ಇಂದಿನ ಡೈಜೆಸ್ಟ್ | ನೀವು ಗಮನಿಸಲೇಬೇಕಾದ 8 ಇತರ ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು  

ಬಿಎಸ್‌ವೈ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಸಾಧ್ಯವೇ ಇಲ್ಲ: ಸಿದ್ದರಾಮಯ್ಯ

“ಪ್ರತಿಪಕ್ಷದ ನಾಯಕರಾದ ಬಿ ಎಸ್‌ ಯಡಿಯೂರಪ್ಪ ಅವರೇ, ನೀವು ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಸಾಧ್ಯವೇ ಇಲ್ಲ. ಜನರು ನಿಮಗೆ ೧೧೩ ಸ್ಥಾನ ನೀಡಿಲ್ಲ. ವಿರೋಧ ಪಕ್ಷ ಸ್ಥಾನದಲ್ಲಿ ಕುಳಿತು ಗಂಭೀರವಾಗಿ ಕೆಲಸ ಮಾಡಿ. ಮೂರು ದಿನ ಮುಖ್ಯಮಂತ್ರಿಯಾಗಿದ್ದು ಸಾಕಲ್ಲವೇ?” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಹಕವಾಡಿದ್ದಾರೆ. “ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನ ಸಲ್ಲದು. ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ನಿಮ್ಮ ತಂತ್ರ ಫಲಿಸುವುದಿಲ್ಲ. ನಮ್ಮ ಶಾಸಕರಿಗೆ ಕೋಟಿ ಕೋಟಿ ಹಣದ ಆಮಿಷ ಒಡ್ಡಿದ್ದೀರಿ. ಇಷ್ಟು ಹಣ ಎಲ್ಲಿಂದ ಬಂತು? ಅದಕ್ಕೆಲ್ಲ ಲೆಕ್ಕ ನೀಡಿದ್ದೀರಾ?” ಎಂದು ಪ್ರಶ್ನಿಸಿದ್ದಾರೆ.

ಜನಸೇವೆ ಮಾಡಲು ಪುನರ್ಜನ್ಮ ದೊರೆತಿದೆ: ಸಿಎಂ ಎಚ್‌ಡಿಕೆ

“ಜನರ ಸೇವೆ ಮಾಡಲು ದೇವರು ನನಗೆ ಪುನರ್ಜನ್ಮ ನೀಡಿ, ಮುಖ್ಯಮಂತ್ರಿ ಮಾಡಿದ್ದಾನೆ. ರೈತರು ದುಡುಕಿ ಪ್ರಾಣ ಕಳೆದುಕೊಳ್ಳಬಾರದು. ಸ್ವಲ್ಪ ತಾಳ್ಮೆ ವಹಿಸಿ,” ಎಂದು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಭಾನುವಾರ ಮನವಿ ಮಾಡಿದರು. ಹಾಸನ ಜಿಲ್ಲೆಯಲ್ಲಿ ಸುಮಾರು ೧,೬೫೦ ಕೋಟಿ ರುಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. “ರೈತರ ಸುಮಾರು ೪೦ ಸಾವಿರ ಕೋಟಿ ರುಪಾಯಿ ಸಾಲಮನ್ನಾ ಮಾಡಲಾಗಿದೆ. ರೈತರ ಪರವಾದ ಬದ್ಧತೆ ಹೊಂದಿರುವುದರಿಂದ ಈ ಕೆಲಸ ಮಾಡಲಾಗಿದೆ,” ಎಂದರು.

ಆಂಧ್ರದಲ್ಲಿ ನಕ್ಸಲರ ಅಟ್ಟಹಾಸ; ಇಬ್ಬರು ರಾಜಕಾರಣಿಗಳ ಹತ್ಯೆ

ಆಂಧ್ರಪ್ರದೇಶದಲ್ಲಿ ಹಲವು ವರ್ಷಗಳ ಬಳಿಕ ಇದೀಗ ಮತ್ತೆ ಅಟ್ಟಹಾಸ ಪ್ರದರ್ಶಿಸಿರುವ ನಕ್ಸಲೀಯರು, ಟಿಡಿಪಿಯ ಒಬ್ಬ ಹಾಲಿ ಹಾಗೂ ಒಬ್ಬ ಮಾಜಿ ಶಾಸಕರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಶಾಸಕ ಸರ್ವೇಶ್ವರ್ ರಾವ್ ಹಾಗೂ ಮಾಜಿ ಶಾಸಕ ಸಿವೇರಿ ಸೋಮಾ ಅವರ ಕಾರನ್ನು ವಿಶಾಖಪಟ್ಟಣಂನ ಅರಕು ಕಣಿವೆ ಪ್ರದೇಶದ ದಂಬ್ರಿಗುಡಾ ಮಂಡಲದಲ್ಲಿ ಅಡ್ಡಗಟ್ಟಿದ ನಕ್ಸಲರ ತಂಡ, ಗುಂಡಿನ ದಾಳಿ ನಡೆಸಿ ಪರಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಸಾಕ ಓಟಕ್ಕೆ ತಡೆ ಹಾಕಿದ ಪ್ಲಿಸ್ಕೋವಾ ಚಾಂಪಿಯನ್

ಟೆನಿಸ್ ಲೋಕದ ನವತಾರೆ ಜಪಾನ್‌ನ ನವೊಮಿ ಒಸಾಕ ಗೆಲುವಿನ ಓಟಕ್ಕೆ ತಡೆ ಹಾಕಿದ ಕರೊಲಿನಾ ಪ್ಲಿಸ್ಕೋವಾ ಪ್ಯಾನ್ ಪೆಸಿಫಿಕ್ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದಾರೆ. ಇಂದು ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ನವೊಮಿ ಒಸಾಕ ೪-೬, ೪-೬ ನೇರ ಸೆಟ್‌ಗಳಲ್ಲಿ ಜೆಕ್ ಆಟಗಾರ್ತಿಯ ವಿರುದ್ಧ ಪರಾಭವಗೊಂಡರು. ವರ್ಷದ ಕೊನೆಯ ಗ್ರಾಂಡ್‌ಸ್ಲಾಮ್ ಆದ ಅಮೆರಿಕನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಕೃಷ್ಣಸುಂದರಿ ಸೆರೆನಾ ವಿಲಿಯಮ್ಸ್‌ಗೆ ಆಘಾತ ನೀಡಿ ಚೊಚ್ಚಲ ಗ್ರಾಂಡ್‌ಸ್ಲಾಮ್ ಗೆದ್ದಿದ್ದ ಒಸಾಕ ಅದ್ಭುತ ಫಾರ್ಮ್‌ನಲ್ಲಿದ್ದರು. ಅದಕ್ಕೆ ತಕ್ಕಂತೆ ಆಕೆ ಜಪಾನ್ ಓಪನ್‌ನಲ್ಲಿ ಫೈನಲ್ ತಲುಪಿದರಾದರೂ, ತವರು ಅಭಿಮಾನಿಗಳ ಸಮ್ಮುಖದಲ್ಲಿ ಪ್ಲಿಸ್ಕೋವಾ ಆಟಕ್ಕೆ ತಲೆಬಾಗಿ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತರಾದರು.

ಮೊಮೊಟಾಗೆ ಆಘಾತ ನೀಡಿದ ಅಂಟನಿಗೆ ಚೀನಾ ಕಿರೀಟ

ಹಾಲಿ ವಿಶ್ವ ಚಾಂಪಿಯನ್ ಕೆಂಟೊ ಮೊಮೊಟಾಗೆ ಸೋಲುಣಿಸಿದ ಆಂಟನಿ ಸಿನಿಸುಕ ಗಿಂಟಿಂಗ್ ಚೀನಾ ಓಪನ್‌ನಲ್ಲಿ ಚಾಂಪಿಯನ್ ಆದರು. ಇಂದು ನಡೆದ ಪುರುಷರ ಸಿಂಗಲ್ಸ್ ವಿಭಾಗದ ಅಂತಿಮ ಸುತ್ತಿನಲ್ಲಿ ಮೊಮೊಟಾ ಎದುರು ೨೩-೨೧, ೨೧-೧೯ರ ಎರಡು ನೇರ ಗೇಮ್‌ಗಳಲ್ಲಿ ಆಂಟನಿ ಜಯಶಾಲಿಯಾದರು. ವಿಶ್ವದ ೨೩ನೇ ಶ್ರೇಯಾಂಕಿತ ಆಟಗಾರ ಆಂಟನಿ ಆಟಕ್ಕೆ ಮೊಮೊಟಾ ಕೂಡ ಬೆಚ್ಚಿಬಿದ್ದರು. ಮೊದಲ ಗೇಮ್‌ ಅಂತೂ ಅತೀವ ತೀಕ್ಷ್ಣತೆಯಿಂದ ಹಾಗೂ ಉದ್ವೇಗಕ್ಕೆ ಎಡೆಮಾಡಿಕೊಟ್ಟಿತ್ತು. ಆದರೆ, ಒತ್ತಡದಾಯಕ ಹೋರಾಟದಲ್ಲಿ ಇಂಡೋನೇಷ್ಯಾ ಆಟಗಾರ ಆಂಟನಿ ಮೊಮೊಟಾ ಅವರನ್ನು ಮಣಿಸುವಲ್ಲಿ ಸಫಲವಾದರು.

ಚೆನ್ ಯುಫಿ ಮಣಿಸಿದ ಮರಿನ್‌ಗೆ ಪ್ರಶಸ್ತಿ

ರಿಯೊ ಒಲಿಂಪಿಕ್ಸ್ ಚಾಂಪಿಯನ್ ಕರೋಲಿನಾ ಮರಿನ್ ನಿರೀಕ್ಷೆಯಂತೆಯೇ ಚೀನಾ ಓಪನ್‌ನಲ್ಲಿಯೂ ಪ್ರಶಸ್ತಿ ಜಯಿಸಿದರು. ಕಳೆದ ತಿಂಗಳು ನಡೆದ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತದ ಪಿ ವಿ ಸಿಂಧು ವಿರುದ್ಧ ಗೆದ್ದು ಚಾಂಪಿಯನ್ ಆಗಿದ್ದ ಸ್ಪೇನ್ ಆಟಗಾರ್ತಿ ಮರಿನ್, ಚಿನಾದ ಚೆನ್ ಯುಫಿಯನ್ನು ೨೧-೧೮, ೨೧-೧೩ರ ಎರಡು ನೇರ ಗೇಮ್‌ಗಳಲ್ಲಿ ಮಣಿಸಿ ಚೀನಾ ಓಪನ್ ಪ್ರಶಸ್ತಿ ಪಡೆದರು. ೪೭ ನಿಮಿಷಗಳ ಕಾದಾಟದಲ್ಲಿ ಮರಿನ್ ಮತ್ತೊಮ್ಮೆ ಆಕ್ರಮಣಕಾರಿ ಆಟದಿಂದ ಗಮನ ಸೆಳೆದರು. ಮೊದಲ ಗೇಮ್‌ನಲ್ಲಿ ತುಸು ಪೈಪೋಟಿ ನೀಡಿದ ಚೀನಿ ಆಟಗಾರ್ತಿ ಎರಡನೇ ಗೇಮ್‌ನಲ್ಲಿ ಸಂಪೂರ್ಣ ಬಳಲಿದರು. ಇದರ ಲಾಭ ಪಡೆದ ಮರಿನ್ ನೇರ ಗೇಮ್‌ಗಳಲ್ಲಿಯೇ ಪಂದ್ಯವನ್ನು ಕೈವಶ ಮಾಡಿಕೊಂಡರು.

ದೋಸ್ತಿ ಸರ್ಕಾರಕ್ಕೆ ಸಿದ್ದರಾಮಯ್ಯ ಅಭಯವಿದೆ: ಎಚ್ ಡಿ ದೇವೇಗೌಡ

ಹಾಸನದಲ್ಲಿ ವಿವಿಧ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, “ಮೈತ್ರಿ ಸರ್ಕಾರ ಪತನವಾಗುತ್ತದೆಂದು ಆತಂಕಪಡುವ ಅಗತ್ಯವಿಲ್ಲ, ಸಚಿವರಾಗಬೇಕೆಂಬ ಬಯಕೆ ಎಲ್ಲರಲ್ಲೂ ಸಹಜವಾಗಿರುತ್ತದೆ. ಪಕ್ಷದಲ್ಲಿನ ಆಂತರಿಕ ಸಮಸ್ಯೆಗಳನ್ನು ಸರಿಪಡಿಸುವುದಾಗಿ ಸ್ವತಃ ಸಿದ್ದರಾಮಯ್ಯನವರೇ ಭರವಸೆ ನೀಡಿದ್ದಾರೆ. ಒಂದು ಕಾಲಕ್ಕೆ ಸಿದ್ದರಾಮಯ್ಯ ನನಗೆ ಆಪ್ತರಾಗಿದ್ದರು. ಬದಲಾದ ರಾಜಕೀಯ ಸನ್ನಿವೇಶಗಳಿಂದಾಗಿ ಕಾಂಗ್ರೆಸ್ ಪಕ್ಷ ಸೇರಿ ಮುಖ್ಯಮಂತ್ರಿಯೂ ಆದರು. ಸಿದ್ದರಾಮಯ್ಯನವರ ಮಾತಿನ ಮೇಲೆ ನನಗೆ ವಿಶ್ವಾಸವಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಯಾವ ಅಡೆತಡೆಗಳಿಲ್ಲದೆ ಅಧಿಕಾರಾವದಿ ಪೂರ್ಣಗೊಳಿಸುತ್ತದೆ,” ಎಂದರು.

ಕಸ ಸಾಗಿಸುವ ವಾಹನದ ಮೂಲಕ ಜೈಲಿನಿಂದ ಪರಾರಿಯಾದ ಕೈದಿ

ಬಿಗಿಭದ್ರತೆ ಹೊಂದಿರುವ ಹರಿಯಾಣದ ಭೋಂಡ್ಸಿ ಜೈಲಿನಿಂದ ಅಮಿತ್ ಎಂಬ ಕೈದಿ ಪರಾರಿಯಾಗಿದ್ದು, ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಅತ್ಯಾಚಾರ ಪ್ರಕರಣದಲ್ಲಿ ವಿಚಾರಣಾದೀನ ಕೈದಿಯಾಗಿರುವ ಅಮಿತ್, ಶನಿವಾರ ಮಧ್ಯಾಹ್ನದ ವೇಳೆ ಕೈದಿಗಳ ಎಣಿಕೆ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ ತಪ್ಪಿಸಿಕೊಂಡು ಕಸ ಸಾಗಿಸುವ ವಾಹನದಲ್ಲಿ ಪರಾರಿಯಾಗಿದ್ದಾನೆ. ಭದ್ರತೆಯ ನಡುವೆಯೂ ಅಮಿತ್ ಪರಾರಿಯಾಗಿದ್ದು, ಜೈಲಿನ ಸಿಬ್ಬಂದಿಗಳು ಕಸ ಸಾಗಿಸುವ ವಾಹನವನ್ನು ಪರಿಶೀಲಿಸದೆ ಕರ್ತವ್ಯಲೋಪ ಎಸಗಿರುವುದೇ ಘಟನೆಗೆ ಕಾರಣವೆಂದು ತಿಳಿದುಬಂದಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More