ಕೇಂದ್ರ ಸರ್ಕಾರ ಅವಮಾನಿಸಿದ ಎಚ್‌ಎಎಲ್‌ಗೆ ಉಂಟು 7 ದಶಕಗಳ ಅಮೋಘ ಇತಿಹಾಸ

ರಫೇಲ್‌ ಯುದ್ಧ ವಿಮಾನ ಒಪ್ಪಂದ ವಿಷಯದಲ್ಲಿ ಬೆಂಗಳೂರಿನ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಚರ್ಚೆಯ ಕೇಂದ್ರದಲ್ಲಿದೆ. ಏಳೂವರೆ ದಶಕದ ಇತಿಹಾಸವಿರುವ ಈ ಸಂಸ್ಥೆ ದೇಶ-ವಿದೇಶಗಳ ಹಲವು ವೈಮಾನಿಕ ಯೋಜನೆ ಅಭಿವೃದ್ಧಿಪಡಿಸಿದ ಹೆಗ್ಗಳಿಕೆ ಹೊಂದಿದೆ

ರಫೇಲ್‌ ಯುದ್ಧ ವಿಮಾನ ಖರೀದಿ ವಿಷಯದಲ್ಲಿ ರಿಲಯನ್ಸ್‌ ಡಿಫೆನ್ಸ್‌ ಸಂಸ್ಥೆ ಹೆಸರು ಹೊರಬಂದಾಗಿನಿಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಜುಗರ ಎದುರಿಸುತ್ತಿದೆ. ಇದನ್ನು ಮರೆಮಾಚಲು ಮೋದಿ ಸಂಪುಟದ ಸಚಿವರು ಒಂದಿಲ್ಲೊಂದು ಹೇಳಿಕೆ ನೀಡುತ್ತಲೇ ಇದ್ದಾರೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಕೂಡ, “ರಫೇಲ್‌ ಡೀಲ್‌ ಸಿಗದಿದ್ದುದಕ್ಕೆ ಎಚ್‌ಎಎಲ್‌ ಸಾಮರ್ಥ್ಯ ಕೊರತೆ ಕಾರಣ,” ಎಂದು ವಿವಾದಕ್ಕೆ ತುಪ್ಪ ಸುರಿದಿದ್ದರು. ನಂತರ ಎಚ್‌ಎಎಲ್‌ ನಿವೃತ್ತ ವ್ಯವಸ್ಥಾಪಕ ನಿರ್ದೇಶಕರು ತಕ್ಕ ಉತ್ತರ ನೀಡಿದ್ದೂ ಹೌದು.

ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ೭೮ ವರ್ಷಗಳ ಇತಿಹಾಸವಿರುವ ಸಂಸ್ಥೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ರಾಷ್ಟ್ರೀಯ-ಅಂತಾರಾಷ್ಟ್ರೀಯ ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿರುವ ಎಚ್‌ಎಎಲ್‌, ಯುದ್ಧ ವಿಮಾನ ಸಿದ್ಧಪಡಿಸುವಲ್ಲಿ ಸರ್ಕಾರದಿಂದಲೇ ಅಸಮರ್ಥ ಎಂದು ಕರೆಸಿಕೊಂಡಿದ್ದು ಮಾತ್ರ ಅನೇಕರಲ್ಲಿ ಅಚ್ಚರಿ ಮೂಡಿಸಿದೆ.

ಸರ್ಕಾರದ ನಿಲುವನ್ನು ಮೊದಲ ಬಾರಿಗೆ ಟೀಕಿಸಿದ, ಮೂರು ವರ್ಷಗಳ ಕಾಲ ಎಚ್‌ಎಎಲ್‌ ಚೇರ್ಮನ್‌ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಟಿ ಸುವರ್ಣ ರಾಜು ಈ ಕುರಿತು ಹೇಳಿಕೆ ನೀಡಿ, "ಎಚ್‌ಎಎಲ್‌ ೨೫ ಟನ್‌ ತೂಕದ ಸುಖೋಯ್‌-೩೦ ಯುದ್ಧ ವಿಮಾನವನ್ನೇ ನಿರ್ಮಿಸಲು ಸಾಧ್ಯವಿದ್ದಾಗ, ಖಂಡಿತ ಸರ್ಕಾರ ಬಯಸಿದ್ಧ (ರಫೇಲ್‌) ವಿಮಾನವನ್ನು ಸಿದ್ಧಪಡಿಸಲು ಸಾಧ್ಯವಿತ್ತು,'' ಎಂದಿದ್ದಾರೆ.

ಈ ಸಂಬಂಧ ಎಚ್‌ಎಎಲ್‌ ಮತ್ತು ಡಸಾಲ್ಟ್‌ ನಡುವೆ ಒಪ್ಪಂದವೂ ಆಗಿತ್ತು ಎಂಬುದನ್ನು ಸುವರ್ಣರಾಜು 'ಇಂಡಿಯನ್‌ ಡಿಫೆನ್ಸ್‌ ನ್ಯೂಸ್‌'ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸುವರ್ಣ ರಾಜು ಅವರ ಹೇಳಿಕೆಯಲ್ಲಿ ಪ್ರಸ್ತಾಪವಾಗುವ ಅಂಶವೆಂದರೆ, ತಗಲುವ ವೆಚ್ಚ ಮತ್ತು ಸಮಯದ ಒತ್ತಡ; ಆದರೆ, ಸಾಮರ್ಥ್ಯದ ಕೊರತೆಯಲ್ಲ ಎಂಬುದು ತಿಳಿಯುತ್ತದೆ.

ಎಚ್‌ಎಎಲ್‌ನ ಎಂಜಿನಿಯರ್‌ಗಳು ಮತ್ತು ಇತರ ಸಿಬ್ಬಂದಿ ಕೂಡ ಎಚ್‌ಎಎಲ್‌ ಕಾರ್ಯ ಸಾಮರ್ಥ್ಯ ಅನುಮಾನಿಸಿದ ಕೇಂದ್ರ ಸರ್ಕಾರದ ಹೇಳಿಕೆಗಳಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಸಚಿವರೇ ಹೀಗೆ ಹೇಳಿಕೆ ನೀಡಿದ್ದು ಅವಮಾನಿಸಿದಂತೆ ಎಂದಿದ್ದಾರೆ. "ಭಾರತೀಯ ವಾಯುಸೇನೆಗೆ ಬೆನ್ನುಲುಬಿನಂತಿರುವ ಎಚ್‌ಎಎಲ್‌, ಯಾವುದೇ ಯುದ್ಧ ತಂತ್ರಜ್ಞಾನವನ್ನು ಸಿದ್ಧಪಡಿಸುವ ಸಾಮರ್ಥ್ಯ ಹೊಂದಿದೆ,'' ಎಂದು ಪ್ರತಿಕ್ರಿಯಿಸಿದ್ದಾರೆ.

ಖಾಸಗಿ ವಲಯವನ್ನು ಪ್ರೋತ್ಸಾಹಿಸುವ ಉದ್ದೇಶ ಇರುವುದರಿಂದ ಎಚ್‌ಎಎಲ್‌ಗೆ ಸಿಗುತ್ತಿದ್ದ ಕಾರ್ಯಾದೇಶಗಳು ಕಡಿಮೆ ಆಗಿವೆ ಎಂದು ನಿವೃತ್ತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹಾಗೆಯೇ, ಡಸಾಲ್ಟ್‌ ಏವಿಯೇಷನ್‌ ನಿರ್ಮಿಸಿದ ಮಿರೇಜ್‌-೨೦೦೦ ಯುದ್ಧ ವಿಮಾನವನ್ನು ಕಳೆದ ೨೦ ವರ್ಷಗಳಿಂದ ನಿರ್ವಹಣೆ ಮಾಡುತ್ತಿರುವುದು ಇದೇ ಎಚ್‌ಎಎಲ್‌ ಸಂಸ್ಥೆ ಎಂಬುದನ್ನು ನೆನಪಿಸಿದ್ದಾರೆ.

ಎಚ್‌ಎಎಲ್‌ ಇತಿಹಾಸ

ಎಪ್ಪತ್ತೆಂಟು ವರ್ಷಗಳ ಹಿಂದೆ ಅಂದರೆ, ೧೯೪೩ರ ಡಿಸೆಂಬರ್ ೩೦ರಂದು ಹಿಂದೂಸ್ಥಾನ್‌ ಏರ್‌ಕ್ರಾಫ್ಟ್ಸ್‌ ಲಿಮಿಟೆಡ್‌ ಹೆಸರಿನಲ್ಲಿ ವಾಲ್‌ಚಂದ್‌ ಹೀರಾಚಂದ್‌ ಅವರಿಂದ ಅಸ್ತಿತ್ವಕ್ಕೆ ಬಂದಿತು. ೧೯೪೧ರಲ್ಲಿ ಭಾರತ ಸರ್ಕಾರ ೨೫ ಲಕ್ಷ ರು.ಗಳನ್ನು ಹೂಡುವ ಮೂಲಕ ಮೂರನೇ ಒಂದು ಭಾಗದಷ್ಟು ಪಾಲುದಾರಿಕೆಯನ್ನು ಪಡೆದುಕೊಂಡಿತು. ಬ್ರಿಟಿಷ್‌ ಆಳ್ವಿಕೆ ಇದ್ದ ಆ ಕಾಲದಲ್ಲಿ ಏರ್‌ಕ್ರಾಫ್ಟ್ಸ್‌ ಸಂಸ್ಥೆಯನ್ನು ಎರಡನೆಯ ಮಹಾಯುದ್ಧಕ್ಕೆ ಅಗತ್ಯವಿದ್ದ ಯುದ್ಧ ಸಾಮಗ್ರಿಗಳನ್ನು ಪೂರೈಸುವುದಕ್ಕೆ ಬಳಸಿಕೊಂಡಿತು.

ಬೆಂಗಳೂರಿನಲ್ಲಿ ಸಕ್ರಿಯವಾಗಿದ್ದ ಕಾರ್ಖಾನೆಯನ್ನು ೧೯೪೩ರಲ್ಲಿ ಅಮೆರಿಕದ ವಾಯುಸೇನೆಗೆ ವಹಿಸಿಕೊಡಲಾಯಿತು. ಆದರೆ ಹಿಂದೂಸ್ತಾನ್‌ ಏರ್‌ಕ್ರಾಫ್ಟ್‌ ಉಸ್ತುವಾರಿಯಲ್ಲೇ ಇದು ನಡೆಯುತ್ತಿತ್ತು. ಸ್ವಾತಂತ್ರ್ಯಾನಂತರ ಏರ್‌ಕ್ರಾಫ್ಟ್‌ ಸಂಸ್ಥೆ ಸಂಪೂರ್ಣವಾಗಿ ಭಾರತ ಸರ್ಕಾರ ಸುಪರ್ದಿಗೆ ಒಳಪಟ್ಟಿತು. ಅಕ್ಟೋಬರ್ ೧, ೧೯೬೪ರಲ್ಲಿ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಎಂದು ಹೆಸರು ಬದಲಾಯಿಸಲಾಯಿತು.

ಎಚ್‌ಎಎಲ್‌ ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಯುದ್ಧ ಹಾಗೂ ನಾಗರಿಕ ಬಳಕೆಗೆ ಅಗತ್ಯವಾದ ವೈಮಾನಿಕ ಉತ್ಪನ್ನಗಳನ್ನು ತಯಾರಿಸಿಕೊಟ್ಟಿದೆ ಮತ್ತು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದೆ.

ಪ್ರಮುಖ ಅಂತಾರಾಷ್ಟ್ರೀಯ ಒಪ್ಪಂದಗಳು

 • ೩೫ ಬಿಲಿಯನ್‌ ಡಾಲರ್‌ ಮೌಲ್ಯದ ಯುದ್ಧ ವಿಮಾನ ಉತ್ಪಾದನೆಯ ಒಪ್ಪಂದವನ್ನು ರಷ್ಯಾದ ಸುಖೋಯ್‌ ಜೊತೆ ಮಾಡಿಕೊಂಡಿದೆ
 • ಡಾರ್ನಿಯರ್‌ ೨೨೮ ವಿಮಾನ ಉತ್ಪಾದನೆ ಒಪ್ಪಂದವನ್ನು ಸ್ವಿಟ್ಜರ್‌ಲೆಂಡ್‌ನೊಂದಿಗೆ ಮಾಡಿಕೊಂಡಿದೆ
 • ಇಸ್ರೇಲ್‌ ಯುದ್ಧ ವಿಮಾನ ಕಾರ್ಖಾನೆಗಳಿಗೆ ಬಿಡಿಭಾಗಗಳ ಪೂರೈಕೆಯ ಒಪ್ಪಂದ
 • ಈಕ್ವೆಡಾರ್ ವಾಯುಸೇನೆಗೆ ಲಘು ಹೆಲಿಕಾಪ್ಟರ್‌ಗಳ ಪೂರೈಕೆ
 • ಮಲೇಷ್ಯಾದೊಂದಿಗೆ ಎಸ್‌ಯು-೩೦ಎಂಕೆಂ ಯುದ್ಧ ವಿಮಾನ ಪೂರೈಕೆ ಒಪ್ಪಂದ
 • ಟರ್ಕಿ ದೇಶದೊಂದಿಗೆ ಧ್ರುವ್‌ ಹೆಲಿಕಾಪ್ಟರ್‌ ಪೂರೈಕೆ ಒಪ್ಪಂದ
 • ಇಸ್ರೇಲ್‌ ಏರ್‌ಕ್ರಾಫ್ಟ್‌ ಇಂಡೀಸ್ಟ್ರೀಸ್‌ಗೆ ಮಾನವರಹಿತ ಹೆಲಿಕಾಪ್ಟರ್‌ ಅಭಿವೃದ್ಧಿಪಡಿಸುವ ಯೋಜನೆಯ ಒಪ್ಪಂದ

ಪ್ರಮುಖ ದೇಶೀಯ ಒಪ್ಪಂದಗಳು

 • ರಷ್ಯಾದ ಸಹಭಾಗಿತ್ವದಲ್ಲಿ ದೇಶದಲ್ಲೇ ಸುಖೋಯ್‌ ಎಸ್‌ಯು-೩೦ಎಂಕೆಐ ಯುದ್ಧ ವಿಮಾನ ತಯಾರಿ. ಇದು ೩.೨ ಬಿಲಿಯನ್‌ ಡಾಲರ್‌ಗಳ ಯೋಜನೆ
 • ೫.೮೩ ಬಿಲಿಯನ್‌ ಡಾಲರ್‌ ಮೌಲ್ಯದ ಧ್ರುವ್‌ ಲಘು ಯುದ್ಧ ಹೆಲಿಕಾಪ್ಟರ್‌ ಅಭಿವೃದ್ಧಿಪಡಿಸುವ ಯೋಜನೆ
 • ಸಿಂಗಲ್‌ ಎಂಜಿನ್‌ ವಿಮಾನ ಹಾಕ್‌ ೧೩೨ರ ಉತ್ಪಾದನೆಗೆ ಪರವಾನಗಿ
 • ಎಚ್‌ಎ-೩೧ ಕೃಷಿ ಉಪಯೋಗಿ ವಿಮಾನ ಅಭಿವೃದ್ಧಿ
 • ಎಚ್‌ಎಫ್‌ ೨೪ ಮಾರುತ್‌, ತೇಜಸ್‌, ಸುಖೋಯ್‌ ಯುದ್ಧ ವಿಮಾನ, ರುದ್ರ ಯುದ್ಧ ಹೆಲಿಕಾಪ್ಟರ್‌, ಲಘು ಯುದ್ಧ ಹೆಲಿಕಾಪ್ಟರ್‌ಗಳ ಉತ್ಪಾದನೆ
 • ಸಾರಿಗೆ ವಿಮಾನಗಳು, ತರಬೇತಿ ವಿಮಾನಗಳು, ಬಹುಪಯೋಗಿ ವಿಮಾನಗಳು, ಗ್ಲೈಡರ್‌ಗಳ ಉತ್ಪಾದನೆ
 • ಮಾನವರಹಿತ ವಿಮಾನಗಳಾದ ಲಕ್ಷ್ಯ, ಲಕ್ಷ್ಯ-೨, ನಿಶಾಂತ್‌, ರುಸ್ತುಮ್‌ಗಳ ತಯಾರಿಕೆ
 • ವ್ಯಾಂಪೈರ್‌, ಹಾರ್ಲೋ, ಎಚ್ಎಎಲ್‌ ಅಜೀತ್‌, ಜಾಗ್ವರ್‌ ಮತ್ತಷ್ಟು ಕೆಲವು ಆಕ್ರಮಣದ ಉದ್ದೇಶಗಳಿಗೆ ಸಿದ್ಧಪಡಿಸಿದ ಯುದ್ಧ ವಿಮಾನಗಳು

೨೦೧೪-೧೫ರ ಹೊತ್ತಿಗೆ ಸುಮಾರು ೧೫,೪೮೦ ಕೋಟಿ ರು.ಗಳ ವಹಿವಾಟು ಮಾಡಿದ ಎಚ್ಎಎಲ್‌, ಮುಂದಿನ ಎರಡು ದಶಕಗಳ ಅವಧಿಯಲ್ಲಿ ಜಗತ್ತಿನ ಅಗ್ರ ಹತ್ತು ವೈಮಾನಿಕ ಸಂಸ್ಥೆಯ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಹಿರಿಯ ಸಿಬ್ಬಂದಿ ಹೇಳಿಕೊಂಡಿದ್ದರು.

ಎಚ್ಎಎಲ್‌, ತನ್ನ ಏಳೂವರೆ ದಶಕಗಳ ಅನುಭವದೊಂದಿಗೆ ವೈಮಾನಿಕ ಕ್ಷೇತ್ರದಲ್ಲಿ ಸಂಶೋಧನೆ, ಉತ್ಪಾದನೆ ಮತ್ತು ಸಾಧನೆಯ ಮೂಲಕ ಜಗತ್ತಿನಲ್ಲಿ ಮನ್ನಣೆ ಗಳಿಸಿದ್ದರೂ, ಕೇಂದ್ರ ಸರ್ಕಾರ ರಫೇಲ್‌ ಉತ್ಪಾದನೆಯಲ್ಲಿ ಪರಿಗಣಿಸದೆ ಖಾಸಗಿ ಸಂಸ್ಥೆಗೆ ಅವಕಾಶ ಕಲ್ಪಿಸುವುದಕ್ಕೆ ಮುಂದಾಗಿದ್ದು ಅಚ್ಚರಿ ಮೂಡಿಸಿದೆ. ಈ ನಡೆಯ ಮೂಲಕ ಪ್ರತಿಷ್ಠಿತ ಸಂಸ್ಥೆಯೊಂದನ್ನು ಅವಮಾನಿಸಿದೆ ಎಂದೇ ಭಾವಿಸಲಾಗುತ್ತಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More