ಪಠ್ಯಪುಸ್ತಕ ವಿಳಂಬ; ಕಪ್ಪುಪಟ್ಟಿ ಕ್ರಮಕ್ಕೆ ತಿರುಗಿಬಿದ್ದ ಖಾಸಗಿ ಮುದ್ರಣಾಲಯಗಳು?

ಪಠ್ಯಪುಸ್ತಕಗಳ ಸರಬರಾಜು ವ್ಯತ್ಯಯಕ್ಕೆ ಕಾರಣವಾದ ಮುದ್ರಣಾಲಯಗಳ ವಿರುದ್ಧ ಸರ್ಕಾರ ಕೈಗೊಳ್ಳಲಿರುವ ಕ್ರಮ ಕುರಿತು ‘ದಿ ಸ್ಟೇಟ್‌’ ಪ್ರಕಟಿಸಿದ್ದ ವರದಿಗೆ ಖಾಸಗಿ ಮುದ್ರಣಾಲಯಗಳು ಪ್ರತಿಕ್ರಿಯಿಸಿವೆ. ಆಗಿರುವ ವಿಳಂಬಕ್ಕೆ ಹಿರಿಯ ಅಧಿಕಾರಿಗಳ ಲೋಪವೇ ಕಾರಣ ಎಂದು ಆರೋಪಿಸಿವೆ

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಪ್ರತಿಷ್ಠಿತ ಖಾಸಗಿ ಮುದ್ರಣಾಲಯಗಳ ತಿಕ್ಕಾಟದಿಂದಾಗಿ ಅರ್ಧ ವರ್ಷ ಕಳೆದರೂ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಬಹುತೇಕ ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಲ್ಲದೆ ಪರಿತಪಿಸುತ್ತಿದ್ದಾರೆ. ಖಾಸಗಿ ಮುದ್ರಣಾಲಯಗಳಿಗೆ ಮೂಲ ಆದೇಶ ಹೊರಡಿಸಿದ ೬ ತಿಂಗಳ ನಂತರ ತಡವಾಗಿ ಮೂರು ಬಾರಿ ಹೆಚ್ಚುವರಿ ಕಾರ್ಯಾದೇಶ ಕೊಟ್ಟಿರುವುದು ಮತ್ತು ಜಿಲ್ಲಾವಾರು ಸರಬರಾಜು ಮಾಡಲು ಅನುಮತಿ ನೀಡದಿರುವುದೇ ಇದಕ್ಕೆ ಮೂಲ ಕಾರಣ.

ಇನ್ನು, ಕಾರ್ಯಾದೇಶ ಪ್ರಕಾರ, ಜೂನ್ ಅಂತ್ಯಕ್ಕೆ ಪಠ್ಯಪುಸ್ತಕಗಳನ್ನು ಸರಬರಾಜು ಮಾಡಿದ್ದರೂ ಖಾಸಗಿ ಮುದ್ರಣಾಲಯಗಳಿಗೆ ೩ ತಿಂಗಳಾದರೂ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂಬ ವಿಚಾರ ತಿಳಿದುಬಂದಿದೆ. ಬಾಕಿ ಹಣ ನೀಡದೆ ಕಪ್ಪುಪಟ್ಟಿಗೆ ಸೇರಿಸಲು ಮುಂದಾಗಿರುವ ಇಲಾಖೆಯ ವಿರುದ್ಧ ಖಾಸಗಿ ಮುದ್ರಣಾಲಯಗಳು ತಿರುಗಿಬಿದ್ದಿವೆ.

ಅದೇ ರೀತಿ, ಆರ್ಥಿಕ ಸಂಕಷ್ಟವನ್ನು ಮುಂದಿರಿಸಿರುವ ಖಾಸಗಿ ಮುದ್ರಣಾಲಯಗಳು ಹೆಚ್ಚುವರಿ ಪಠ್ಯಪುಸ್ತಕಗಳನ್ನು ಮುದ್ರಿಸಲು ಹಿಂದೇಟು ಹಾಕಿವೆಯಲ್ಲದೆ, ಹಿಂದಿನ ಬಾಕಿ ಪಾವತಿಯನ್ನು ಬಡ್ಡಿ ಸಮೇತ ಹಣ ಬಿಡುಗಡೆ ಮಾಡಿ ಎಂದು ಪಟ್ಟು ಹಿಡಿದಿವೆ.

“೨೦೧೮-೧೯ನೇ ಸಾಲಿನಲ್ಲಿ ಪಠ್ಯಪುಸ್ತಕಗಳ ಮುದ್ರಣ ಮತ್ತು ಸರಬರಾಜಿನಲ್ಲಿ ಆಗಿರುವ ವಿಳಂಬಕ್ಕೆ ಸರ್ಕಾರಿ ಅಧಿಕಾರಿಗಳೇ ಕಾರಣ. ಅಧಿಕಾರಿಗಳ ಲೋಪವನ್ನು ಖಾಸಗಿ ಮುದ್ರಣಾಲಯಗಳ ಮೇಲೆ ಹೊರಿಸಲಾಗುತ್ತಿದೆ,” ಎಂಬುದು ಖಾಸಗಿ ಮುದ್ರಣಾಲಯಗಳ ಮಾಲೀಕರ ವಾದ.

ಬಾಕಿ ಪಾವತಿಸಬೇಕಿರುವ ಕಂಪನಿಗಳ ಪೈಕಿ ಅಭಿಮಾನಿ ಪಬ್ಲಿಕೇಷನ್ಸ್‌ ಲಿಮಿಟೆಡ್‌ಗೆ ೨೦೧೮-೧೯ನೇ ಸಾಲಿನಲ್ಲಿ ಪಠ್ಯಪುಸ್ತಕ ಮುದ್ರಣ ಸಂಬಂಧ ವಿವಿಧ ಪ್ಯಾಕೇಜ್‌ಗಳಲ್ಲಿ ೧.೪೦ ಕೋಟಿ ರು. ಬಿಡುಗಡೆ ಅಗಬೇಕಿದೆ. “ಮೂರು ತಿಂಗಳಾದರೂ ಹಣ ಬಿಡುಗಡೆಯಾಗದ ಕಾರಣ ಬ್ಯಾಂಕ್‌ಗಳಿಗೆ ಬಡ್ಡಿ ಪಾವತಿಸುತ್ತಿದೆ. ಈಗಾಗಲೇ ೧೦-೨೦ ಲಕ್ಷ ರು.ಗಳನ್ನು ಬಡ್ಡಿ ರೂಪದಲ್ಲಿ ಪಾವತಿಸಲಾಗಿದೆ. ೩ನೇ ಬಾರಿ ನೀಡಿರುವ ಹೆಚ್ಚುವರಿ ಆದೇಶದಂತೆ ಪಠ್ಯಪುಸ್ತಕಗಳನ್ನು ಮುದ್ರಿಸಲು ಕಾಗದ ಖರೀದಿಗೆ ಹಣವಿಲ್ಲವಾಗಿದೆ. ಹೀಗಾಗಿ, ಬಡ್ಡಿ ಸಮೇತ ಹಣ ಬಿಡುಗಡೆ ಮಾಡಿ,” ಎಂದು ಅಭಿಮಾನಿ ಸಮೂಹ ಸಂಸ್ಥೆ ೨೦೧೮ರ ಸೆ.೬ರಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದೆ.

ಹಣ ಬಿಡುಗಡೆ ಆಗದಿರುವ ಬಗ್ಗೆ ಅಭಿಮಾನಿ ಸಮೂಹ ಸಂಸ್ಥೆ ಬರೆದಿರುವ ಪತ್ರದ ಪ್ರತಿ

ಅಭಿಮಾನಿ ಪ್ರಕಾಶನ ಸಂಸ್ಥೆಯೊಂದಕ್ಕೇ ಒಟ್ಟು ೯,೭೮,೩೬೦ ಸಂಖ್ಯೆಯಲ್ಲಿ ಪಠ್ಯಪುಸ್ತಕಗಳನ್ನು ಮುದ್ರಿಸಲು ಮೂರು ಹೆಚ್ಚುವರಿ ಕಾರ್ಯಾದೇಶ ನೀಡಲಾಗಿದೆ. ಎರಡು ಹೆಚ್ಚುವರಿ ಕಾರ್ಯಾದೇಶದಂತೆ ಪಠ್ಯಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡಿರುವ ಅಭಿಮಾನಿ ಸಮೂಹ ಸಂಸ್ಥೆ, ೩ನೇ ಬಾರಿ ಹೆಚ್ಚುವರಿ ಕಾರ್ಯಾದೇಶದಂತೆ ೧೦೩ ಶೀರ್ಷಿಕೆಗಳನ್ನು ೧೫ ದಿನದಲ್ಲಿ ಮುದ್ರಿಸಲು ಅಸಹಾಯಕತೆ ವ್ಯಕ್ತಪಡಿಸಿದೆ. “ಕಾಗದ ಉತ್ಪಾದನೆ ಮಾಡುವ ಎ ಗ್ರೇಡ್‌ ಸಂಸ್ಥೆಗಳಿಗೆ ಹಣ ಪಾವತಿ ಮಾಡಿದ ೪೫ ದಿನಗಳ ನಂತರ ಕಾಗದ ಸರಬರಾಜು ಮಾಡಲಿವೆ. ಪ್ಲೇಟ್‌ ಇನ್ನಿತರ ಮುದ್ರಣ ಸಾಮಗ್ರಿಗಳನ್ನು ಖರೀದಿಸಲು ೧೫ ದಿನಗಳು ಬೇಕು; ಈ ಎಲ್ಲಕ್ಕೂ ಹಣ ಪಾವತಿ ಮಾಡಿದ ೧೦ ದಿನಗಳ ನಂತರ ಸಾಮಗ್ರಿ ಪೂರೈಸುತ್ತಾರೆ. ಹೀಗಾಗಿ, ಪಠ್ಯ ಪುಸ್ತಕಗಳನ್ನು ಮುದ್ರಿಸಲು ಕನಿಷ್ಟ ೪೫ ದಿನಗಳಾದರೂ ಕಾಲಾವಕಾಶ ಬೇಕು,” ಎಂಬ ಅಂಶವನ್ನು ಕಂಪನಿ ಸರ್ಕಾರದ ಗಮನಕ್ಕೆ ತಂದಿದೆ.

ಇದನ್ನೂ ಓದಿ : ಪಠ್ಯಪುಸ್ತಕ ವಿಳಂಬ; ಅಭಿಮಾನಿ ಪ್ರಕಾಶನ ಸೇರಿ ೨೪ ಮುದ್ರಣಾಲಯ ಕಪ್ಪುಪಟ್ಟಿಗೆ?

“ಆಡಳಿತಾತ್ಮಕ ವಿಚಾರಗಳತ್ತ ಹೆಚ್ಚು ಗಮನ ಹರಿಸಿರುವ ಅಧಿಕಾರಿಗಳಿಗೆ ತಾಂತ್ರಿಕ ಸಮಸ್ಯೆಯ ಅರಿವು ಇರುವುದಿಲ್ಲ. ಲಕ್ಷಾಂತರ ಸಂಖ್ಯೆಯ ಪಠ್ಯಪುಸ್ತಕಗಳನ್ನು ೧೫ ದಿನದಲ್ಲಿ ಮುದ್ರಿಸಿ ಎಲ್ಲ ತಾಲೂಕುಗಳಿಗೆ ಸರಬರಾಜು ಮಾಡಲು ಮ್ಯಾಜಿಕ್ ಮಾಡಬೇಕೇ?” ಎಂಬ ಪ್ರಶ್ನೆಯನ್ನು ಅಭಿಮಾನಿ ಸೇರಿದಂತೆ ಖಾಸಗಿ ಮುದ್ರಣಾಲಯಗಳು ಅಧಿಕಾರಿಗಳ ಮುಂದಿರಿಸಿವೆ. ಆದರೆ, ಈ ವಾದವನ್ನು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ತಳ್ಳಿಹಾಕಿದ್ದಾರಲ್ಲದೆ, ಟೆಂಡರ್‌ನಲ್ಲಿ ವಿಧಿಸಿರುವ ಷರತ್ತುಗಳನ್ನು ಪೂರೈಸಬೇಕು. ಅದರಂತೆ, ವಿಳಂಬ ಮಾಡಿರುವ ಮುದ್ರಣಾಲಯಗಳಿಂದ ದಂಡ ವಸೂಲು ಮಾಡಲು ಕ್ರಮ ವಹಿಸಿದ್ದಾರೆ ಎಂದು ಗೊತ್ತಾಗಿದೆ.

ಪಠ್ಯಪುಸ್ತಕಗಳ ಮುದ್ರಣ ಮತ್ತು ಸರಬರಾಜಿನಲ್ಲಿ ಆಗಿರುವ ವ್ಯತ್ಯಯಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌, ಪಠ್ಯ ಪುಸ್ತಕ ಸಂಘದ ನಿರ್ದೇಶಕರಿಗೆ ಖಾಸಗಿ ಮುದ್ರಣಾಲಯಗಳು ಬರೆದಿದ್ದ ಪತ್ರ ಆಧರಿಸಿ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.

“ಪಠ್ಯಪುಸ್ತಕಗಳ ಕೊರತೆ ಇರುವುದು ಜೂನ್‌ ನಲ್ಲಿ ಗಮನಕ್ಕೆ ಬಂದಿದೆ. ಸರ್ಕಾರಿ ಮುದ್ರಣಾಲಯದಲ್ಲಿ ತೊಂದರೆ ಇದ್ದದ್ದರಿಂದ ಹೆಚ್ಚುವರಿಯಾಗಿ ಕಾರ್ಯಾದೇಶ ನೀಡಲಾಗಿದೆ. ಕೆಲ ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಸಂಖ್ಯೆಯನ್ನು ನಿಖರವಾಗಿ ನೀಡಿರಲಿಲ್ಲ. ಹೀಗಾಗಿ ೨೭ ಲಕ್ಷ ಸಂಖ್ಯೆಯಲ್ಲಿ ಪಠ್ಯಪುಸ್ತಕಗಳನ್ನು ಹೆಚ್ಚುವರಿಯಾಗಿ ಮುದ್ರಿಸಲು ಖಾಸಗಿ ಮುದ್ರಣಾಲಯಗಳಿಗೆ ಕಾರ್ಯಾದೇಶ ನೀಡಿದ್ದೇವೆ,” ಎನ್ನುತ್ತಾರೆ ಕರ್ನಾಟಕ ಪಠ್ಯಪುಸ್ತಕ ಸಂಘದ ನಿರ್ದೇಶಕರು.

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಮೂಲ ಆದೇಶದ ಪ್ರಕಾರವೇ ಖಾಸಗಿ ಮುದ್ರಣಾಲಯಗಳು ಪಠ್ಯಪುಸ್ತಕ ಮುದ್ರಿಸಿವೆ. ಇದಾದ ೪ ತಿಂಗಳ ನಂತರ ೩ ಬಾರಿ ಹೆಚ್ಚುವರಿ ಕಾರ್ಯಾದೇಶ ಹೊರಡಿಸಲಾಗಿತ್ತು. ಆದರೆ, ೧೫ ದಿನದಲ್ಲಿ ಸರಬರಾಜು ಮಾಡಬೇಕು ಎಂಬ ಕರಾರು ಒಪ್ಪಂದವನ್ನು ಅಭಿಮಾನಿ ಸಂಸ್ಥೆ ಒಪ್ಪಿಕೊಂಡಿಲ್ಲ.

ಮೂರನೇ ಬಾರಿ ಹೊರಡಿಸಿದ್ದ ಹೆಚ್ಚುವರಿ ಆದೇಶದ ಪ್ರಕಾರ, ೧೫ ದಿನದಲ್ಲಿ ಪಠ್ಯಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡಬೇಕಿತ್ತು. ಆದರೆ, ಅದು ಅಷ್ಟು ಸುಲಭವಲ್ಲ. “ಆರಂಭದಲ್ಲಿ ಎಷ್ಟು ಸಂಖ್ಯೆಯಲ್ಲಿ ಪಠ್ಯಪುಸ್ತಕಗಳನ್ನು ಮುದ್ರಿಸಬೇಕು ಎಂಬ ಬಗ್ಗೆ ಅಧಿಕಾರಿಗಳು ನಿಖರವಾಗಿ ಹೇಳುವುದಿಲ್ಲ. ಆದಷ್ಟು ಕಡಿಮೆ ಪುಸ್ತಕ ಮುದ್ರಿಸಿ ಎಂದು ಹೇಳುತ್ತಾರೆ. ಪುಸ್ತಕದ ಕೊರತೆ ಎದುರಾದಾಗ ಇನ್ನಷ್ಟು ಪುಸ್ತಕ ಬೇಕು ಎಂದು ತರಾತುರಿಯಲ್ಲಿ ಹೇಳುತ್ತಾರೆ. ಪುಸ್ತಕದ ಸಂಖ್ಯೆ ೫ ಸಾವಿರ ಇರಲಿ, ೫ ಲಕ್ಷ ಇರಲಿ, ಮುದ್ರಣ ಪೂರ್ವ ಸಿದ್ಧತೆ ಒಂದೇ ತರಹ ಇರುತ್ತೆ. ಇದು ಅಧಿಕಾರಿಗಳಿಗೆ ತಿಳಿಯುವುದಿಲ್ಲ,” ಎನ್ನುತ್ತಾರೆ ಪ್ರತಿಷ್ಠಿತ ಖಾಸಗಿ ಮುದ್ರಣಾಲಯದ ವ್ಯವಸ್ಥಾಪಕರೊಬ್ಬರು.

ವಿಳಂಬ ಮಾಡಿರುವ ಮುದ್ರಣಾಲಯಗಳ ಪೈಕಿ ಪ್ರತಿಷ್ಠಿತ ಖಾಸಗಿ ಮುದ್ರಣಾಲಯ ಅಭಿಮಾನಿ ಪ್ರಕಾಶನ, ಅಭಿಮಾನಿ ಪಬ್ಲಿಕೇಷನ್ಸ್‌ , ಬ್ರಿಲಿಯಂಟ್ ಪ್ರಿಂಟರ್ಸ್ , ಕೆನರಾ ಸೆಕ್ಯೂರಿಟೀಸ್ , ಶೇಷಸಾಯಿ ಬಿಸಿನೆಸ್ ಪ್ರಿಂಟರ್ಸ್, ಸೌಂದರ್ಯ ಪ್ರಿಂಟರ್ಸ್ ಸೇರಿದಂತೆ ಒಟ್ಟು ೨೪ ಮುದ್ರಣಾಲಯಗಳೂ ಈ ಪಟ್ಟಿಯಲ್ಲಿವೆ. ಈ ಮುದ್ರಣಾಲಯಗಳು ಪಠ್ಯಪುಸ್ತಕಗಳನ್ನು ಶೇ.೫೦ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಸರಬರಾಜು ಮಾಡಿರುವ ಕಾರಣ ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ವಹಿಸಿರುವುದನ್ನು ಸ್ಮರಿಸಿಕೊಳ್ಳಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More