ಟ್ವಿಟರ್ ಸ್ಟೇಟ್ | ಸಂದೇಸರಾ ಪಲಾಯನಕ್ಕೆ ಆಕ್ರೋಶ, ಟ್ವಿಸ್ಟ್ ಕೊಡಲು ಬಿಜೆಪಿ ಪ್ರಯತ್ನ

ನರೇಂದ್ರ ಮೋದಿ ಸರ್ಕಾರದ ಆಡಳಿತದಲ್ಲಿ ದೇಶದಿಂದ ಪಲಾಯನಗೈದ ಮತ್ತೊಂದು ಗುಜರಾತಿ ಉದ್ಯಮ ಕುಟುಂಬ ಎಂದೇ ಸಂದೇಸರಾ ಪ್ರಕರಣವನ್ನು ಟ್ವೀಟಿಗರು ವಿಶ್ಲೇಷಿಸಿದ್ದಾರೆ. ಕೇಂದ್ರ ಸರ್ಕಾರ ವಂಚಕರ ಪಲಾಯನಕ್ಕೆ ಹೇಗೆ ಅವಕಾಶ ಕೊಡುತ್ತಿದೆ ಎಂದು ಆಘಾತವೂ ವ್ಯಕ್ತವಾಗಿದೆ

ಭ್ರಷ್ಟಾಚಾರದ ಆರೋಪದಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿದ ನಂತರ ಜಾರಿ ನಿರ್ದೇಶನಾಲಯ (ಇಡಿ) ತಮ್ಮ ಮೇಲೆ ವಂಚನೆ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಂತೆಯೇ ಸ್ಟರ್ಲಿಂಗ್ ಬಯೋಟೆಕ್ ಸಂಸ್ಥೆಯ ಸಂದೇಸರಾ ಸಹೋದರರರು ಕುಟುಂಬ ಸಮೇತ ನೈಜೀರಿಯಾಗೆ ಪಲಾಯನಗೈದಿದ್ದಾರೆ. ಸುಮಾರು ೫೦೦೦ ಕೋಟಿ ರು. ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಗುಜರಾತ್ ಮೂಲದ ಸ್ಟರ್ಲಿಂಗ್ ಬಯೋಟೆಕ್‌ ಮಾಲೀಕ ನಿತಿನ್ ಸಂದೇಸರಾ ಪ್ರಮುಖ ಆರೋಪಿ. ಸಂದೇಸರಾ ಅವರ ನಕಲಿ ಕಂಪನಿಗಳಿಗೆ ಆಂಧ್ರ ಬ್ಯಾಂಕ್, ಯುಸಿಒ ಬ್ಯಾಂಕ್, ಎಸ್‌ಬಿಐ, ಅಲಹಾಬಾದ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಡಿಯಾಗಳು ಸಾಲುಸಾಲಾಗಿ ಸಾಲ ನೀಡಿವೆ. ಸಂದೇಸರಾ ಸಹೋದರರು ಸುಮಾರು ೩೦೦ ನಕಲಿ ಕಂಪನಿಗಳನ್ನು ದೇಶ ಮತ್ತು ವಿದೇಶಗಳಲ್ಲಿ ತೆರೆದಿದ್ದಾರೆ. ಆ ಮೂಲಕ ಸಾಲ ಪಡೆದ ಹಣವನ್ನು ಬೇರೆ ಕಡೆಗೆ ವರ್ಗಾಯಿಸಿದ್ದಾರೆ, ದುಬಾರಿ ಕಾರುಗಳನ್ನು ಖರೀದಿಸಿ ಐಷಾರಾಮಿ ಜೀವನಕ್ಕಾಗಿ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ನೀರವ್ ಮೋದಿ- ಪಂಜಾಬ್ ನ್ಯಾಷನಲ್ ಬ್ಯಾಂಕ್ ನಂತರ ದಾಖಲಾದ ಅತಿ ದೊಡ್ಡ ಪ್ರಮಾಣದ ವಂಚನೆ ಪ್ರಕರಣವಿದು. ಹೀಗಾಗಿ, ಟ್ವಿಟರ್‌ನಲ್ಲೂ ನಿತಿನ್ ಸಂದೇಸರಾ ಸಹೋದರರು ಟ್ರೆಂಡ್ ಆಗಿದ್ದಾರೆ.

ಬಹಳಷ್ಟು ಟ್ವೀಟಿಗರು ನರೇಂದ್ರ ಮೋದಿ ಸರ್ಕಾರದ ಆಡಳಿತದಲ್ಲಿ ದೇಶದಿಂದ ಪಲಾಯನಗೈದ ಮತ್ತೊಂದು ಗುಜರಾತಿ ಉದ್ಯಮ ಕುಟುಂಬ ಎಂದೇ ಸಂದೇಸರಾ ಪ್ರಕರಣವನ್ನು ವಿಶ್ಲೇಷಿಸಿದ್ದಾರೆ. ಪತ್ರಕರ್ತ ಶಿವಂ ವಿಜ್ ಅವರು ಟ್ವೀಟ್ ಮಾಡಿ, “ಮತ್ತೊಂದು ಗುಜರಾತಿ ನಿಮ್ಮ ಹಣದ ಜೊತೆಗೆ ದೇಶ ಬಿಟ್ಟು ಹಾರಿದ್ದಾರೆ. ಸರ್ಕಾರ ವಿದೇಶಿ ನೆಲದಿಂದ ಭಾರತದ ಕಪ್ಪುಹಣವನ್ನು ವಾಪಸು ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೂ ೧೫ ಲಕ್ಷ ರು. ಹಾಕಲಿದೆ ಎಂದುಕೊಂಡಿದ್ದೆ. ಆದರೆ, ೫೦೦೦ ಕೋಟಿಗಳನ್ನು ಬ್ಯಾಂಕ್‌ಗೆ ವಂಚಿಸಿ ನಿತಿನ್ ಸಂದೇಸರಾ ಕುಟುಂಬ ನೈಜೀರಿಯಾಗೆ ಹಾರಿದೆ,” ಎಂದು ಕುಟುಕಿದ್ದಾರೆ.

ಇದನ್ನೂ ಓದಿ : ಬಯಲಾಗುತ್ತಿವೆ ಮತ್ತಷ್ಟು ‘ನೀರವ್ ಮೋದಿ- ಚೊಕ್ಸಿ ಮಾದರಿ’ ವಂಚನೆಗಳು! 

ಸುಪ್ರೀಂ ಕೋರ್ಟ್ ನ್ಯಾಯವಾದಿ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿ, ಸಿಬಿಐ ವಿಶೇಷ ನಿರ್ದೇಶಕರ ಮೇಲೆಯೇ ಆರೋಪವಿರುವುದನ್ನು ಬಹಿರಂಗಪಡಿಸಿದ್ದಾರೆ. “ಬ್ಯಾಂಕ್ ವಂಚನೆ ಆರೋಪದಲ್ಲಿ ಸಿಬಿಐ ತನಿಖೆ ಎದುರಿಸುತ್ತಿದ್ದ ಸಂದೇಸರಾ ದೇಶ ಬಿಟ್ಟು ಹಾರಿದ್ದಾರೆ. ಸಿಬಿಐ ನಿರ್ದೇಶಕರು ಹೇಳಿದ ಪ್ರಕಾರ, ಈಗಿನ ವಿಶೇಷ ಸಿಬಿಐ ನಿರ್ದೇಶಕ ರಾಕೇಶ್ ಅಸ್ತನ ಅವರೂ ಈ ಕಂಪನಿಯಿಂದ ಹಣವನ್ನು ಪಡೆದಿದ್ದಾರೆ. ಅವರ ಮೇಲೂ ಸಿಬಿಐ ತನಿಖೆ ನಡೆಯುತ್ತಿದೆ! ನಮ್ಮ ಚೌಕೀದಾರ್ (ಕಾವಲುಗಾರ) ಒಂದಲ್ಲ ಒಂದು ಯೋಜನೆಯ ಹೆಸರಿನಲ್ಲಿ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದ ಸಂದರ್ಭದಲ್ಲಿ ಅವರ ಹಗರಣಕಾರರಿಗೆ ಪಲಾಯನ ಮಾಡಲು ನೆರವಾಗುವ ಸೇವೆ ಮುಂದುವರಿದಿದೆ. ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ನಂತರ ಈಗ ಗುಜರಾತಿ ಹಗರಣಕಾರ ನಿತಿನ್ ಸಂದೇಸರಾ ಅವರೂ ಪಲಾಯನಗೈದಿದ್ದಾರೆ,” ಎಂದು ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ. ಪತ್ರಕರ್ತೆ ಸ್ವಾತಿ ಚತುರ್ವೇದಿ ಅವರೂ ರಾಕೇಶ್ ಅಸ್ತನ ಈ ಪ್ರಕರಣದಲ್ಲಿ ಆರೋಪಿಯಾಗಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಬ್ಯಾಂಕ್ ಹಗರಣ ಬೆಳಕಿಗೆ ಬಂದಿರುವುದು ಮತ್ತು ೫೦೦೦ ಕೋಟಿ ರು. ವಂಚನೆಯಾಗಿರುವ ವಿಚಾರ ಸಾಮಾನ್ಯ ಟ್ವೀಟಿಗರ ಚಿಂತೆಗೂ ಕಾರಣವಾಗಿದೆ. ರಾಷ್ಟ್ರದ ಬೆಳವಣಿಗೆಗಳ ಬಗ್ಗೆ ಅಥೀ ಕಡಿಮೆ ಟ್ವೀಟ್ ಮಾಡುವ ಬಾಲಿವುಡ್ ನಿರ್ದೇಶಕ ಅನುಭವ ಸಿನ್ಹಾ ಅವರೂ, ಮತ್ತೊಬ್ಬ ಬ್ಯಾಂಕ್ ವಂಚಕ ದೇಶ ಬಿಟ್ಟು ಪಲಾಯನಗೈದಿರುವುದಕ್ಕಾಗಿ ಆಘಾತ ವ್ಯಕ್ತಪಡಿಸಿದ್ದಾರೆ. ಇನ್ನೂ ಹಲವು ಟ್ವೀಟಿಗರು ಇದೇ ರೀತಿಯ ಅಭಿಪ್ರಾಯವನ್ನು ಟ್ವಿಟರ್‌ನಲ್ಲಿ ಹಾಕಿದ್ದಾರೆ.

ಬಹಳಷ್ಟು ಮಂದಿ ಮೋದಿ ಸರ್ಕಾರ ವಂಚಕರಿಗೆ ಸ್ವರ್ಗವಾಗುತ್ತಿದೆಯೇ ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. "ಮೋದಿ ಸರ್ಕಾರ ಭ್ರಷ್ಟರನ್ನು ಜೈಲಿಗೆ ಅಟ್ಟುತ್ತದೆ ಎನ್ನುವ ಭರವಸೆಯನ್ನು ನೀಡಿತ್ತು. ಆದರೆ, ವಾಸ್ತವದಲ್ಲಿ ಭ್ರಷ್ಟರು ವಿದೇಶಕ್ಕೆ ಪಲಾಯನಗೈಯಲು ಮೋದಿ ಸರ್ಕಾರ ಅವಕಾಶ ಕೊಡುತ್ತಿರುವುದೇ ವರದಿಯಾಗುತ್ತಿದೆ,” ಎಂದು ಅರ್ಥಶಾಸ್ತ್ರಜ್ಞೆ ರೂಪಾ ಸುಬ್ರಹ್ಮಣ್ಯಂ ಟ್ವೀಟ್ ಮಾಡಿದ್ದಾರೆ. ನಟ-ನಿರ್ದೇಶಕ ಡ್ಯಾನಿಷ್ ಹುಸೇನ್, “ಕೇಂದ್ರ ಸರ್ಕಾರದ ಹಸ್ತಕ್ಷೇಪವಿಲ್ಲದೆ ವಂಚಕರು ಇಷ್ಟು ಸಹಜವಾಗಿ ವಿದೇಶದಲ್ಲಿ ನೆಲೆ ಕಾಣಲು ಸಾಧ್ಯವಿಲ್ಲ,” ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಜ್ಞಾನಿ ಗಾರ್ಗ ಚಟರ್ಜೀ ಅವರು, “ಗುಜರಾತಿ ಸಹೋದರರಿಗೆ ಚೌಕೀದಾರ್ (ಪ್ರಧಾನಿ ಮೋದಿ) ನೆರವಾಗಿದ್ದಾರೆ,” ಎಂದು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಮೊದಲಾದವರೂ ಮೋದಿ ಸರ್ಕಾರದಲ್ಲಿ ದಾಖಲಾದ ಮತ್ತೊಂದು ಪಲಾಯನವನ್ನು ಟೀಕಿಸಿದ್ದಾರೆ. ಬಹಳಷ್ಟು ಟ್ವೀಟಿಗರು ಹಗರಣಕೋರರು ಇಷ್ಟು ಸಲೀಸಾಗಿ ದೇಶ ಬಿಟ್ಟು ಹೋಗಲು ಸಾಧ್ಯವಾಗುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಆದರೆ, ಬಿಜೆಪಿ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಕೊಡಲು ಪ್ರಯತ್ನಿಸಿದೆ. ಹೀಗಾಗಿ, ಬಿಜೆಪಿ ಪರ ಟ್ವೀಟಿಗರು ವಂಚನೆ ಪ್ರಕರಣಕ್ಕೂ ಕಾಂಗ್ರೆಸ್ ಮುಖಂಡ ಅಹಮದ್ ಪಟೇಲ್‌ಗೂ ಸಂಬಂಧವಿದೆ ಎಂದು ಹೇಳಲು ಪ್ರಯತ್ನಿಸಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ಟ್ವೀಟಿಗರು ಸಾಕಷ್ಟು ಪುರಾವೆಗಳನ್ನು ಟ್ವಿಟರ್‌ನಲ್ಲಿ ಹಾಕುತ್ತಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More