ಎಚ್ಚರ, ನೀವು ನುಂಗುತ್ತಿರುವ ಯಾವುದೇ ಗುಳಿಗೆ ಬೆರಕೆ ಔಷಧಿ ಆಗಿರಬಹುದು!

ಕೇಂದ್ರ ಸರ್ಕಾರ ಬೆರಕೆ ಔಷಧಗಳನ್ನು ನಿಷೇಧಿಸಲು ಮುಂದಾಗಿದೆಯಾದರೂ ಲಾಭಕೋರ ಕಂಪನಿಗಳಿಗೆ ಲಗಾಮು ಹಾಕಿಲ್ಲ. ಇದಕ್ಕಾಗಿ ಹೊಸ ಬಗೆಯ ರಾಜಕೀಯ ನಾಯಕರು ಉದಯಿಸಬೇಕಿದೆ ಎನ್ನುತ್ತಾರೆ ಈ ಕುರಿತ ಚಳವಳಿಯಲ್ಲಿ ತೊಡಗಿಸಿಕೊಂಡಿರುವ ಡಾ.ಗೋಪಾಲ ದಾಬಡೆ

ಎರಡು ಔಷಧಗಳನ್ನು ಸೇರಿಸಿದಾಗ ಉಂಟಾಗುವ ಮಿಶ್ರಣವನ್ನು ಫಿಕ್ಸೆಡ್ ಡೋಸ್ ಕಾಂಬಿನೇಷನ್ (ಎಫ್‌ಡಿಸಿ) ಎನ್ನುತ್ತಾರೆ. ಇತ್ತೀಚಿನ ದಿನಗಳಲ್ಲಿ ಎಫ್‌ಡಿಸಿ ಹೆಚ್ಚು ಸುದ್ದಿಯಲ್ಲಿದೆ ಮತ್ತು ಸರ್ಕಾರ ಇವುಗಳನ್ನು ಏಕೆ ನಿಷೇಧಿಸುತ್ತಿದೆ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಏಳುತ್ತಿದೆ.

ವೈದ್ಯಕೀಯ ವಿಜ್ಞಾನ ಎಫ್‌ಡಿಸಿ ಬಗ್ಗೆ ಏನು ಹೇಳುತ್ತದೆ ಎಂಬ ಪ್ರಶ್ನೆಗಳಿವೆ. ಎರಡು ಔಷಧಗಳನ್ನು ಬೆರೆಸಿದಾಗ ಏನಾಗುತ್ತದೆ ಎಂಬ ಬಗ್ಗೆ ವೈದ್ಯಕೀಯ ಗ್ರಂಥಗಳಲ್ಲಿ ಅನೇಕ ಉಲ್ಲೇಖಗಳಿವೆ. ಈ ಪ್ರಕ್ರಿಯೆಯನ್ನು ‘ಡ್ರಗ್ ಇಂಟರಾಕ್ಷನ್’ ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ಎ ಮತ್ತು ಬಿ ಎಂಬ ಔಷಧಗಳನ್ನು ಬೆರೆಸಿದೆವು ಎಂದಿಟ್ಟುಕೊಳ್ಳೋಣ. ಆಗ ಅದು ಎ+ಬಿ ಔಷಧವಾಗಿ ಕೆಲಸ ಮಾಡದೆ ಬೇರೆಯದೇ ಔಷಧ ಆಗಿಬಿಡಬಹುದು. ಅದನ್ನು ಸದ್ಯಕ್ಕೆ ‘ಸಿ’ ಎಂಬ ಹೆಸರಿನಲ್ಲಿ ಕರೆಯೋಣ. ‘ಸಿ’ಯ ಗುಣಲಕ್ಷಣ ಎ ಮತ್ತು ಬಿಯ ಮೂಲ ಗುಣಲಕ್ಷಣಕ್ಕಿಂತಲೂ ಸಂಪೂರ್ಣ ಭಿನ್ನ. ಆದರೆ, ಹೀಗೆ ಮಿಶ್ರಣ ಮಾಡದೆ ಇರುವುದನ್ನು ಔಷಧ ತಯಾರಿಕಾ ಕಂಪನಿಗಳು ಇಷ್ಟಪಡುವುದಿಲ್ಲ. ಎಫ್‌ಡಿಸಿ ಬಗ್ಗೆ ವೈದ್ಯಕೀಯ ವಿಜ್ಞಾನದಲ್ಲಿ ಉಲ್ಲೇಖ ಆಗಿರುವುದನ್ನೆಲ್ಲ ಅವು ಸಾರಾಸಗಟಾಗಿ ತಿರಸ್ಕರಿಸುತ್ತವೆ. ತಮ್ಮ ಲಾಭವನ್ನು ವಿಸ್ತರಿಸಿಕೊಳ್ಳಲು ಯತ್ನಿಸುವ ಕಂಪನಿಗಳಿಗೆ ವೈದ್ಯಕೀಯ ವಿಜ್ಞಾನದಲ್ಲಿ ಹೇಳಿರುವ ಎಫ್‌ಡಿಸಿಯಿಂದ ಉಪಯೋಗವಿಲ್ಲ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗಿ, ಲಾಭದತ್ತ ಗಮನ ನೆಟ್ಟ ಕಂಪನಿಗಳು ಎರಡು ಔಷಧಗಳನ್ನು ಬೆರೆಸಿ ಹೊಸ ಮದ್ದನ್ನು ತಯಾರಿಸಿಬಿಡುತ್ತವೆ. ಈ ಹೊಸ ಔಷಧಕ್ಕೆ ಭಾರಿ ಪ್ರಚಾರ ನೀಡಿ ಮಾರುಕಟ್ಟೆಗೆ ಬಿಡಲಾಗುತ್ತದೆ. ಹೀಗೆ ಹೊಸದೆಂದು ನಂಬಿಸಲಾದ ಔಷಧಗಳನ್ನು ಭಾರತೀಯ ಕಂಪನಿಗಳು ಹಲವು ದಶಕಗಳಿಂದ ಮಾರಾಟ ಮಾಡುತ್ತಲೇ ಇವೆ. ಪರಿಣಾಮ, ಭಾರತ ಔಷಧ ಮಾರುಕಟ್ಟೆಯಲ್ಲಿ ಇಂಥ ಉಪಯೋಗಕ್ಕೆ ಬಾರದ ಎಫ್‌ಡಿಸಿಗಳ ಪ್ರವಾಹವೇ ಹರಿಯುತ್ತಿದೆ. ದುರದೃಷ್ಟವಶಾತ್ ಈ ಎಫ್‌ಡಿಸಿ ಅತ್ಯಗತ್ಯವಾದ ಏಕ ಪದಾರ್ಥದ ಔಷಧ ಕೊರತೆಯನ್ನು ಸೃಷ್ಟಿಸುತ್ತಿದೆ.

ಈ ಮಾತು ನಿಜವೇ ಎಂಬುದನ್ನು ಪರಿಶೀಲಿಸಲು ಭಾರತೀಯ ಔಷಧ ಮಾರುಕಟ್ಟೆಯನ್ನು ಅವಲೋಕಸಿಬಹುದು. 2015ರಲ್ಲಿ ಏಕ ಔಷಧ ರೂಪದಲ್ಲಿರುವ ಪ್ಯಾರಸೆಟಮಾಲ್ 500 ಎಂಜಿ ಗುಳಿಗೆಯ ವಹಿವಾಟು ರು 181.6 ಕೋಟಿ (5.5%) ಇತ್ತು. ಆದರೆ, ಅದೇ ಪ್ಯಾರಸೆಟಮಾಲ್ ಗುಳಿಗೆಯನ್ನು ಬೇರೆ ಔಷಧದೊಂದಿಗೆ ಬೆರೆಸಿ ಮಾರಾಟ ಮಾಡಿದಾಗ (ಎಫ್‌ಡಿಸಿ) ಬಂದ ಲಾಭ 2676.4 ಕೋಟಿ ರು. (81.5%). ಏಕ ಪದಾರ್ಥವಾದ ಆದರೆ, ಅತ್ಯಗತ್ಯವಲ್ಲದ ರೂಪದ ಔಷಧವಾಗಿ ಮಾರಾಟ ಮಾಡಿದಾಗ ಬಂದ ಹಣ 427.5 ಕೋಟಿ (ಅಂದರೆ ಶೇ 13ರಷ್ಟು ಲಾಭ). ಅತ್ಯಗತ್ಯ ಉಪಯುಕ್ತ ಔಷಧವಾದ ಪ್ಯಾರಸೆಟಮಾಲ್ ಅನ್ನು ಸಾಮಾನ್ಯವಾಗಿ ಜ್ವರ ಶಮನಗೊಳಿಸಲು ಉಪಯೋಗಿಸುತ್ತೇವೆ. ಆದರೆ, ಅದು ಏಕ ಪದಾರ್ಥ ಔಷಧವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವುದು ಶೇ.5.5 ಪ್ರಮಾಣದಲ್ಲಿ ಮಾತ್ರ. ಉಳಿದಷ್ಟೂ ಪ್ರಮಾಣವನ್ನು ಬೇರೆ ಔಷಧಗಳೊಂದಿಗೆ ಬೆರೆಸಿ ಅಥವಾ ತಪ್ಪು ಡೋಸೇಜ್ ಮೂಲಕ ಮಾರಾಟ ಮಾಡಲಾಗುತ್ತಿದೆ. ಉದಾಹರಣೆಗೆ, ಇದನ್ನು ಪ್ಯಾರಸೆಟಮಾಲ್ 650 ಎಂಜಿ ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡಲಾಗುತ್ತದೆ. ಕಂಪನಿಗಳು ಡೋಸ್ ಹೆಚ್ಚಳ ಮಾಡಿದ್ದರೂ ಅದನ್ನು ಎಫ್‌ಡಿಸಿ ಎಂಬ ಹೆಸರಿನಲ್ಲಿ ಕರೆಯುವುದಿಲ್ಲ. ಹಾಗಾದರೆ, ಅಷ್ಟು ಭಾರಿ ಪ್ರಮಾಣದ ಡೋಸ್ ಹೊಂದಿರುವ ಅವೈಜ್ಞಾನಿಕವಾದ ಎಫ್‌ಡಿಸಿಯನ್ನು ಏಕೆ ಬಿಡುಗಡೆ ಮಾಡುತ್ತವೆ? ಏಕೆಂದರೆ, ಹಾಗೆ ಮಾಡಿದಾಗ ಕಂಪನಿಗಳು ಅವುಗಳನ್ನು ಹೊಸ ಔಷಧವೆಂದು ಪ್ರಚಾರ ಮಾಡಲು ಸಾಧ್ಯವಿದೆ. ಅದರಿಂದ ಅವುಗಳಿಗೆ ಹೆಚ್ಚು ಲಾಭವಾಗುತ್ತದೆ.

ಭಾರತೀಯ ಮಾರುಕಟ್ಟೆಯಲ್ಲಿ ಎಫ್‌ಡಿಸಿ ಸಮಸ್ಯೆ ಎಷ್ಟು ದೊಡ್ಡದು ಗೊತ್ತೇ?; ನಿಜವಾಗಿಯೂ ನಂಬಲಾಗದಷ್ಟು! ಸರ್ಕಾರದ ವರದಿ ಪ್ರಕಾರ, ಭಾರತೀಯ ಮಾರುಕಟ್ಟೆಯಲ್ಲಿರುವ ಶೇ.46ರಷ್ಟು ಔಷಧಗಳು, ಎರಡಕ್ಕಿಂತಲೂ ಹೆಚ್ಚು ಮದ್ದುಗಳ ಮಿಶ್ರಣ. ಇದರರ್ಥ, ಮಾರುಕಟ್ಟೆಯಲ್ಲಿ ನೀವು ಹತ್ತು ಬಗೆಯ ಔಷಧಗಳನ್ನು ಖರೀದಿಸಿದರೆ ಅವುಗಳಲ್ಲಿ ನಾಲ್ಕು ಎಫ್‌ಡಿಸಿಯಿಂದ ಸೃಷ್ಟಿಯಾದವು. ಭಾರತೀಯ ಮಾರುಕಟ್ಟೆಯಿಂದ ಎಫ್‌ಡಿಸಿ ಔಷಧಗಳನ್ನು ತೆಗೆದುಹಾಕಬೇಕೆಂದು ಕೇಂದ್ರ ಸರ್ಕಾರ ಇತ್ತೀಚೆಗೆ ನಿರ್ಧರಿಸಿದೆ. ಆದರೆ, ಹೀಗೆ ತೆಗೆದುಹಾಕುತ್ತಿರುವ ಔಷಧಗಳ ಪ್ರಮಾಣ ಕೇವಲ ಶೇ.1,78ರಷ್ಟು. ಅಂದರೆ, ಅವೈಜ್ಞಾನಿಕ ಎಫ್‌ಡಿಸಿ ಔಷಧದ ಪ್ರಮಾಣ ಸರ್ಕಾರ ತೆಗೆದುಹಾಕುತ್ತಿರುವ ಔಷಧಗಳಿಗಿಂತಲೂ ಅಗಾಧ ಪ್ರಮಾಣದಲ್ಲಿದೆ. ಮತ್ತೊಂದೆಡೆ, ಇಷ್ಟು ಸಣ್ಣ ಪ್ರಮಾಣದ ಔಷಧಗಳನ್ನು ನಿಷೇಧಿಸಲು ಕೂಡ ಔಷಧ ಕಂಪನಿಗಳು ಅನುವು ಮಾಡಿಕೊಡುತ್ತಿಲ್ಲ. ಸಾಧ್ಯವಾದಷ್ಟು ಅಡ್ಡಗಾಲು ಹಾಕುವ ಕೆಲಸ ಅವುಗಳಿಂದ ನಡೆಯುತ್ತಿದೆ. ಉದಾಹರಣೆಗೆ, ಔಷಧ ಕಂಪನಿಗಳು ನ್ಯಾಯಾಲಯದ ಮೊರೆಹೋಗಿ ನಿಷೇಧ ಕುರಿತಂತೆ ತಡೆಯಾಜ್ಞೆ ತಂದಿವೆ. ಇದೆಲ್ಲ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿ ತಜ್ಞರ ಸಂದರ್ಶನಗಳು ಕೂಡ ನಡೆದಿವೆ. ಹಾಗೆ ಸಂದರ್ಶನ ನೀಡಿದವರಲ್ಲಿ ಬಹುತೇಕರು, “ಭಾರತೀಯ ಕಂಪನಿಗಳು ನಷ್ಟ ಅನುಭವಿಸಲಿವೆ, ಅಂತರರಾಷ್ಟ್ರೀಯ ಮಾಧ್ಯಮಗಳ ಮುಂದೆ ತಲೆತಗ್ಗಿಸಲಿವೆ,” ಎಂದೆಲ್ಲ ಗೋಳಿಟ್ಟರು. ಆದರೆ, ಗ್ರಾಹಕರ ಪರವಾಗಿ ಮಾತನಾಡುವವರು, ಅಳುವವರು ಯಾರೊಬ್ಬರೂ ಅಲ್ಲಿರಲಿಲ್ಲ! ಇದರಿಂದ ಸಾಮಾನ್ಯ ಜನ ಗಿನಿ ಇಲಿಗಳಾಂತಾದರು! (ಗಿನಿ ಇಲಿಗಳು ಔಷಧ ಪ್ರಯೋಗಾಲಯಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಪ್ರಯೋಗಪಶುಗಳು). ಇದೇ ವೇಳೆ ಜನರ ಆರೋಗ್ಯವನ್ನೂ ಪಣಕ್ಕಿಟ್ಟು ಔಷಧ ಕಂಪನಿಗಳು ಲಾಭ ಮಾಡಿಕೊಡುವತ್ತಲೇ ದೃಷ್ಟಿ ನೆಟ್ಟಿರುವಂತಿದೆ.

ಇದನ್ನೂ ಓದಿ : ರೋಗಿಗಳಿಗೆ ಕಡಿಮೆ ಗುಣಮಟ್ಟದ ಔಷಧ ಸರಬರಾಜು; ಆರೋಗ್ಯ ಇಲಾಖೆ ನಿರ್ಲಕ್ಷ್ಯ 

ಎಫ್‌ಡಿಸಿ ಹಾನಿಕಾರಕ ಎಂಬುದು ಗ್ರಾಹಕರಿಗೆ ಗೊತ್ತಾಗಬೇಕು. ಹೌದು, ಅವು ನಿಸ್ಸಂದೇಹವಾಗಿ ಹಾನಿ ತರುವಂತಹವು. ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ, “ಔಷಧಗಳನ್ನು ಮನಬಂದಂತೆ ಬಳಸುವುದು ಒಂದು ಸಮಸ್ಯೆ. ಶೇ.50ಕ್ಕಿಂತಲೂ ಹೆಚ್ಚು ಔಷಧಗಳನ್ನು ವೈದ್ಯರು ಸರಿಯಾಗಿ ಶಿಫಾರಸು ಮಾಡುವುದಿಲ್ಲ.” ಮೊದಲೇ ಹೇಳಿದಂತೆ ಅತಿ ಮುಖ್ಯವಾಗಿ, ಅವೈಜ್ಞಾನಿಕ ಎಫ್‌ಡಿಸಿಯು ಅತ್ಯಗತ್ಯ ಔಷಧಗಳ ಕೊರತೆಯನ್ನು ಕೃತಕವಾಗಿ ಸೃಷ್ಟಿಸುತ್ತದೆ. ಎರಡನೆಯದಾಗಿ, ಭಾರತದಲ್ಲಿ ಮನಸ್ಸಿಗೆ ಬಂದಂತೆ ಎಫ್‌ಡಿಸಿ ಬಳಸುತ್ತಿರುವುದು ಆರ್ಥಿಕವಾಗಿಯೂ ಹೊರೆಯಾಗಿದ್ದು, ಅವುಗಳನ್ನು ಯಾವ ವೈದ್ಯಕೀಯ ಗ್ರಂಥಗಳಲ್ಲೂ ಉಲ್ಲೇಖಿಸಿಲ್ಲ. ಮೂರನೆಯದಾಗಿ, ಅವಶ್ಯಕತೆ ಇಲ್ಲದಿದ್ದರೂ ರೋಗಿಗಳಿಗೆ ನೀಡುವ ಎಫ್‌ಡಿಸಿಯಿಂದಾಗಿ ಅವರು ತಮ್ಮ ರೋಗನಿರೋಧಕ ಶಕ್ತಿಯನ್ನೇ ಕಳೆದುಕೊಳ್ಳುತ್ತಾರೆ. ನಾಲ್ಕನೆಯದಾಗಿ, ವೈದ್ಯಕೀಯ ಗ್ರಂಥಗಳು ಹೇಳುವ ರೀತಿಯಲ್ಲಿ ಅವುಗಳ ಗುಣಮಟ್ಟ ಪರೀಕ್ಷೆ ಕೂಡ ನಡೆಯದಿರುವುದು ಬಹುದೊಡ್ಡ ಸಮಸ್ಯೆ. ಭಾರತದಲ್ಲಿ ಔಷಧಗಳ ಅಡ್ಡಪರಿಣಾಮದ ಬಗ್ಗೆ ಹೆಚ್ಚು ವರದಿಗಳಾಗುವುದಿಲ್ಲ. ಯಾವ ಔಷಧ ಎಂತಹ ಪರಿಣಾಮ ಬೀರುತ್ತದೆ ಎಂಬುದನ್ನು ಎಫ್‌ಡಿಸಿ ಮದ್ದುಗಳ ಮೇಲೆ ನಮೂದಿಸದೆ ಇರುವುದರಿಂದ ಇದರ ಪರಿಣಾಮ ಇನ್ನೂ ಹೆಚ್ಚು.

ಈ ಔಷಧಗಳು ಮಾರುಕಟ್ಟೆಯಲ್ಲಿ ಏಕೆ ಇವೆ, ಅವುಗಳಿಗೆ ಏಕೆ ಅನುಮತಿ ನೀಡಲಾಗಿದೆ ಎಂದು ಜನಸಾಮಾನ್ಯರು ಕೇಳುತ್ತಾರೆ. ನಿಸ್ಸಂದೇಹವಾಗಿ, ನಮ್ಮ ಔಷಧ ನಿಯಂತ್ರಕ ಪ್ರಾಧಿಕಾರಗಳ ವೈಫಲ್ಯ ಈ ಭಯಾನಕ ಸ್ಥಿತಿಗೆ ಕಾರಣ. ಸರ್ಕಾರ ನಿಷೇಧಿಸಲು ಹೊರಟಿರುವ 328 ಪ್ರಕಾರದ ಔಷಧಗಳನ್ನೂ ಮತ್ತೊಂದು ರೂಪದಲ್ಲಿ ಮಾರುಕಟ್ಟೆಗೆ ತರುತ್ತಿವೆ ಕಂಪನಿಗಳು. ಈ ಅಧ್ವಾನಗಳನ್ನೆಲ್ಲ ಹೋಗಲಾಡಿಸಲು ನಾವು ಹೊಸ ಬಗೆಯ ರಾಜಕಾರಣವನ್ನು ಎದುರುನೋಡಬೇಕಿದೆ. ಅಲ್ಲಿ ಔಷಧ ಕಂಪನಿಗಳ ಲಾಭಕೋರತನ ಮುಖ್ಯವಾಗದೆ, ಜನರ ಆರೋಗ್ಯ ಕಾಪಾಡುವುದು ರಾಜಕೀಯ ನಾಯಕರಿಗೆ ಮುಖ್ಯವಾಗಬೇಕಿದೆ.

ಲೇಖಕರು ಧಾರವಾಡ ಮೂಲದ ತಜ್ಞವೈದ್ಯರು

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More