ಮೋದಿ ಸರ್ಕಾರವನ್ನು ಅಡಕತ್ತರಿಯಲ್ಲಿ ಸಿಲುಕಿಸಿದ ರಘುರಾಮ್ ರಾಜನ್ ಪಟ್ಟಿ

ಬ್ಯಾಂಕುಗಳಿಗೆ ವಂಚಿಸುತ್ತಿರುವ ಉದ್ಯಮಿಗಳ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸುವ ಅಗತ್ಯ ಇದೆ ಎಂದು ರಘುರಾಮ್ ರಾಜನ್ ಪ್ರಧಾನಿ ಕಾರ್ಯಾಲಯಕ್ಕೆ ಬರೆದ ಪತ್ರದ ವಿವರ ಸಲ್ಲಿಸುವಂತೆ ಸಂಸದೀಯ ಅಂದಾಜು ಸಮಿತಿ ಪಿಎಂಒಗೆ ಸೂಚಿಸಿದೆ. ಮೋದಿ ಸರ್ಕಾರಕ್ಕೀಗ ಮುಜುಗರ!

ರಫೇಲ್ ಯುದ್ಧ ವಿಮಾನಗಳನ್ನು ತಯಾರಿಸುವ ಗುತ್ತಿಗೆಯನ್ನು ನುರಿತ ಎಚ್ಎಎಲ್‌ಗೆ ನೀಡುವ ಬದಲು ಅನಿಲ್ ಅಂಬಾನಿ ಒಡೆತನದಲ್ಲಿ ಇತ್ತೀಚೆಗಷ್ಟೇ ರೂಪುಗೊಂಡ ರಿಲಯನ್ಸ್ ಡಿಫೆನ್ಸ್‌ಗೆ ನೀಡುವ ಮೂಲಕ ಬಂಡವಾಳಶಾಹಿ ಸ್ನೇಹಿ ಎಂಬ ಆರೋಪ ಎದುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮುಂದೆ ಮತ್ತೊಂದು ಬಿಕ್ಕಟ್ಟು ಎದುರಾಗಿದೆ.

ರಘುರಾಮ್ ರಾಜನ್ ಆರ್‌ಬಿಐ ಗವರ್ನರ್ ಆಗಿದ್ದ ಅವಧಿಯಲ್ಲಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ರವಾನಿಸಿದ್ದ, ಸಾಲ ಪಡೆದು ಬ್ಯಾಂಕುಗಳಿಗೆ ವಂಚಿಸಿ ನಿಷ್ಕ್ರಿಯ ಸಾಲವಾಗಲು ಕಾರಣವಾಗಿದ್ದ ಉದ್ಯಮಿಗಳ ಪಟ್ಟಿ ಮತ್ತು ಕೈಗೊಂಡಿರುವ ಕ್ರಮಗಳ ವಿವರ ಸಲ್ಲಿಸುವಂತೆ ಬಿಜೆಪಿ ಹಿರಿಯ ಸಂಸದ ಮುರುಳಿ ಮನೋಹರ ಜೋಷಿ ನೇತೃತ್ವದ ಸಂಸದೀಯ ಅಂದಾಜು ಸಮಿತಿ ಸೂಚಿಸಿದೆ. ಹಾಗಾಗಿ, ಪ್ರಧಾನಿ ಕಾರ್ಯಾಲಯವು ಸಂಸದೀಯ ಅಂದಾಜು ಸಮಿತಿ ಮುಂದೆ ರಘುರಾಮ್ ರಾಜನ್ ಅವರು ಸಲ್ಲಿಸಿದ್ದ ಪಟ್ಟಿ ಹಾಜರುಪಡಿಸಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡಲೇಬೇಕಿದೆ.

ಸಂಸದೀಯ ಅಂದಾಜು ಸಮಿತಿ ಕೋರಿಕೆ ಮೇರೆಗೆ ನಿಷ್ಕ್ರಿಯ ಸಾಲದ ಸಮಸ್ಯೆ ಕುರಿತಂತೆ ಅಂದಾಜು ಸಮಿತಿ ಮುಂದೆ 17 ಪುಟಗಳ ವಿವರವನ್ನು ರಘುರಾಮ್ ರಾಜನ್ ನೀಡಿದ್ದರು. ಉದ್ದೇಶಪೂರ್ವಕವಾಗಿ ಸಕಾಲದಲ್ಲಿ ಸಾಲ ಪಾವತಿಸದೆ ಬ್ಯಾಂಕುಗಳಿಗೆ ವಂಚಿಸುವ ಉದ್ಯಮಿಗಳ ಪೈಕಿ ಕೆಲವರ ವಿರುದ್ಧವಾದರೂ ತನಿಖಾ ಸಂಸ್ಥೆಗಳಿಂದ ವಿಚಾರಣೆ ನಡೆಸಿ ಕಾನೂನು ಕ್ರಮ ಜರುಗಿಸುವುದು ಸೂಕ್ತ ಎಂದು ಷರಾ ಬರೆದು, ಸುಸ್ತಿಯಾದ ಉದ್ಯಮಿಗಳ ಪಟ್ಟಿಯನ್ನು ಪ್ರಧಾನಿ ಕಾರ್ಯಾಲಯಕ್ಕೆ ಸಲ್ಲಿಸಿದ್ದಾಗಿ, ಆದರೆ, ಪ್ರಧಾನಿ ಕಾರ್ಯಾಲಯವು ಈ ಬಗ್ಗೆ ಏನು ಕ್ರಮ ಕೈಗೊಂಡಿದೆ ಎಂಬುದು ತಮ್ಮ ಅರಿವಿಗೆ ಬಂದಿಲ್ಲ ಎಂದು ರಾಜನ್ ವಿವರಿಸಿದ್ದರು.

ಈ ಹಿನ್ನೆಲೆಯಲ್ಲಿ ರಘುರಾಮ್ ರಾಜನ್ ಅವರು ಸಲ್ಲಿಸಿರುವ ಪಟ್ಟಿಯನ್ನು ಸಲ್ಲಿಸುವಂತೆ ಮುರಳಿ ಮನೋಹರ ಜೋಷಿ ನೇತೃತ್ವದ ಸಂಸದೀಯ ಅಂದಾಜು ಸಮಿತಿ ಸೂಚಿಸಿದೆ. ಅಲ್ಲದೆ, ರಾಜನ್ ಅವರು ಸಲ್ಲಿಸಿದ ಪಟ್ಟಿಯ ಸಂಬಂಧ ಕೈಗೊಂಡಿರುವ ಕ್ರಮಗಳ ವಿವರ ನೀಡುವಂತೆಯೂ ಸೂಚಿಸಿದೆ. ರಾಜನ್ ವಿವರಣೆಯನ್ನು ಆಧರಿಸಿ ಕಲ್ಲಿದ್ದಲು ಮತ್ತು ಇಂಧನ ಸಚಿವಾಲಯಗಳಿಗೂ ನೋಟಿಸ್ ನೀಡಲಾಗಿದೆ ಎಂದು ‘ದಿ ವೈರ್’ ವರದಿ ಮಾಡಿದೆ.

ಪ್ರಸ್ತುತ ಪಿಯುಷ್ ಗೋಯಲ್ ಕಲ್ಲಿದ್ದಲು ಖಾತೆ ಹೊಂದಿದ್ದಾರೆ. ಇಂಧನ ವಲಯದ ನಿಷ್ಕ್ರಿಯ ಸಾಲದ ಪ್ರಮಾಣ ನಿಯಂತ್ರಣ ಮೀರಿಹೋಗಿದ್ದ ಸಂದರ್ಭದಲ್ಲಿ ಪಿಯುಷ್ ಗೋಯಲ್ ಅವರು ಇಂಧನ ಸಚಿವರಾಗಿದ್ದರು. ಈಗ ಆರ್ ಕೆ ಸಿಂಗ್ ಇಂಧನ ಸಚಿವರಾಗಿದ್ದಾರೆ.

ರಾಜನ್ ಅವರು ಅಂದಾಜು ಸಮಿತಿಗೆ ಸಲ್ಲಿಸಿದ್ದ ವಿವರವಾದ ವರದಿಯಲ್ಲಿ ಪ್ರಧಾನಿ ಕಾರ್ಯಾಲಯ ಏನು ಕ್ರಮ ಕೈಗೊಂಡಿದೆಯೋ ನನ್ನ ಅರಿವಿಗೆ ಬಂದಿಲ್ಲ ಎಂದು ತಿಳಿಸಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ರಘುರಾಮ್ ರಾಜನ್ ಬಡ್ಡಿದರ ಇಳಿಕೆ ಮತ್ತಿತರ ವಿಚಾರದಲ್ಲಿ ಮೋದಿ ನೇತೃತ್ವದ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು. ಮುಖ್ಯವಾಗಿ, ವಿತ್ತ ಸಚಿವ ಅರುಣ್ ಜೇಟ್ಲಿ - ರಘುರಾಮ್ ರಾಜನ್ ಅವರ ನಡುವೆ ಶೀಲತ ಸಮರವಿತ್ತು. ಇದಾದ ನಂತರ ನರೇಂದ್ರ ಮೋದಿ ಸರ್ಕಾರ ರಘುರಾಮ್ ರಾಜನ್ ಅವರ ಅವಧಿಯನ್ನು ವಿಸ್ತರಿಸಲು ನಿರಾಕರಿಸಿತ್ತು.

‘ದಿ ವೈರ್’ ವರದಿ ಪ್ರಕಾರ, ಇಂಧನ ವಲಯದ ಒತ್ತಡದ ಸಾಲ ಮತ್ತು ಸಾಲ ಪಡೆದ ಕಂಪನಿಗಳ ವಿವರ ಹೀಗಿದೆ:

ಟಾಟಾ ಪವರ್ ₹48,982 ಕೋಟಿ

ಅದಾನಿ ಪವರ್ ₹43,700 ಕೋಟಿ

ರಿಲಯನ್ಸ್ ಪವರ್ ₹28,646 ಕೋಟಿ

ಲ್ಯಾಂಕೊ ಪವರ್ ₹23,591 ಕೋಟಿ

ಎಸ್ಸಾರ್ ಪವರ್ ₹20,000 ಕೋಟಿ

ಜೆಎಸ್ ಡಬ್ಲ್ಯೂ ಎನರ್ಜಿ ₹11,278 ಕೋಟಿ

ರತ್ತನ್ ಇಂಡಿಯಾ ₹20,000 ಕೋಟಿ

ಜೇಪಿ ₹20,000 ಕೋಟಿ

ಮಹಾನದಿ ಪವರ್ ಕಂಪನಿ ₹17,194 ಕೋಟಿ

ಜಿಎಂಆರ್ ₹15,178 ಕೋಟಿ

ರಾಜನ್ ತಮ್ಮ ಪತ್ರದಲ್ಲಿ ಕೆಲವು ವಂಚಕ ಪ್ರವರ್ತಕರು ವಿದೇಶಿಗಳಿಂದ ಸಲಕರಣೆಗಳು, ಉಪಕರಣಗಳನ್ನು ತರೆಸಿಕೊಳ್ಳುವಾಗ ದರಪಟ್ಟಿಯಲ್ಲಿ ಭಾರಿ ಮೊತ್ತ ನಮೂದಿಸಿಸಿ ವಂಚಿಸುತ್ತಿದ್ದುದನ್ನೂ ಪ್ರಸ್ತಾಪಿಸಿದ್ದರು. ರಾಜನ್ ನೀಡಿದ ವಿವರಗಳನ್ನಾಧರಿಸಿ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್, ಹಣಕಾಸು ಕಾರ್ಯದರ್ಶಿ ಹಸ್ಮುಖ್ ಹದಿಯಾ, ಬ್ಯಾಂಕಿಂಗ್ ಕಾರ್ಯದರ್ಶಿ ರಾಜಿವ್ ಕುಮಾರ್ ಅವರಿಗೂ ಸಮಿತಿ ಮುಂದೆ ಹಾಜರಾಗುವಂತೆ ಸೂಚಿಸಿದ್ದು, ಇದುವರೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸುವಂತೆ ಸೂಚಿಸಲಾಗಿದೆ.

ಪ್ರಧಾನಿ ಕಾರ್ಯಾಲಯವಲ್ಲದೆ, ವಿವಿಧ ಸಚಿವಾಲಯಗಳಿಗೂ ಅಂದಾಜು ಸಮಿತಿ ನೆನಪೋಲೆ ಬರೆದಿದ್ದು, ಅಧಿಕೃತ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದೆ. ಅಂದಾಜು ಸಮಿತಿ ರಾಜನ್ ನೀಡಿದ ಮಾಹಿತಿ ಆಧರಿಸಿ ತೀವ್ರ ಕಾರ್ಯಾಚರಣೆಗೆ ಇಳಿದಿರುವುದು ಸರ್ಕಾರದ ಉನ್ನತಾಧಿಕಾರಿಗಳಲ್ಲಿ ಸಂಚಲನ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ, ಮೋದಿ ಸರ್ಕಾರವು ಅಂದಾಜು ಸಮಿತಿಯಿಂದ ಮುರುಳಿ ಮನೋಹರ ಜೋಷಿ ಅವರನ್ನು ಕಿತ್ತೊಗೆಯುವುದೇ ಎಂಬ ಬಗ್ಗೆ ಗೌಪ್ಯ ಚರ್ಚೆಗಳು ನಡೆಯುತ್ತಿವೆ.

ಕಳೆದ ವಾರವಷ್ಟೇ ಸಂದೀಯ ರಕ್ಷಣಾ ಸಮಿತಿ ಅಧ್ಯಕ್ಷ ಸ್ಥಾನದಿಂದ ಬಿ ಸಿ ಖಂಡೂರಿ ಅವರನ್ನು ತೆಗೆದುಹಾಕಿ, ಆ ಸ್ಥಾನಕ್ಕೆ ಕಲ್ರಾಜ್ ಮಿಶ್ರಾ ಅವರನ್ನು ನಿಯೋಜಿಸಲಾಗಿದೆ. ಮೋದಿ ಸರ್ಕಾರದ ರಕ್ಷಣಾ ಸಿದ್ಧತೆ ಕುರಿತಂತೆ ಸಂಸದೀಯ ರಕ್ಷಣಾ ಸಮಿತಿ ಅನನುಕೂಲಕರ ಹೇಳಿಕೆ ನೀಡಿದ್ದರಿಂದ ಖಂಡೂರಿ ಅವರನ್ನು ಕಿತ್ತೊಗೆಯಲಾಗಿದೆ ಎನ್ನಲಾಗಿದೆ. ಈ ಬಗ್ಗೆ ‘ಟೈಮ್ಸ್ ಆಫ್ ಇಂಡಿಯಾ’ಗೆ ಪ್ರತಿಕ್ರಿಯಿಸಿದ್ದ ಖಂಡೂರಿ ಅವರು, "ಸಂಸದೀಯ ರಕ್ಷಣಾ ಸಮಿತಿ ಅಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಿರುವುದಕ್ಕೆ ಯಾವುದೇ ವಿಷಾದವಿಲ್ಲ. ನಾನು ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ,” ಎಂದು ಹೇಳಿದ್ದರು.

ಇದನ್ನೂ ಓದಿ : ಎನ್‌ಪಿಎ ವಿರುದ್ಧ ಕ್ರಮಕ್ಕೆ ಪಿಎಂಒಗೆ ಪಟ್ಟಿ ರವಾನಿಸಿದ್ದೆ ಎಂದ ರಘುರಾಂ ರಾಜನ್

ಮುಂದಿನ ವರ್ಷ ಬರಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ಮುಜುಗರದ ಪರಿಸ್ಥಿತಿ ಎದುರಿಸುವುದನ್ನು ತಪ್ಪಿಸಿಕೊಳ್ಳಲಲು ಮೋದಿ ಸರ್ಕಾರವು ಸಂಸದೀಯ ಅಂದಾಜು ಸಮಿತಿಯಿಂದ ಮುರುಳಿ ಮನೋಹರ ಜೋಷಿ ಅವರನ್ನು ತೆಗೆಯುವ ಬಗ್ಗೆ ಬಿಜೆಪಿ ಸಚಿವರಲ್ಲಿ ಗುಸುಗುಸು ಪ್ರಾರಂಭವಾಗಿದೆ. ಆದರೆ, ಬಿಜೆಪಿ ಸಚಿವರೇ ಹೇಳುವಂತೆ, ಖಂಡೂರಿ ಅವರನ್ನು ತೆಗೆದುಹಾಕಿದಷ್ಟು ಸುಲಭವಾಗಿ ಸಂಘಪರಿವಾರದಲ್ಲಿ ಬಲಿಷ್ಠರಾದ ಮುರುಳಿ ಮನೋಹರ ಜೋಷಿ ಅವರನ್ನು ತೆಗೆದುಹಾಕಲಾಗದು. ಸಂಘಪರಿವಾರದ ಮುಖ್ಯಸ್ಥ ಮೋಹನ್ ಭಾಗವತ್ ಮೋದಿ ಸರ್ಕಾರದ ನಡೆಗಳ ಮೇಲೆ ನಿಗಾ ಇಟ್ಟಿದ್ದು, ಜೋಷಿ ಅವರನ್ನು ಕದಲಿಸುವುದು ಅಷ್ಟು ಸುಲಭವಲ್ಲ ಎಂದೂ ಬಿಜೆಪಿ ಸಚಿವರೇ ಹೇಳುತ್ತಾರೆ.

ಪ್ರತಿಪಕ್ಷಗಳು ಹಿಂದಿನಿಂದಲೂ ಮೋದಿ ಸರ್ಕಾರವು ‘ಬಂಡವಾಳಶಾಹಿ ಸ್ನೇಹಿ’ ಎಂದು ಜರಿಯುತ್ತಲೇ ಇವೆ. ಗೌತಮ್ ಅದಾನಿ ಮತ್ತು ಅನಿಲ್ ಅಂಬಾನಿ ಅವರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪದೇಪದೇ ಆರೋಪ ಮಾಡುತ್ತಲೇ ಇದ್ದಾರೆ. ಮೋದಿ ಸರ್ಕಾರವು ‘ಸೂಟು ಬೂಟುಗಳ ಸರ್ಕಾರ’ ಎಂದೂ ಟೀಕಿಸಿದ್ದಾರೆ. ಈಗ ರಘುರಾಮ್ ರಾಜನ್ ನೀಡಿದ ಪಟ್ಟಿಯನ್ನಾಧರಿಸಿ ಕ್ರಮ ಕೈಗೊಳ್ಳದೆ ಹೋದರೆ ಪ್ರತಿಪಕ್ಷಗಳಿಗೆ ಟೀಕೆ ಮಾಡಲು ಮತ್ತೊಂದು ಅಸ್ತ್ರ ನೀಡಿದಂತಾಗುತ್ತದೆ. ಅಲ್ಲದೆ, ಈಗಾಗಲೇ ಹಲವು ಆರೋಪಗಳ ಹೊರೆ ಹೊತ್ತಿರುವ ಮೋದಿ ಸರ್ಕಾರವು ಮತ್ತಷ್ಟು ಮುಜುಗರ ಅನುಭವಿಸಬೇಕಾಗುತ್ತದೆ. ಒಟ್ಟಾರೆ, ರಾಜನ್ ಪತ್ರವು ಮೋದಿ ಸರ್ಕಾರವನ್ನು ಈಗ ಅಡಕತ್ತರಿಯಲ್ಲಿ ಸಿಕ್ಕಿಸಿದಂತಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More