ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ 3 ಪ್ರಮುಖ ಸುದ್ದಿಗಳು

ಇಂದು ನೀವು ಗಮನಿಸಬೇಕಾದ ಪ್ರಮುಖ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಸುದ್ದಿಗಳು

ಜಾರ್ಖಂಡ್‌ನಲ್ಲಿ ಮೋದಿ ಕೇರ್‌ಗೆ ಪ್ರಧಾನಿ ಮೋದಿ ಚಾಲನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ಜಾರ್ಖಂಡ್‌ನಲ್ಲಿ ಆಯುಷ್ಮಾನ್ ಭಾರತ್ ಯೋಜನೆಗೆ ಚಾಲನೆ ನೀಡಲಿದ್ದಾರೆ. ಸೆ.25ರಿಂದ ಯೋಜನೆ ಅಧಿಕೃತವಾಗಿ ಜಾರಿಯಾಗಲಿದೆ. 26 ರಾಜ್ಯಗಳಲ್ಲಿನ 450 ಜಿಲ್ಲೆಗಳ 9 ಸಾವಿರಕ್ಕೂ ಹೆಚ್ಚು ಆಸ್ಪತ್ರೆಗಳು ಯೋಜನೆಯ ವ್ಯಾಪ್ತಿಗೆ ಒಳಪಡಲಿವೆ. ಕುಟುಂಬವೊಂದು 5 ಲಕ್ಷದವರೆಗೆ ಉಚಿತ ಆರೋಗ್ಯ ಸೇವೆ ಪಡೆಯಲಿದ್ದು, ಒಟ್ಟಾರೆ 50 ಕೋಟಿ ಜನರು ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ಪ್ರಧಾನಮಂತ್ರಿ ಜನಾರೋಗ್ಯ ಯೋಜನೆಯ ಸಿಇಒ ಇಂದು ಭೂಷಣ್ ತಿಳಿಸಿದ್ದಾರೆ.

ಇಂಡೋ-ಪಾಕ್ ನಡುವಣದ ಎರಡನೇ ಕಾದಾಟಕ್ಕೆ ಕ್ಷಣಗಣನೆ

ಪ್ರತಿಷ್ಠಿತ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಸೂಪರ್ ಫೋರ್ ಹಂತದ ಎರಡನೇ ಹಂತದ ಪಂದ್ಯಗಳು ಇಂದಿನಿಂದ ಶುರುವಾಗುತ್ತಿದ್ದು, ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಗುಂಪು ಹಂತದಲ್ಲಿ ಎಂಟು ವಿಕೆಟ್ ಅಂತರದಿಂದ ಪಾಕಿಸ್ತಾನ ವಿರುದ್ಧ ಗೆದ್ದು ಬೀಗಿದ ಭಾರತಕ್ಕೀಗ ಎರಡನೇ ಪರೀಕ್ಷೆ ಎದುರಾಗಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡ ಫೈನಲ್‌ಗೆ ಪ್ರವೇಶ ಪಡೆಯಲಿದೆ. ಆಲ್ರೌಂಡ್ ಆಟದಿಂದ ಕಳೆದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಭಾರತ ತಂಡ, ಪಾಕಿಸ್ತಾನ ವಿರುದ್ಧ ಮತ್ತೊಮ್ಮೆ ಪ್ರಭುತ್ವ ಸಾಧಿಸುವ ವಿಶ್ವಾಸದಲ್ಲಿದ್ದರೆ, ಎರಡನೇ ಯತ್ನದಲ್ಲಿ ಭಾರತಕ್ಕೆ ಆಘಾತ ನೀಡುವ ಸಂಕಲ್ಪ ತೊಟ್ಟಿದೆ ಪಾಕಿಸ್ತಾನ. ಅಂದಹಾಗೆ, ಇಂದು ನಡೆಯಲಿರುವ ಮತ್ತೊಂದು ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗುತ್ತಿವೆ. ಸಂಜೆ ೫ ಗಂಟೆಗೆ ಆರಂಭವಾಗಲಿರುವ ಈ ಪಂದ್ಯ ಸ್ಟಾರ್‌ನೆಟ್ವರ್ಕ್‌ನಲ್ಲಿ ನೇರಪ್ರಸಾರ ಆಗಲಿದೆ.

ಪ್ರಶಸ್ತಿಗಾಗಿ ಕರೊಲಿನಾ ಮರಿನ್ ಮತ್ತು ಚೆನ್ ಯುಫಿ ಸೆಣಸಾಟ

ಚೀನಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪ್ರಶಸ್ತಿ ಸುತ್ತಿನ ಪಂದ್ಯಗಳು ಇಂದು ನಡೆಯುತ್ತಿದ್ದು, ರಿಯೊ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ ಕರೊಲಿನಾ ಮರಿನ್ ಕಣಕ್ಕಿಳಿಯುತ್ತಿದ್ದಾರೆ. ಚೀನಿ ಆಟಗಾರ್ತಿ ಚೆನ್ ಯುಫಿ ವಿರುದ್ಧ ಮರಿನ್ ಕಾದಾಡಲಿದ್ದು, ಪಂದ್ಯ ರೋಚಕತೆಯಿಂದ ಕೂಡಿರುವ ಸಾಧ್ಯತೆಗಳಿವೆ. ಕ್ವಾರ್ಟರ್‌ಫೈನಲ್‌ನಲ್ಲಿ ಇದೇ ಚೆನ್ ಯುಫಿ, ಭಾರತದ ಪಿ ವಿ ಸಿಂಧು ವಿರುದ್ಧ ಜಯ ಪಡೆದಿದ್ದರು. ಏತನ್ಮಧ್ಯೆ, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕೆಂಟೊ ಮೊಮೊಟಾ ಇಂಡೋನೇಷ್ಯಾದ ಆಂಟನಿ ಸಿನಿಸುಕಾ ವಿರುದ್ಧ ಕಾದಾಡಲಿದ್ದಾರೆ. ಹಾಲಿ ವಿಶ್ವ ಚಾಂಪಿಯನ್ ಮೊಮೊಟಾ ಎಂಟರ ಘಟ್ಟದಲ್ಲಿ ಕಿಡಾಂಬಿ ಶ್ರೀಕಾಂತ್ ವಿರುದ್ಧ ಗೆಲುವು ಸಾಧಿಸಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More