯವನ್ನು ಯಾವ ಕಾರಣಕ್ಕೂ ಸಹಿಸಲು ಸಾಧ್ಯವೇ ಇಲ್ಲ. ನಾವು ಅನುಭವಿಸಿದ ನೋವನ್ನೇ ಅವರು ಕೂಡ ಅನುಭವಿಸಬೇಕಿದೆ,” ಎಂದು ಬಿಪಿನ್ ರಾವತ್ ಹೇಳಿದ್ದಾರೆ.

ವಿಶ್ವ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ಚಾಂಪಿಯನ್‌ಶಿಪ್‌ ಪರೀಕ್ಷೆಗೆ ಸಜ್ಜಾದ ದೀಪಾ

ದೀಪಾ ಕರ್ಮಾಕರ್, ರಾಕೇಶ್ ಪಾತ್ರಾ ಸೇರಿದಂತೆ ಭಾರತದ ಅಗ್ರ ಕ್ರಮಾಂಕಿತ ಜಿಮ್ನಾಸ್ಟ್‌ಗಳು ಮುಂದಿನ ತಿಂಗಳು ದೋಹಾದಲ್ಲಿ ನಡೆಯಲಿರುವ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ವಿಶ್ವ ಚಾಂಪಿಯನ್‌ಶಿಪ್‌ ಪರೀಕ್ಷೆಗೆ ಸಜ್ಜಾಗಿದ್ದಾರೆ. ಇದೇ ಸೆಪ್ಟೆಂಬರ್ ೨೯ ಮತ್ತು ೩೦ರಂದು ಭಾರತೀಯ ಕ್ರೀಡಾ ಪ್ರಾಧಿಕಾರ ಆಯ್ಕೆಟ್ರಯಲ್ಸ್ ನಡೆಸಲಿದೆ. ಇತ್ತೀಚೆಗಷ್ಟೇ ಮುಕ್ತಾಯ ಕಂಡ ಏಷ್ಯಾಡ್‌ನಲ್ಲಿ ದೀಪಾ ಕರ್ಮಾಕರ್ ಪದಕ ಗೆಲ್ಲಲು ವಿಫಲವಾಗಿದ್ದರು. "ವಿಶ್ವ ಚಾಂಪಿಯನ್‌ಶಿಪ್‌ಗಾಗಿ ಇದೇ ತಿಂಗಳು ೨೯ ಮತ್ತು ೩೦ರಂದು ಎರಡು ದಿನಗಳ  ಕಾಲ ಆಯ್ಕೆಟ್ರಯಲ್ಸ್ ನಡೆಸಲಾಗುತ್ತಿದೆ. ಆರು ಮಂದಿ ಕ್ರೀಡಾಪಟುಗಳಿಗೆ ಮಾತ್ರ ಪ್ರವೇಶವಿದ್ದು, ತಲಾ ಮೂವರು ಬಾಲಕರು ಮತ್ತು ಯುವತಿಯರನ್ನು ಆಯ್ಕೆಟ್ರಯಲ್ಸ್‌ನಲ್ಲಿ ಆರಿಸಲಾಗುವುದು,'' ಎಂದು ಸುದೀರ್ಘ ಕಾಲದ ಭಾರತೀಯ ಜಿಮ್ನಾಸ್ಟಿಕ್ ಕೋಚ್ ಜಿ ಎಸ್ ಬವಾ ತಿಳಿಸಿದ್ದಾರೆ.

ಏಷ್ಯಾ ಟೀಂ ಸ್ನೂಕರ್‌ನಲ್ಲಿ ಭಾರತಕ್ಕೆ ರಜತ

ಕತಾರ್‌ನ ದೋಹಾದಲ್ಲಿ ಮುಕ್ತಾಯ ಕಂಡ ಏಷ್ಯಾ ಟೀಂ ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಬೆಳ್ಳಿ ಪದಕಕ್ಕೆ ತೃಪ್ತವಾಯಿತು. ಅತೀವ ರೋಚಕತೆಯಿಂದ ಕೂಡಿದ್ದ ಫೈನಲ್ ಹಣಾಹಣಿಯಲ್ಲಿ ಭಾರತ ತಂಡ, ಪಾಕಿಸ್ತಾನ ತಂಡದ ವಿರುದ್ಧ ೨--೩ರಿಂದ ಹಿನ್ನಡೆ ಅನುಭವಿಸಿತು. ಡಬಲ್ಸ್ ವಿಭಾಗದಲ್ಲಿ ಮಿಂಚಿದ ಪಾಕಿಸ್ತಾನ ಚಿನ್ನದ ಪದಕ ಜಯಿಸಿತು. ಆಸೀಫ್ ಮತ್ತು ಅವರ ಜತೆಯಾಟಗಾರ ಮಸೀಹ್ ಜಯದ ರೂವಾರಿ ಎನಿಸಿದರು. ಮೊದಲ ಫ್ರೇಮ್‌ನಲ್ಲಿ ಪಂಕಜ್ ಆಡ್ವಾಣಿ ೮೧ ಬ್ರೇಕ್‌ನೊಂದಿಗೆ ಬಾಬರ್ ಮಸೀಹ್ ವಿರುದ್ಧ ಮುನ್ನಡೆ ಪಡೆದರೆ, ಮೊಹಮದ್ ಆಸೀಫ್ ವಿರುದ್ಧ  ಮಲ್ಕೀತ್ ಸಿಂಗ್, ಮೊಹಮದ್ ಆಸೀಫ್ ವಿರುದ್ಧ ೫೨ರಿಂದ ಜಯಿಸಿದರು. ಆದರೆ, ಡಬಲ್ಸ್‌ನಲ್ಲಿ ಪಾಕಿಸ್ತಾನ ೭೦-೭೨ರಿಂದ ಮೇಲುಗೈ ಸಾಧಿಸಿತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More