ನಗದು ಕೊರತೆ ಬಿಕ್ಕಟ್ಟು; ಷೇರುಪೇಟೆಯಲ್ಲಿ ಮುಂದುವರಿದ ರಕ್ತದೋಕುಳಿ

ಐಎಲ್ ಅಂಡ್ ಎಫ್ಎಸ್ ನಗದು ಕೊರತೆ ಬಿಕ್ಕಟ್ಟು ಷೇರುಪೇಟೆಯಲ್ಲಿ ಲಿಸ್ಟಾಗಿರುವ ಬಹುತೇಕ ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು ಕಾಡಿದ್ದು, ರಕ್ತದೋಕುಳಿ ಮುಂದುವರಿದಿದೆ. ರುಪಾಯಿ ಕುಸಿತದ ಜೊತೆಗೆ ಕಚ್ಚಾ ತೈಲ 80 ಡಾಲರ್ ದಾಟಿದ್ದು, ಮತ್ತಷ್ಟು ಕುಸಿಯುವ ಅಪಾಯ ಎದುರಾಗಿದೆ

ಪೇಟೆಯಲ್ಲಿ ನಗದು ಕೊರತೆ ಭಯ ಆವರಿಸಿದ್ದು, ತೀವ್ರ ಮಾರಾಟ ಒತ್ತಡ ಹೆಚ್ಚಿದೆ. ರುಪಾಯಿ ಕುಸಿತ ಮತ್ತು ಕಚ್ಚಾ ತೈಲ ದರ ಗರಿಷ್ಠ ಏರಿಕೆಯು ಮತ್ತಷ್ಟು ಆತಂಕ ಮೂಡಿಸಿದೆ. ವಾರದ ಆರಂಭದಲ್ಲೇ ಷೇರುಪೇಟೆ ತೀವ್ರ ಕುಸಿತದ ಹಾದಿಯಲ್ಲಿದೆ. ಸೆನ್ಸೆಕ್ಸ್ 536 ಅಂಶ ಕುಸಿದರೆ, ನಿಫ್ಟಿ 175 ಅಂಶ ಕುಸಿದಿದೆ. ನಿಫ್ಟಿ ಐಟಿ ಸೂಚ್ಯಂಕ ಹೊರತುಪಡಿಸಿದರೆ ಬರುತೇಕ ಎಲ್ಲ ಸೂಚ್ಯಂಕಗಳು ಕುಸಿದಿವೆ.

ನಿಫ್ಟಿ ರಿಯಾಲ್ಟಿ ಶೇ.5.30ರಷ್ಟು ಕುಸಿತ ದಾಖಲಿಸಿದೆ. ನಿಫ್ಟಿ ಆಟೋ, ನಿಫ್ಟಿ ಫೈನಾನ್ಷಿಯಲ್, ನಿಫ್ಟಿ ನೆಕ್ಟ್ 50, ನಿಫ್ಟಿ ಇಂಡಿಯಾ ಕನ್ಸುಮರ್ ಸೂಚ್ಯಂಕಗಳು ಶೇ.3ಕ್ಕಿಂತ ಹೆಚ್ಚು ಕುಸಿದಿವೆ. ಬ್ಯಾಂಕು, ಆಟೋ, ಮೆಟಲ್ ಫಾರ್ಮಾ, ಫೈವೆಟ್ ಬ್ಯಾಂಕ್, ಹೀಗೆ ಪ್ರತಿಯೊಂದು ವಲಯದ ಷೇರುಗಳ ಮಾರಾಟ ಒತ್ತಡ ಹೆಚ್ಚಿದ್ದು, ಶೇ.2ರಿಂದ 10ರಷ್ಟು ಷೇರುಗಳು ಕುಸಿದಿವೆ.

ನಿಫ್ಟಿ ನಿರ್ಣಾಯಕ ಮಟ್ಟವಾದ 11,000 ಅಂಶಗಳಿಂದ ಕೆಳಕ್ಕೆಇಳಿದಿದೆ. ಸೆನ್ಸೆಕ್ಸ್ 36,500ರ ಮಟ್ಟದಿಂದ ಕುಸಿದಿದೆ. ನಿಫ್ಟಿ 10,500 ಮತ್ತು ಸೆನ್ಸೆಕ್ಸ್ 35,000 ಮಟ್ಟಕ್ಕೆ ಕುಸಿಯುವ ನಿರೀಕ್ಷೆ ಪೇಟೆಯಲ್ಲಿದೆ.

ನಗದು ಕೊರತೆ ಇದೆ ಎಂಬ ಭೀತಿಯಿಂದಾಗಿ ಬಹುತೇಕ ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಗೃಹ ಸಾಲ ಸಂಸ್ಥೆಗಳ ಷೇರುಗಳು ತೀವ್ರ ಕುಸಿತ ಕಂಡಿವೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಕುಸಿಯುವ ನಿರೀಕ್ಷೆ ಇದೆ. ವಾರಾಂತ್ಯದಲ್ಲಿ ಶೇ.48ರಷ್ಟು ಕುಸಿದಿದ್ದ ಡಿಎಚ್ಎಫ್ಎಲ್, ದಿನದ ಆರಂಭದ ವಹಿವಾಟಿನಲ್ಲಿ ಶೇ.20ರಷ್ಟು ಚೇತರಿಸಿಕೊಂಡಿತ್ತು. ದಿನದ ಅಂತ್ಯಕ್ಕೆ ಶೇ.10ರಷ್ಟು ಏರಿಕೆಯೊಂದಿಗೆ ವಹಿವಾಟು ಮುಗಿಸಿದೆ. ಆದರೆ, ಶೇ.28ರಷ್ಟು ಕುಸಿದಿದ್ದ ಯೆಸ್ ಬ್ಯಾಂಕ್ ಚೇತರಿಸಿಕೊಂಡಿಲ್ಲ.

ನಗದು ಕೊರತೆಯ ಭೀತಿಯ ಜೊತೆಗೆ ರುಪಾಯಿ ಕುಸಿತ ಮತ್ತು ಕಚ್ಚಾ ತೈಲ ದರ ಏರಿಕೆಯು ಪೇಟೆಯಲ್ಲಿ ರಕ್ತದೋಕುಳಿಗೆ ಕಾರಣವಾಗಿದೆ. ಕಚ್ಚಾತೈಲ ವಾರದ ಆರಂಭದ ವಹಿವಾಟಿನಲ್ಲಿ ಶೇ.2ರಷ್ಟು ಜಿಗಿದಿದೆ. ಬ್ರೆಂಟ್ ಕ್ರೂಡ್ ನಿರ್ಣಾಯಕ ಮಟ್ಟವಾದ 80 ಡಾಲರ್ ದಾಟಿದ್ದರೆ, ಡಬ್ಲ್ಯೂಟಿಐ ಕ್ರೂಡ್ 72 ಡಾಲರ್ ದಾಟಿ ವಹಿವಾಟು ನಡೆಸಿವೆ. ಬಹುತೇಕ ತೈಲ ಉತ್ಪಾದಿಸುವ ರಾಷ್ಟ್ರಗಳಿಗೆ ಕಚ್ಚಾ ತೈಲ ದರ ಈ ಮಟ್ಟದಲ್ಲಿ ಅಥವಾ ಶೇ.10ರಷ್ಟು ಏರಿಸಿದ ಮಟ್ಟದಲ್ಲೇ ಕಾಯ್ದುಕೊಳ್ಳುವ ಇರಾದೆ ಇದೆ. ಹೀಗಾಗಿ, ತಕ್ಷಣಕ್ಕೆ ಕಚ್ಚಾ ತೈಲ ದರ ಇಳಿಯುವ ಸಾಧ್ಯತೆ ಕ್ಷೀಣಿಸಿದೆ.

ಕಚ್ಚಾ ತೈಲ ದರ ಏರಿದಂತೆಲ್ಲ ಡಾಲರ್ ಬೇಡಿಕೆ ಏರುತ್ತದೆ. ಡಾಲರ್ ಬೇಡಿಕೆ ಏರಿದಂತೆ ರುಪಾಯಿ ಮೌಲ್ಯ ಕುಸಿಯುತ್ತದೆ. ಅತ್ತ ಕಚ್ಚಾ ತೈಲದ ಬೆಲೆ ಏರುತ್ತಿದ್ದಂತೆ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ ಡಾಲರ್ ವಿರುದ್ಧ 43 ಪೈಸೆದಷ್ಟು ಕುಸಿದಿದೆ. ದಿನದ ವಹಿವಾಟಿನಲ್ಲಿ 72.74ಕ್ಕೆ ಕುಸಿದ ರುಪಾಯಿ, ನಂತರ 72.63ಕ್ಕೆ ಸ್ಥಿರಗೊಂಡಿದೆ. ಈ ನಡುವೆ, ಚಿನಿವಾರ ಪೇಟೆಯಲ್ಲಿ ಚಿನ್ನ 186 ರುಪಾಯಿ ಹೆಚ್ಚಿದ್ದು, 30,800 ರುಪಾಯಿ ಆಜುಬಾಜಿನಲ್ಲಿ ವಹಿವಾಟಾಗಿದೆ.

ಇದನ್ನೂ ಓದಿ : ರುಪಾಯಿ ಕುಸಿತ; 2 ದಿನದಲ್ಲಿ 1000 ಅಂಶ ಇಳಿದ ಸೆನ್ಸೆಕ್ಸ್, ರಕ್ತದೋಕುಳಿ ಆರಂಭ

ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಕಳೆದ ಮೂರು ವರ್ಷಗಳಲ್ಲಿ ತೀವ್ರ ಏರಿಕೆ ಕಂಡಿದ್ದವು. ಹೂಡಿಕೆದಾರರು, ಮ್ಯೂಚುವಲ್ ಫಂಡ್ ಹೌಸ್‌ಗಳು ದೊಡ್ಡ ಪ್ರಮಾಣದಲ್ಲಿ ಈ ಷೇರುಗಳಲ್ಲಿ ಹೂಡಿಕೆ ಮಾಡಿದ್ದವು. ಇವುಗಳ ವಾಸ್ತವಿಕ ಮೌಲ್ಯ ಮೀರಿದ ನಂತರವೂ ಹೂಡಿಕೆ ಮುಂದುವರಿಸಿದ್ದವು. ಈಗ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮರುಪಾವತಿ ಮಾಡಬೇಕಾದ ಬಾಧ್ಯತೆಗಳಿಗೆ ನಗದು ಕೊರತೆ ಎದುರಿಸುತ್ತಿವೆ. ಇದು ಐಎಲ್ಅಂಡ್ ಎಫ್ಎಸ್, ಡಿಎಚ್ಎಫ್ಎಲ್ ಪ್ರಕರಣದಲ್ಲಿ ಬಯಲಾಗಿದೆ. ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್, ಬಜಾಜ್ ಫೈನಾನ್ಸ್, ಮಹಿಂದ್ರ ಅಂಡ್ ಮಹಿಂದ್ರ ಫೈನಾನ್ಷಿಯಲ್ ಸರ್ವೀಸ್, ಎಲ್ ಅಂಡ್ ಟಿ ಫೈನಾನ್ಸ್ ಹೋಲ್ಡಿಂಗ್ಸ್ ಶೇ.4-8ರಷ್ಟು ಕುಸಿದಿವೆ. ಐಎಲ್ಅಂಡ್ ಎಫ್ಎಸ್‌ಗೆ ಸಾಲ ನೀಡಿದ ಬಹುತೇಕ ಬ್ಯಾಂಕುಗಳ ಷೇರುಗಳೂ ಕುಸಿದಿವೆ.

ಈ ನಡುವೆ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಸೆಬಿ, “ಹಣಕಾಸು ವಲಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ಮೇಲೆ ನಿಗಾ ಇಡಲಾಗಿದೆ. ಹೂಡಿಕೆದಾರರ ಹಿತಾಸಕ್ತಿ ಕಾಯಲು ಅಗತ್ಯ ಬಿದ್ದಾಗ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಹೇಳಿವೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಮಾರುಕಟ್ಟೆ ಕುಸಿತ ಮತ್ತಷ್ಟು ಮುಂದುವರಿಯಲಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More